ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿರ್ದಿಷ್ಟಾವಧಿ ಮುಷ್ಕರ ನಾಳೆಯಿಂದ

Last Updated 26 ಜುಲೈ 2017, 6:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇ–ಪೇಮೆಂಟ್‌ ವ್ಯವಸ್ಥೆ ಜಾರಿಗೆ ವಿರೋಧ ವ್ಯಕ್ತಪಡಿಸಿರುವ ವರ್ತಕರು ಮಂಗಳವಾರವೂ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡದೇ ಹೋರಾಟ ಮುಂದುವರಿಸಿದ್ದಾರೆ. ಸದಾ ರೈತರಿಂದ ಗಿಜಿಗಿಡುತ್ತಿದ್ದ ಎಪಿಎಂಸಿ ಪ್ರಾಂಗಣ ಬಣಗುಡುತ್ತಿದ್ದ ದೃಶ್ಯ ಕಂಡುಬಂತು.

ವರ್ತಕರ ಖರೀದಿ ಬಂದ್‌ ಬಗ್ಗೆ ಅರಿವಿಲ್ಲದೆ ಎಪಿಎಂಸಿಗೆ ಬರುತ್ತಿದ್ದ ಕೃಷಿ ಉತ್ಪನ್ನಗಳನ್ನು ರಾಜ್ಯ ಸಹಕಾರ ಮಾರಾಟ ಮಂಡಳ ಖರೀದಿ ಮಾಡಿತು. ‘ಇ–ಪೇಮೆಂಟ್‌’ ವ್ಯವಸ್ಥೆಯಲ್ಲಿ ಇರುವ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಎಪಿಎಂಸಿ ಅಧಿಕಾರಿಗಳು ಯಾವುದೇ ಭರವಸೆ ನೀಡಿಲ್ಲ. ಹೀಗಾಗಿ, ಎರಡನೇ ದಿನಕ್ಕೆ ಹೋರಾಟ ಮುಂದುವರಿಸಲಾಗಿದೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ಜುಲೈ 27ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು’ ಎಂದು ವರ್ತಕರ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ತಿಳಿಸಿದರು.

‘ಇ–ಪೇಮೆಂಟ್‌ ಜಾರಿ ಮಾಡಿದರೆ ಹಮಾಲರು, ದಲ್ಲಾಳಿಗಳಿಗೆ ಯಾವ ರೀತಿ ಪೇಮೆಂಟ್ ಮಾಡುತ್ತಾರೆ ಗೊತ್ತಿಲ್ಲ. ಹಮಾಲರಿಗೆ ಕೂಲಿ ಮತ್ತು ಗಾಡಿ ಬಾಡಿಗೆಯನ್ನು ಎಪಿಎಂಸಿಯೇ ನೀಡಲಿ. ಕೃಷಿ ಉತ್ಪನ್ನಗಳನ್ನು ತಂದು ಹಾಕುವ ರೈತರ ಕಷ್ಟಕ್ಕೆ ನಾವು ನೆರವಾಗಿದ್ದೇವೆ’ ಎಂದರು. ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ವರ್ತಕರು ಮತ್ತು ದಲ್ಲಾಳರ ವಿರುದ್ಧ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ, ರೈತರಿಂದ ಈ ಹಿಂದೆ ಖರೀದಿ ಮಾಡಿದ ಉತ್ಪನ್ನಗಳಿಗೆ ಅಧಿಕಾರಿಗಳು ಹಣ ಪಾವತಿಸಿಲ್ಲ. ಕೆಲವರು ಇನ್ನೂ ಅಲೆಯುತ್ತಿದ್ದಾರೆ’ ಎಂದರು.

‘ಅಮರಗೋಳ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ದೇಶಕ್ಕೆ ಹೆಸರುವಾಸಿ. ಹುಬ್ಬಳ್ಳಿ–ಗದಗ ಎಪಿಎಂಸಿ ಮಾರುಕಟ್ಟೆಗೆ ಮಾತ್ರ ಇ–ಪೇಮೆಂಟ್‌ ವ್ಯವಸ್ಥೆ ಜಾರಿ ಮಾಡಿರುವುದು ಖಂಡನೀಯ. ಏಕಕಾಲಕ್ಕೆ ಎಲ್ಲ ಮಾರುಕಟ್ಟೆಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಬೇಕು’ ಎಂದು ಸಂಘದ ಗೌರವ ಕಾರ್ಯದರ್ಶಿ ಬಸವರಾಜ ಯಕಲಾಸಪುರ ತಿಳಿಸಿದರು.

ಹುಬ್ಬಳ್ಳಿ ಎಪಿಎಂಸಿ ಕಾರ್ಯದರ್ಶಿ ಎಚ್‌.ಸಿ. ಗಜೇಂದ್ರ ಮಾತನಾಡಿ, ‘ವರ್ತಕರ ಖರೀದಿ ಬಂದ್‌ನಿಂದ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಎಪಿಎಂಸಿಗೆ ತಂದ ಕೃಷಿ ಉತ್ಪನ್ನಗಳನ್ನು ವಾಪಸ್‌ ಕಳುಹಿಸುತ್ತಿಲ್ಲ. ಈ ತಿಂಗಳಲ್ಲಿ ಮಾರುಕಟ್ಟೆಗೆ ಬರುವ ಕೃಷಿ ಉತ್ಪನ್ನಗಳು ಕಡಿಮೆ. ಹೆಸರು ಮತ್ತು ಸೋಯಾಬೀನ್‌ ಅಷ್ಟೇ ಬರುತ್ತಿವೆ. ಹೆಸರು ಪ್ರತಿ ಕ್ವಿಂಟಲ್‌ಗೆ ₹2,800 ನೀಡಿ ರೈತರಿಂದ ಖರೀದಿ ಮಾಡಲಾಗಿದೆ. ಹಣ್ಣು–ತರಕಾರಿ ಖರೀದಿಗೆ ಯಾವುದೇ ತೊಂದರೆ ಆಗಿಲ್ಲ. ನಿರಾತಂಕವಾಗಿ ಸಾಗಿದೆ’ ಎಂದರು.

‘ಇ–ಪೇಮೆಂಟ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಸದಸ್ಯರನ್ನು ಒಳಗೊಂಡಂತೆ ತಂಡ ರಚಿಸಲಾಗಿದೆ. ಹುಬ್ಬಳ್ಳಿ ತಾಲ್ಲೂಕಿನ 54 ಗ್ರಾಮಗಳನ್ನು ಸಂಪರ್ಕಿಸಿ ಅರಿವು ಮೂಡಿಸಲಿದ್ದಾರೆ. ಈಗಾಗಲೇ ಶೇ 60ರಷ್ಟು ರೈತರು ಆನ್‌ಲೈನ್‌ ವ್ಯವಸ್ಥೆಗೆ ಹೆಸರು ನೋಂದಾಯಿಸಿದ್ದಾರೆ’ ಎಂದು ಎಪಿಎಂಸಿ ಅಧ್ಯಕ್ಷ ಈಶ್ವರಪ್ಪ ಕಿತ್ತೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT