ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಘನತ್ಯಾಜ್ಯ ವಿಲೇವಾರಿ: ರಾಜಕೀಯ ಬೇಡ’

Last Updated 27 ಜುಲೈ 2017, 9:25 IST
ಅಕ್ಷರ ಗಾತ್ರ

ರಾಮನಗರ: ‘ಘನತ್ಯಾಜ್ಯ ವಿಲೇವಾರಿಯ ವಿಚಾರದಲ್ಲಿ ರಾಜಕೀಯ ಮಾಡದೇ ಸೂಕ್ತ ಸ್ಥಳ ಗುರುತಿಸಿಕೊಡಲು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಬೇಕು’ ಎಂದು ಬುಧವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧ್ಯಕ್ಷ ರವಿಕುಮಾರ್ ಅವರನ್ನು ಒತ್ತಾಯಿಸಿದರು.

ನಗರಸಭೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ಈ ವಿಷಯ ಪ್ರಸ್ತಾಪಿಸಿದರು. ‘ತ್ಯಾಜ್ಯ ವಿಲೇವಾರಿ ಸಂಗತಿ ದಿನದಿಂದ ದಿನಕ್ಕೆ ಕಗ್ಗಂಟಾಗಿದೆ. ಎರಡು ವರ್ಷದಿಂದ ಕೇಳುತ್ತಿದ್ದರೂ ಇನ್ನೂ ಜಿಲ್ಲಾಡಳಿತ ಸ್ಥಳ ಗುರುತಿಸಿ ಕೊಟ್ಟಿಲ್ಲ. ಸ್ಥಳೀಯ ಶಾಸಕರಾದ ಎಚ್‌.ಡಿ. ಕುಮಾರಸ್ವಾಮಿ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ’ ಎಂದು ಸದಸ್ಯ ಚೇತನ್‌ಕುಮಾರ್ ದೂರಿದರು.

ಇದಕ್ಕೆ ಸಿಟ್ಟಾದ ಜೆಡಿಎಸ್ ಸದಸ್ಯರು ‘ಹಾಗಿದ್ದರೆ ಸಚಿವರು, ಸಂಸದರು ಸಭೆ ನಡೆಸಿದ್ದರೂ ಸಮಸ್ಯೆಗೆ ಪರಿಹಾರ ದೊರಕಿದೆಯೇ’ ಎಂದು ಪ್ರಶ್ನಿಸಿದರು. ಈ ಸಂಬಂಧ ಚೇತನ್‌ ಹಾಗೂ ಮಂಜುನಾಥ್‌ ನಡುವೆ ವಾಗ್ವಾದ ನಡೆಯಿತು. ಪಕ್ಷಭೇಧ ಮರೆತು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಸಹಕಾರ ನೀಡುವಂತೆ ಶಾಸಕರಿಗೂ ಪತ್ರ ಬರೆಯಲು ಸಭೆ ತೀರ್ಮಾನಿಸಿತು.

ಎರಡೇ ಘಟಕ ಕಾರ್ಯನಿರ್ವಹಣೆ: ‘ನಗರದ ಏಳು ಕಡೆ ಕಾಂಪೋಸ್ಟ್‌ ಘಟಕಗಳನ್ನು ತೆರೆದಿದ್ದರೂ ಯಾವುದೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೇವಲ ಟೆಂಡರ್ ಕರೆದು ಹಣ ಮಾಡಿಕೊಳ್ಳಲು ಇವುಗಳನ್ನು ನಿರ್ಮಿಸಲಾಗಿದೆ’ ವಿರೋಧಪಕ್ಷದ ಸದಸ್ಯ ರವಿ ಆರೋಪಿಸಿದರು.

‘ರಾಮನಗರದಲ್ಲಿ ನಿತ್ಯ ಸುಮಾರು 30–35 ಟನ್‌ನಷ್ಟು ಘನತ್ಯಾಜ್ಯ ಸಂಗ್ರಹಣೆ ಆಗುತ್ತಿದೆ. ಈ ಘಟಕಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿದ್ದೇ ಆದಲ್ಲಿ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಸಿಗಲಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಲ್ಲ ಹಾಳಾಗುತ್ತಿದೆ’ ಎಂದು ದೂರಿದರು.

ಪರಿಸರ ಎಂಜಿನಿಯರ್‌ ಗಿರೀಶ್‌ ಪ್ರತಿಕ್ರಿಯಿಸಿ ‘ ಪ್ರತಿ ಘಟಕವು ನಿತ್ಯ 3 ಟನ್‌ನಷ್ಟು ಕಸ ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ಏಳು ಘಟಕಗಳ ಪೈಕಿ ಪ್ರಸ್ತುತ ಎರಡು ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ 18 ಕಾರ್ಮಿಕರ ಅವಶ್ಯಕತೆ ಇದ್ದು, ನೇಮಕಕ್ಕೆ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿದರು.

ಬೀದಿನಾಯಿ ಹಾವಳಿ ನಿಯಂತ್ರಿಸಿ: ಬೀದಿನಾಯಿಗಳ ಹಾವಳಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.
‘ನಾಯಿಗಳು ಮನೆಗೆ ನುಗ್ಗಿ ಹಸುಗೂಸಿನ ಮೇಲೆ ದಾಳಿ ಮಾಡಿರುವುದು ಗಾಬರಿ ಹುಟ್ಟಿಸಿದೆ. ಆ ಮಗುವಿನ ಚಿಕಿತ್ಸೆಗೆ ನಗರಸಭೆಯಿಂದ ನೆರವು ನೀಡಬೇಕು. ನಾಯಿಗಳ ಸಂತಾನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಫರ್ವೀಜ್ ಪಾಷಾ ಒತ್ತಾಯಿಸಿದರು.

ಆಯುಕ್ತ ಕೆ. ಮಾಯಣ್ಣ ಗೌಡ ಪ್ರತಿಕ್ರಿಯಿಸಿ ‘ನಗರದಲ್ಲಿ ಬೀದಿನಾಯಿಗಳನ್ನು ನಿಯಂತ್ರಿಸುವುದು ಪೊಲೀಸರ ಕೆಲಸವೂ ಹೌದು. ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಲು ಯಾವೊಬ್ಬ ವೈದ್ಯರು ಮುಂದೆ ಬಂದಿಲ್ಲ’ ಎಂದರು. ನಾಯಿ ದಾಳಿಗೆ ಒಳಗಾದ ಮಗುವಿನ ಕುಟುಂಬಕ್ಕೆ ನೆರವು ನೀಡುವ ಕುರಿತು ಪರಿಶೀಲಿಸುವುದಾಗಿ ಅಧ್ಯಕ್ಷರು ತಿಳಿಸಿದರು.

ಕೌಂಟರ್ ಆರಂಭ: ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ನಗರಸಭೆಯಲ್ಲಿ ಆಕ್ಸಿಸ್‌ ಬ್ಯಾಂಕ್‌ ವತಿಯಿಂದ ಕೌಂಟರ್‌ ತೆರೆಯಲು ಸಭೆಯು ಸಮ್ಮತಿಸಿತು. ಬ್ಯಾಂಕಿನ ಸಿಬ್ಬಂದಿ ಸಭೆಗೆ ಮಾಹಿತಿ ನೀಡಿ ‘ಪ್ರತಿ ದಿನ ಸಂಗ್ರಹವಾಗುವ ಶುಲ್ಕದ ಕುರಿತು ಸಂಜೆ ವೇಳೆಗೆ ನಗರಸಭೆಗೆ ಮಾಹಿತಿ ನೀಡಲಾಗುವುದು. ಕೌಂಟರ್‌ ನಿರ್ವಹಣೆಗೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದು ತಿಳಿಸಿದರು.

ಅರ್ಕಾವತಿ ಶುದ್ಧೀಕರಿಸಿ: ‘ಸೀರೆಹಳ್ಳದ ವ್ಯಾಪ್ತಿಯ ಸೇತುವೆಗಳಲ್ಲಿ ಕಸ ಕಟ್ಟಿಕೊಂಡ ಪರಿಣಾಮ ನೀರು ನಿಲ್ಲುತ್ತಿದ್ದು, ಅದನ್ನು ತೆರವುಗೊಳಿಸಬೇಕು’ ಎಂದು ಸದಸ್ಯರು ಒತ್ತಾಯಿಸಿದರು. ‘ಅರ್ಕಾವತಿ ಶುದ್ಧೀಕರಣಕ್ಕೂ ಆದ್ಯತೆ ನೀಡಿ ಎಂದು ಕೆಲವರು ಸಲಹೆ ನೀಡಿದರು.

ಉದ್ಯಾನದ ನಿರ್ವಹಣೆಗೆ ಕೋರಿ ಪತ್ರ
ಕೋರ್ಟ್‌ ಬಳಿಯ ಮಹಾತ್ಮಗಾಂಧಿ ಉದ್ಯಾನದ ನಿರ್ವಹಣೆ ಸಂಬಂಧ ಮತ್ತೊಮ್ಮೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆಯಲು ಸಭೆಯು ನಿರ್ಧರಿಸಿತು.ಸುಮಾರು ₹37 ಲಕ್ಷ ವೆಚ್ಚದಲ್ಲಿ ಪ್ರಾಧಿಕಾರವು ಈ ಉದ್ಯಾನವನ್ನು ಅಭಿವೃದ್ಧಿಪಡಿಸಿದೆ. ನಗರಸಭೆ ಸಹ ಹಲವು ಕಾರ್ಯಕ್ಕೆ ಹಣ ವ್ಯಯಿಸುತ್ತಿದೆ. ಆದರೆ ಉದ್ಯಾನದ ನಿರ್ವಹಣೆ ವಿಷಯದಲ್ಲಿ ಎರಡೂ ಸಂಸ್ಥೆಗಳು ಹಠಕ್ಕೆ ಬಿದ್ದಿವೆ. ಈ ಕುರಿತು ‘ಪ್ರಜಾವಾಣಿ’ ಮೊದಲು ವರದಿ ಪ್ರಕಟಿಸಿತ್ತು.

ಪ್ರಾಧಿಕಾರಕ್ಕೇ ಇದರ ನಿರ್ವಹಣೆಯ ಜವಾಬ್ದಾರಿ ವಹಿಸಿ ಎಂದು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು. ‘ಮೊದಲ ಎರಡು ವರ್ಷ ಗುತ್ತಿಗೆದಾರರೇ ಉದ್ಯಾನ ನಿರ್ವಹಣೆ ಮಾಡಬೇಕು ಎಂಬ ನಿಯಮ ಇದೆ. ಈ ಬಗ್ಗೆ ಪ್ರಾಧಿಕಾರದಿಂದ ಸ್ಪಷ್ಟನೆ ಕೇಳಲಾಗುವುದು. ಅದು ಸಾಧ್ಯವಾಗದಿದ್ದಲ್ಲಿ ನಗರಸಭೆಯೇ ಅದಕ್ಕಾಗಿ ಒಬ್ಬ ಕಾರ್ಮಿಕನನ್ನು ನಿಯೋಜಿಸಬೇಕಾಗುತ್ತದೆ’ ಎಂದು ಆಯುಕ್ತರು ತಿಳಿಸಿದರು.

ಫೋಟೊ ಹಾಕಿದ್ದಕ್ಕೆ ಚರ್ಚೆ
ನಗರಸಭೆ ಸಭಾಂಗಣದಲ್ಲಿ ಮೂರು ಧರ್ಮಗಳ ದೇವರನ್ನು ಒಳಗೊಂಡ ಫೋಟೊ ಹಾಕಿಸಿದ ಸಂಬಂಧ ಒಂದಿಷ್ಟು ಚರ್ಚೆ ನಡೆಯಿತು. ‘ಗಾಂಧಿ. ಅಂಬೇಡ್ಕರ್ ಬಿಟ್ಟರೆ ಬೇರೆ ಚಿತ್ರವನ್ನು ಹಾಕಬಾರದು ಎಂಬ ನಿಯಮ ಇದೆ’ ಎಂದು ರವಿ ಸಭೆಯ ಗಮನ ಸೆಳೆದರು. ‘ಈ ಸಂಬಂಧ ಸಮಿತಿಯೊಂದನ್ನು ರಚಿಸಿ ಅದರ ಶಿಫಾರಸಿನ ಅನ್ವಯವೇ ಫೋಟೊ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧ್ಯಕ್ಷರು ಸ್ಪಷ್ಟನೆ ನೀಡಿದರು.

* * 

ಆಸ್ತಿ ತೆರಿಗೆ ವಂಚಕರು ನಗರಸಭೆಯ ಸಣ್ಣ ಸೀಲ್‌ ಅನ್ನೂ ನಕಲು ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ಈಗಾಗಲೇ ದೂರು ನೀಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ
ಕೆ. ಮಾಯಣ್ಣ ಗೌಡ, ಆಯುಕ್ತ, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT