ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಗೋವಿನ ಉತ್ಪನ್ನ ಆರೋಗ್ಯಕ್ಕೆ ಸಂಜೀವಿನಿ

Last Updated 27 ಜುಲೈ 2017, 5:48 IST
ಅಕ್ಷರ ಗಾತ್ರ

ನಿಡೋಣಿ (ವಿಜಯಪುರ): ‘ದೇಶಿ ಗೋವು ನೆಲೆಸಿರುವ ತಾಣದಲ್ಲಿ ಸುಖ, ಸಮೃದ್ಧಿ, ಆರೋಗ್ಯ ನೆಲೆಸಿರುತ್ತದೆ. ಎಲ್ಲಿ ಗೋವು ಇರುತ್ತವೆಯೋ ಅಲ್ಲಿ ರೋಗಗಳು ಸನಿಹಕ್ಕೂ ಬರುವುದಿಲ್ಲ’ ಎಂದು ಕೊಲ್ಲಾಪುರ-–ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಗ್ರಾಮದ ಪುಣ್ಯಕೋಟಿ ದೇಶಿ ಗೋತಳಿ ಸಂವರ್ಧನಾ ಪರಿವಾರ, ಸಾವಯವ ಕೃಷಿ ಪರಿವಾರ, ಸಿದ್ಧೇಶ್ವರ ಸಾವಯವ ಕೃಷಿ ಪರಿವಾರದ ವತಿ ಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಭಾರತೀಯ ಗೋತಳಿ ಸಂರಕ್ಷಕರ ನಾಲ್ಕನೇ ರಾಜ್ಯ ಮಟ್ಟದ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಸ್ವಾಮೀಜಿ, ದೇಶಿ ತಳಿಯ ಗೋವಿನ ಮಹತ್ವವನ್ನು ಪ್ರಸ್ತುತಪಡಿಸುವುದರ ಜತೆಗೆ ದೇಶಿ ಗೋವಿನ ಹಾಲು, ತುಪ್ಪ ಮೊದಲಾದ ಪದಾರ್ಥಗಳಿಂದ ಯಾವ ರೀತಿ ನಾವು ವಿವಿಧ ರೋಗಗಳಿಂದ ಮುಕ್ತಿ ಪಡೆಯಬಹುದು ಎಂಬುದಕ್ಕೆ ಸಲಹೆಯನ್ನು ನೀಡಿದರು.

‘ಗೋವು ಸಕಲ ರೋಗಗಳಿಗೂ ಸಂಜೀವಿನಿ ಇದ್ದಂತೆ. ಹಾಲು, ತುಪ್ಪ, ಬೆಣ್ಣೆ, ಮೊಸರು, ಗೋಮಯ (ಸೆಗಣಿ) ಈ ಎಲ್ಲದರ ಮಿಶ್ರಣ ಪಂಚಗವ್ಯ ಸಕಲ ರೋಗಗಳಿಗೂ ರಾಮಬಾಣ. ತಲೆ, ಕಿವಿ, ಕಣ್ಣು ಮೊದಲಾದ ಅಂಗಗಳಿಗೆ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ದೇಶಿ ತಳಿಯ ತುಪ್ಪ ಸಂಜೀವಿನಿಯಂತೆ ಕಾರ್ಯ ನಿರ್ವಹಿಸಿದರೆ, ಹೊಟ್ಟೆನೋವು, ಕಿಡ್ನಿ ಸಮಸ್ಯೆ ಮೊದಲಾದ ಸಮಸ್ಯೆಗಳಿಗೆ ದೇಶಿ ತಳಿಯ ಹಾಲು ಸಂಜೀವಿನಿಯಂತೆ ಕಾರ್ಯ ನಿರ್ವಹಿಸುತ್ತದೆ’ ಎಂದರು.

ನೋವಿನ ಸಂಗತಿ:
‘ರಾಸಾಯನಿಕ ವಿಷದ ಮೂಲಕ ಜೀವನ ಶೈಲಿ ಆರಂಭವಾಗುತ್ತಿರುವುದು ಮಾತ್ರ ನೋವಿನ ಸಂಗತಿ. ಬೆಳಿಗ್ಗೆ ಎದ್ದಾಕ್ಷಣ ಮಿನರಲ್ ವಾಟರ್‌ನಲ್ಲಿ ಮಾಡಿದ ಚಹಾ ಕುಡಿಯುತ್ತೇವೆ, ನೀರಿನಲ್ಲಿ ಕಲಬೆರಕೆ, ಚಹಾ ಪುಡಿಯಲ್ಲಿ ಕಲಬೆರಕೆ ಅದರೊಂದಿಗೆ ನಾನಾ ರಾಸಾಯನಿಕಗಳ ಮಿಶ್ರಣ, ಅದೇ ಪೇಯವನ್ನು ನಾವು ಕುಡಿಯುತ್ತೇವೆ,
ಒಂದು ರೀತಿಯಲ್ಲಿ ಹೇಳಬೇಕಾದರೆ ವಿಷಪ್ರಾಶನದಿಂದ ಜೀವನ ಶೈಲಿ ಆರಂಭವಾಗುವಂತೆ ತೋರುತ್ತದೆ.

ಪಿಜ್ಜಾ, ಬರ್ಗರ್‌ಗಳಿಂದ ಯಾವುದೇ ಲಾಭವಿಲ್ಲ. ಈ ಕಾರಣಕ್ಕಾಗಿ ಬೆಳಿಗ್ಗೆ ಎದ್ದು ದೇಶಿ ಆಕಳು ತಳಿಯ ಹಾಲು ಕುಡಿಯಬೇಕು, ಆಗ ನೋಡಿ ನಿಮ್ಮ ತಾಕತ್ತು, ವಿದ್ವತ್ತು’ ಎಂದು ಸ್ವಾಮೀಜಿ ಹೇಳಿದರು. ‘ಆಕಳು ಬಗ್ಗೆ ಉನ್ನತ ಮಟ್ಟದ ಸಂಶೋಧನೆ ನಡೆಯುತ್ತಿವೆ, ಜಗತ್ತಿನ ಉದ್ಯಮಪತಿಗಳು ಗೋವು ಸಾಕಾಣಿಕೆಯತ್ತ ಲಕ್ಷ್ಯ ವಹಿಸುತ್ತಿದ್ದಾರೆ, ಬೆರಣಿಯ ಬಗ್ಗೆಯೇ ಸಾಕಷ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ನಡೆಯುತ್ತಿವೆ’ ಎಂದರು.

ಸ್ಥಳೀಯ ವಿರಕ್ತಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಬೆಂಡೆಜಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಚಂದ್ರಶೇಖರ ಕವಟಗಿ, ರಾಜಶೇಖರ ಮಗಿಮಠ ಉಪಸ್ಥಿತರಿದ್ದರು.

* * 

ಗೋವಿನ ಸುತ್ತಮುತ್ತ ಸಂಚರಿ ಸುವ ತರಂಗಗಳು ನಮಗೆ ತಾಕುತ್ತವೆ, ಇವು ತಾಕಿದರೆ ಸಿಟ್ಟು ಬರುವುದಿಲ್ಲ. ಸಿಟ್ಟಿನಿಂದ ವಿಮುಕ್ತಿ ಸಿಗುತ್ತದೆ. ರೋಗ ದೂರವಾಗುತ್ತವೆ
ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ
ಕನ್ಹೇರಿ ಮಠ, ಕೊಲ್ಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT