ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಫಿಲ್ಟರ್‌ ಕಾಫಿಗೆ ಆಹಾ ಅಂದರು ನೇಹಾ

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

* ತುಂಬಾ ವರ್ಷದಿಂದ ನಿಮ್ಮ ರಿಲೇಶನ್‌ಶಿಪ್ ಸ್ಟೇಟಸ್‌ ಸಿಂಗಲ್ ಇದೆ; ವಿಶೇಷ ವ್ಯಕ್ತಿಗೆ ಕಾಯುತ್ತಿದ್ದೀರಾ?

ನನಗೆ ಕನಸಿನ ರಾಜಕುಮಾರ ಎಂಬ ಕಲ್ಪನೆ ಇಲ್ಲ. ಹಾಗೆ ಕನಸು ಕಾಣುತ್ತಿದ್ದರೆ ಬಹುಶಃ ಇಷ್ಟೊತ್ತಿಗೆ ಸಿಗುತ್ತಿದ್ದನೇನೋ. ನನ್ನ ಬಗ್ಗೆಯೇ ನಾನಿನ್ನೂ ಅರ್ಥ ಮಾಡಿಕೊಳ್ಳುವುದು ಸಾಕಷ್ಟು ಇದೆ. ಅದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೇನೆ.

* ಕಥಕ್, ಜಾಸ್, ಹಿಪ್‌ಹಾಪ್.. ಹಲವು ಪ್ರಕಾರಗಳ ನೃತ್ಯ ಕಲಿತ್ತಿದ್ದೀರಿ. ಸಿನಿಮಾಗಳಲ್ಲಿ ನಿಮ್ಮ ಈ ಕೌಶಲದ ಸಮರ್ಪಕ ಬಳಕೆಯಾಗಿದೆಯೇ?

ಇನ್ನೂ ಈ ಅವಕಾಶ ಸಿಕ್ಕಿಲ್ಲ. ನೃತ್ಯಾಧರಿತ ಕಥೆ ಬಂದರೆ ಖಂಡಿತಾ ಮಾಡುತ್ತೇನೆ. ನಮ್ಮ ಊರಿನಲ್ಲಿ (ಬಿಹಾರದ ಭಾಗಲ್ಪುರ) ಕಥಕ್ ನೃತ್ಯ ಕಲಿಯುವ ಮಕ್ಕಳು ಪ್ರತಿ ಮನೆಯಲ್ಲೂ ಇರುತ್ತಾರೆ. ನಾನೂ ಬಾಲ್ಯದಿಂದಲೇ ಕಥಕ್ ನೃತ್ಯ ಕಲಿಯಲು ಆರಂಭಿಸಿದೆ. ಕಾಲೇಜಿನಲ್ಲಿ ಇದ್ದಾಗ ಸ್ಟ್ರೀಟ್‌ ಹಿಪ್‌ಹಾಪ್, ಜಾಸ್ ನೃತ್ಯ ಕಲಿತೆ. ಇಂಗ್ಲಿಷ್‌ನಲ್ಲಿ ಬಂದ ‘ಸ್ಟೆಪ್‌ಅಪ್’ ಸಿನಿಮಾದಂಥ ಭಾರತೀಯ ಸಿನಿಮಾಗಳು ಬಂದರೆ ಖಂಡಿತಾ ಅಭಿನಯಿಸು ತ್ತೇನೆ. ನೀವು ಕೇಳಿದ ಪ್ರಶ್ನೆಯನ್ನು ನನ್ನ ನಿರ್ದೇಶಕರಿಗೂ ಕೇಳುತ್ತೇನೆ. ಹೊಸ ಅವಕಾಶಗಳ ಸಿಗಬಹುದು.

* ವಸ್ತ್ರವಿನ್ಯಾಸದಲ್ಲಿ ಪದವಿ ಪಡೆದಿದ್ದೀರಿ ಆದರೆ ಟ್ರೆಂಡ್ ಹಿಂಬಾಲಿಸುವುದು ಕಷ್ಟ ಎನ್ನುತ್ತೀರಿ..

ಹೌದು ಬಹುಶಃ ನಾನು ನಟಿಯಾಗದೇ ಇದ್ದಿದ್ದರೆ, ವಸ್ತ್ರವಿನ್ಯಾಸಕಿಯಾಗುತ್ತಿದ್ದೆ. ಫ್ಯಾಷನ್ ಎಂದರೆ ಕೆಲವು ಸಲ ಭಯವಾಗುತ್ತದೆ. ನನಗೆ ಏನು ಗೊತ್ತೇ ಇರುವುದಿಲ್ಲ, ಹಲವು ಟ್ರೆಂಡ್‌ಗಳು ಸೃಷ್ಟಿಯಾಗಿಬಿಟ್ಟಿರುತ್ತವೆ. ಇಂದಿನ ಫ್ಯಾಷನ್ ನಾಳೆ ಇರುವುದಿಲ್ಲ. ಅದಕ್ಕಾಗಿ ಸಾರ್ವಕಾಲಿಕ ಎನ್ನುವ ಕೆಲ ಫ್ಯಾಷನ್ ಸಲಹೆಗಳನ್ನು ಹಿಂಬಾಲಿಸುತ್ತೇನೆ. ಈ ‘ಹೈ ಎಂಡ್‌’ ಫ್ಯಾಷನ್ ನನಗೆ ಇಷ್ಟವಾಗುವುದಿಲ್ಲ.

* ನಟಿಯರು ಟಾಪ್‌ಲೆಸ್‌ ಫೋಟೊ ಶೂಟ್‌ ಮಾಡಿಸಿಕೊಳ್ಳುವುದು ಟ್ರೆಂಡ್‌ ಆಗುತ್ತಿದೆ.

ಅದು ಅವರವರ ಇಷ್ಟಕ್ಕೆ ಬಿಟ್ಟ ವಿಷಯ. ನಿಮ್ಮ ಚರ್ಮ ತೋರಿಸುವುದರಲ್ಲಿ ಮುಜುಗರವಿಲ್ಲ ಎಂದಾದರೆ ಯಾಕೆ ಆಗಬಾರದು. ಪ್ರತಿ ವ್ಯಕ್ತಿಗೂ ಅವರದ್ದೇ ಆದ ಅಭಿವ್ಯಕ್ತಿ ಸ್ವಾತಂತ್ರವಿದೆ, ಅದನ್ನ ಗೌರವಿಸೋಣ.

* ಅಡುಗೆ ಮಾಡುವುದು ಅಂದರೆ ಇಷ್ಟಾನಾ..

ನನ್ನ ನೆಚ್ಚಿನ ಹವ್ಯಾಸ ಅಡುಗೆ ಮಾಡುವುದು. ಹಾಗೇ ಚೆನ್ನಾಗಿ ತಿನ್ನುತ್ತೇನೆ. ನನಗೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ದಪ್ಪ, ಸಣ್ಣ ಆಗಬೇಕೆಂದರೆ ಒಂದೇ ವಾರದಲ್ಲಿ ದೇಹದ ಆಕಾರ ಬದಲಿಸಿಕೊಳ್ಳುತ್ತೇನೆ. ತಿನ್ನೋದು, ಕಸರತ್ತು ಮಾಡಿ ಕರಗಿಸೋದು ಸುಲಭ ನನಗೆ. ಬೆಂಗಳೂರಿನ ಫಿಲ್ಟರ್‌ ಕಾಫಿ ಎಂದರೆ ನನಗೆ ತುಂಬಾ ಇಷ್ಟ.

* ಸಣ್ಣ ವಯಸ್ಸಿನಿಂದ 100ಕ್ಕೂ ಹೆಚ್ಚು ಹೇರ್‌ಬ್ಯಾಂಡ್‌ ಸಂಗ್ರಹಿಸಿದ್ದಿರಂತೆ?

ಅಯ್ಯೋ ಈಗ ಬಿಟ್ಟಿದ್ದೀನಿ. ಮೊದಲು ಈ ಹುಚ್ಚು ಇತ್ತು. ಹಳೆಯ ಫ್ರಾಕ್, ಹೇರ್‌ಬ್ಯಾಂಡ್‌ಗಳ ದೊಡ್ಡ ಸಂಗ್ರಹವೇ ಇತ್ತು. ಅದನ್ನೆಲ್ಲಾ ಬಳಸಿ ಕರಕುಶಲ ವಸ್ತುಗಳನ್ನು ತಯಾರಿಸುತ್ತೇನೆ. ಈಗ ಸಮಯವಾಗುತ್ತಿಲ್ಲ.

* ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದೀರಿ..

ಎಲ್ಲರೊಂದಿಗೆ ಸಂವಹನ ಮಾಡಲು ಸಾಮಾಜಿಕ ಜಾಲತಾಣಗಳು ನೆರವಾಗುತ್ತಿವೆ. ಪ್ರತಿನಿತ್ಯ ಜೀವನದ ಅನುಭವಗಳನ್ನು ಅಭಿಮಾನಿಗಳೊಂದಿಗೆ, ಗೆಳೆಯರೊಂದಿಗೆ ಹಂಚಿಕೊಳ್ಳುತ್ತೇನೆ. ಇಲ್ಲಿ ಗಾಸಿಪ್, ಲೇವಡಿ ಒಬ್ಬರ ಮೇಲೆ ಮತ್ತೊಬ್ಬರು ಟೀಕೆ ಮಾಡುವುದು ಇದ್ದೇ ಇರುತ್ತದೆ. ಆದರೆ ಇಂಥ ಪ್ರಕರಣಗಳಲ್ಲಿ ನಾನು ಭಾಗಿಯಾಗುವುದಿಲ್ಲ. ಸರಳವಾಗಿ, ಖುಷಿಯಾಗಿ ಬದುಕೋಣ.

* ಸೆಲೆಬ್ರಿಟಿಗಳು ಸೌಂದರ್ಯಕ್ಕಾಗಿ ಸರ್ಜರಿಗಳನ್ನು ಮಾಡಿಸಿಕೊಳ್ಳುವುದು ಹೆಚ್ಚುತ್ತಿದೆ ಅಲ್ವೇ?

‘ನಾನು ಸುಂದರವಾಗಿ ಕಾಣಲೇಬೇಕು’ ಎಂಬ ಹಠ ನನಗಿಲ್ಲ. ನನ್ನ ಚರ್ಮ ಹೇಗಿದೆಯೋ ಹಾಗೇ ಅದನ್ನು ಇಷ್ಟಪಡುತ್ತೇನೆ. ಚರ್ಮ ಆರೋಗ್ಯವಾಗಿರಬೇಕು ಅದಕ್ಕೆ ಸ್ವಚ್ಛವಾದ, ಪೋಷಕಾಂಶಯುಕ್ತ ಆಹಾರ ಸೇವಿಸಬೇಕು. ಹೆಚ್ಚು ನೀರು ಕುಡಿಯಬೇಕು. ಬೇರೆಯವರ ಬಗ್ಗೆ ನಾನೇನೂ ಹೇಳುವುದಿಲ್ಲ. ಸಲಹೆ ನೀಡುವುದಿದ್ದರೆ ‘ನೀವು ಹೇಗಿದ್ದೀರೋ ಹಾಗೇ ನಿಮ್ಮನ್ನು ಇಷ್ಟಪಡಿ’ ಅಷ್ಟೆ. ಬದುಕನ್ನು ಪ್ರೀತಿಸಿ; ಮುಖವನ್ನಲ್ಲ. ನಿಮ್ಮ ಬದುಕು ತುಂಬಾ ಅಮೂಲ್ಯ.

* ಮಲಯಾಳಂನ ‘ಸೋಲೊ’ ಸಿನಿಮಾದಲ್ಲಿ ದುಲ್ಕರ್ ಜೊತೆ ಅಭಿನಯಿಸಿದ ಅನುಭವ?

ದುಲ್ಕರ್ ಒಬ್ಬ ಅತ್ಯುತ್ತಮ ನಟ. ದಕ್ಷಿಣ ಭಾರತೀಯ ಸಿನಿಮಾದಲ್ಲಿ ಭಾಗಿಯಾದ ಖುಷಿ ಇದೆ.

**

* ನಿಮ್ಮ ತಂದೆ ಅಜಿತ್‌ ಶರ್ಮ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ, ನಿಮಗೂ ಈ ಕ್ಷೇತ್ರದಲ್ಲಿ ಆಸಕ್ತಿ ಇದೆಯೇ?

ನಮ್ಮ ತಂದೆ ರಾಜಕೀಯದಲ್ಲಿ ಇರುವುದು, ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರುವುದನ್ನು ಸಣ್ಣ ವಯಸ್ಸಿನಿಂದಲ್ಲೂ ನೋಡಿಕೊಂಡು ಬಂದಿದ್ದೇನೆ. ಅವರು ಮಾಡುವ ಕೆಲಸದ ಬಗ್ಗೆ ಗೌರವವಿದೆ. ಆದರೆ ನನಗೆ ಈ ರಾಜಕೀಯದೊಳಗಿನ ರಾಜಕೀಯ ಅರ್ಥವಾಗುವುದಿಲ್ಲ. ತಂದೆ ತಾಯಿ ಭಾಗವಹಿಸುವ ಹಲವು ಸಾಮಾಜಿಕ ಕೆಲಸಗಳ ಜೊತೆ ನಾನೂ ಭಾಗಿಯಾಗುತ್ತಿರುತ್ತೇನೆ. ಆದರೆ ಒಬ್ಬಳ ಕೈಯಿಂದ ಇದೆಲ್ಲಾ ಸಾಧ್ಯವಿಲ್ಲ. ಮುಂದೆ ಇಂಥ ಅವಕಾಶಗಳು ಸಿಕ್ಕರೆ ಖಂಡಿತಾ ಪ್ರಯತ್ನಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT