ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿನಿಮಾ ಭಾಷೆ ಕಲಿಯುವ ಪುಲಕ’

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

ತಾವು ಕೆಲಸ ಮಾಡಿದ ಮೊದಲ ಸಿನಿಮಾ ’ಚಿನ್ನಾರಿ ಮುತ್ತ’ದಲ್ಲಿಯೇ ಹಲವು ಸಾರ್ವಕಾಲಿಕ ಜನಪ್ರಿಯ ಹಾಡುಗಳನ್ನು ಕೊಟ್ಟಿರುವ ಹಿರಿಯ ಸಾಹಿತಿ ಎಚ್‌. ಎಸ್‌ ವೆಂಕಟೇಶಮೂರ್ತಿ. ಇತ್ತೀಚೆಗಿನ ’ಕಿರಿಕ್‌ ಪಾರ್ಟಿ’ಯವರೆಗೆ ಅವರ ಅನೇಕ ಹಾಡುಗಳು ಸಿನಿಮಾ, ಕಿರುತೆರೆ ಧಾರಾವಾಹಿಗಳಲ್ಲಿ ಬಳಕೆಯಾಗಿವೆ. ಹಲವು ಚಿತ್ರಗಳೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದ ಅನುಭವವೂ ಅವರಿಗಿದೆ. ‘ನಾನೂ ಒಂದು ಸಿನಿಮಾ ನಿರ್ದೇಶನ’ ಮಾಡಬೇಕು ಎಂಬ ಅವರ ಮನಸ್ಸಿನಲ್ಲಿನ ಅಪೇಕ್ಷೆಯ ಹಕ್ಕಿಗೀಗ ಹಾರಾಡಲು ಗಟ್ಟಿ ರೆಕ್ಕೆ ಮತ್ತು ವಿಶಾಲ ಬಯಲು ಎರಡೂ ಸಿಕ್ಕಿದೆ. ಎಚ್ಚೆಸ್ವಿ ‘ಹಸಿರು ರಿಬ್ಬನ್‌’ ಎಂಬ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅವರೇ ಬರೆದಿರುವ ‘ಅನಾತ್ಮಕಥನ’ ಕೃತಿಯ ಭಾಗವೊಂದನ್ನು ಅವರು ಸಿನಿಮಾ ಮಾಡುತ್ತಿದ್ದಾರೆ. ತಮ್ಮದೇ ಬದುಕಿನ ಪುಟವೊಂದನ್ನು ಚಲನಚಿತ್ರ ಮಾಧ್ಯಮದಲ್ಲಿ ಪುಟಕ್ಕಿಟ್ಟು ನೋಡುವ ಸಂಭ್ರಮ ಅವರದು. ಆಗಸ್ಟ್‌ 6ರಂದು ‘ಹಸಿರು ರಿಬ್ಬನ್‌’ ಮುಹೂರ್ತವಾಗಲಿದೆ.

* ಸಿನಿಮಾ ನಿರ್ದೇಶನಕ್ಕಿಳಿಯುವುದಕ್ಕೆ ಪ್ರೇರಣೆ ಏನು?

ಮೊದಲಿನಿಂದಲೂ ನನಗೆ ಸಿನಿಮಾ ಕಡೆಗೆ ಆಕರ್ಷಣೆ ಇದ್ದೇ ಇದೆ. ‘ಚಿನ್ನಾರಿ ಮುತ್ತ’ಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದೆ. ಅಲ್ಲಿಂದಲೂ ನನಗೆ ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಅಪೇಕ್ಷೆ ಇದ್ದೇ ಇತ್ತು.

ಇತ್ತೀಚೆಗೆ ಕುಮಾರ್‌, ನಿಖಿಲ್‌ ಮಂಜು ಮತ್ತು ಇನ್ನೂ ಕೆಲವು ತರುಣ ಮಿತ್ರರು ಬಂದು ’ನಾವು ನಿಸರ್ಗ ಕ್ರಿಯೇಶನ್ಸ್‌ ಅಂತ ಮಾಡ್ಕೊಂಡಿದ್ದೇವೆ. ಅದರಲ್ಲಿ ನೀವೇ ಒಂದು ಸಿನಿಮಾ ನಿರ್ದೇಶನ ಮಾಡಬೇಕು’ ಎಂದು ಹೇಳಿದರು. ಹೀಗೆ ಆರಂಭವಾಗಿದ್ದು ಕಾರ್ಯರೂಪಕ್ಕೆ ಬಂದೇ ಬಿಟ್ಟಿದೆ ನೋಡಿ. ಆಗಸ್ಟ್‌ 6ಕ್ಕೆ ಚಿತ್ರದ ಮುಹೂರ್ತ.

* ನಿಮ್ಮದೇ ಕೃತಿಯ ಒಂದು ಭಾಗವನ್ನೇ ಸಿನಿಮಾ ಮಾಡುತ್ತಿದ್ದೀರಲ್ಲವೇ?

ಹೌದು. ನನ್ನ ‘ಅನಾತ್ಮಕಥನ’ ಪುಸ್ತಕದಿಂದ ಒಂದು ಅಧ್ಯಾಯವನ್ನು ಆಯ್ದುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಅದು ನಿರ್ಮಾಪಕರಿಗೆ ತುಂಬ ಇಷ್ಟವಾಗಿತ್ತು. ಅವರಿಗಷ್ಟೇ ಅಲ್ಲ, ನನಗೂ ತುಂಬ ಇಷ್ಟವಾದ ಪ್ರಕರಣ ಅದು. ಸಮಕಾಲೀನ ಪರಿಸ್ಥಿತಿಗೂ ಅನ್ವಯ ಆಗುವಂಥ ಘಟನೆ ಅದು. ನಾನು ಚಿಕ್ಕವನಾಗಿದ್ದಾಗ ಪಡೆದ ಅನುಭವ ಅದು. ಆದರೆ ಇಂದೂ ಪ್ರಸ್ತುತ. ಅದನ್ನು ಸಿನಿಮಾಗೋಸ್ಕರ ಕೊಂಚ ಬೆಳೆಸಿದ್ದೇನೆ. ಮೂಲಕಥೆಯ ಅರ್ಧ ಮಾತ್ರ ಸಿನಿಮಾದಲ್ಲಿರುತ್ತದೆ. ಉಳಿದ ಅರ್ಧ ಈ ಮಾಧ್ಯಮಕ್ಕೆ ತಕ್ಕಂತೆ ಬೆಳೆಸಿದ್ದೇನೆ.

* ಈ ಸಿನಿಮಾದ ಮೂಲಕ ಏನು ಹೇಳಹೊರಟಿದ್ದೀರಿ?

ಮನುಷ್ಯರ ಸಣ್ಣ ಸಣ್ಣ ಆಸೆಗಳು, ಅದನ್ನು ತೀರಿಸಿಕೊಳ್ಳುವುದಕ್ಕಾಗಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗ ನಡೆಸುವ ಹೋರಾಟ, ಆ ಪ್ರಯತ್ನದಲ್ಲಿ ಅಮಾಯಕರು ಹೇಗೆ ಮೋಸಹೋಗುತ್ತಾರೆ, ಕೊನೆಗೆ ಮೊಸಗಾರರೇ ಹೇಗೆ ಮನಸ್ಸು ಪರಿವರ್ತಿಸಿಕೊಂಡು ಬದಲಾಗುತ್ತಾರೆ ಎಂಬುದೆಲ್ಲವೂ ಈ ಸಿನಿಮಾದಲ್ಲಿವೆ. ಮುಖ್ಯವಾಗಿ ಸಂಬಂಧಗಳ ಸೂಕ್ಷ್ಮಗಳೇ ಈ ಸಿನಿಮಾದ ಜೀವಾಳ.

* ನಿಮ್ಮ ಬಾಲ್ಯದ ಅನುಭವವನ್ನು ನೀವೇ ಸಿನಿಮಾ ಆಗಿಸುತ್ತಿದ್ದೀರಾ. ಏನನಿಸುತ್ತಿದೆ?

ಇತ್ತೀಚೆಗೆ ಒಂದು ಅದ್ಭುತವಾದ ಇಂಗ್ಲಿಷ್‌ ಸಿನಿಮಾ ನೋಡಿದೆ. ಸಿನಿಮಾ ನಿರ್ದೇಶಕನ ಕುರಿತಾಗಿಯೇ ಇರುವ ಸಿನಿಮಾ ಅದು. ಅದರಲ್ಲಿ ಆ ನಿರ್ದೇಶಕ ಮರಣಶಯ್ಯೆಯಲ್ಲಿರುತ್ತಾನೆ. ಅಲ್ಲಿ ಕಲ್ಪನೆಯಲ್ಲಿ ತನ್ನ ಸಾವನ್ನು ತಾನೇ ಚಿತ್ರಿಸುತ್ತ ಹೋಗುತ್ತಾನೆ. ವಾಸ್ತವದಲ್ಲಿಯೂ ಅವನ ಸಾವು ಅವನ ಎದುರೇ ಇರುತ್ತದೆ. ಕಲ್ಪನೆಯಲ್ಲಿಯೇ ಕ್ಯಾಮೆರಾ ಆ್ಯಂಗಲ್‌ ಬದಲಾಯಿಸುತ್ತಾನೆ, ಇನ್ನೇನೋ ಸರಿಯಾಗಿಲ್ಲ ಎಂದು ಮತ್ತೊಮ್ಮೆ ಮಾಡಿಸುತ್ತಾನೆ ಹೀಗೆ... ಅವನ ಸಾವನ್ನು ಅವನೇ ಚಿತ್ರಿಸುವ ರೋಚಕ ಕಥೆ ಅದು. ನನ್ನದೂ ಅದೇ ಥರದ ಅನುಭವ. ನನ್ನ ಅನುಭವವನ್ನು ನನ್ನದಲ್ಲ ಎಂದು ನೋಡುವುದಿದೆಯಲ್ಲ, ಅದು ತುಂಬ ವಿಶಿಷ್ಟವಾದ್ದು. ಯಾವ ಅನುಭವ ನನ್ನದೊಬ್ಬನದಲ್ಲ ಎಂದಾಗುತ್ತದೆಯೋ, ಆಗ ಅದು ಎಲ್ಲರದೂ ಆಗುತ್ತದೆ.

* ಸಾಹಿತ್ಯದಲ್ಲಿ ಸಾಕಷ್ಟು ಮಹತ್ವದ ಕೃತಿ ರಚಿಸಿದ್ದೀರಿ. ಈಗ ಇನ್ನೊಂದು ಮಾಧ್ಯಮದಲ್ಲಿ ಕೆಲಸ ಮಾಡಲು ಸಿದ್ಧರಾಗುತ್ತಿದ್ದೀರಿ. ಈ ಸಿದ್ಧತೆಯಲ್ಲಿ ನಿಮಗೆ ಎದುರಾದ ಸವಾಲುಗಳೇನು?

ಸಿನಿಮಾ ಪೂರ್ತಿ ಬೇರೆಯದೇ ಆದ ಭಾಷೆ. ಸಾಹಿತ್ಯ ನಿರ್ಮಾಣದಲ್ಲಿ ಬಳಸುವ ಭಾಷೆ ಅಲ್ಲ ಇದು. ಕ್ಯಾಮೆರಾದ ಭಾಷೆ ಇದು. ಸಾರ್ವತ್ರಿಕವಾದದ್ದು. ಅನೇಕ ಸಲ, ಸಾಹಿತ್ಯದಲ್ಲಿ ಬಳಸಿದ ಹಾಗೆ ಇಲ್ಲಿ ಭಾಷೆಯನ್ನು ಬಳಸುವ ಅಗತ್ಯವೇ ಇರುವುದಿಲ್ಲ. ಸೂರ್ಯ ಉದಯ ಆಗುತ್ತಿದ್ದಾನೆ ಎನ್ನುವುದನ್ನು ನಾವು ಪುಟಗಟ್ಟಲೆ ವರ್ಣನೆ ಮಾಡಬಹುದು. ಆದರೆ ಕ್ಯಾಮೆರಾದಲ್ಲಿ ಒಂದು ದೃಶ್ಯದಲ್ಲಿಯೇ ತೋರಿಸಿಬಿಡಬಹುದು! ಕ್ಯಾಮೆರಾ ಜಗತ್ತಿನಲ್ಲಿ ಮಾತು ಎನ್ನುವುದು ಮೂಕವಾಗಿಬಿಡುತ್ತದೆ.

ಸಾಹಿತ್ಯದಲ್ಲಿ ನಾನು ಬಳಸುವ ಭಾಷೆಯ ಸಾಧ್ಯತೆ ಮತ್ತು ಲಯದ ಸಾಧ್ಯತೆಗಳನ್ನು ಬಳಸಿಕೊಳ್ಳುವ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತಾರೆ. ಆದರೆ ಈಗ ನಾನು ನನ್ನದಲ್ಲದ ಮತ್ತೊಂದು ಭಾಷೆಯನ್ನು ಕಲಿತುಕೊಂಡು, ಬಳಸುವ ಸಿದ್ಧತೆಯಲ್ಲಿದ್ದೇನೆ. ನಾನು ಇದುವರೆಗೆ ಬಳಸುವ, ಕರಗತವಾದ ಭಾಷೆಯನ್ನು ಬಿಟ್ಟು, ಇದ್ದಕ್ಕಿದ್ದಂತೆ ಹೊಸದೊಂದು ಭಾಷೆಯನ್ನು ಮಾತನಾಡಲು ಶುರುಮಾಡುತ್ತೇನಲ್ಲ, ಅದು ನಿಜವಾದ ರೋಮಾಂಚಕ ಅನುಭವ. ನನ್ನದಲ್ಲದ ಭಾಷೆಯಲ್ಲಿ ಮಾತನಾಡುತ್ತಾ, ಅದನ್ನು ನನ್ನದಾಗಿ ಹೇಗೆ ಮಾಡಿಕೊಳ್ಳಬೇಕು? ಎಷ್ಟು ಮಾಡಿಕೊಳ್ಳಬೇಕು ಎಂಬ ಕುತೂಹಲದಲ್ಲಿ ನಾನಿದ್ದೇನೆ. ಇದೇ ನನ್ನೆದುರಿನ ಸವಾಲು ಕೂಡ.

* ಇದಕ್ಕೆ ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದೀರಾ?

ಸಿನಿಮಾಗಳನ್ನು ನೋಡುವುದು. ಮೊದಲಿನಿಂದಲೂ ನಾನು ಸಿನಿಮಾಗಳನ್ನು ನೋಡುತ್ತೇನೆ. ಈಗಲೂ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿನ ಕ್ಲಾಸಿಕ್‌ ಸಿನಿಮಾಗಳನ್ನು ನೋಡಿ, ಅದಕ್ಕೆ ಸಮಾನಾಂತರವಾಗಿ ನನ್ನ ಅನುಭವವನ್ನು ತಾಳೆ ಮಾಡಿಕೊಳ್ಳುತ್ತೇನೆ. ಅದು ನನ್ನದೇ ಅನುಭವವನ್ನು ಹೊಸತಾಗಿ ನೋಡಲು ಶಕ್ತಿ ಕೊಡುತ್ತದೆ.

* ಇದು ನಿಮ್ಮ ಬಾಲ್ಯಸಂದರ್ಭದ ಸಿನಿಮಾ. ಆದರೆ ಸಾಮಾನ್ಯ ಮಕ್ಕಳ ಸಿನಿಮಾದ ಸಿದ್ಧಚೌಕಟ್ಟಿನಿಂದ ದಾಟಿಕೊಳ್ಳುವ ಬಗ್ಗೆ ಎಚ್ಚರ ವಹಿಸಿದ್ದೀರಾ?

ಇದು ಮಕ್ಕಳ ಸಿನಿಮಾ ಅಲ್ಲ. ಆದರೆ ಸಿನಿಮಾದಲ್ಲಿ ಒಂದು ಮಗುವಿನ ಪಾತ್ರ ಇರುತ್ತದೆ.

ಆಶ್ಚರ್ಯ ಅಂದ್ರೆ ಪ್ರತಿ ಹಿರಿಯರ ಸಿನಿಮಾದಲ್ಲಿಯೂ ಒಂದು ಮಗು ಇರುತ್ತದೆ. ಮಕ್ಕಳ ಚಿತ್ರಗಳಲ್ಲಿಯೂ ತಾಯಿ ತಂದೆ, ಅಜ್ಜ ಅಜ್ಜಿ ಇರುತ್ತಾರೆ. ಒಂದು ಮಗು, ಒಂದು ಮುದುಕ ಅಥವಾ ಒಬ್ಬ ಪೋರ ಅಂತಿಲ್ಲ; ಅವನು ಅನೇಕ ಸಂಗತಿಗಳಿಂದ ಸುತ್ತುವರಿಯಲ್ಪಿಟ್ಟಿರುತ್ತಾನೆ. ಒಂದು ತಾಯಿಯನ್ನು ಬಿಟ್ಟು ಮಗುವನ್ನು ಹೇಗೆ ನೋಡುತ್ತೀರಾ? ಹಾಗೆ ನೋಡಿದರೆ ಮಗುವಿನ ಪೂರ್ತಿ ಸ್ವರೂಪ ಗೊತ್ತೇ ಆಗುವುದಿಲ್ಲವಲ್ಲ. ಹಾಗೆಯೇ ಮಗುವಿಲ್ಲದೇ ತಾಯಿಯನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ ಅಲ್ಲವೇ? ಮಹಾಭಾರತದಂಥ ಕತೆಯಲ್ಲಿಯೂ ಅಭಿಮನ್ಯು, ಉತ್ತರ ಇಂಥ ಮಕ್ಕಳಿರುವುದರಿಂದಲೇ ಅದಕ್ಕೊಂದು ವೈವಿಧ್ಯ ದಕ್ಕಿದೆ. ಹಾಗಾಗಿ ಮಕ್ಕಳ ಸಿನಿಮಾ ಹಿರಿಯರ ಸಿನಿಮಾ ಅಂತೆಲ್ಲ ವಿಭಾಗಿಸಿ ನೋಡುವುದೇ ಸರಿಯಲ್ಲ. ಬದುಕನ್ನು ಇಡಿಯಾಗಿ ನೋಡಬೇಕು. ಆ ಸಮಗ್ರವಾದ ಅನುಭವ ನೋಡುವುದಾದರೆ ಎಲ್ಲವನ್ನೂ ನೋಡಬೇಕು. ನಾವೆಲ್ಲರೂ ಒಟ್ಟಿಗೇ ಇದ್ದೇವೆ. ಈ ‘ಒಟ್ಟಿಗೆ’ ಎನ್ನುವ ಸಹಬಾಳ್ವೆ ತತ್ವ ತುಂಬ ಮುಖ್ಯ.

* ಪಾತ್ರವರ್ಗ ಆಯ್ಕೆ ಮುಗಿದಿದೆಯೇ?

ಈ ಸಿನಿಮಾದಲ್ಲಿ ಒಂದು ಮಗುವಿನ ಪಾತ್ರ ಬರುತ್ತದೆ. ಬಹಳ ಮುಖ್ಯ ಪಾತ್ರ ಅದು. ಆ ಪಾತ್ರಕ್ಕೆ ಅಷ್ಟೇ ಮುದ್ದಾದ ಮಗು ಸಿಕ್ಕಿದೆ. ಋತ್ವಿ ಎಂದು ಅದರ ಹೆಸರು. ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುತ್ತಿದ್ದಾನೆ. ತುಂಬಾ ಚೂಟಿ. ‘ರಿಬ್ಬನ್‌’ ಅನ್ನುವುದು ಮಗುವಿಗೆ ಸಂಬಂಧಪಟ್ಟಿದ್ದು. ‘ಹಸಿರು’ ಎನ್ನುವುದು ಅದರ ತಾಯಿ ಮತ್ತು ಅಜ್ಜಿಗೆ ಸಂಬಂಧಪಟ್ಟಿದ್ದು.

ಅಜ್ಜಿ ಪಾತ್ರಕ್ಕೆ ಗಿರಿಜಾ ಲೋಕೇಶ್‌ ಒಪ್ಪಿಕೊಂಡಿದ್ದಾರೆ. ತಾಯಿ ಪಾತ್ರಕ್ಕೆ ಮಂಗಳೂರಿನ ಹುಡುಗಿಯನ್ನು ಸಂಪರ್ಕಿಸುತ್ತಿದ್ದೇವೆ. ಹಾಗೆಯೇ ನಿಖಿಲ್‌ ಮಂಜೂ ಸಹ ಇನ್ನೊಂದು ಮಹತ್ವದ ಪಾತ್ರ ಮಾಡುತ್ತಿದ್ದಾರೆ. ಈ ಹಿಂದೆ ‘ರಿಸರ್ವೇಶನ್‌’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದ ಪಿ.ವಿ.ಆರ್‌. ಸ್ವಾಮಿ ನಮ್ಮ ಸಿನಿಮಾಗೂ ಛಾಯಾಗ್ರಹಣ ಮಾಡಲಿದ್ದಾರೆ. ಪ್ರತಿಭಾವಂತ ಛಾಯಾಗ್ರಾಹಕ ಆತ.

* ‘ಚಿನ್ನಾರಿ ಮುತ್ತ’ದಲ್ಲಿ ನೀವು ಬರೆದ ಹಾಡು ಇಂದಿಗೂ ಜನಪ್ರಿಯ. ಈ ಸಿನಿಮಾದಲ್ಲಿಯೂ ಅಂಥ ಹಾಡುಗಳನ್ನು ನಿರೀಕ್ಷಿಸಬಹುದೇ?

ಖಂಡಿತ. ಉಪಾಸನಾ ಮೋಹನ್‌ ಮೊದಲ ಬಾರಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸಂಗೀತ ಪ್ರಧಾನವಾಗಿರುತ್ತದೆ. ಮೂರು ಹಾಡುಗಳನ್ನು ಧ್ವನಿಮುದ್ರಿಸುತ್ತೇವೆ. ಇನ್ನೂ ಕೆಲವು ಹಾಡುಗಳನ್ನು ಹಾಗೆಯೇ ಸಿನಿಮಾದಲ್ಲಿ ಹಾಡಲಾಗುತ್ತದೆ. ನನ್ನ ಹಾಡುಗಳನ್ನೇ ಬಳಸಿಕೊಳ್ಳುತ್ತೇವೆ. ಆಗಲೇ ಅದಕ್ಕೊಂದು ಸಮಗ್ರತೆ ಬರುತ್ತದೆ. ಸಾಹಿತ್ಯಕ್ಕೆ ಹೆಚ್ಚು ಮಹತ್ವ ಕೊಡುವಂಥ ಸಂಗೀತ ಇರುತ್ತದೆ.

**

ನನ್ನದಲ್ಲದ ಮತ್ತೊಂದು ಭಾಷೆಯನ್ನು ಕಲಿತುಕೊಂಡು, ಬಳಸುವ ಸಿದ್ಧತೆಯಲ್ಲಿದ್ದೇನೆ. ನಾನು ಇದುವರೆಗೆ ಬಳಸುವ, ಕರಗತವಾದ ಭಾಷೆಯನ್ನು ಬಿಟ್ಟು, ಇದ್ದಕ್ಕಿದ್ದಂತೆ ಹೊಸದೊಂದು ಭಾಷೆಯನ್ನು ಮಾತನಾಡಲು ಶುರುಮಾಡುತ್ತೇನಲ್ಲ, ಅದು ನಿಜವಾದ ರೋಮಾಂಚಕ ಅನುಭವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT