ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್ ಮತ್ತೆ ಮುಖ್ಯಮಂತ್ರಿ

ಬಹುಮತ ಸಾಬೀತು ಸರಳ
Last Updated 27 ಜುಲೈ 2017, 20:27 IST
ಅಕ್ಷರ ಗಾತ್ರ

ಪಟ್ನಾ :  ಬಿಹಾರದ ಮುಖ್ಯಮಂತ್ರಿ ಹುದ್ದೆಗೆ ಬುಧವಾರ ಸಂಜೆ ರಾಜೀನಾಮೆ ನೀಡಿದ್ದ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್‌ ಬಿಜೆಪಿ ಬೆಂಬಲದೊಂದಿಗೆ ಗುರುವಾರ ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್‌ ಜತೆಯಾಗಿ ಮಾಡಿಕೊಂಡಿದ್ದ ಮಹಾಮೈತ್ರಿ ನುಚ್ಚುನೂರಾಗಿದೆ. ಹಾಗಾಗಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ಹೋರಾಟಕ್ಕೆ ಭಾರಿ ಹೊಡೆತ ಬಿದ್ದಿದೆ.

ಜತೆಗೆ ಜೆಡಿಯುನಲ್ಲಿಯೂ ಅತೃಪ್ತಿ ಕಾಣಿಸಿಕೊಂಡಿದೆ. ಎನ್‌ಡಿಎಯಿಂದ ಹೊರನಡೆದು ನಾಲ್ಕು ವರ್ಷಗಳ ಬಳಿಕ ಮತ್ತು ಮಹಾಮೈತ್ರಿ ಕೂಟಕ್ಕೆ ಸೇರಿ ಅಧಿಕಾರಕ್ಕೆ ಬಂದು ಎರಡು ವರ್ಷದೊಳಗೆ ಮತ್ತೆ ಎನ್‌ಡಿಎ ಸೇರಿರುವುದು ಜೆಡಿಯುನ ಒಂದು ವರ್ಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದ ರಾಜ್ಯಸಭಾ ಸದಸ್ಯರಾಗಿರುವ ಕೇರಳದ ವಿರೇಂದ್ರ ಕುಮಾರ್‌ ಮತ್ತು ಬಿಹಾರದ ಅಲಿ ಅನ್ವರ್‌ ಅವರು ನಿತೀಶ್‌  ನಡೆ ವಿರುದ್ಧ ಬಹಿರಂಗವಾಗಿಯೇ ಮಾತನಾಡಿದ್ದಾರೆ.

ರಾಜೀನಾಮೆ ನೀಡಿದ 12 ತಾಸಿನಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ನಿತೀಶ್‌ ಪ್ರಮಾಣವಚನ ಸ್ವೀಕರಿಸಿದರು.ಅವರ ಜತೆಗೆ ಬಿಜೆಪಿ ಮುಖಂಡ ಸುಶೀಲ್‌ ಕುಮಾರ್‌ ಮೋದಿ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರು.

ಮೊದಲು ಮಿತ್ರನಾಗಿದ್ದು ನಂತರ ಶತ್ರುವಾದ ಬಿಜೆಪಿಯ ಜತೆ ಮರಳಿ ಸ್ನೇಹ ಬೆಳೆಸಿದ ನಿತೀಶ್‌ ಅವರ ಚತುರ ರಾಜಕೀಯ ನಡೆಯಿಂದ ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿ ತತ್ತರಿಸಿ ಹೋಗಿದೆ. ಕಾಂಗ್ರೆಸ್ ಜನಪ್ರಿಯತೆ ಕ್ಷೀಣಿಸುತ್ತಿರುವ ಕಾರಣಕ್ಕೆ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ನಿತೀಶ್‌ ಅವರನ್ನು ಬಿಂಬಿಸಬಹುದು ಎಂಬ ವಿರೋಧ ಪಕ್ಷಗಳ ಯೋಚನೆ ಈಗ ಅಪ್ರಸ್ತುತವಾಗಿದೆ.

ಶರದ್–ರಾಹುಲ್ ಭೇಟಿ
ನಿತೀಶ್ ನಿರ್ಧಾರದ ಬಗ್ಗೆ ಅಸಮಾಧಾನಗೊಂಡಿರುವ ಜೆಡಿಯು ಹಿರಿಯ ನಾಯಕ ಶರದ್ ಯಾದವ್ ಅವರು ಎನ್‌ಡಿಎಗೆ ಬಂದಲ್ಲಿ ಕೇಂದ್ರ ಸಂಪುಟದಲ್ಲಿ ಸ್ಥಾನ ಅಥವಾ ರಾಜ್ಯವೊಂದರ ರಾಜ್ಯಪಾಲರ ಸ್ಥಾನ ನೀಡಲಾಗುತ್ತದೆ ಎಂಬ ವದಂತಿ ಇದೆ.  ಈ ವದಂತಿಯ ಮಧ್ಯೆಯೇ ಶರದ್ ಯಾದವ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ನಿತೀಶ್ ನಿರ್ಧಾರದ ಬಗ್ಗೆ ಜೆಡಿಯುನಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ಈ ಭೇಟಿ ಮತ್ತಷ್ಟು ಬಲಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT