ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿಯುವ ಭೀತಿಯಲ್ಲಿ ಶೈವ -ವೈಷ್ಣವ ಸಂಗಮ ತಾಣ

Last Updated 26 ಜುಲೈ 2017, 8:51 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಅಪರೂಪದ ಶೈವ -ವೈಷ್ಣವ ಸಂಗಮ ಸ್ಥಳ ಎಂದೇ ಪ್ರಸಿದ್ಧವಾದ ನಗರದ ಅಗ್ರಹಾರ ಬೀದಿಯಲ್ಲಿರುವ  ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಬಿರುಕು ಕಾಣಿಸಿಕೊಂಡು ಕುಸಿಯುವ ಹಂತದಲ್ಲಿದೆ. ದೇವಾಲಯದ ಒಂದು ಭಾಗದ ತೊಲೆ ಮುರಿದು, ಗೋಡೆ ಬಿರುಕುಬಿಟ್ಟಿದೆ. ಭಕ್ತರು ದೇವಾಲಯ ಕುಸಿಯದಂತೆ ಕಲ್ಲು ಚಪ್ಪಡಿ ಆನಿಸಿ ಇಟ್ಟಿದ್ದಾರೆ. ಜೋರು ಮಳೆ ಬಿದ್ದರೆ ದೇವಾಲಯದ ಚಾವಣಿ ಕುಸಿಯುವುದನ್ನು ತಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಮೂಡಿದೆ.

ನಗರದ ದೇವಾಲಯಗಳಲ್ಲಿಯೇ ಅತ್ಯಂತ ಪ್ರಾಚೀನವಾಗಿದ್ದು ಹಾಗೂ ಶೈವ ವೈಷ್ಣವ ದೇವರ ಮೂರ್ತಿಗಳನ್ನು ಒಂದೆಡೆ ಪ್ರತಿಷ್ಠಾಪಿಸಿರುವುದು ಇಲ್ಲಿಯ ವಿಶೇಷ. ದೇವಾಲಯದ ಮುಂಭಾಗದಲ್ಲಿ ಸುಮಾರು ನಾಲ್ಕು ನೂರು ವರ್ಷ ಹಳೆಯದಾದ ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಲಾಗಿರುವ ಶಾಮಣ್ಣಬಾವಿ ಎಂಬ ಕಲ್ಯಾಣಿಯಿದೆ. ಗೌಡನ ಕೆರೆಯಿಂದ ಹೆಚ್ಚಾದ ನೀರು ಕಲ್ಯಾಣಿಗೆ ಹರಿಯುವಂತೆ ತೂಬನ್ನು ಈ ಕಲ್ಯಾಣಿಯಲ್ಲಿ ನಿರ್ಮಿಸಲಾಗಿದೆ.

ಹಿಂದೆ ಬಾವಿಯಲ್ಲಿ ಸದಾಕಾಲ ನೀರು ಇರುತ್ತಿತ್ತು. ಎಲ್ಲರಿಗೂ ಈಜು ಕೊಳವಾಗಿತ್ತು. ಒಂದೆಡೆ ವಿಶಾಲ ಅರಳಿಕಟ್ಟೆಯಿದ್ದರೆ ಮತ್ತೊಂದೆಡೆ ಶಿವ ವಿಷ್ಣು ಸಂಗಮದ ದೇವಾಲಯವಿದೆ. ಇಲ್ಲಿ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಮೂರ್ತಿಗಳಿವೆ. ಗಣಪತಿ, ಸೂರ್ಯ ನಾರಾಯಣಸ್ವಾಮಿ, ಸುಬ್ರಮಣ್ಯಸ್ವಾಮಿ, ಗಿರಿಜಾಂಬಾ, ಚನ್ನಕೇಶವಸ್ವಾಮಿ, ವೀರಾಂಜನೇಯ ದೇವರಿವೆ. ಅಪರೂಪದ ಕೆತ್ತನೆಗಳುಳ್ಳ ಕಂಬಗಳಿವೆ.

‘ದೇವಾಲಯ ಕುಸಿಯದಂತೆ ತಾತ್ಕಾಲಿಕವಾಗಿ ಕಲ್ಲಿನ ಚಪ್ಪಡಿಯೊಂದನ್ನು ನಿಲ್ಲಿಸಿದೆ. ಮಳೆ ಬೀಳುತ್ತಿದ್ದಂತೆಯೇ ಚಾವಣಿ ಕುಸಿಯುವ ಸಾಧ್ಯತೆಯಿದೆ. ಆಡಳಿತ, ಮುಜರಾಯಿ ಇಲಾಖೆ ಅಧಿಕಾರಿಗಳು ದೇವಸ್ಥಾನದ ದುರಸ್ತಿ ಕಾರ್ಯ ನಡೆಸಬೇಕು. ಆದರೆ ಅದಕ್ಕಿಂತ ದೇವಾಲಯದ ಪುನರ್‌ ನಿರ್ಮಾಣವೇ ಸೂಕ್ತ ಎಂದು ತಜ್ಞರು ಹೇಳುವರು’ ಎಂದು ಹಿರಿಯರಾದ ಎಸ್‌.ವಿ. ನಾಗರಾಜರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT