ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ

Last Updated 27 ಜುಲೈ 2017, 7:15 IST
ಅಕ್ಷರ ಗಾತ್ರ

ಉಡುಪಿ: ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಮರಳು  ಉದ್ಯಮ ಮರಳು ಮಾಫಿಯಾ ಕೈಸೇರಿ  ಕಟ್ಟಡ ಕಾರ್ಮಿಕರು  ಸಮಸ್ಯೆಗೆ ಸಿಲುಕಿದ್ದಾರೆ ಎಂದು ಸಿಐಟಿಯು ಮುಖಂಡ ವಿಠಲ ಪೂಜಾರಿ ಆರೋಪಿಸಿದರು. ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಚಲೋ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದ  ಶಾಸಕ, ಸಚಿವರು, ಸಂಸದರು ಇದ್ದೇನು ಪ್ರಯೋಜನ. ರಾತ್ರೋ ರಾತ್ರಿ ಅಕ್ರಮ ಮರಳುಗಾರಿಕೆ ನಡೆದರೂ ಯಾವುದೇ ರೀತಿಯಾದ ಕ್ರಮ ಕೈಗೊಂಡಿಲ್ಲ. ಚೆನ್ನೈ ಹಸಿರು ಪೀಠ ನೀಡಿದ್ದ ತಡೆಯಾಜ್ಞೆ ಸದ್ಯಕ್ಕೆ ತೆರವುಗೊಂಡಿದ್ದರೂ ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಮರಳು ಸಮಸ್ಯೆ ಬಗೆಹರಿದಿಲ್ಲ. ಎಂ-ಸ್ಯಾಂಡ್ ಪೂರೈಕೆಯೂ ಆಗುತ್ತಿಲ್ಲ. ಈ ಬಗ್ಗೆ ಸರಕಾರ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ  11ಕೋಟಿ ಕಾರ್ಮಿಕರು ನೋಂದಣಿಯಾಗಿದ್ದಾರೆ. ಸೆಸ್ ಮತ್ತು ನೋಂದಣಿ ಮೂಲಕ ಸರ್ಕಾರ ₹5650  ಕೋಟಿ ಸಂಗ್ರಹಿಸಿದೆ.

ಆದರೆ ಕಾರ್ಮಿಕರಿಗೆ 11 ವರ್ಷದಲ್ಲಿ ಸೌಲಭ್ಯಗಳನ್ನು ನೀಡಲು ಕೇವಲ ₹177 ಕೋಟಿ ಮಾತ್ರ ಬಿಡುಗಡೆ ಮಾಡಿದ.ಅಧಿಕಾರ ಶಾಹಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಈ ಹಣವನ್ನು ರೈತರ ಸಾಲಮನ್ನಾ ಯೋಜನೆಗೆ ಬಳಸಿ ಕೊಳ್ಳಲು ಸರ್ಕಾರ ನಿರ್ಧರಿಸಿರುವುದು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಮನವಿ: ಸರ್ವಿಸ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ನೂರಾರು ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮುತ್ತಿಗೆಗೆ ಜಾಥಾ ನಡೆಸಿದರು. ಡಯಾನ ವೃತ್ತದಲ್ಲಿ ಜಾಥಾವನ್ನು ಪೊಲೀಸರು ತಡೆದು ನಿಲ್ಲಿಸಿದರು. ಈ ಸಂದರ್ಭ ಧರಣಿ ನಡೆಸಿದ ಮುಖಂಡರು ಹಾಗೂ ಕಾರ್ಮಿಕರು ಸ್ಥಳಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಬಂದು ಮನವಿ ಸ್ವೀಕರಿಸುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದು ಸ್ಥಳಕ್ಕೆ ಬಂದ ಸಚಿವ ಪ್ರಮೋದ್ ಮಧ್ವರಾಜ್ ಮನವಿ ಸ್ವೀಕರಿಸಿದರು.

ಸಭೆಯಲ್ಲಿ ಸಮಿತಿ ಗೌರವಾಧ್ಯಕ್ಷ ದಯಾನಂದ ಕೋಟ್ಯಾನ್, ಅಧ್ಯಕ್ಷ  ಶೇಖರ ಬಂಗೇರ, ಖಜಾಂಚಿ ಗಣೇಶ್ ನಾಯ್ಕ್, ಯು. ದಾಸು ಭಂಡಾರಿ, ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಖಜಾಂಚಿ ಜಗದೀಶ್ ಆಚಾರ್ಯ  ಭಾಗವಹಿಸಿದ್ದರು.

ಕೋರ್ಟ್ ಆದೇಶದಂತೆ ಕಾನೂನು ಬದ್ಧವಾಗಿ ಮರಳು ತೆಗೆಯಲು ಅನುಮತಿ ನೀಡಲಾಗಿದೆ. ಆಗಸ್ಟ್ 1ರ ಬಳಿಕ  ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ವ್ಯವಸ್ಥೆ ಮಾಡಲಾಗುತ್ತದೆ.ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸ್ಪಷ್ಟ ಸೂಚನೆ ನೀಡಲಾಗಿದೆ. ಸ್ಥಳೀಯ ಕಾರ್ಮಿಕರೇ ಮರಳು ತೆಗೆಯಬೇಕು.

ವಾಹನಗಳಿಗೆ ಜಿಪಿಎಸ್ ಕಡ್ಡಾಯ ಮಾಡಿರುವುದರಿಂದ ಹೊರ ಜಿಲ್ಲೆಗೆ ಸಾಗಾಟವೂ ತಪ್ಪಲಿದೆ. ನಾನ್‌ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ನಿಯಮ ರೂಪಿಸಲು ಉಪಸಮಿತಿ ರಚಿಸಲಾಗಿದೆ. ಲೀಸ್‌ಗೆ ನೀಡಬೇಕೊ, ಟೆಂಡರ್ ಕರೆದು ನೀಡಬೇಕೊ ಎಂಬ ಬಗ್ಗೆ ಗೊಂದಲವಿದೆ. ಸದ್ಯ ಸಿಆರ್‌ಜೆಡ್ 28 ಬ್ಲಾಕ್‌ಗಳಲ್ಲಿ ಲಭ್ಯವಾಗುವ ಮರಳು ಜಿಲ್ಲೆ ಸಾಕಷ್ಟು ಪ್ರಮಾಣದಲ್ಲಿ ಸಿಗಲಿದೆ. ಕಾರ್ಮಿಕರ ಉಳಿದ ಬೇಡಿಕೆಗಳ ಈಡೇರಿಕೆಗೆ ಶೀಘ್ರದಲ್ಲೇ ಸಿಎಂ ಹಾಗೂ ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು  ಕ್ರೀಡೆ ಮತ್ತು ಯುವ ಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಬೇಡಿಕೆಗಳು
* ಮರಳು ಸಮಸ್ಯೆ ಕೂಡಲೇ ಬಗೆಹರಿಸಬೇಕು. ಬೆಲೆ ನಿಯಂತ್ರಿಸಬೇಕು.
*  ಕಲ್ಯಾಣಮಂಡಳಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರಿಗೆ ತ್ವರಿತಗತಿಯಲ್ಲಿ ಸೌಲಭ್ಯ ನೀಡಬೇಕು.
*  ಬಜೆಟ್‌ನಲ್ಲಿ ಸಿಎಂ ಘೋಷಣೆ ಮಾಡಿರುವ ವಸತಿ ಸಹಿತ ಭವಿಷ್ಯನಿಧಿ ಯೋಜನೆ ಕೂಡಲೇ ಜಾರಿಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT