ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಾ ಸಂಸ್ಥೆ ತೊರೆಯಲಾರರು

ಇನ್ಫೊಸಿಸ್‌ನ ಸಹ ಅಧ್ಯಕ್ಷ ರವಿ ವೆಂಕಟೇಶನ್‌ ಅಭಿಪ್ರಾಯ
Last Updated 27 ಜುಲೈ 2017, 20:09 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಭಾನ್ವಿತರು ಸಂಸ್ಥೆ ತೊರೆಯುತ್ತಿರುವುದರಿಂದ ಸಿಇಒ ವಿಶಾಲ್‌ ಸಿಕ್ಕಾ ಅವರೂ  ಹೊರ ನಡೆಯುವ ಸಾಧ್ಯತೆಯನ್ನು ಇನ್ಫೊಸಿಸ್‌ನ ಸಹ ಅಧ್ಯಕ್ಷ ರವಿ ವೆಂಕಟೇಶನ್‌ ಅವರು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

‘ಸಿಕ್ಕಾ ಅವರು ಸಂಸ್ಥೆಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಇನ್ಫೊಸಿಸ್‌  ಎದುರಿಸುತ್ತಿರುವ ಪ್ರತಿಕೂಲತೆಗಳನ್ನೆಲ್ಲ ನಿವಾರಿಸಿ ವಹಿವಾಟನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಅವರ ಕಾರ್ಯಕ್ಷಮತೆ ಬಗ್ಗೆ ನನಗೆ ದೃಢ ವಿಶ್ವಾಸ ಇದೆ’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಿಕ್ಕಾ ಅವರು ಅಧಿಕಾರವಹಿಸಿಕೊಂಡಾಗಿನಿಂದ ಇದುವರೆಗೆ 11 ಮಂದಿ ಉನ್ನತ ಅಧಿಕಾರಿಗಳು ಹೊರ ನಡೆದಿದ್ದಾರೆ. ‘ಅನೇಕ ಪ್ರತಿಭಾನ್ವಿತರು ಸಂಸ್ಥೆ ತೊರೆಯುತ್ತಿರುವುದರಲ್ಲಿ ಆಶ್ಚರ್ಯಪಡುವಂತಹದು ಏನೂ ಇಲ್ಲ. ಐ.ಟಿ ಉದ್ದಿಮೆಯಲ್ಲಿ ಉನ್ನತ ಅಧಿಕಾರಿಗಳಿಗೆ ಭಾರಿ ಬೇಡಿಕೆ ಇದೆ.  ಪ್ರತಿಭಾನ್ವಿತರನ್ನು ಸಂಸ್ಥೆಯಲ್ಲಿಯೇ ಉಳಿಸಿಕೊಳ್ಳಲು ಅವರಿಗೆ ಬೆಳೆಯಲು ಅವಕಾಶ ಮಾಡಿಕೊಡಬೇಕು. ಐ.ಟಿ ವಲಯವು ತುಂಬ ತ್ವರಿತವಾಗಿ ಬದಲಾಗುತ್ತಿರುವಾಗ, ಉನ್ನತ ಹುದ್ದೆಗಳು ಅವರನ್ನು ಹುಡುಕಿಕೊಂಡು ಬಂದಾಗ ಪ್ರತಿಭಾನ್ವಿತರು ಹೊರ ಹೋಗದಂತೆ ನಾವು ಅವರನ್ನು ನಿರ್ಬಂಧಿಸುವುದಿಲ್ಲ’ ಎಂದು ಹೇಳಿದ್ದಾರೆ.

‘ಶ್ರದ್ಧೆಯಿಂದ ಕೆಲಸ ಮಾಡುವ ಯಾವುದೇ ಹಂತದಲ್ಲಿನ ದಕ್ಷ ಸಿಬ್ಬಂದಿ ಸಂಸ್ಥೆ ತೊರೆಯುವಾಗ ಆ ಬಗ್ಗೆ ನನಗೆ ನೋವಾಗುತ್ತದೆ. ಇನ್ಫೊಸಿಸ್‌ ಸೇರಿದಂತೆ ಎಲ್ಲ ಸಂಸ್ಥೆಗಳಿಗೆ ಸದ್ಯಕ್ಕೆ ಸಾಂಸ್ಕೃತಿಕ ಪರಿವರ್ತನೆ, ವಹಿವಾಟಿನ ಸ್ವರೂಪ ಮತ್ತು ಮಾರುಕಟ್ಟೆ ಕಾರ್ಯತಂತ್ರದಲ್ಲಿನ ಬದಲಾವಣೆಗಳನ್ನು ಎದುರಿಸುವುದು ದೊಡ್ಡ ಸವಾಲಾಗಿದೆ. ಅಸ್ಥಿರತೆ ಕಾರಣಕ್ಕೆ ಸಿಬ್ಬಂದಿಯಲ್ಲಿ ಆತಂಕ ಮನೆಮಾಡಿದೆ. ಸಂಸ್ಥೆ ಸ್ಥಾಪಿಸಿದವರಲ್ಲಿಯೂ ವ್ಯಾಕುಲತೆ ಮನೆ ಮಾಡಿದೆ.

'ಮಾರುಕಟ್ಟೆ ಬದಲಾಗುವಾಗ,ನೀವು ನಿಮ್ಮ ಕಾರ್ಯತಂತ್ರ, ವಹಿವಾಟಿನ ಸ್ವರೂಪವನ್ನೂ ಬದಲಿಸಬೇಕಾಗುತ್ತದೆ. ಡಿಜಿಟಲ್‌ನಂತಹ ಹೊಸ ಕ್ಷೇತ್ರದಲ್ಲಿನ ಅಂತರ ತುಂಬಲು ಹೊಸಬರನ್ನು ತಂದು ನೇಮಿಸಬೇಕಾಗುತ್ತದೆ. ಇವರೆಲ್ಲ ಹೊಸ ಮನಸ್ಥಿತಿಯವರಾಗಿರುತ್ತಾರೆ. ಅವರ ಸಾಂಸ್ಕೃತಿಕ ದೃಷ್ಟಿಕೋನವೂ ಹೊಸದಾಗಿರುತ್ತದೆ. ಇದರಿಂದ ವ್ಯವಸ್ಥೆಯಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಈ ಸಂಕ್ರಮಣ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವುದು ಆಡಳಿತ ಮಂಡಳಿ ಮತ್ತು ಹಿರಿಯ ಅಧಿಕಾರಿಗಳ ಹೊಣೆಯಾಗಿರುತ್ತದೆ.ಅದು ಕಾರ್ಯತಂತ್ರದ ವಿಷಯವಾಗಿರಲಾರದು. ಮಾನವ ಸಂಪನ್ಮೂಲ, ಸಿಬ್ಬಂದಿ ಕಾಡುವ ಆತಂಕ, ಭಾವನೆ ಮತ್ತು ಸಂಬಂಧಗಳನ್ನೂ ಸಮರ್ಪಕವಾಗಿ ನಿಭಾಯಿಸಬೇಕಾಗುತ್ತದೆ’ ಎಂದೂ ವೆಂಕಟೇಶನ್‌ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT