ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಎರಡು ವರ್ಷಗಳ ಕಥೆ ಹೇಳಲಿದ್ದಾರೆ...

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

ಈ ಸಿನಿಮಾದ ಹೆಸರು ‘ಆ ಎರಡು ವರ್ಷಗಳು’. ಇಲ್ಲಿ ವರ್ಷಗಳು ಎಂಬ ಪದ ಕಾಲವನ್ನು ಮಾತ್ರ ಸೂಚಿಸುವುದಿಲ್ಲ. ಯುವತಿಯೊಬ್ಬಳ ಎರಡು ವ್ಯಕ್ತಿತ್ವಗಳನ್ನೂ ಸೂಚಿಸುತ್ತವೆ. ಈ ಚಿತ್ರದ ನಾಯಕಿ ಹಾಗೂ ನಾಯಕ ಸಿನಿತೆರೆಗೆ ಹೊಸಬರು. ಹೊಸಬರನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದೆ, ‘ಸಿನಿಮಾಕ್ಕೆ ಒಂದು ತಾಜಾತನ ಬೇಕು. ಹೊಸಬರನ್ನು ಹೊಂದಿದ್ದರೆ ಅದು ಸಾಧ್ಯವಾಗುತ್ತದೆ’ ಎಂಬ ಉತ್ತರ ನೀಡುತ್ತಾರೆ ನಿರ್ದೇಶಕ ಮಧುಸೂದನ್.

ಮಧುಸೂದನ್ ಅವರಿಗೂ ಸಿನಿಮಾ ನಿರ್ದೇಶನ ಹೊಸದು. ಅವರು ಈವರೆಗೆ ಕಿರುತೆರೆ ನಿರ್ದೇಶಕರಾಗಿದ್ದವರು. ‘ಆ ಎರಡು ವರ್ಷಗಳು’ ಸಿನಿಮಾ ಇಂದು (ಜುಲೈ 28) ತೆರೆಗೆ ಬರುತ್ತಿದೆ. ‘ಚಂದನವನ’ ಜೊತೆ ಮಾತಿಗೆ ಸಿಕ್ಕಿದ್ದ ಮಧುಸೂದನ್, ಸಿನಿಮಾ ಬಗ್ಗೆ ಒಂದೆರಡು ವಿವರ ನೀಡಿದರು.

ಮೇಲ್ನೋಟಕ್ಕೆ ಈ ಸಿನಿಮಾ ಒಂದು ಪ್ರೇಮದ ಕಥೆಯನ್ನು ಹೊಂದಿದೆ. ಹಾಗಾದರೆ, ಇದರಲ್ಲೇನು ವಿಶೇಷ ಎಂಬುದು ಸಹಜವಾಗಿಯೇ ಮೂಡುವ ಪ್ರಶ್ನೆ. ಇದಕ್ಕೆ ಮಧುಸೂದನ್ ಈ ಉತ್ತರ ನೀಡುತ್ತಾರೆ. ‘ಸಿನಿಮಾ ಕಥೆಗಳು ಒಂದೇ ಇರಬಹುದು. ಆದರೆ ಆ ಕಥೆಗಳನ್ನು ಹೇಳುವ ರೀತಿ ಬೇರೆ ಬೇರೆಯಾಗಿರುತ್ತದೆ. ನಾವು ಹೇಳುವ ಕಥೆಗಳು ಇಂದಿನ ಕಾಲದ ನೋಡುಗರ ಜೊತೆ ಸಂವಾದ ನಡೆಸುವಂತೆ ಇರಬೇಕು. ಎಪ್ಪತ್ತರ ದಶಕದಲ್ಲಿ ಬಂದ ‘ನಾನಿನ್ನ ಮರೆಯಲಾರೆ’ ಸಿನಿಮಾ ಕೂಡ ಪ್ರೀತಿಯ ಕಥಾವಸ್ತುವನ್ನೇ ಹೊಂದಿತ್ತು. ಆದರೆ ಆಗಿನ ವೀಕ್ಷಕರ ಮನಸ್ಥಿತಿ ಹಾಗೂ ಈಗಿನ ವೀಕ್ಷಕರ ಮನಸ್ಥಿತಿ ಬೇರೆ. ವೀಕ್ಷಕರ ಮನಸ್ಥಿತಿ ಬದಲಾಗಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ನಾವು ಪ್ರೀತಿಯ ಕಥೆಯೊಂದನ್ನು ಬೇರೆಯ ರೀತಿಯಲ್ಲಿ ಹೇಳಿದ್ದೇವೆ’.

(ಮಧುಸೂದನ್)

ಈಗಿನ ಹುಡುಗ–ಹುಡುಗಿಯರು ಪ್ರೀತಿಯನ್ನು ಹೇಗೆ ಕಾಣುತ್ತಾರೆ, ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಈ ಸಿನಿಮಾ ಕಥೆಯ ರೂಪದಲ್ಲಿ ಹೇಳುತ್ತದೆ ಎನ್ನುತ್ತಾರೆ ಮಧುಸೂದನ್. ನಿರ್ದೇಶಕರ ಜೊತೆ ಮಾತನಾಡುವ ವೇಳೆ ನಾಯಕ ನಟ ರೇಣುಕ್ ಹಾಗೂ ನಾಯಕ ನಟಿ ಅಮಿತಾ ಕುಲಾಲ್ ಕೂಡ ಜೊತೆಗಿದ್ದರು.

‘ಪ್ರೀತಿಯ ಕಥೆಯನ್ನು ಭಿನ್ನವಾಗಿ ಹೇಳಬೇಕು ಅನ್ನಿಸಲು ಕಾರಣ ಏನು’ ಎಂಬ ಪ್ರಶ್ನೆಗೆ, ‘ನಾವು ಮಾಡುವ ಸಿನಿಮಾವನ್ನು ಜನ ವೀಕ್ಷಿಸಬೇಕು ಎಂಬ ಅಭಿಲಾಷೆ ಒಂದೆಡೆ ಇದ್ದೇ ಇರುತ್ತದೆ. ಈ ಸಿನಿಮಾದಲ್ಲಿ ತಾರಾ ನಟ-ನಟಿಯರು ಇಲ್ಲ. ಎಲ್ಲರೂ ಹೊಸಬರು. ಹಾಗಾಗಿ ನಮ್ಮ ಸಿನಿಮಾ ಭಿನ್ನವಾಗಿದ್ದರೆ ಮಾತ್ರ ನಾವು ಗೆಲ್ಲಲು ಸಾಧ್ಯ’ ಎಂಬ ಉತ್ತರ ನೀಡಿದರು ಮಧುಸೂದನ್.

ಈ ಸಿನಿಮಾದಲ್ಲಿ ಬರುವ ಕಥೆ ಸ್ನೇಹಿತರ ನಡುವೆ ಅಥವಾ ಸಂಬಂಧಿಕರ ನಡುವೆ ನಡೆದಿದೆ ಎಂದು ವೀಕ್ಷಕನಿಗೆ ಸಿನಿಮಾ ವೀಕ್ಷಿಸಿದ ನಂತರ ಅನಿಸುತ್ತದೆ. ಇದು ಮಧ್ಯಮವರ್ಗದ ಕುಟುಂಬ ವೊಂದರಲ್ಲಿ ನಡೆಯುವ ಕಥೆ ಎನ್ನುವುದು ಅವರ ಅಂಬೋಣ.

ತಾರಾ ನಟ-ನಟಿಯರ ಬದಲು ಹೊಸಬರನ್ನು ಬಳಸಿಕೊಂಡು ಸಿನಿಮಾ ಮಾಡುತ್ತಿರುವುದರ ಹಿಂದೆಯೂ ಒಂದು ಉದ್ದೇಶ ಇರುವಂತಿದೆ. ‘ನಮ್ಮ ಬಳಿ ದೊಡ್ಡ ಮೊತ್ತದ ಹಣ ಹೂಡುವ ತಾಕತ್ತು ಇಲ್ಲ. ಅಲ್ಲದೆ, ನಮ್ಮ ಕಥೆಗೆ ಒಂದು ತಾಜಾತನ ಬೇಕಿತ್ತು. ಅದಕ್ಕೆ ಹೊಸಬರು ಬೇಕಿತ್ತು’ ಎನ್ನುತ್ತಾರೆ ಮಧು. ಇದೇ ಮಾತಿನ ಜೊತೆಯಲ್ಲೇ ಅವರು ತಮ್ಮ ಸಿನಿಮಾದ ನಾಯಕ–ನಾಯಕಿ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹೇಳಲು ಆರಂಭಿಸಿದರು.

‘ಇಬ್ಬರೂ ತಮಗೆ ವಹಿಸಿದ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅಮಿತಾ ಹಾಗೂ ರೇಣುಕ್‌ ಅವರಿಗೆ ಒಂದು ವಾರ ಅಭಿನಯದ ತರಬೇತಿ ಕೊಡಿಸಿದ್ದೇವೆ’ ಎಂದರು. ಈ ಸಿನಿಮಾದ ಚಿತ್ರೀಕರಣ ಬೆಂಗಳೂರು ಹಾಗೂ ತೀರ್ಥಹಳ್ಳಿಯಲ್ಲಿ ನಡೆದಿದೆಯಂತೆ. ಅಂದರೆ, ಸಿನಿಮಾ ವೀಕ್ಷಿಸುವವರು ಕಥೆಯ ಜೊತೆ, ಮಲೆನಾಡಿನ ಹಸಿರನ್ನೂ ಬೋನಸ್ ರೂಪದಲ್ಲಿ ಕಾಣುವ ನಿರೀಕ್ಷೆ ಇಟ್ಟುಕೊಳ್ಳಬಹುದು!

ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಅಮಿತಾ ಕುಲಾಲ್‌ ಅವರನ್ನು ಕಂಡ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು, ‘ಇವಳು ಎಷ್ಟು ಮುದ್ದಾಗಿದ್ದಾಳೆ. ಕೊರಿಯಾ ದೇಶದ ಹುಡುಗಿ ಇರಬೇಕು ಇವಳು’ ಎಂದಿದ್ದರು.

ಈ ಮುದ್ದು ಹುಡುಗಿ ಸಿನಿಮಾ ಪ್ರವೇಶಿಸಿದ್ದು ಮಾಡೆಲಿಂಗ್ ಮೂಲಕ. ‘ನಾನು ಸಾಕಷ್ಟು ಕಷ್ಟಪಟ್ಟು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದೇನೆ. ಹದಿನಾರನೆಯ ವಯಸ್ಸಿನಿಂದಲೂ ಮಾಡೆಲಿಂಗ್ ಕ್ಷೇತ್ರದಲ್ಲಿದ್ದೆ. ಈ ಸಿನಿಮಾ ಮೂಲಕ ನಾನು ಪಡೆದ ಅನುಭವ ಇಡೀ ಜೀವನಕ್ಕೆ ಸಾಕಾಗುವಷ್ಟು ಇದೆ’ ಎನ್ನುತ್ತಾರೆ ಅಮಿತಾ.

ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರ ಭಿನ್ನವಾಗಿವೆ. ಮಾಡೆಲಿಂಗ್‌ನಲ್ಲಿ ನಾವು ಕ್ಯಾಮೆರಾ ಕಣ್ಣು ನೋಡಬೇಕಾಗಿಲ್ಲ. ಆದರೆ ಅಭಿನಯಿಸುವ ವೇಳೆ ಕ್ಯಾಮೆರಾ ಕಣ್ಣು ತಪ್ಪಿಸಿಕೊಳ್ಳುವಂತೆ ಇಲ್ಲ ಎಂದರು.

**

‘ಗಾಡ್‌ ಫಾದರ್’ ಬೇಕಿತ್ತು...

ಈ ಸಿನಿಮಾದಲ್ಲಿ ರೊಮ್ಯಾಂಟಿಕ್ ದೃಶ್ಯಗಳೂ ಇವೆ. ಇಂಥ ದೃಶ್ಯಗಳಲ್ಲಿ ಅಭಿನಯಿಸುವಾಗ ಮೊದಲು ಮುಜುಗರ ಆಗುತ್ತಿತ್ತು. ನಂತರ ಹೊಂದಿಕೊಂಡೆ ಎಂದರು ರೇಣುಕ್.

ಚಿತ್ರದ ಬಗ್ಗೆ ಮಾಹಿತಿ ನೀಡಲು ತಂಡ ಪತ್ರಿಕಾಗೋಷ್ಠಿ ಕರೆದಿತ್ತು. ‘ಸಿನಿಮಾ ಮಾಡುವಾಗ ನಾವು ಈ ಕ್ಷೇತ್ರಕ್ಕೆ ಹೊಸಬರು ಅಂತ ನಮಗೆ ಅನಿಸಲಿಲ್ಲ. ಆದರೆ, ನಮಗೊಬ್ಬರು ಗಾಡ್‌ ಫಾದರ್ ಬೇಕಿತ್ತು ಅಂತ ಈಗ ಅನಿಸುತ್ತಿದೆ’ ಎಂದರು ಮಧುಸೂದನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT