ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂತ್‌ಮಟ್ಟದಲ್ಲಿ ಗೆದ್ದರೆ ವಿಧಾನಸಭೆ ಪ್ರವೇಶಿಸಿದಂತೆ

Last Updated 27 ಜುಲೈ 2017, 6:17 IST
ಅಕ್ಷರ ಗಾತ್ರ

ಸಂಕೇಶ್ವರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲುವ ಇರಾದೆ ಹೊಂದಿರುವ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ವೈಫಲ್ಯ ಮತ್ತು  ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳನ್ನು ಬೂತ್‌ ಮಟ್ಟದಲ್ಲಿ ಜನರಿಗೆ ತಿಳಿಸಲು ಸಂಕೇಶ್ವರದಲ್ಲಿ ಜರುಗಿದ ಸಂಕೇಶ್ವರ ಮತ್ತು ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಿರ್ಧರಿಸಿತು.

ಬೆಳಗಾವಿ ವಿಭಾಗದ ಉಸ್ತುವಾರಿ  ಸಂಚಾಲಕ ಮಾಣಿಕಂ ಠಾಕೂರ್ ‘ಹುಕ್ಕೇರಿ ವಿಧಾನಸಭೆಯ ಕ್ಷೇತ್ರದಲ್ಲಿ 201 ಬೂತ್‌ಗಳಿದ್ದು ಇಲ್ಲಿ ಪ್ರತಿ ಬೂತ್‌ಗೆ 13 ಜನ ಸದಸ್ಯರಿರುತ್ತಾರೆ. ಅವರೆಲ್ಲ  ಬೂತ್‌ನಲ್ಲಿರುವ 200 ಮನೆಗಳಿಗೆ ತೆರಳಿ ಮೋದಿ ದೇಶದ ಪ್ರಧಾನಿಯಾದ ನಂತರ ರಾಷ್ಟ್ರದ ಭದ್ರತೆಗೆ ಒದಗಿರುವ ಅಪಾಯ, ಅಮರನಾಥ ಯಾತ್ರಿಗಳ ಸಾವು, ಯಡಿಯೂರಪ್ಪ ಜೈಲಿಗೆ ಹೋಗಿ ಬಂದದ್ದು ಹಾಗೂ ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ ಯೋಜನೆ, ರೈತರ ಸಾಲ ಮನ್ನಾ ಕುರಿತು ಜನರಿಗೆ ತಿಳಿ ಹೇಳಬೇಕು’ ಎಂದು ಸೂಚಿಸಿದರು.

‘ಬೂತ್‌ಮಟ್ಟದಲ್ಲಿ ಎಲ್ಲ ಕಾರ್ಯಕರ್ತರು ಗೆದ್ದರೆ ಎಲ್ಲರೂ ವಿಧಾನಸಭೆ  ಪ್ರವೇಶಿಸಿದಂತೆಯೇ. ನಮ್ಮ ಸರ್ಕಾರ ಮರುಸ್ಥಾಪಿತವಾಗುತ್ತದೆ’ ಎಂದರು. ರಾಜ್ಯ ಕಾಂಗೈನ ಮಹಿಳಾ  ಘಟಕದ ಅಧ್ಯಕ್ಷೆ  ಲಕ್ಷ್ಮೀ ಹೆಬ್ಬಾಳ್ಕರ ಮಾತನಾಡಿ, ‘ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದಲ್ಲಿ  ಕೃಷಿ, ಕೈಗಾರಿಕೆ, ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ  ಸಲ್ಲುತ್ತದೆ.

ದೇಶಕ್ಕೆ ಕಂಪ್ಯೂಟರ್‌ ಹಾಗೂ ಮೊಬೈಲ್‌ಗಳ ಪರಿಚಯ ಮಾಡಿಕೊಡಲು ಕಾರಣರಾದ ರಾಜೀವ್‌ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರನ್ನೇ ಇಂದಿನ ಯುವಕರು ಮೊಬೈಲು ಮತ್ತು ಕಂಪ್ಯೂಟರ್‌ಗಳ ಮೂಲಕ  ಅವಹೇಳನ  ಮಾಡಲು ಹೊರಟಿರುವುದು ದುರದೃಷ್ಟಕರ’ ಎಂದರು. ಉಪಾಧ್ಯಕ್ಷ ವೀರಕುಮಾರ ಪಾಟೀಲ ಮಾತನಾಡಿ, ‘ನಿರಂತರವಾಗಿ ಸಂಘಟನಾ ಸಭೆಗಳನ್ನು ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸುವ ಕೆಲಸ ಮಾಡಬೇಕು’ ಎಂದರು.

ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಕೃಷಿ ಸಾಲ ಮನ್ನಾ ಮಾಡುವ ಕುರಿತು ರಾಜ್ಯದ ಬಿಜೆಪಿ ಸಂಸದರು ಮೌನ ತಳೆದಿರುವುದು ಆ ಪಕ್ಷವು ರೈತರ ಬಗ್ಗೆ ಎಷ್ಟು ಕಾಳಜಿ  ಹೊಂದಿದೆ ಎನ್ನುವುದನ್ನು ತೋರಿಸುತ್ತದೆ. ಅಧಿಕಾರಕ್ಕೆ ಬಂದ ತಕ್ಷಣ ವಿದೇಶದಲ್ಲಿರುವ ಕಪ್ಪು ಹಣವನ್ನು ತರುತ್ತೇವೆ ಎಂದು ಹೇಳಿದ್ದ ಬಿಜೆಪಿ ಯವರು  ಈಗ ಮೌನವಾಗಿರುವುದು ಆ ಪಕ್ಷದ  ಸೋಗಲಾಡಿತನ ತೋರಿಸುತ್ತದೆ’ ಎಂದು ಕುಟುಕಿದರು.

ಅಧ್ಯಕ್ಷತೆ  ವಹಿಸಿದ್ದ ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರ ಹುಕ್ಕೇರಿ, ಚಿಕ್ಕೋಡಿ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಹುಕ್ಕೇರಿಯ 2 ಯಾತ ನೀರಾವರಿ ಯೋಜನೆಗಳ ಮಂಜೂರಿ, ಗಡಿ  ಭಾಗದಲ್ಲಿ ರಸ್ತೆಗಳ ಡಾಂಬರೀಕರಣ  ಮಾಡುವ ಮೂಲಕ ಹುಕ್ಕೇರಿ ಕ್ಷೇತ್ರದ  ಸಮಗ್ರ ಅಭಿವೃದ್ದಿ ಮಾಡಲಾಗತ್ತಿದೆ’ ಎಂದರು.

ಹುಕ್ಕೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಅಂಕಲಗಿ ಸ್ವಾಗತಿಸಿ, ವಂದಿಸಿದರು. ಮುಖಂಡ ವೀರಣ್ಣಾ ಮತ್ತಿಕಟ್ಟಿ, ಜಿಲ್ಲಾ ಕಾಂಗೈ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಎಸ್.ಆರ್.ಕರೋಶಿ, ಜಯಪ್ರಕಾಶ  ನಲವಡೆ, ಗಂಗಾಧರ ಮುಡಸಿ, ರುಕ್ಮಿಣಿ ಸಾಹುಕಾರ, ಪ್ರಕಾಶ ದೇಶಪಾಂಡೆ, ಶ್ರೀಕಾಂತ ಭೂಶಿ  ಉಪಸ್ಥಿತರಿದ್ದರು.

* * 

ವಿದೇಶದಿಂದ ಕಪ್ಪು ಹಣವನ್ನು ತರುತ್ತೇವೆ ಎಂದು ಹೇಳಿದ್ದ ಬಿಜೆಪಿಯವರು  ಈಗ ಮೌನವಾಗಿರುವುದು ಆ ಪಕ್ಷದ  ಸೋಗಲಾಡಿತನ ತೋರಿಸುತ್ತದೆ
ಎಸ್.ಆರ್. ಪಾಟೀಲ
ರಾಜ್ಯ ಕಾಂಗ್ರೆಸ್‌ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT