ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂಳು ತಿನ್ನುತ್ತಿರುವ ವೈದ್ಯಕೀಯ ಉಪಕರಣ

Last Updated 26 ಜುಲೈ 2017, 8:56 IST
ಅಕ್ಷರ ಗಾತ್ರ

ಚಿಂತಾಮಣಿ: ವಾಣಿಜ್ಯ ಕೇಂದ್ರವಾದ ನಗರದಲ್ಲಿ ₹10.70 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 60 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಸಿಬ್ಬಂದಿ ಮಂಜೂರಾತಿ ಇಲ್ಲದೆ ಬೀಗ ಮುದ್ರೆ ಬಿದ್ದಿದೆ.

ಆಸ್ಪತ್ರೆಯ ಕಟ್ಟಡ ಪೂರ್ಣಗೊಂಡು 2 ವರ್ಷವಾಗಿದೆ. ಗುತ್ತಿಗೆದಾರರು ಕಟ್ಟಡವನ್ನು ಆಸ್ಪತ್ರೆಯ ಆಡಳಿತ ವರ್ಗಕ್ಕೆ ಹಸ್ತಾಂತರಿಸಿದ್ದಾರೆ. ಆಸ್ಪತ್ರೆಗೆ ಅಗತ್ಯವಾದ ಪರಿಕರಗಳನ್ನು ಲಕ್ಷಗಟ್ಟಲೆ ವೆಚ್ಚ ಮಾಡಿ ಖರೀದಿಸಲಾಗಿದೆ. ಆದರೆ ಸಿಬ್ಬಂದಿ ನೇಮಕವಾಗದ ಕಾರಣ ಆಸ್ಪತ್ರೆ ಉದ್ಘಾಟನೆಯಾಗಿ, ಸಾರ್ವಜನಿಕರ ಸೇವೆಗೆ ಯೋಗ ಕೂಡಿ ಬಂದಿಲ್ಲ.

ಆಸ್ಪತ್ರೆಯ ರೋಗಿಗಳ ಒತ್ತಡ ಗಮನಿಸಿ ಡಾ. ಎಂ.ಸಿ. ಸುಧಾಕರ್‌ ಶಾಸಕರಾಗಿದ್ದಾಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಾಗಿ ಪ್ರಸ್ತಾವ ಸಲ್ಲಿಸಿದ್ದರು. ನಂತರ ನಬಾರ್ಡ್‌ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಮಂಜೂರಾತಿಯನ್ನೂ ಪಡೆದಿದ್ದರು.

ಹಾಲಿ ಆಸ್ಪತ್ರೆಯ ಆವರಣದಲ್ಲೇ ನೂತನ ಆಸ್ಪತ್ರೆಯನ್ನು ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಮಟ್ಟದಲ್ಲಿ ವ್ಯವಹರಿಸಿ ಆಸ್ಪತ್ರೆ ಆವರಣ ಗೋಡೆಗೆ ಹೊಂದಿಕೊಂಡಿದ್ದ ಲೋಕೋಪಯೋಗಿ ಇಲಾಖೆ ಕಟ್ಟಡವನ್ನು ಪಡೆಯುವಂತೆ ಮಾಡಿದ್ದರು. ನಂತರ ಲೋಕೋಪಯೋಗಿ ಇಲಾಖೆಗೆ ಬೇರೆ ಕಡೆ ಸ್ಥಳವನ್ನು ನೀಡಿ ಹೊಸ ಕಟ್ಟಡದ ನಿರ್ಮಾಣಕ್ಕೂ ಆದೇಶ ಮಾಡಿಸಿದ್ದರು.

ಆಸ್ಪತ್ರೆಗೆ ಸರಬರಾಜಾಗಿರುವ ಮಂಚಗಳು, ಹಾಸಿಗೆಗಳು ಸೇರಿ ವಿವಿಧ ಪರಿಕರಗಳು ಹಾಗೂ ತಪಾಸಣೆಯ ಯಂತ್ರೋಪಕರಣಗಳು ದೂಳು ತಿನ್ನುತ್ತಿವೆ. ಸುಸಜ್ಜಿತ ಕಟ್ಟಡ, ಯಂತ್ರೋಪಕರಣಗಳಿದ್ದರೂ ಕೆಲಸ ಮಾಡಲು ಅಗತ್ಯವಾದ ತಜ್ಞ ವೈದ್ಯರು ಮತ್ತು  ತಾಂತ್ರಿಕ ಸಿಬ್ಬಂದಿ ಇಲ್ಲದಿರುವುದೇ ಸಮಸ್ಯೆಯಾಗಿದೆ.

ಹೊಸ ಕಟ್ಟಡದಲ್ಲಿ ಹೊರ ರೋಗಿಗಳ ವಿಭಾಗ, ವೈದ್ಯರು ಮತ್ತು ನರ್ಸ್‌ಗಳ ವಿಶ್ರಾಂತಿ ಕೊಠಡಿ, ಶಸ್ತ್ರ ಚಿಕಿತ್ಸಾ ಕೊಠಡಿ, ಪ್ರಯೋಗಾಲಯ, ಸಾಮಾನ್ಯ ವಾರ್ಡ್‌, ವಿಶೇಷ ವಾರ್ಡ್‌, ಐಸಿಯು ಕೊಠಡಿ ಇವೆ. ಒಟ್ಟಾರೆ ಆಸ್ಪತ್ರೆಯ ಕಟ್ಟಡವು ಎಲ್ಲಾ ರೀತಿಯಿಂದಲೂ ಸುಸಜ್ಜಿತವಾಗಿದೆ. ಆದರೆ ಅಲ್ಲಿ ಕುಳಿತು ಕೆಲಸ ಮಾಡುವವರೇ ಇಲ್ಲ.

ಆಸ್ಪತ್ರೆಗೆ ತಲಾ ಇಬ್ಬರು ಇಬ್ಬರು ಸ್ತ್ರೀರೋಗ, ಮಕ್ಕಳ ಕಾಯಿಲೆ, ಅರಿವಳಿಕೆ ತಜ್ಞರ ನೇಮಕಾತಿಗೆ ಮಂಜೂರಾತಿ ಸಿಕ್ಕಿದೆ. ಇದಲ್ಲದೆ ವೈದ್ಯಕೀಯೇತರ 32 ಸಿಬ್ಬಂದಿ ನೇಮಕಾತಿ ಮಂಜೂರಾತಿಗಾಗಿ ಪ್ರಸ್ತಾವ ಸಲ್ಲಿಸಿದ್ದು, ಆರ್ಥಿಕ ಇಲಾಖೆ ಮಂಜೂರಾತಿಗಾಗಿ ಕಾಯುತ್ತಿದೆ. ಈ ಕುರಿತು ಹಲವು ಬಾರಿ ಜಿಲ್ಲಾ ಆರೋಗ್ಯ ಇಲಾಖೆ ಪತ್ರ ವ್ಯವಹಾರ ನಡೆಸಿದೆ. ಅನುಮೋದನೆ ಸಿಕ್ಕರೆ ಆಸ್ಪತ್ರೆ ಕಾರ್ಯಾರಂಭ ಮಾಡಬಹುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಹಾಲಿ ಆಸ್ಪತ್ರೆಯಲ್ಲಿ  ರೋಗಿಗಳ ಸಂಖ್ಯೆ ಅಧಿಕವಾಗಿದೆ. ಬಾಗೇಪಲ್ಲಿ, ಶಿಡ್ಲಘಟ್ಟ, ಶ್ರೀನಿವಾಸಪುರ ತಾಲ್ಲೂಕುಗಳಿಂದಲೂ ರೋಗಿಗಳು ಬರುತ್ತಾರೆ. ಅಲ್ಲೂ ಸಿಬ್ಬಂದಿ ಕೊರತೆ ಇದೆ. ಆಸ್ಪತ್ರೆಗೆ ‘ಡಿ’ ಗ್ರೂಪ್‌ನ 39 ಹುದ್ದೆಗಳಲ್ಲಿ 7 ಜನ ಕರ್ತವ್ಯ  ನಿರ್ವಹಿಸುತ್ತಿದ್ದಾರೆ. ಉಳಿದವು ಖಾಲಿ ಇವೆ. ಹೊಸ ಸಿಬ್ಬಂದಿ ನೇಮಕವಾಗದೆ ಹೊಸ ಆಸ್ಪತ್ರೆ ಕಾರ್ಯಾರಂಭ ಮಾಡುವುದು ಅಸಾಧ್ಯ ಎಂಬುದು ವೈದ್ಯರ ಅನಿಸಿಕೆ.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ. ಗೋಪಿನಾಥ್‌ ಮಾತನಾಡಿ, ಶಾಸಕರು ಹಾಗೂ ಸಂಸದರು ಸರ್ಕಾರದ ಮೇಲೆ ಒತ್ತಡ ತಂದು ಆಸ್ಪತ್ರೆ ಸಿಬ್ಬಂದಿ ನೇಮಕಾತಿಗೆ ಮಂಜೂರಾತಿ ಕೊಡಿಸಬೇಕು ಹಾಗೂ ಆಸ್ಪತ್ರೆ ಕಾರ್ಯಾರಂಭಕ್ಕೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

* * 

ವೈದ್ಯರು ಉತ್ತಮವಾಗಿ ಸ್ಪಂದಿಸುತ್ತಾರೆ, ಔಷಧಿ ನೀಡುತ್ತಾರೆ. ರೋಗಿಗಳ ಒತ್ತಡವನ್ನು ಕಡಿಮೆ ಮಾಡಲು ನೂತನ ಆಸ್ಪತ್ರೆ ಶೀಘ್ರವಾಗಿ ಆರಂಭಿಸಬೇಕು
ಕಮಲಮ್ಮ
ಹೊರ ರೋಗಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT