ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪ್ತಿ ‘ಕಿರೀಟ’ ಧಾರಣೆಯು...

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

‘ಸಮಾಜದಲ್ಲಿ ಅನಾಥ ಹೆಣ್ಣುಮಕ್ಕಳ ಬಗ್ಗೆ ತಾತ್ಸಾರವೇ ಹೆಚ್ಚು. ಅವರ ಮಾನಸಿಕ ತೊಳಲಾಟ ಜನರಿಗೆ ಅರ್ಥವಾಗುವುದಿಲ್ಲ...’

ಹೀಗೆ ಹೇಳುತ್ತಾ ಮೌನಕ್ಕೆ ಶರಣಾದರು ನಟಿ ದೀಪ್ತಿ ಕಾಪ್ಸೆ. ಮಾಡೆಲಿಂಗ್ ಮತ್ತು ಫ್ಯಾಷನ್‌ ಡಿಸೈನಿಂಗ್‌ ಜಗತ್ತಿನಿಂದ ಬಣ್ಣದ ಬದುಕಿಗೆ ಕಾಲಿಟ್ಟಿರುವ ದೀಪ್ತಿ ಅವರ ಮಾತುಗಳಲ್ಲಿ ಅಸಹಾಯಕ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ಇತ್ತು. ಚಿತ್ರರಂಗಕ್ಕೆ ಬಂದಿದ್ದರೂ ಫ್ಯಾಷನ್‌ ಡಿಸೈನಿಂಗ್ ಬಗೆಗಿನ ಅವರ ಕಡುಮೋಹ ಕಡಿಮೆಯಾಗಿಲ್ಲ. ಸಿನಿಮಾಗಳಲ್ಲಿ ಈ ಹವ್ಯಾಸ ಮುಂದುವರಿಸುವ ಹಂಬಲ ಅವರದು. ಜತೆಗೆ, ತಾವು ಅಭಿನಯಿಸಿದ ಸಿನಿಮಾಗಳಿಗೆ ವಸ್ತ್ರವಿನ್ಯಾಸಕಿಯೂ ಅವರೇ.

ಸಮಾಜದಲ್ಲಿ ಪ್ರತಿಯೊಬ್ಬರೂ ಜಾತಿ, ಮತ, ಅಂತಸ್ತುಗಳ ಅದೃಶ್ಯ ಕಿರೀಟಗಳನ್ನು ಧರಿಸಿಕೊಂಡಿರುತ್ತಾರೆ. ಅವುಗಳ ನಡುವೆ ನಿಜವಾದ ಬದುಕು ಕಟ್ಟಿಕೊಳ್ಳುವುದು ಕಷ್ಟಕರ. ಇದನ್ನು ‘ಕಿರೀಟ’ ಸಿನಿಮಾದ ಮೂಲಕ ತೋರಿಸಲು ನಿರ್ದೇಶಕ ಕಿರಣ್‌ ಚಂದ್ರ ಹೊರಟಿದ್ದಾರೆ. ದೀಪ್ತಿ ಅವರು ಅಭಿನಯಿಸಿರುವ ‘ಕಿರೀಟ’ ಚಿತ್ರ ಇದೇ 28ರಂದು ಬಿಡುಗಡೆಗೆ ಸಿದ್ಧವಾಗಿದೆ.

‘ಜ್ವಲಂತಂ’ ದೀಪ್ತಿ ನಟನೆಯ ಮೊದಲ ಚಿತ್ರ. ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಅಭಿನಯಿಸಿದ್ದರು. ಚಿತ್ರದುದ್ದಕ್ಕೂ ಮೌನ ಗೌರಿಯ ಪಾತ್ರ. ಹಳ್ಳಿಗಾಡಿನಿಂದ ಬಂದು ನಗರದ ಸಂಕೀರ್ಣ ಜೀವನದೊಳಗೆ ಸಿಲುಕಿದ ಪಾತ್ರ. ಅಲ್ಲಿ ಮಾತುಗಳೇ ಇರಲಿಲ್ಲ. ‘ಕಿರೀಟ’ ಚಿತ್ರದಲ್ಲಿನ ಅವರ ಪಾತ್ರ ಇದಕ್ಕೆ ತದ್ವಿರುದ್ಧ.

‘ಸಮಾಜದಲ್ಲಿ ಅಸಹಾಯಕರು ಬದುಕುವುದೇ ಕಷ್ಟಕರ. ಇನ್ನು ಹೆಣ್ಣುಮಕ್ಕಳ ಪಾಡನ್ನು ಊಹಿಸಲು ಅಸಾಧ್ಯ. ಅಂತಹ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಿರ್ದೇಶಕರು ಕಥೆಯ ಒಂದು ಎಳೆಯನ್ನಷ್ಟೇ ಹೇಳಿದರು. ತಕ್ಷಣವೇ ಒಪ್ಪಿಕೊಂಡೆ. ಆದರೆ, ಸ್ಕ್ರಿಪ್ಟ್‌ ನೋಡಿದ ತಕ್ಷಣ ಪಾತ್ರದ ಮಹತ್ವ ಅರಿವಿಗೆ ಬಂತು. ಇದೊಂದು ಸವಾಲಿನ ಪಾತ್ರ’ ಎಂದರು.

‘ನನ್ನ ಪಾತ್ರದಲ್ಲಿ ಭಾವುಕತೆ ಇದೆ. ಈ ಪಾತ್ರದಲ್ಲಿ ಮೊದಲಿಗೆ ಅಭಿನಯಿಸುವುದು ಕಷ್ಟವಾಯಿತು. ಇದಕ್ಕಾಗಿಯೇ ನಿರ್ದೇಶಕರು ನನಗೆ ಒಂದು ವಾರ ತರಬೇತಿ ನೀಡಿದರು. ಹಾಗಾಗಿ, ಅಭಿನಯ ಸುಲಭವಾಯಿತು’ ಎಂದರು ದೀಪ್ತಿ.

ಮಾಡೆಲಿಂಗ್‌ ಮತ್ತು ಫ್ಯಾಷನ್ ಡಿಸೈನಿಂಗ್‌ ಜಗತ್ತೇ ಬೇರೆ. ಸಿನಿಮಾವೇ ಬೇರೆ ಎಂಬ ಸಾಮಾನ್ಯ ತಿಳಿವಳಿಕೆ ಅವರಿಗಿದೆ. ಮಾಡೆಲ್‌ ವೃತ್ತಿಗೆ ಕಾಲಿಟ್ಟ ತಕ್ಷಣ ಸಿನಿಮಾರಂಗ ಪ್ರವೇಶಿಸಬಹುದು ಎಂಬ ಕಲ್ಪನೆಯೂ ಅವರಿಗಿಲ್ಲ. ಚಿತ್ರರಂಗವು ನಟನಾ ಕೌಶಲ ಬೇಡುತ್ತದೆ. ಅಲ್ಲಿ ಸಾಮರ್ಥ್ಯ ಸಾಬೀತುಪಡಿಸಿದರಷ್ಟೇ ಉಳಿವು ಸಾಧ್ಯ ಎನ್ನುವ ಅರಿವು ಅವರಿಗೆ ಕರಗತವಾಗಿದೆ. ‘ಕಿರೀಟ ಚಿತ್ರದಲ್ಲಿ ನವಿರಾದ ಪ್ರೀತಿ ಇದೆ. ಯುವಜನರಿಗೆ ಇಷ್ಟವಾಗಲಿದೆ’ ಎನ್ನುವ ನಂಬಿಕೆಯಲ್ಲಿದ್ದಾರೆ ದೀಪ್ತಿ.

ದೀಪ್ತಿ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಫ್ಯಾಷನ್‌ ಡಿಸೈನಿಂಗ್‌ನತ್ತ ಅವರ ಮನಸ್ಸು ಹೊರಳಿತು. ಇದಕ್ಕೆ ನೀರೆರದು ಪೋಷಿಸಿದ್ದು ಆಕೆಯ ತಂದೆ, ತಾಯಿ. ಅವರು ಬಿಎಸ್ಸಿ ಫ್ಯಾಷನ್‌ ಡಿಸೈನಿಂಗ್‌ ಪದವಿ ಕೂಡ ಪಡೆದಿದ್ದಾರೆ. ಬಿಡುವಿನ ವೇಳೆ ಚಿತ್ರಕಲೆ, ಸ್ನೇಹಿತರೊಟ್ಟಿಗೆ ಸುತ್ತಾಟ ನಡೆಸುವುದೆಂದರೆ ಅವರಿಗೆ ಎಲ್ಲಿಲ್ಲದ ಖುಷಿ.

‘ನಿರ್ದೇಶಕ ಕಿರಣ್‌ ಚಂದ್ರ ನನ್ನ ಅಭಿನಯಕ್ಕೆ ಉತ್ತಮ ಸಹಕಾರ ನೀಡಿದರು. ಕಿರೀಟ ಚಿತ್ರದಲ್ಲಿ ಉತ್ತಮ ಸಂದೇಶವಿದೆ. ಉದ್ದನೆಯ ಡೈಲಾಗ್‌ಗಳಿವೆ. ಪಡ್ಡೆ ಹುಡುಗರ ವರ್ತನೆ ಬಗ್ಗೆ ಪಂಚಿಂಗ್‌ ಡೈಲಾಗ್‌ ಸಿಡಿಸುತ್ತೇನೆ’ ಎಂದು ಕಣ್ಣರಳಿಸುತ್ತಾರೆ.

ಸಿನಿಮಾದ ಪಾತ್ರಗಳ ಆಯ್ಕೆಯಲ್ಲಿ ನಟಿಮಣಿಗಳು ಚ್ಯೂಸಿಯಾಗಿರುತ್ತಾರೆ. ಪಾತ್ರದ ಆಯ್ಕೆಯಲ್ಲೂ ಲೆಕ್ಕಾಚಾರ ಪಾಲಿಸುವುದು ಉಂಟು. ಆದರೆ, ದೀಪ್ತಿ ಇಂತಹ ಯಾವುದೇ ಸಿದ್ಧಸೂತ್ರಗಳಿಗೆ ಜೋತುಬಿದ್ದವರಲ್ಲ. ಈ ಅಗತ್ಯವೂ ಅವರಿಗೆ ಇಲ್ಲವಂತೆ. ‘ನಾನು ಪಾತ್ರಗಳ ಆಯ್ಕೆ ಬಗ್ಗೆ ಚ್ಯೂಸಿಯಲ್ಲ. ಪಾತ್ರ ಮೊದಲು ನನಗೆ ಇಷ್ಟವಾಗಬೇಕು. ಚಿತ್ರದಲ್ಲಿ ಪಾತ್ರ ಮಹತ್ವ ಪಡೆದಿದ್ದರೆ ನಟಿಸಲು ಹಿಂಜರಿಯುವುದಿಲ್ಲ’ ಎನ್ನುವ ಅವರು, ತಾವು ನಟಿಸುವ ಪಾತ್ರ ಕುರಿತು ತನ್ನ ತಂದೆ, ತಾಯಿ ಬಳಿ ಚರ್ಚಿಸುವುದನ್ನು ಮರೆಯುವುದಿಲ್ಲ.

ಕಿರೀಟ ಧರಿಸಿದ ಬಳಿಕ ಅವರು ‘ಹನಿ ಹನಿ ಇಬ್ಬನಿ’ ಸಿನಿಮಾದಲ್ಲಿ ತೇಲಾಡುವ ಉತ್ಸಾಹದಲ್ಲಿದ್ದಾರೆ. ಅವರ ಅಭಿನಯದ ‘ಉಪೇಂದ್ರ ಮತ್ತೆ ಬಾ’ ಚಿತ್ರವೂ ಆಡಿಯೊ ಬಿಡುಗಡೆಯ ಹಂತದಲ್ಲಿದೆ. ಕನ್ನಡದ ಎರಡು ಸಿನಿಮಾದಲ್ಲಿ ವಸ್ತ್ರವಿನ್ಯಾಸಕಿ ಆಗುವ ಅವಕಾಶವೂ ಅವರನ್ನು ಹುಡುಕಿಕೊಂಡು ಬಂದಿದೆ. ಹಾಗಾಗಿ, ನಟನೆಯ ಜೊತೆಗೆ ಸಿನಿರಂಗದಲ್ಲಿ ತನ್ನ ಫ್ಯಾಷನ್‌ ಡಿಸೈನಿಂಗ್ ಹವ್ಯಾಸವನ್ನೂ ಮುಂದುವರಿಸುವ ತವಕದಲ್ಲಿದ್ದಾರೆ ದೀಪ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT