ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕಡಿತ: ಪಡುಬಿದ್ರಿ ಮೆಸ್ಕಾಂ ವಿರುದ್ಧ ಪ್ರತಿಭಟನೆ

Last Updated 26 ಜುಲೈ 2017, 7:35 IST
ಅಕ್ಷರ ಗಾತ್ರ

ಪಡುಬಿದ್ರಿ: ಅನಿಯಮಿತ ವಿದ್ಯುತ್ ಕಡಿತ ವಿರೋಧಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೆಜಮಾಡಿಯ ನಾಗರಿಕ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮೆಸ್ಕಾಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು. ‘ಹೆಜಮಾಡಿ ಗ್ರಾಮದಿಂದ  ಮೆಸ್ಕಾಂಗೆ ಹೆಚ್ಚು ಆದಾಯ ಬರುತ್ತಿದೆ. ಆದರೂ ಈ ಭಾಗದಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸಮಸ್ಯೆಯನ್ನು ಕೂಡಲೇ ಪರಿಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು’ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಮೆಸ್ಕಾಂ ಅಧಿಕಾರಿ ನರಸಿಂಹ, ‘ಹೆಜಮಾಡಿ ಸಹಿತ ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲಾಗುವುದು’ ಎಂದರು. ಪ್ರಭಾರ ಶಾಖಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು.

ಬೇಡಿಕೆಗಳು: ’ವಿದ್ಯುತ್ ಪರಿಕರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಹೆಜಮಾಡಿ ಗ್ರಾಮಕ್ಕೆ ಮುಲ್ಕಿ ಫೀಡರ್‌ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ನಂದಿಕೂರು ಫೀಡರ್‌ನಿಂದ ವಿದ್ಯುತ್‌ಅನ್ನು ಸಮಪರ್ಕಕವಾಗಿ ಮುಂದುವರಿಸಬೇಕು.

ದಾರಿದೀಪಗಳು ಸರಿಯಾಗಿ ನಿರ್ವಹಣೆಯಾಗದಿರುವುದರಿಂದ ಹೊಸ ದಾರಿ ದೀಪಗಳನ್ನು ಮಂಜೂರು ಮಾಡಬೇಕು. ಹೆಜಮಾಡಿ-ಫಲಿಮಾರು ಒಳಗೊಂಡಂತೆ ಹೆಜಮಾಡಿಯಲ್ಲಿ ಹೊಸ ಸೆಕ್ಷನ್ ಕಚೇರಿ ಆರಂಭಿಸಬೇಕು. ಪಡುಬಿದ್ರಿ ಮೆಸ್ಕಾಂಗೆ ಪೂರ್ಣಾವಧಿಯ ಸೆಕ್ಷನ್ ಅಧಿಕಾರಿಯನ್ನು ನೇಮಿಸಬೇಕು’ ಎಂದು ಒತ್ತಾಯಿಸಲಾಗಿದೆ.

ಮನವಿ ಪ್ರತಿಯನ್ನು ಇಂದನ ಸಚಿವ ಡಿ.ಕೆ.ಶಿವಕುಮಾರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ವಿನಯಕುಮಾರ್ ಸೊರಕೆಯವರಿಗೆ ಕಳುಹಿಸ ಕೊಡಲಾಯಿತು.

ಹೆಜಮಾಡಿಯಿಂದ ಪಡುಬಿದ್ರಿವರೆಗೆ ವಾಹನ ಜಾಥಾ ನಡೆಸಲಾಯಿತು. ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಶೇಖರ್ ಹೆಜಮಾಡಿ, ಕಾರ್ಯದರ್ಶಿ ಇಬ್ರಾಹಿಂ ಎಚ್.ಸನಾ, ಗ್ರಾಮ ಪಂಚಾಯಿತಿ ಸದಸ್ಯರಾದ ಮಯ್ಯದ್ದಿ ಕಣ್ಣಂಗಾರ್, ಹಸನ್ ಕಂಚಿನಡ್ಕ, ಸುಧಾಕರ ಕೆ., ಪಾಂಡುರಂಗ ಕರ್ಕೇರ, ವಸಂತ ಸುವರ್ಣ, ಎಚ್.ಸೂಫಿ, ಹಮ್ಮಬ್ಬ ಮುಹಿಯದ್ದೀನ್, ಅಶೋಕ್ ದೇವಾಡಿಗ, ಪದ್ಮನಾಭ ಸುವರ್ಣ ಇದ್ದರು.

‘ನಿರಂತರ ವಿದ್ಯುತ್ ನೀಡಿ ’
‘ಎಲ್ಲೂರಿನಲ್ಲಿ ಅದಾನಿ ಒಡೆತನದ ಯುಪಿಸಿಎಲ್ ವಿದ್ಯುತ್ ಸ್ಥಾವರ ಇದೆ. ಆದರೆ ಈ ಭಾಗದ ಜನರಿಗೆ ನಿರಂತರ ವಿದ್ಯುತ್ ನೀಡುವುದಾಗಿ ಇಂಧನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹೇಳಿಕೆ ನೀಡುತ್ತಾರೆ. ಆದರೆ ಇದುವರೆಗೂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತಿಲ್ಲ. ಕೂಡಲೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ನಿರಂತರ ವಿದ್ಯುತ್ ನೀಡಬೇಕು’ ಎಂದು ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಶೇಖರ್ ಹೆಜಮಾಡಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT