ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಮನೆ ಎದುರು ಕಾರ್ಮಿಕರ ಧರಣಿ

Last Updated 27 ಜುಲೈ 2017, 6:47 IST
ಅಕ್ಷರ ಗಾತ್ರ

ಹೊಸಪೇಟೆ: ಪಿಂಚಣಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ ತಾಲ್ಲೂಕು ಸಮಿತಿಯ ಕಾರ್ಯಕರ್ತರು ಬುಧವಾರ ನಗರದ ರಾಣಿಪೇಟೆಯ ಲ್ಲಿರುವ ಶಾಸಕ ಆನಂದ ಸಿಂಗ್‌ ಮನೆ ಎದುರು ಧರಣಿ ನಡೆಸಿದರು. ಶಾಸಕರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕ ಗೋವಿಂದ ಕುಲಕರ್ಣಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

2015ರಲ್ಲಿ ಹೊರಡಿಸಿರುವ ಅಧಿ ಸೂಚನೆಗೆ ಅನುಗುಣವಾಗಿ ಪಿಂಚಣಿಗೆ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಪಿಂಚಣಿ ಮಂಜೂರು ಮಾಡಬೇಕು. ಫಲಾನುಭವಿಗಳು ಅರ್ಜಿ ಸಲ್ಲಿಸಿದ ತಿಂಗಳ ಒಳಗೆ ಸೌಲಭ್ಯದ ಹಣ ಮಂಜೂರು ಮಾಡಬೇಕು. ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

₹500, ₹1,000 ಮುಖಬೆಲೆಯ ಹಳೆಯ ನೋಟುಗಳ ಚಲಾವಣೆ ರದ್ದುಪಡಿಸಿದ ನಂತರ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಬದುಕು ಸಾಗಿಸುವುದು ಕಷ್ಟವಾಗಿದೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಕೂಡಲೇ ಅವರ ನೆರವಿಗೆ ಬರಬೇಕು. ಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಧನ ಸಹಾಯ ನೀಡಬೇಕು.

ಮನೆ ಖರೀದಿ, ನಿರ್ಮಾಣಕ್ಕೆ ನೆರವು ಕೊಡಬೇಕು. ಕಲ್ಯಾಣ ಮಂಡಳಿಯಲ್ಲಿ ಜಮೆ ಆಗಿರುವ ನಿಧಿಯನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಉಪಯೋಗಿಸಬೇಕು. ಇ.ಎಸ್‌.ಐ. ಸೌಲಭ್ಯ ಕಲ್ಪಿಸಬೇಕು. ವಲಸೆ ಕಾರ್ಮಿಕರಿಗೆ ಸೌಲಭ್ಯ ಸಿಗಲು ಗುರುತಿನ ಚೀಟಿಗಳನ್ನು ನೀಡಬೇಕು ಎನ್ನುವುದು ಪ್ರಮುಖ ಬೇಡಿಕೆಗಳಾಗಿವೆ.

ಫೆಡರೇಶನ್‌ ಜಿಲ್ಲಾ ಅಧ್ಯಕ್ಷ ಎನ್‌. ಯಲ್ಲಾಲಿಂಗ, ತಾಲ್ಲೂಕು ಅಧ್ಯಕ್ಷ ಎಂ. ಗೋಪಾಲ್‌, ಕಾರ್ಯದರ್ಶಿ ಮಂಜು, ಉಪಾಧ್ಯಕ್ಷ ಶರಣಪ್ಪ, ಪ್ರಮುಖರಾದ ಕೆ. ಪಾಂಡುರಂಗ, ಸಣ್ಣಬಸಪ್ಪ ದುರುಗಪ್ಪ, ಆರ್‌.ಎಸ್‌. ಬಸವರಾಜ, ಆರ್‌. ಬಸರೆಡ್ಡಿ, ಭಾಸ್ಕರ್‌ ರೆಡ್ಡಿ, ರಮೇಶ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT