ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎಗೆ ಮರಳಿದ ನಿತೀಶ್‌

ಇಂದು ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ
Last Updated 26 ಜುಲೈ 2017, 20:39 IST
ಅಕ್ಷರ ಗಾತ್ರ

ಪಟ್ನಾ: ಒಂದೇ ದಿನದಲ್ಲಿ ಭಾರಿ ನಾಟಕೀಯ ಬೆಳವಣಿಗೆಗಳಿಗೆ ಬಿಹಾರ ಬುಧವಾರ ಸಾಕ್ಷಿಯಾಯಿತು. ಆರ್‌ಜೆಡಿ, ಕಾಂಗ್ರೆಸ್ ಜತೆಗಿನ ಮಹಾಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ನಿತೀಶ್ ಕುಮಾರ್ ಅವರು, ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.

‘ಗುರುವಾರ ಬೆಳಿಗ್ಗೆ 10 ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಮತ್ತು ರಾಜ್ಯ ಬಿಜೆಪಿ ನಾಯಕ ಸುಶೀಲ್‌ ಕುಮಾರ್ ಮೋದಿ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.

ಈ ಮೊದಲು ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನಿಗದಿಯಾಗಿತ್ತು. ತಡರಾತ್ರಿ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಸಮಯ ಬದಲಿಸಲು ತೀರ್ಮಾನಿಸಲಾಯಿತು. ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸಲು ಆರ್‌ಜೆಡಿಗೆ ಅವಕಾಶ ದೊರೆಯದಂತೆ ಈ ರೀತಿ ಮಾಡಲಾಯಿತು ಎನ್ನಲಾಗಿದೆ.

ರಾಜ್ಯಪಾಲ ಕೇಸರಿನಾಥ ತ್ರಿಪಾಠಿಗೆ ರಾಜೀನಾಮೆ ಪತ್ರ ಸಲ್ಲಿಸಿ ಬಂದ  ನಂತರ ನಿತೀಶ್ ಅವರ ಅಧಿಕೃತ ನಿವಾಸದಲ್ಲಿ ಜೆಡಿಯು ಮತ್ತು ಬಿಜೆಪಿ ಶಾಸಕರು ಸಭೆ ನಡೆಸಿದರು. ನಂತರ ನಿತೀಶ್ ಅವರನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದರು. ರಾಜೀನಾಮೆ ಪ್ರಹಸನ ನಡೆಯುತ್ತಿದ್ದಂತೆ, ‘ಜೆಡಿಯುಗೆ ಬೇಷರತ್ ಬೆಂಬಲ ನೀಡುತ್ತೇವೆ’ ಎಂದು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಘೋಷಿಸಿದರು.

ತಡರಾತ್ರಿ ರಾಜ್ಯಪಾಲರನ್ನು ಭೇಟಿಯಾದ ಉಭಯ ಬಣಗಳ ಮುಖಂಡರು ಜೆಡಿಯು–ಬಿಜೆಪಿ ಮೈತ್ರಿಕೂಟಕ್ಕೆ 132 ಶಾಸಕರ ಬೆಂಬಲ ಇದ್ದು, ಸರ್ಕಾರ ರಚಿಸಲು ಆಹ್ವಾನ ನೀಡಬೇಕು ಎಂದು ಮನವಿ ಮಾಡಿದರು.

ಮೊದಲೇ ನಿಗದಿಯಾಗಿದ್ದ ನೀಲನಕ್ಷೆ: ರಾಜೀನಾಮೆ ನೀಡಿದ ತಕ್ಷಣವೇ ನಿತೀಶ್‌ ಅವರನ್ನು ಅಧಿಕಾರಕ್ಕೆ ತರುವುದಕ್ಕೆ ನೀಲನಕ್ಷೆ ಮೊದಲೇ ಸಿದ್ಧವಾಗಿತ್ತು.  ರಾಜೀನಾಮೆ ನಿರ್ಧಾರ ಘೋಷಣೆಯಾಗುತ್ತಿದ್ದಂತೆಯೇ ದೆಹಲಿ ಮತ್ತು ಪಟ್ನಾದಲ್ಲಿ ಬಿಜೆಪಿ ಮುಖಂಡರು ಸಭೆ ಸೇರಿದರು. ನಿತೀಶ್‌ ಅವರಿಗೆ ಬೆಂಬಲ ನೀಡುವ ನಿರ್ಧಾರ ಕೈಗೊಂಡರು.

ಈ ಮಧ್ಯೆ, ಸರ್ಕಾರ ರಚಿಸುವುದಕ್ಕೆ ಆರ್‌ಜೆಡಿ ಕೂಡ ಮುಂದಾಗಿದೆ. ‘ರಾಜ್ಯಪಾಲರಲ್ಲಿ ಸಮಯ ಕೋರಲಾಗಿದೆ. ನಮ್ಮದು ವಿಧಾನಸಭೆಯಲ್ಲಿ ಅತ್ಯಂತ ದೊಡ್ಡ ಪಕ್ಷ. ಹಾಗಾಗಿ ಸರ್ಕಾರ ರಚನೆಗೆ ನಮ್ಮನ್ನೇ ಆಹ್ವಾನಿಸಬೇಕು’ ಎಂದು ಮಹಾಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT