ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂಕೋರ್ಟ್ ಆದೇಶ ಪಾಲಿಸಿ’

Last Updated 27 ಜುಲೈ 2017, 6:36 IST
ಅಕ್ಷರ ಗಾತ್ರ

ಬಾಗಲಕೋಟೆ: ಸೇವಾ ಜ್ಯೇಷ್ಠತೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿ ರುವ ತೀರ್ಪು ಪಾಲನೆ ಮಾಡುವಂತೆ ಆಗ್ರಹಿಸಿ ರಾಜ್ಯ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ನೌಕರರ ಒಕ್ಕೂಟದಿಂದ (ಅಹಿಂಸಾ) ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಸುಪ್ರೀಂಕೋರ್ಟ್‌ನ ಆದೇಶ ಪಾಲನೆಗೆ ಆಗಸ್ಟ್ 9 ಕೊನೆಯ ದಿನವಾಗಿದೆ. ಆದರೆ ಆದೇಶ ಪಾಲನೆಗೆ ಸರ್ಕಾರ ಮಾತ್ರ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದ ನೌಕರರು, ಕೂಡಲೇ ಈ ವಿಚಾರದಲ್ಲಿ ಸ್ಪಷ್ಟ ನಿಲುವು ಕೈಗೊಂಡು ಸೇವಾ ಜ್ಯೇಷ್ಠತೆಯನ್ನು ಪುನರ್‌ ವರ್ಗೀಕರಿಸುವಂತೆ ಒತ್ತಾಯಿಸಿದರು.

ವಿದ್ಯಾಗಿರಿಯ ಎಂಜಿನಿಯರಿಂಗ್ ಕಾಲೇಜು ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ನಂತರ ಕಾಳಿದಾಸ ವೃತ್ತ, ಜಿಲ್ಲಾ ಆಸ್ಪತ್ರೆ, ಎಲ್‌ಐಸಿ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿದ ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ನೌಕರರು, ಜಿಲ್ಲಾಡಳಿತದ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಹಿಂಸಾ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ನಾಡಗೌಡ, ‘ಮನಬಂದಂತೆ ಜ್ಯೇಷ್ಠತಾ ಪಟ್ಟಿ ತಯಾರಿಸಿ ಅಹಿಂಸಾ ವರ್ಗದ ನೌಕರರಿಗೆ ಬಡ್ತಿ ನೀಡುವಾಗ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸದೇ ಸರ್ಕಾರ ನೌಕರರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ’ ಎಂದು ಆರೋಪಿಸಿದರು.

‘ಸೇವಾ ಹಿರಿತನದ ಆಧಾರದ ಮೇಲೆ ಕಾಲಕಾಲಕ್ಕೆ ಬಡ್ತಿ ನೀಡುವುದು ಸಾಮಾಜಿಕ ನ್ಯಾಯ. ಸರ್ಕಾರ ಅದನ್ನು ಕಡೆಗಣಿಸಿ ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಿದೆ. ನ್ಯಾಯಾ ಲಯ ನಿಗದಿ ಮಾಡಿದ ಅವಧಿಯಲ್ಲಿ ತಿೀರ್ಪು ಅನುಷ್ಠಾನಕ್ಕೆ ಮುಂದಾಗದಿದ್ದಲ್ಲಿ ನ್ಯಾಯಾಂಗ ನಿಂದನೆಯಾಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ಈ ಬಗ್ಗೆ ಸಂಘಟನೆಯಿಂದ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು’ ಎಂದರು.

ಅಹಿಂಸಾ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಸಿ.ಎಚ್.ಕಟಗೇರಿ, ಆರ್.ರಘುನಾಥ, ಮಹೇಶ ಕಕರಡ್ಡಿ, ಕಾರ್ಯದರ್ಶಿಗಳಾದ ವಿ.ಎನ್.ಪತ್ತಾರ, ಬಿ.ಟಿ.ಕೋವಳ್ಳಿ, ಎಸ್.ಎ.ಸಾರಂಗಮಠ, ಖಜಾಂಚಿ ಎಚ್.ಪ್ರಸನ್ನಕುಮಾರ, ಡಿ.ಜಿ.ಜಕ್ಕಾನಟ್ಟಿ, ವೈ.ಎಚ್.ಇದ್ದಲಗಿ, ಮೋಹನ ಹಲಗತ್ತಿ, ಸುರೇಂದ್ರರಡ್ಡಿ, ಎಸ್.ಆರ್.ಪಾಟೀಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT