ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ದ ಆಭರಣಗಳಲ್ಲಿ ಅದ್ದೂರಿ ನಿಶ್ಚಿತಾರ್ಥ!

ಮದುವೆಗೆ ಎರಡು ದಿನ ಬಾಕಿ ಇರುವಾಗ ಅತಿಥಿಗಳಂತೆ ಹೋದ ಪೊಲೀಸರು: 112 ಗ್ರಾಂ ಚಿನ್ನಾಭರಣ ಜಪ್ತಿ
Last Updated 26 ಜುಲೈ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು: ಕದ್ದ ಒಡವೆಗಳನ್ನು ಮಾರಾಟ ಮಾಡಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಾಲಾಕಿ ಕಳ್ಳನೀಗ ಚನ್ನಮ್ಮನಕೆರೆ  ಅಚ್ಚುಕಟ್ಟು ಪೊಲೀಸರ ಅತಿಥಿಯಾಗಿದ್ದಾನೆ.

‘ಕುರುಬರಹಳ್ಳಿಯ ಲೋಕೇಶ್ ಎಂಬಾತನನ್ನು ಬಂಧಿಸಿ, ₹ 4.5 ಲಕ್ಷ ಮೌಲ್ಯದ 112 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದೇವೆ. ಇನ್ನೂ 60 ಗ್ರಾಂ ಚಿನ್ನವನ್ನು ಅಪರಿಚಿತ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಈಗ ಆತನ ಹುಡುಕಾಟದಲ್ಲಿ ತೊಡಗಿದ್ದೇವೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮದುವೆ ತಯಾರಿಯಲ್ಲಿದ್ದ: ‘ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿರುವುದಾಗಿ ಹುಡುಗಿ ಕಡೆಯವರಿಗೆ ಸುಳ್ಳು ಹೇಳಿದ್ದ ಆರೋಪಿ, ಎರಡು ತಿಂಗಳ ಹಿಂದೆ ತಮಿಳುನಾಡಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ವೇಳೆ ಭಾವಿ ಪತ್ನಿಗೆ ಕಳವು ಮಾಡಿದ್ದ ಒಡವೆಗಳನ್ನೇ ತೊಡಿಸಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‘ಇದೇ ಜುಲೈ 19ರಂದು ಆತನ ಮದುವೆ ನಿಗದಿಯಾಗಿತ್ತು. ಅದಕ್ಕೆ ಬೇಕಿದ್ದ ಹಣ ಹೊಂದಿಸಲು ಸುಬ್ರಹ್ಮಣ್ಯಪುರ, ಕೊಡಿಗೇಹಳ್ಳಿ, ಜ್ಞಾನಭಾರತಿ ಹಾಗೂ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗಳ ವ್ಯಾಪ್ತಿಯ ಮನೆಗಳಲ್ಲಿ ಒಡವೆ ಹಾಗೂ ರೇಷ್ಮೆ ಸೀರೆಗಳನ್ನು ಕಳ್ಳತನ ಮಾಡಿದ್ದ. ಅಲ್ಲದೆ, ಸೀರೆಗಳನ್ನು           ಭಾವಿ ಪತ್ನಿಗೆ ಉಡುಗೊರೆಯಾಗಿ ನೀಡುತ್ತಿದ್ದ.’

‘ಕಳವು ಮಾಡಿದ ಬುಲೆಟ್ ಬೈಕ್‌ನಲ್ಲಿ ಹಗಲು ವೇಳೆ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ ಈತ, ರಾತ್ರಿ ಬೀಗ ಮುರಿದು ಆ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ. ಸಿ.ಸಿ ಟಿ.ವಿ ಕ್ಯಾಮೆರಾವೊಂದರಲ್ಲಿ ಲೋಕೇಶ್‌ನ ಚಹರೆ ಸೆರೆಯಾಗಿತ್ತು.

ಹಳೇ ಆರೋಪಿಯಾದ ಕಾರಣ ಹುಡುಕಿಕೊಂಡು ಮನೆ ಹತ್ತಿರ ಹೋಗಿದ್ದೆವು. ಆಗ, ಜುಲೈ 19ರಂದು ತಮಿಳುನಾಡಿನಲ್ಲಿ ಆತನ ಮದುವೆ ನಿಗದಿಯಾಗಿರುವುದು ಗೊತ್ತಾಯಿತು. ತಕ್ಷಣ ಅಲ್ಲಿಗೆ ತೆರಳಿ ಜುಲೈ  17ರಂದೇ ವಶಕ್ಕೆ ಪಡೆದೆವು’ ಎಂದು ಮಾಹಿತಿ ನೀಡಿದ್ದಾರೆ.

***

ಆಣೆ ಮಾಡಿಸಿ ಮಾಂಗಲ್ಯ ಎಗರಿಸುತ್ತಿದ್ದ!

ಬೆಂಗಳೂರು: ದೇವಸ್ಥಾನಗಳಿಗೆ ಹೋಗುವ ವೃದ್ಧೆಯರ ಗಮನ ಬೇರೆಡೆ ಸೆಳೆದು ಮಾಂಗಲ್ಯ ಸರ ಎಗರಿಸುತ್ತಿದ್ದ ಅತ್ತಿಬೆಲೆಯ ಗಿರೀಶ್ ಎಂಬಾತ ಗಿರಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ದೇವಸ್ಥಾನದ ಆವರಣದಲ್ಲಿ ಪರ್ಸ್ ಎಸೆಯುವ ಆರೋಪಿಯು ನಂತರ ಒಂಟಿಯಾಗಿ ನಿಂತಿರುವ ವೃದ್ಧೆಯನ್ನು ಕರೆದು, ‘ನಿಮ್ಮ ಪರ್ಸ್ ಬಿದ್ದು ಹೋಯಿತು. ತೆಗೆದುಕೊಳ್ಳಿ’ ಎನ್ನುತ್ತಾನೆ. ಅವರು ತಮ್ಮದಲ್ಲ ಎಂದಾಗ, ‘ಹೌದಾ.. ಹಾಗಾದರೆ ನೀವೆ ಹುಂಡಿಗೆ ಹಾಕಿ ಬಿಡಿ. ಬೇರೆಯವರ ದುಡ್ಡು ನಮಗ್ಯಾಕೆ’ ಎನ್ನುತ್ತಿದ್ದ. 

ಈ ಮೂಲಕ ಅತ್ಮೀಯತೆ ಬೆಳೆಸಿಕೊಂಡು ಸಂಭಾಷಣೆಗೆ ಇಳಿಯುತ್ತಿದ್ದ. ಆತನ ಮಾತಿನಂತೆ ವೃದ್ಧೆಯು ಪರ್ಸನ್ನು ಹುಂಡಿಗೆ ಹಾಕುತ್ತಿದ್ದಂತೆಯೇ ಆರೋಪಿಯ ಸಹಚರನೊಬ್ಬ ಅಲ್ಲಿಗೆ ಬರುತ್ತಿದ್ದ. ‘ನನ್ನ ಪರ್ಸನ್ನು ನೀವೇ ಕದ್ದಿದ್ದೀರಾ’ ಎಂದು ಗಲಾಟೆ ಶುರು ಮಾಡುತ್ತಿದ್ದ.

ಹೀಗೆ, ಅವರನ್ನು ಗೊಂದಲಕ್ಕೀಡು ಮಾಡುತ್ತಿದ್ದ ಆರೋಪಿಗಳು, ‘ನಾನು ಪರ್ಸ್ ಕದ್ದಿಲ್ಲವೆಂದು ಮಾಂಗಲ್ಯದ ಮೇಲೆ ಆಣೆ ಮಾಡಿ’ ಎನ್ನುತ್ತಿದ್ದರು. ಅವರು ಮಾಂಗಲ್ಯ ಕೈಲಿ ಹಿಡಿದು ಆಣೆ ಮಾಡುತ್ತಿರುವಾಗಲೇ ಆರೋಪಿಗಳು ಅದನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು.

***

‘87 ಪ್ರಕರಣ ಭೇದಿಸಿದ್ದೇವೆ’
‘ಕಳವು, ಸುಲಿಗೆ ಸೇರಿದಂತೆ 87 ಪ್ರಕರಣಗಳಿಗೆ ಸಂಬಂಧಿಸಿದಂತೆ 26 ಮಂದಿಯನ್ನು ಬಂಧಿಸಿದ್ದೇವೆ. ಆರೋಪಿಗಳಿಂದ 1 ಕೆ.ಜಿ. ಚಿನ್ನ, 27 ಕೆ.ಜಿ ಬೆಳ್ಳಿ, 43 ಬೈಕ್, ಎರಡು ಕಾರು, 400 ಕೆ.ಜಿ ರಕ್ತ ಚಂದನ ಸೇರಿ  ₹ 95 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ’ ಎಂದು  ಪಶ್ಚಿನ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್  ಮಾಲಿನಿ ಕೃಷ್ಣಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT