ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಬ್ಯಾಂಕಿಂಗ್‌ನ ‘ಕ್ಯಾಂಡಿ’

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ನ ದೇಶದ ಮೊದಲ ಅತ್ಯಾಧುನಿಕ ಶಾಖೆ
Last Updated 27 ಜುಲೈ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ಆಧಾರ್‌ ಕಾರ್ಡ್‌ ನೆರವಿನಿಂದ ಗ್ರಾಹಕರು ಕೆಲವೇ ಕ್ಷಣಗಳಲ್ಲಿ ಬ್ಯಾಂಕ್‌ ಖಾತೆ ತೆರೆದು, ಡೆಬಿಟ್‌ ಕಾರ್ಡ್‌ ಪಡೆದುಕೊಂಡೇ ಹೊರ ಬೀಳುವ ಕಾಗದರಹಿತ, ನಗದುರಹಿತ ಬ್ಯಾಂಕಿಂಗ್‌ನ ವಿಶಿಷ್ಟ ಅನುಭವ ಪಡೆಯುವ ಕನಸನ್ನು ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಗುರುವಾರ ಇಲ್ಲಿ ನಿಜ ಮಾಡಿದೆ.

ನಗರದ ಮಹಾತ್ಮಾ ಗಾಂಧಿ ರಸ್ತೆಯ ಸ್ಪೆನ್ಸರ್‌ ಟವರ್‌ನಲ್ಲಿ ಆರಂಭಿಸಿರುವ ಈ ಸಂಪೂರ್ಣ ಡಿಜಿಟಲ್‌ಮಯ, ಅತ್ಯಾಧುನಿಕ ತಂತ್ರಜ್ಞಾನ ಸಜ್ಜಿತ ಬ್ಯಾಂಕ್‌ ಶಾಖೆಯಲ್ಲಿ ಗ್ರಾಹಕರ ಅನೇಕ ಅನುಮಾನಗಳನ್ನು ರೋಬೊ ಪಟಪಟನೆ ಉತ್ತರಿಸಿ ದೂರ ಮಾಡಲಿದ್ದಾನೆ.

ಇದು ಬ್ಯಾಂಕ್‌ನ ಮೊದಲ ಡಿಜಿಟಲ್‌ ಬ್ಯಾಂಕ್‌ ಶಾಖೆಯಾಗಿದೆ. ಆಧಾರ್‌, ಕಣ್ಣಿನ ಪಾಪೆ ಮೂಲಕ ವ್ಯಕ್ತಿಯನ್ನು ದೃಢಿಕರಿಸುವ ಎಟಿಎಂ ಹೋಲುವ ಯಂತ್ರಗಳು, ಪಟಪಟನೆ ಮಾಹಿತಿ ಕಲೆಹಾಕಿ ಖಾತೆ ತೆರೆಯುತ್ತವೆ.

ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಗ್ರಾಹಕರಿಗೆ ಅದರಲ್ಲೂ ಹೊಸ ತಲೆಮಾರಿನವರಿಗೆ ವಿಶಿಷ್ಟ ಬ್ಯಾಂಕಿಂಗ್‌ ಸೇವೆ ಒದಗಿಸುವುದು ಈ ಶಾಖೆಯ ಉದ್ದೇಶವಾಗಿದೆ. ಬೆರಳ ಗುರುತು, ಕಣ್ಣ ಪಾಪೆ ಮೂಲಕ ದೃಢೀಕರಣ ಮಾಡಿ ಗ್ರಾಹಕರೇ ಖಾತೆ ತೆರೆಯುವ ವಿಶಿಷ್ಟ ಸೌಲಭ್ಯವನ್ನು ಇಲ್ಲಿ ಕಲ್ಪಿಸಲಾಗಿದೆ.

ಡೆಬಿಟ್‌ ಕಾರ್ಡ್‌, ಚೆಕ್‌ ಬುಕ್‌ ಪಡೆಯುವುದರ ಜತೆಗೆ, ಮೊಬೈಲ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೌಲಭ್ಯಕ್ಕೂ ನೋಂದಣಿ ಮಾಡಬಹುದು. ಕಿರು ತಂತ್ರಾಂಶ ಆಧಾರಿಸಿಯೇ ಗ್ರಾಹಕರಿಗೆ ಟೋಕನ್‌ ನೀಡಿ, ಸರತಿ ಸಾಲನ್ನು ಸಮರ್ಪಕವಾಗಿ ನಿರ್ವಹಿಸುವ ಸೌಲಭ್ಯವೂ ಇಲ್ಲಿದೆ.   ಬ್ಯಾಂಕ್‌ ಸಿಬ್ಬಂದಿ ಜತೆ ಭೇಟಿ ನಿಗದಿಪಡಿಸಲು ಕ್ಲೌಡ್ ತಂತ್ರಜ್ಞಾನ ನೆರವಾಗಲಿದೆ.

ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಡಿಜಿಟಲ್‌ ಸ್ವರೂಪದಲ್ಲಿಯೇ ನಗದು ಠೇವಣಿ, ಹಣ ವರ್ಗಾವಣೆ, ಚೆಕ್‌ ಕ್ಲಿಯರಿಂಗ್‌ ಸೇವೆಗಳನ್ನು ಪಡೆಯಬಹುದು. ಕಾರ್‌, ಗೃಹ ಮತ್ತು ಶಿಕ್ಷಣ ಸಾಲ, ಮ್ಯೂಚುವಲ್‌ ಫಂಡ್‌, ಜೀವ ವಿಮೆ  ಬಗ್ಗೆ ಗ್ರಾಹಕರು ಸ್ಪರ್ಶ ಪರದೆ ಮೂಲಕವೇ ಮಾಹಿತಿ ಪಡೆಯಬಹುದು. ಈ ಸೇವೆಗಳನ್ನು ಪಡೆಯಲು ಆನ್‌ಲೈನ್‌ನಲ್ಲಿಯೇ ಅರ್ಜಿಗಳನ್ನೂ ಸಲ್ಲಿಸಬಹುದು.

ಖಾತೆಗಳಿಗೆ ಚೆಕ್‌ ಮೂಲಕ ಹಣ ಪಾವತಿಸುವ ಕಿಯೊಸ್ಕ್‌ನಲ್ಲಿ ಸಿಟಿಎಸ್‌ ಸೌಲಭ್ಯದ ಚೆಕ್‌ಗಳನ್ನು ಸ್ಕ್ಯಾನ್‌ ಮಾಡಿದರೆ ಆ ಮಾಹಿತಿ ಕ್ಲಿಯರಿಂಗ್‌ ಹೌಸ್‌ಗೆ ನೇರವಾಗಿ ಹೋಗಲಿದೆ. ನಗದು ಠೇವಣಿ ಕಿಯೊಸ್ಕ್‌, ಡೆಬಿಟ್‌ ಕಾರ್ಡ್ ದೃಢೀಕರಣದಿಂದ ನಗದು ಸ್ವೀಕರಿಸಲಿದೆ. ಇಲ್ಲಿ ಖಾತೆ ಸಂಖ್ಯೆ ನಮೂದಿಸುವ ಅಗತ್ಯ ಇಲ್ಲ. ಬೇರೆ ಖಾತೆಗೆ ಹಣ ಸಂದಾಯವಾಗುವ ಸಾಧ್ಯತೆಯೂ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT