ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

260 ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ

Last Updated 27 ಜುಲೈ 2017, 5:31 IST
ಅಕ್ಷರ ಗಾತ್ರ

ಚಿಂಚೋಳಿ: ‘ಅಭಿವೃದ್ಧಿಗಾಗಿ ತಾಲ್ಲೂಕು ಪಂಚಾಯಿತಿಗೆ 2017–18ನೇ ಸಾಲಿನಲ್ಲಿ ₹1.73 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಇಒ ಅನಿಲ ರಾಠೋಡ್‌ ತಿಳಿಸಿದರು. ಅಧ್ಯಕ್ಷೆ ರೇಣುಕಾ ಅಶೋಕ ಚವಾಣ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾ.ಪಂ ಸಾಮಾನ್ಯ ಸಭೆಗೆ ಈ ಮಾಹಿತಿ ನೀಡಿದ ಅವರು, ಈ ಕುರಿತು ಕ್ರಿಯಾಯೋಜನೆ ತಯಾರಿಸಬೇಕಾಗಿದೆ. ಎಲ್ಲಾ ಸದಸ್ಯರು ವಾರದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ಪಟ್ಟಿ ಸಲ್ಲಿಸಬೇಕು ಎಂದು ಕೋರಿದರು.

‘ಅಭಿವೃದ್ಧಿ ಅನುದಾನ ₹1 ಕೋಟಿ, ವಿಶೇಷ ಘಟಕ ಯೋಜನೆ ₹16.28 ಲಕ್ಷ, ಅಂಗನವಾಡಿ ಕೇಂದ್ರಗಳ ದುರಸ್ತಿ ₹14.99 ಲಕ್ಷ, ಗಿರಿಜನ ಉಪ ಯೋಜನೆ(ಟಿಎಸ್‌ಪಿ) ₹2 ಲಕ್ಷ, ತಾ.ಪಂ. ಅಭಿವೃದ್ಧಿ ₹4ಲಕ್ಷ, ಗ್ರಾಮೀಣ ರಸ್ತೆ ಸುಧಾರಣೆ ₹6.99 ಲಕ್ಷ, ಶಾಲಾ ಕಟ್ಟಡ ದುರಸ್ತಿ ₹7.49 ಲಕ್ಷ, ವಸತಿನಿಲಯ ದುರಸ್ತಿ ₹2.99 ಲಕ್ಷ, ಗೊಂಚಲು ಗ್ರಾಮಗಳ ಅನುದಾನ ₹10.51 ಲಕ್ಷ ಬಿಡುಗಡೆಯಾಗಿದೆ’ ಎಂದರು.

‘ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ರೈತರು ಜೆಸ್ಕಾಂಗೆ ಹಣ ಠೇವಣಿ ಮಾಡಿ 4 ವರ್ಷ ಗತಿಸಿದರೂ ಇನ್ನೂ ವಿದ್ಯುತ್‌ ಸಂಪರ್ಕ ನೀಡುತ್ತಿಲ್ಲ’ ಎಂದು ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಬಿಸಿ ಊಟ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಜತೆಗೆ, ಅಂಗನವಾಡಿ ಕೇಂದ್ರಗಳು ಸರಿಯಾಗಿ ನಡೆಯುತ್ತಿಲ್ಲ. ಶಾಲೆಗಳ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ ಎಂದು ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ ಮತ್ತು ಸದಸ್ಯೆ ಕಾವೇರಿ ರವೀಂದ್ರ ವರ್ಮಾ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳು ಅನಿರಿಕ್ಷಿತ ಭೇಟಿ ನೀಡಬೇಕು ಎಂದು ಸೂಚಿಸಿದರು.

7ನೇ ತರಗತಿಯ ವಿದ್ಯಾರ್ಥಿಗಳಿಗೆ 5ನೇ ಮಗ್ಗಿ ಬರುವುದಿಲ್ಲ. ಮುಂದಿನ ಕೆಲವೇ ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚಲಿವೆ ಎಂದು ಸದಸ್ಯ ಜಗನ್ನಾಥ ಇದಲಾಯಿ ಕಳವಳ ವ್ಯಕ್ತಪಡಿಸಿದರೆ, ಅದಕ್ಕೆ ಪ್ರೇಮಸಿಂಗ್‌ ಜಾಧವ್‌, ರಾಮರಾವ್‌ ರಾಠೋಡ್‌ ಧ್ವನಿಗೂಡಿಸಿದರು.

ಸದಸ್ಯೆ ವೀಣಾ ವಿಜಯಕುಮಾರ ಮಾನಕಾರ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮಹಮದ್‌ ಹುಸೇನ್‌ ನಾಯಕೋಡಿ ಅವರು ಶಿಕ್ಷಕ ಹುದ್ದೆಗಳ ಖಾಲಿ ಕುರಿತು ಗಮನ ಸೆಳೆದಾಗ ‘ತಾಲ್ಲೂಕಿಗೆ 240 ಪ್ರಾಥಮಿಕ ಮತ್ತು 20 ಪ್ರೌಢಶಾಲೆ ಶಿಕ್ಷಕರನ್ನು ಅತಿಥಿ ಶಿಕ್ಷಕಕರಾಗಿ ನೇಮಿಸಿಕೊಳ್ಳಲು ಸೂಚಿಸಿದ್ದಾರೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ’ ಎಂದು ಸಮನ್ವಯಾಧಿಕಾರಿ ರಾಚಪ್ಪ ಭದ್ರಶೆಟ್ಟಿ ತಿಳಿಸಿದರು.

ತಾಲ್ಲೂಕಿನಲ್ಲಿ ಪಡಿತರ ಚೀಟಿ ವಿತರಣೆ ಸ್ಥಗಿತಗೊಂಡಿದೆ. ಆದರೆ, ₹1000 ನೀಡಿದರೆ ಶಾದಿಪುರದಲ್ಲಿ ಒಂದೇ ದಿನದಲ್ಲಿ ಪಡಿತರ ಚೀಟಿ ದೊರೆಯುತ್ತದೆ. ಈ ಕುರಿತು ಆಹಾರ ನಿರೀಕ್ಷರಿಗೆ ದೂರಿದ್ದೇವೆ. ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್‌ ಅವರು ಅಧಿಕಾರಿಗಳಿಗೆ ಪರಿಶೀಲಿಸಿ ಕ್ರಮಕ್ಕೆ ಸೂಚಿಸಿದ್ದಾರೆ.

ಆದರೆ, ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಚಿರಂಜೀವಿ ಪಾಪಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಆರೋಪಕ್ಕೆ ಹಣಮಂತರಾವ್‌ ರಾಜಗಿರಾ ಮತ್ತು ರಾಜೇಂದ್ರ ಗೋಸುಲ್‌ ದನಿಗೂಡಿಸಿದರು.

ತೋಟಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಹೆಚ್ಚಿನ ಪ್ರಚಾರದ ಜತೆಗೆ ರೈತರಿಗೆ ತರಬೇತಿ ಆಯೋಜಿಸಬೇಕು, ಅಂಗನವಾಡಿ ಕಾರ್ಯಕರ್ತೆಯ ನೇಮಕವಾದರೂ ಆದೇಶ ಪತ್ರ ನೀಡದಿರುವುದಕ್ಕೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ 11 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿಯಿವೆ. ಅಲ್ಲಿಯೂ ಭರ್ತಿ ಮಾಡಬೇಕು ಎಂದು ಬಸವಣಪ್ಪ ಕುಡಳ್ಳಿ ಒತ್ತಾಯಿಸಿದರು. ಸಭೆಯಲ್ಲಿ ಕಾವೇರಿ ರವೀಂದ್ರ ವರ್ಮಾ, ನೀಲಾವತಿ ಸೋಮಶೇಖರ, ಸವಿತಾ ನಾಗೇಂದ್ರ, ಬಲಭೀಮ ನಾಯಕ್‌, ದತ್ತಾತ್ರೆಯ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT