ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ದಿನಕ್ಕೆ 7 ಗಂಟೆ ವಿದ್ಯುತ್‌: ಸಚಿವ ಡಿಕೆಶಿ

Last Updated 26 ಜುಲೈ 2017, 7:10 IST
ಅಕ್ಷರ ಗಾತ್ರ

ಮೈಸೂರು: ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ಇನ್ನು ಮುಂದೆ ದಿನಕ್ಕೆ ಏಳು ಗಂಟೆ ವಿದ್ಯುತ್‌ ಪೂರೈಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಇಲ್ಲಿ ಮಂಗಳವಾರ ತಿಳಿಸಿದರು. ಸೆಸ್ಕ್‌’ ಮತ್ತು ಕೆಪಿಟಿಸಿಎಲ್‌ಗೆ ಆಯ್ಕೆಯಾದ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಲಾದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ರೈತರಿಗೆ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಪಾವಗಡದಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿ 2 ಸಾವಿರ ಮೆಗಾ ವಾಟ್‌ ವಿದ್ಯುತ್ ಉತ್ಪಾದಿಸುವ ಬೃಹತ್‌ ಸೋಲಾರ್‌ ಪಾರ್ಕ್‌ ನಿರ್ಮಿಸಲಾಗುತ್ತಿದೆ. 120 ತಾಲ್ಲೂಕುಗಳಲ್ಲಿ ಕನಿಷ್ಠ 20 ಮೆಗಾ ವಾಟ್ ಸೋಲಾರ್‌ ವಿದ್ಯುತ್‌ ಉತ್ಪಾದಿಸುವ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ರೈತರಿಗೆ ಉಚಿತವಾಗಿ ವಿದ್ಯುತ್ ನೀಡುವುದಕ್ಕಾಗಿ ₹ 9 ಸಾವಿರ ಕೋಟಿಯನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದೆ ಎಂದು ಹೇಳಿದರು.

ನೇಮಕ: ಕೆಪಿಟಿಸಿಎಲ್‌ ಹಾಗೂ ವಿವಿಧ ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ ಎಂಜಿನಿಯರ್‌ ಸೇರಿದಂತೆ 22 ಸಾವಿರ ಸಿಬ್ಬಂದಿಯನ್ನು ಪಾರದರ್ಶಕವಾಗಿ ಮೆರಿಟ್‌ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ನೀವೆಲ್ಲಾ ಸೇವಾ ದಕ್ಷತೆಯೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ನಿಮ್ಮ ಕಂಪೆನಿಗೂ ಹಾಗೂ ಸರ್ಕಾರಕ್ಕೂ ಒಳ್ಳೆಯ ಹೆಸರು ತನ್ನಿ ಎಂದ ಅವರು, ಶೀಘ್ರದಲ್ಲಿ ಇನ್ನೂ 9 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು. ಇಲಾಖೆಯಲ್ಲಿ ಸಿಬ್ಬಂದಿಯ ಸೇವೆಯನ್ನು ಸ್ಪರ್ಧಾತ್ಮಕಗೊಳಿಸುವ ದೃಷ್ಟಿಯಿಂದ ಸೇವಾ ಪ್ರಶಸ್ತಿ ನೀಡಲಾಗುವುದು ಎಂದರು.

ದೇಶದಲ್ಲಿ 80 ಕಂಪೆನಿಗಳು ವಿದ್ಯುತ್‌ ಸರಬರಾಜು ಮಾಡುತ್ತಿವೆ. ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಪ್ರಾಮಾಣಿಕ ಶ್ರಮದಿಂದಾಗಿ ಈ ವರ್ಷ ‘ಸೆಸ್ಕ್‌’ ಪ್ರಥಮ ಸ್ಥಾನ ಪಡೆದಿದೆ. ಈ ಹಿಂದೆ ಬೆಸ್ಕಾಂ ಈ ಸ್ಥಾನದಲ್ಲಿತ್ತು. ಹೊಸದಾಗಿ ಆಯ್ಕೆಯಾದ ಸಿಬ್ಬಂದಿ ವಿದ್ಯುತ್ ಆಘಾತದಲ್ಲಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಲಾಗುವುದು. ಕುಟುಂಬದ ಒಬ್ಬರಿಗೆ ನೌಕರಿ ನೀಡ ಲಾಗುವುದು. ವಿದ್ಯುತ್‌ ಆಘಾತದಿಂದ ಯಾವುದೇ ವ್ಯಕ್ತಿ ಸಾವನ್ನಪ್ಪಿದರೆ ಆ ಭಾಗದ ಕಂಪೆನಿಯಿಂದ ₹ 5 ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.

ಮೂರು ವರ್ಷಗಳಿಂದ ರಾಜ್ಯದಲ್ಲಿ ಬರಗಾಲವಿದ್ದರೂ, ವಿದ್ಯುತ್‌ ಸಮಸ್ಯೆ ಇಲ್ಲ. ಲೋಡ್‌ ಶೆಡ್ಡಿಂಗ್‌ ಈಗ ಸಂಪೂರ್ಣ ಕಡಿಮೆಯಾಗಿದೆ ನಾನು ಸಚಿವನಾದ ಮೇಲೆ ರಾಜ್ಯದಲ್ಲಿ 5 ಸಾವಿರ ಮೆಗಾವ್ಯಾಟ್ ವಿದ್ಯುತ್‌ ಉತ್ಪಾದನೆ ಹೆಚ್ಚಿದೆ ಎಂದರು. ಮೈಸೂರಿನಲ್ಲಿ ಆರಂಭಿಸಿರುವ ’ಸ್ಮಾರ್ಟ್‌ ಗ್ರೀಡ್’ಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬ್ರಿಟನ್ ಹೈಕಮೀಷನರ್‌ ಕೂಡಾ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಸೆಸ್ಕ್‌ ಅಧಿಕಾರಿಗಳು, ಎಂಜಿನಿಯರ್‌ಗಳ ಪ್ರಾಮಾಣಿಕ ಸೇವೆ ಅಡಗಿದೆ ಎಂದರು.

ಕಾರ್ಯಕ್ರಮವನ್ನು ನೂತನವಾಗಿ ಆಯ್ಕೆಯಾದ ಸಿಬ್ಬಂದಿಯೊಂದಿಗೆ ಉದ್ಘಾಟಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‌, ಕೆಪಿಟಿಸಿಎಲ್‌ ಹಾಗೂ ಕಂಪೆನಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದಕ್ಕೆ ತೀಲಾಂಜಲಿ ಹಾಡಿ, ನೇರವಾಗಿ 18 ಸಾವಿರ ಸಿಬ್ಬಂದಿಯನ್ನು ಆಯ್ಕೆ ಮಾಡಿರುವ ಇಂಧನ ಸಚಿವರು ಹೊಸ ಇತಿಹಾಸ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದರು.

ಶಾಸಕರಾದ ಎಂ.ಕೆ.ಸೋಮ ಶೇಖರ್‌, ಎನ್‌.ಕಳಲೆ ಕೇಶವಮೂರ್ತಿ,  ವಿಧಾನಪರಿಷತ್‌ ಸದಸ್ಯ ಆರ್‌. ಧರ್ಮಸೇನ, ಬಣ್ಣ ಮತ್ತು ಮೈಲಾಕ್‌ ಅಧ್ಯಕ್ಷ ವೆಂಕಟೇಶ್‌,  ಮಾಜಿ ಎಂಎಲ್‌ಸಿ ಸತ್ಯನಾರಾಯಣ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಂ,  ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಿ.ಕಿರಣ್ ಸೇರಿದಂತೆ ಹಲವು ಗಣ್ಯರು ಇದ್ದಾರೆ.

ಲೈನ್‌ಮನ್‌ಗೆ ಶೀಘ್ರವೇ ಬೇರೆ ಹೆಸರು
‘ಲೈನ್‌ಮನ್‌’ಗಳನ್ನು ನಾನು ದೇಶದ ವಿದ್ಯುತ್ ರಕ್ಷಕರು ಎಂದು ಭಾವಿಸಿದ್ದೇನೆ. ಈ ಪದಕ್ಕೆ ಪರ್ಯಾಯ ನಾಮಕರಣವನ್ನು ಇನ್ನೊಂದು ತಿಂಗಳಲ್ಲಿ ಮಾಡಲಾಗುವುದು. ಪರ್ಯಾಯವಾದ ಸೂಕ್ತ ಹೆಸರನ್ನು  ಸೂಚಿಸುವಂತೆ ಈಗಾಗಲೇ ರಾಜ್ಯದ ಜನತೆಯಲ್ಲಿ ಕೋರಲಾಗಿದೆ  ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT