ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಹಂಚಿಕೆ: ಸದಸ್ಯರ ಜಟಾಪಟಿ

Last Updated 27 ಜುಲೈ 2017, 6:34 IST
ಅಕ್ಷರ ಗಾತ್ರ

ಬಾಗಲಕೋಟೆ: ‘ನಗರಸಭೆ ವ್ಯಾಪ್ತಿಯ ನಿವೇಶನಗಳನ್ನು ಸಮುದಾಯ ಭವನ ನಿರ್ಮಾಣ ಸೇರಿದಂತೆ ಬೇರೆ ಬೇರೆ ಸಾಮಾಜಿಕ ಚಟುವಟಿಕೆಗಾಗಿ ಸಂಘ–ಸಂಸ್ಥೆಗಳಿಗೆ ಹಂಚಿಕೆ ಮಾಡುವಾಗ ತಾರತಮ್ಯ ಎಸಗಲಾಗುತ್ತಿದೆ’ ಎಂಬ ಆರೋಪ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.

ನಗರಸಭೆ ಅಧ್ಯಕ್ಷ ಶಂಕರಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಹಾಜಿಸಾಬ್‌ ದಂಡಿನ, ‘ನಗರಸಭೆ ವ್ಯಾಪ್ತಿಯ ನಿವೇಶನಗಳನ್ನು ಕೆಲವು ಸಮುದಾಯಗಳಿಗೆ ಮಾತ್ರ ಹಂಚಿಕೆ ಮಾಡಲಾಗುತ್ತಿದೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡುವಂತೆ ಕಳೆದ ಸಭೆಯಲ್ಲಿ ಠರಾವು ಪಾಸು ಮಾಡಿದ್ದರೂ ಅದಕ್ಕೆ ಮನ್ನಣೆ ದೊರೆತಿಲ್ಲ ಎಂದು ದಂಡಿನ ದೂರಿದರು. ಇನ್ನೊಬ್ಬ ಸದಸ್ಯ ಶಫೀಕ್ ಜಮಾದಾರ ಮಾತನಾಡಿ, ‘ಮುಸ್ಲಿಂ ಸಮಾಜಕ್ಕೆ ನಿವೇಶನ ಹಂಚಿಕೆ ಮಾಡುತ್ತಿಲ್ಲ, ಇದು ತಾರತಮ್ಯ ನೀತಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಗೋವಿಂದ ಬಳ್ಳಾರಿ ಸಹ ಧ್ವನಿಗೂಡಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರಾದ ಮಹೇಶ ಕಮತಗಿ, ಸುರೇಶ ಕುದರಿಕಾರ, ಯಲ್ಲಪ್ಪ ಬೆಂಡಿಗೇರಿ ಮುಸ್ಲಿಂ ಸಮುದಾಯಕ್ಕೆ ನಿವೇಶನ ಹಂಚಿಕೆ ಮಾಡುವಂತೆ ಸದಸ್ಯರೆಲ್ಲರೂ ಒಪ್ಪಿದ ಮೇಲೆಯೇ ಸಭೆಯಲ್ಲಿ ಠರಾವು ಪಾಸು ಆಗಿದೆ ಎಂಬುದನ್ನು ಕಾಂಗ್ರೆಸ್ ಸದಸ್ಯರು ಅರಿಯಬೇಕು.

ಅದಕ್ಕೆ  ಬಿಜೆಪಿ ವಿರೋಧ ವ್ಯಕ್ತಪಡಿಸಿಲ್ಲ  ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಸದಸ್ಯರು ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಬಿಜೆಪಿ ಸದಸ್ಯರು ಹೇಳಿದ್ದು, ಸದಸ್ಯರ ನಡುವೆ ಆರೋಪ– ಪ್ರತ್ಯಾರೋಪಗಳಿಗೆ ಕಾರಣವಾಯಿತು. ಕಾಂಗ್ರೆಸ್ ಸದಸ್ಯ ತಿಪ್ಪಣ್ಣ ನೀಲನಾಯಕ ಮಾತನಾಡಿ, ನಿವೇಶನ ಹಂಚಿಕೆಯಲ್ಲಿ ತಾರತಮ್ಯ ಬೇಡ, ನಿವೇಶನ ನೀಡಿದರೆ ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯ ನೀಡುವಂತೆ ಹೇಳಿದರು.

ನಗರಸಭೆ ಪೌರಾಯುಕ್ತ ಔದ್ರಾಮ, ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಕಾನೂನು, ನಿಯಮಾವಳಿಯಂತೆ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿ ಸದಸ್ಯರನ್ನು ಸಮಾಧಾನ ಪಡಿಸಿದರು.

ಕ್ಷಮೆಗೆ ಪಟ್ಟು: ಕಾಂಗ್ರೆಸ್ ಸದಸ್ಯ ಗೋವಿಂದ ಬಳ್ಳಾರಿ ಅವರು ಈ ಸಂದರ್ಭದಲ್ಲಿ ಮಹಿಳಾ ಸದಸ್ಯರೊಬ್ಬರಿಗೆ ಏಕವಚನದಲ್ಲಿ ಮಾತನಾಡಿದ್ದು ಗದ್ದಲಕ್ಕೆ ಕಾರಣವಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಸದಸ್ಯೆ ನಾನು ಕೂಡ ಸದಸ್ಯೆ, ಗೌರವಯುತವಾಗಿ ಮಾತನಾಡಿ ಎಂದು ಹರಿಹಾಯ್ದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿಯ ಸುರೇಶ ಕುದರಿಕಾರಿ  ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಇದಕ್ಕೆ ಬಿಜೆಪಿ ಸದಸ್ಯರೆಲ್ಲರೂ ಧ್ವನಿಗೂಡಿಸಿ ಕ್ಷಮೆ ಕೇಳದಿದ್ದರೆ ಸಭೆ ಜರುಗಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಇದರಿಂದ ಕೆಲ ಹೊತ್ತು ಕೋಲಾಹಲ ಸೃಷ್ಟಿಯಾಯಿತು. ಈ ವೇಳೆ ಮಧ್ಯಪ್ರವೇಶಿಸಿದ ಅಧ್ಯಕ್ಷ ಶಂಕರಗೌಡ ಪಾಟೀಲ, ಯಾರೂ ಅಗೌರವದಿಂದ ಮಾತನಾಡಬಾರದು ಎಂದು ಎಚ್ಚರಿಸಿದರು. ಆಗ ಗೋವಿಂದ ಬಳ್ಳಾರಿ ನಾನು ಗೌರವಯುತವಾಗಿಯೇ ಮಾತನಾಡಿದ್ದೇನೆ. ಅದು ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಾಗ ಸಭೆ ಸಹಜ ಸ್ಥಿತಿಗೆ ಮರಳಿತು.

ಸಭೆಯಲ್ಲಿ ಉಪಾಧ್ಯಕ್ಷೆ ಭಾರತಿ ಕೂಡಗಿ, ಸದಸ್ಯರಾದ ರಾಜೇಂದ್ರ ಬಳೂಲಮಠ, ಮಹಾಂತೇಶ ಹಿರೇಮಠ, ಉಮಾ ಚಟ್ಟರಕಿ, ಬಸವರಾಜ ಮಾಟೂರ, ಅಬ್ದುಲ್‌ ಸತ್ತಾರ ಮನಿಯಾರ, ಬಸವರಾಜ ನಾಶಿ, ಪ್ರೇಮನಾಥ ಗರಸಂಗಿ, ಕವಿತಾ ದಾಯಪುಲೆ, ಅಮೃತಾ ಚಳಗೇರಿ, ತುರೇದ ಮಾಬೂಬಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT