ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಬೆಂಬಲವಿಲ್ಲದಿದ್ದರೂ ಜನರ ‘ಧರ್ಮ’ರಾಜ

Last Updated 27 ಜುಲೈ 2017, 20:21 IST
ಅಕ್ಷರ ಗಾತ್ರ

ಕಲಬುರ್ಗಿ: ಜೇವರ್ಗಿ ಕ್ಷೇತ್ರದಲ್ಲಿ ಇವರ ಸ್ವಜಾತಿಯ ರಜಪೂತ ಮತದಾರರು ಇರುವುದು ಬೆರಳೆಣಿಕೆಯಷ್ಟು. ಆದರೂ ಸತತವಾಗಿ ಎಂಟು ಬಾರಿ ಅಲ್ಲಿಂದ ಶಾಸಕರಾಗಿ ಆಯ್ಕೆಯಾದರು. ಮುಖ್ಯಮಂತ್ರಿಯೂ ಆದರು!

ಭಾರತದಲ್ಲಿ ಜಾತಿ ಬೆಂಬಲವಿಲ್ಲದೇ ರಾಜಕೀಯವಾಗಿ ಸಣ್ಣ ಸ್ಥಾನವನ್ನೂ ಗಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸ್ಥಿತಿ ಇದೆ. ಆದರೆ ಎನ್‌.ಧರ್ಮಸಿಂಗ್‌ ಅವರು ಎಲ್ಲ ಜಾತಿ, ಧರ್ಮದವರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ರಾಜ್ಯದಲ್ಲಿ ಉನ್ನತ ಸ್ಥಾನ ಗಳಿಸಿದರು.

ಒಮ್ಮೆ ಮಾತಿಗೆ ಸಿಕ್ಕಾಗ ‘ಇಡೀ ದೇಶದ ರಾಜಕೀಯ ಜಾತಿಯ ಆಧಾರದ ಮೇಲೆ ನಿಂತಿದೆ. ಜಾತಿಗಳ ಜನಸಂಖ್ಯೆಯನ್ನು ನೋಡಿಯೇ ಎಲ್ಲ ಪಕ್ಷಗಳೂ ಟಿಕೆಟ್ ಕೊಡುತ್ತವೆ. ನನ್ನ ಕ್ಷೇತ್ರ ಇದಕ್ಕೆ ಹೊರತಾಗಿದೆ. ನಾನು ಜಾತಿ, ಧರ್ಮ ಇತ್ಯಾದಿ ನೋಡಿ ರಾಜಕೀಯ ಮಾಡುವುದಿಲ್ಲ’ ಎಂದಿದ್ದರು. ಈ ಮಾತನ್ನು ಇವರನ್ನು ಬಲ್ಲ ಎಲ್ಲರೂ ಒಪ್ಪುತ್ತಾರೆ.

ನೆರವು ಕೋರಿ ಬಂದವರಿಗೆ ಎಂದೂ ಬರಿಗೈಲಿ ಕಳಿಸುತ್ತಿರಲಿಲ್ಲ ಎಂಬ ಕಾರಣಕ್ಕೇ ಇವರನ್ನು ಈ ಭಾಗದ ಜನ ‘ಧರ್ಮ’ರಾಜ ಎಂದು ಕರೆಯುತ್ತಿದ್ದರು. ಯಾರೇ ಮನೆಗೆ ಬಂದು ಲಗ್ನಪತ್ರಿಕೆ ಕೊಟ್ಟರೂ ಮದುವೆಗೆ ಹೋಗುತ್ತಿದ್ದರು. ಚುನಾವಣಾ ಫಲಿತಾಂಶ ಬಂದ ಮರು ದಿನವೇ ತಮ್ಮ ವಿರೋಧಿ ಬಂದು ಸಹಾಯ ಕೇಳಿದರೂ ಚಹಾ ಕೊಟ್ಟು ಉಪಚರಿಸುವಷ್ಟು ವಿಶಾಲ ಮನಸ್ಸು ಇವರದ್ದು. ಧಾರವಾಡ, ಕಲಬುರ್ಗಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ಇವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೈಗೊಂಡ ನಿರ್ಣಯವಾಗಿತ್ತು.

ಈ ಭಾಗದ ನೀರಾವರಿ, ಅಭಿವೃದ್ಧಿ ಹಾಗೂ ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ 371 ಕಲಂ ಅನುಷ್ಠಾನ ವಿಷಯದಲ್ಲಿ ರಾಜಕೀಯ ಒಡನಾಡಿ ಮಲ್ಲಿಕಾರ್ಜುನ ಖರ್ಗೆ ಅವರೊಟ್ಟಿಗೆ ಹೆಗಲು ಕೊಟ್ಟು ದುಡಿದರು. ‘ಅವರು ಬರಲಿಲ್ಲ, ಇವರು ಆ ಕೆಲಸ ಮಾಡಲಿಲ್ಲ’ ಎಂದು ಯಾರ ವಿರುದ್ಧವೂ ಮುನಿಸಿಕೊಂಡವರಲ್ಲ. ‘ಎಲ್ಲರೂ ನನ್ನ ಹೊಟ್ಟೆಯೊಳಗೆ ಬಂದ್ರು’ ಎಂದು ತಾವು ಮುಖ್ಯಮಂತ್ರಿ ಆಗಿದ್ದಾಗ ಸಚಿವರನ್ನು ಸಮರ್ಥಿಸಿಕೊಳ್ಳುತ್ತಿದ್ದರು.

1969ರಲ್ಲಿ ಕಾಂಗ್ರೆಸ್‌ ಸೇರಿದರು. ಇದಕ್ಕೂ ಮುನ್ನ ಕಮ್ಯುನಿಸ್ಟ್‌ ಪಕ್ಷದ ಒಡನಾಟದಲ್ಲಿದ್ದರು. 1972 ರಲ್ಲಿ ವಿಧಾನಸಭಾ ಚುನಾವಣೆಗೆ ಜೇವರ್ಗಿ ಕ್ಷೇತ್ರದಿಂದ ಇಂದಿರಾ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾದೇವಪ್ಪ ರಾಂಪುರೆ ಇವರ ಎದುರಾಳಿ. ರಾಂಪುರೆ ಹೈದರಾಬಾದ್‌ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕ. ಇವರನ್ನು ಜನ ‘ಹೈ.ಕ. ಹುಲಿ’ ಎಂದೇ ಕರೆಯುತ್ತಿದ್ದರು. ಆದರೆ, ಚುನಾವಣೆಯಲ್ಲಿ ಧರ್ಮಸಿಂಗ್‌ ಗೆಲುವು ಸಾಧಿಸಿದರು. ಈ ಗೆಲುವನ್ನು ಜನ ‘ಹುಲಿಯನ್ನು ಬೇಟೆಯಾಡಿದ ಸಿಂಹ’ ಎಂದು ಬಣ್ಣಿಸಿದರು.

ಇದೇ ಕ್ಷೇತ್ರದ ಜನ ಎಂಟು ಬಾರಿ ವಿಧಾನಸಭೆಗೆ ಸತತವಾಗಿ ಗೆಲ್ಲಿಸಿ ‘ಸೋಲಿಲ್ಲದ ಸರದಾರ’ ಎಂಬ ಕಿರೀಟ ತೊಡಿಸಿದ್ದರು.  2008ರ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ವಿರುದ್ಧ  70 ಮತಗಳ ಅಂತರದಿಂದ ಪರಾಭವಗೊಂಡರು.
2009ರ ಲೋಕಸಭಾ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರಕ್ಕೆ ವಲಸೆ ಹೋಗಿ ಸಂಸದರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಮರುಜೀವ ಪಡೆದರು. ಆದರೆ, 2014 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಭಗವಂತ ಖೂಬಾ ಎನ್ನುವ ಹೊಸಮುಖದ ಎದುರು ಸೋತು ಹೋದರು.

ಇವರ ಪಕ್ಷ ನಿಷ್ಠೆಗೆ ಉದಾಹರಣೆ: 1980 ರಲ್ಲಿ ಕಲಬುರ್ಗಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ತಮ್ಮ ನಾಯಕಿ ಇಂದಿರಾಗಾಂಧಿ ಅವರ ಸೂಚನೆಯ ಮೇರೆಗೆ ರಾಜೀನಾಮೆ ನೀಡಿ, ಕೇರಳದ ಸಿ.ಎಂ.ಸ್ಟೀಫನ್‌ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟರು. ಸ್ಟೀಫನ್‌ ಅವರು ವಿ.ಕೆ.ಕೃಷ್ಣನ್‌ ನಂತರದಲ್ಲಿ ಕಾಂಗ್ರೆಸ್‌ ಕಂಡ ಅತ್ಯುತ್ತಮ ವಾಗ್ಮಿ. ಅವರು ಆ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ವಿರುದ್ಧ ಸೋತಿದ್ದರು. ಇಂದಿರಾಗಾಂಧಿ ಹಾಗೂ ಸಂಜಯ್‌ ಗಾಂಧಿ ಅವರಿಗೆ ಸ್ಟೀಫನ್‌ ಅವರು ಸಂಸತ್‌ ನಲ್ಲಿ ಇರಬೇಕು ಎನ್ನುವ ಉದ್ದೇಶವಿತ್ತು. ಈ ಕಾರಣಕ್ಕಾಗಿ ಧರ್ಮಸಿಂಗ್‌ ಅವರಿಂದ ರಾಜೀನಾಮೆ ಕೊಡಿಸಿದ್ದರು.

ಧರ್ಮಸಿಂಗ್‌ 13 ಚುನಾವಣೆಗಳನ್ನು ಎದುರಿಸಿದರು. ಅವುಗಳಲ್ಲಿ ಒಂದು ಬಾರಿ ಕಲಬುರ್ಗಿ ನಗರಸಭೆಯ ಸದಸ್ಯ, ಎಂಟು ಬಾರಿ ಶಾಸಕ, ಎರಡು ಬಾರಿ ಸಂಸತ್‌ ಸದಸ್ಯರಾಗಿದ್ದರು.ಕಳೆದ ಬಾರಿ ಲೋಕಸಭಾ ಚುನಾವಣೆ ಸ್ಪರ್ಧಿಸಿದ್ದಾಗ ‘ಪ್ರಜಾವಾಣಿ’ಗೆ ಸಂದರ್ಶನ ನೀಡುವಾಗ ‘ಮುಂದಿನ ಚುನಾವಣೆ ತನಕ ಬದುಕಿದ್ದರೆ ನನಗೆ 81 ವರ್ಷವಾಗುತ್ತದೆ’ ಎಂದಿದ್ದರು.

ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್‌ ನಿಧನ
ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ (80) ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ ಪ್ರಭಾವತಿ, ಹಿರಿಯ ಪುತ್ರ ವಿಧಾನಪರಿಷತ್ ಸದಸ್ಯ ವಿಜಯ್‌ಸಿಂಗ್, ಕಿರಿಯ ಪುತ್ರ ಶಾಸಕ ಡಾ. ಅಜಯ್‌ಸಿಂಗ್ ಹಾಗೂ ಪುತ್ರಿ ಪ್ರಿಯದರ್ಶಿನಿ ಇದ್ದಾರೆ.

ಬೆಳಿಗ್ಗೆ 10.30 ಕ್ಕೆ ಎದೆ ನೋವು ಕಾಣಿಸಿಕೊಂಡಾಗ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಧರಂಸಿಂಗ್‌ ಚಿಕಿತ್ಸೆಗೆ ಸ್ಪಂದಿಸದೆ 11.30ರಲ್ಲಿ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ. ಮೃತರ ಗೌರವಾರ್ಥ ಸರ್ಕಾರಿ ಕಚೇರಿಗಳು, ಶಾಲಾ– ಕಾಲೇಜುಗಳಿಗೆ ಮಧ್ಯಾಹ್ನದಿಂದ ರಜೆ ಘೋಷಿಸಲಾಯಿತು. ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ  ಎಲ್ಲ  ಶಾಲಾ–ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ಶುಕ್ರವಾರವೂ ರಜೆ ಘೋಷಿಸಲಾಗಿದೆ.

ರಾಜ್ಯಾದ್ಯಂತ ಮೂರು ದಿನಗಳ ಶೋಕವನ್ನು ಆಚರಿಸಲಾಗುವುದು. ಈ  ಅವಧಿಯಲ್ಲಿ ಅಧಿಕೃತ ಸಾರ್ವಜನಿಕ ಸಮಾರಂಭಗಳು, ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ  ಹಾರಿಸಲಾಗುವುದು ಎಂದೂ ಸರ್ಕಾರದ ಪ್ರಕಟಣೆ ತಿಳಿಸಿದೆ.  ಮೃತರ ಗೌರವಾರ್ಥ ರಜೆ ನೀಡಲಾಗಿದೆ. ಬ್ಯಾಂಕು ಮತ್ತು ನ್ಯಾಯಾಲಯಗಳಿಗೆ ರಜೆ  ಇರುವುದಿಲ್ಲ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಡಾ.ಬಿ.ಎಸ್‌.ಮಂಜುನಾಥ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷ ವಿಮಾನದಲ್ಲಿ ಬೀದರ್‌ಗೆ ಪಾರ್ಥಿವ ಶರೀರವನ್ನು ಎಚ್‌.ಎ.ಎಲ್‌ ವಿಮಾನ ನಿಲ್ದಾಣದಿಂದ ಸಂಜೆ ಸುಮಾರು  5.30ಕ್ಕೆ ಕೊಂಡೊಯ್ಯಲಾಯಿತು.  ಅದಕ್ಕೂ ಮುನ್ನ  ಕೆಪಿಸಿಸಿ ಕಚೇರಿ ಬಳಿಯೂ 10 ನಿಮಿಷ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಧರ್ಮಸಿಂಗ್‌ ಅವರ ಹುಟ್ಟೂರು ಜೇವರ್ಗಿ ತಾಲ್ಲೂಕು ನೆಲೋಗಿಯಲ್ಲಿ ಶುಕ್ರವಾರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

ಸುದೇಶ ದೊಡ್ಡಪಾಳ್ಯ/ ಗಣೇಶ ಚಂದನಶಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT