ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್‌ ಪಾವತಿಗೆ ಒತ್ತಾಯ: ನೀರು ಪೂರೈಕೆ ಸ್ಥಗಿತ

Last Updated 26 ಜುಲೈ 2017, 8:49 IST
ಅಕ್ಷರ ಗಾತ್ರ

ಕೋಲಾರ: ಬಾಕಿ ಬಿಲ್‌ ಬಿಡುಗಡೆಗೆ ಒತ್ತಾಯಿಸಿ ಟ್ಯಾಂಕರ್‌ ನೀರು ಸರಬರಾಜುದಾರರ ಕ್ಷೇಮಾಭಿವೃದ್ಧಿ ಸಹಕಾರ ಸಂಘದ ಸದಸ್ಯರು ನಗರದಲ್ಲಿ ಮಂಗಳವಾರದಿಂದ ನೀರು ಪೂರೈಕೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ನಗರಸಭೆ ಆವರಣದಲ್ಲಿ ಟ್ಯಾಂಕರ್‌ಗಳನ್ನು ನಿಲ್ಲಿಸಿ ಧರಣಿ ಮಾಡುತ್ತಿರುವ ಸಂಘದ ಸದಸ್ಯರು, ಬಡಾವಣೆಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಹಾಗೂ ವಿದ್ಯಾರ್ಥಿನಿಲಯಗಳಿಗೆ ಬೆಳಿಗ್ಗೆಯಿಂದಲೇ ನೀರು ಸರಬರಾಜು ನಿಲ್ಲಿಸಿದ್ದಾರೆ. ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಮನವೊಲಿಕೆ ಪ್ರಯತ್ನ ವಿಫಲವಾಗಿದೆ. ನೀರು ಪೂರೈಕೆಯಾಗದ ಕಾರಣ ಜನಜೀವನಕ್ಕೆ ತೊಂದರೆಯಾಗಿದೆ.

ಜಿಲ್ಲಾಡಳಿತವು 2016ರ ಜೂನ್‌ ತಿಂಗಳಿನಿಂದ ಬಿಲ್‌ ಪಾವತಿಸಿಲ್ಲ. 13 ತಿಂಗಳ ಸುಮಾರು ₹ 6.30  ಕೋಟಿ ಬಿಲ್‌ ಬಾಕಿ ಇದೆ. ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಟ್ಯಾಂಕರ್‌ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.

ಜೀವನಕ್ಕೆ ಕಷ್ಟ: ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ‘ಬ್ಯಾಂಕ್‌ಗಳು ಹಾಗೂ ಲೇವಾದೇವಿ ದಾರರಿಂದ ಬಡ್ಡಿ ಸಾಲ ಮಾಡಿ ಟ್ಯಾಂಕರ್‌ ಖರೀದಿಸಿದ್ದೇವೆ.   ಸಕಾಲಕ್ಕೆ ಬಿಲ್‌ ಪಾವತಿಸದಿರುವುದರಿಂದ ಸಾಲದ ಕಂತು ಕಟ್ಟಲು ತೊಂದರೆಯಾಗಿದೆ. ಜತೆಗೆ ಜೀವನ ನಿರ್ವಹಣೆ ಮಾಡಲು ಕಷ್ಟವಾಗಿದೆ’ ಎಂದರು.

‘ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಹಿಂದಿನ ತಿಂಗಳ ನೀರಿನ ಬಿಲ್‌ ಪಾವತಿಸಬೇಕೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ನಗರಸಭೆ ಅಧಿಕಾರಿಗಳು ಈ ಆದೇಶ ಪಾಲಿಸುತ್ತಿಲ್ಲ. ಬಿಲ್‌ ಪಾವತಿಸದಿರುವುದರಿಂದ ಟ್ಯಾಂಕರ್‌ ಚಾಲಕರು ಮತ್ತು ನೌಕರರಿಗೆ ಸಂಬಳ ಕೊಟ್ಟಿಲ್ಲ. ನೀರು ಪೂರೈಸುವ ಖಾಸಗಿ ಕೊಳವೆ ಬಾವಿಗಳ ಮಾಲೀಕರಿಗೂ ಹಣ ಕೊಟ್ಟಿಲ್ಲ. ಟ್ಯಾಂಕರ್‌ಗಳಿಗೆ ಡೀಸೆಲ್‌ ಹಾಕಿಸಲು ಸಹ ಹಣವಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದ್ದೇವೆ’ ಎಂದು ಅಳಲು ತೋಡಿ ಕೊಂಡರು.

‘ನಗರಸಭೆಯು 111 ಮಂದಿ ಟ್ಯಾಂಕರ್‌ ಮಾಲೀಕರಿಗೆ ದಿನಕ್ಕೆ ತಲಾ 5 ಲೋಡ್‌ ನೀರು ಸರಬರಾಜು ಮಾಡುವಂತೆ ಕಾರ್ಯಾದೇಶ ನೀಡಿದೆ. ಪ್ರತಿ ಲೋಡ್‌ಗೆ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ₹ 450 ನಿಗದಿಪಡಿಸಿದ್ದು, ನಗರಕ್ಕೆ ದಿನನಿತ್ಯ 555 ಟ್ಯಾಂಕರ್‌ ಲೋಡ್‌ ನೀರು ಪೂರೈಸುತ್ತಿದ್ದೇವೆ’ ಎಂದು ಹೇಳಿದರು.

ಭರವಸೆ ಹುಸಿ: ನಗರಸಭೆ ಅಧಿಕಾರಿಗಳು ಆರು ತಿಂಗಳ ನೀರು ಸರಬರಾಜಿನ ಲೆಕ್ಕ ಪರಿಶೋಧನೆ ನಡೆಸಿ  ಸಂಬಂಧಪಟ್ಟ ದಾಖಲೆಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ್ದಾರೆ. ಉಳಿದ ಏಳು ತಿಂಗಳ ಲೆಕ್ಕ ಪರಿಶೋಧನೆ ನಡೆಯ ಬೇಕಿದೆ. ಆದರೆ, ಲೆಕ್ಕ ಪರಿಶೋಧನೆ ಯಾಗಿರುವ ಬಿಲ್‌ನ ಮೊತ್ತ ಬಿಡುಗಡೆ ಮಾಡಲು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ ಎಂದು ಧರಣಿನಿರತರು ಆರೋಪಿಸಿದರು.

ಜೂನ್‌ ತಿಂಗಳಲ್ಲಿ ಧರಣಿ ಮಾಡಿದ್ದಾಗ ಶೀಘ್ರವೇ ಬಿಲ್‌ ಪಾವತಿಸುವುದಾಗಿ ನಗರಸಭೆ ಅಧ್ಯಕ್ಷರು ಭರವಸೆ ನೀಡಿದ್ದರು. ಆದರೆ, ಆ ಭರವಸೆ ಹುಸಿಯಾಗಿದೆ. ಆಡಳಿತ ಯಂತ್ರಕ್ಕೆ ಟ್ಯಾಂಕರ್‌ ಮಾಲೀಕರ ಕಷ್ಟದ ಅರಿವಿಲ್ಲ ಎಂದು ದೂರಿದರು.

ಜಿಲ್ಲಾಧಿಕಾರಿಯು ಟ್ಯಾಂಕರ್‌ ಬಾಡಿಗೆಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಶೀಘ್ರವೇ ಪರಿಶೀಲಿಸಿ ಬಾಕಿ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಟ್ಯಾಂಕರ್‌ಗಳನ್ನು ನಿಲ್ಲಿಸಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಧರಣಿ ಹಿಂಪಡೆಯುವ ಪ್ರಶ್ನೆ ಇಲ್ಲ
ಬಿಲ್‌ ಪಾವತಿಸುವವರೆಗೂ ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಕನಿಷ್ಠ ಲೆಕ್ಕ ಪರಿಶೋಧನೆಯಾಗಿರುವ ಆರು ತಿಂಗಳ ₹ 3.30 ಕೋಟಿ ಬಾಕಿಯನ್ನಾದರೂ ಬಿಡುಗಡೆ ಮಾಡಬೇಕು. ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿ ಸೂಚನೆಯಂತೆ ಪ್ರತಿ ತಿಂಗಳು ಟ್ಯಾಂಕರ್‌ ನೀರು ಪೂರೈಕೆಯ ಮಾಹಿತಿ ಮತ್ತು ದಾಖಲೆಪತ್ರಗಳನ್ನು ಸಲ್ಲಿಸಬೇಕು ಎಂದು  ಟ್ಯಾಂಕರ್‌ ನೀರು ಸರಬರಾಜುದಾರರ ಕ್ಷೇಮಾಭಿವೃದ್ಧಿ ಸಹಕಾರ ಸಂಘ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ಅಂಕಿ ಅಂಶ
111 ಟ್ಯಾಂಕರ್‌ಗಳಿಗೆ ಕಾರ್ಯಾದೇಶ

555 ಲೋಡ್‌ ನೀರು ಪೂರೈಕೆ

13 ತಿಂಗಳ ನೀರಿನ ಬಿಲ್‌ ಬಾಕಿ

* * 

ಧರಣಿಯಿಂದ ಮೊದಲ ದಿನ ಹೆಚ್ಚಿನ ತೊಂದರೆಯಾಗಿಲ್ಲ. ಧರಣಿ ಮುಂದು ವರಿದರೆ ಸಮಸ್ಯೆ ಬಿಗಡಾಯಿಸಲಿದೆ. ಜಿಲ್ಲಾಧಿಕಾರಿ ಭೇಟಿಯಾಗಿ ಶೀಘ್ರ ಬಿಲ್‌ ಬಿಡುಗಡೆಗೆ ಮನವಿ ಮಾಡಿದ್ದೇವೆ.
ಮಹಾಲಕ್ಷ್ಮಿ, ನಗರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT