ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೋರ್ಟ್‌; ಕಂದಾಯ ಉಪ ವಿಭಾಗಕ್ಕೆ ಆಗ್ರಹ

Last Updated 28 ಜುಲೈ 2017, 6:19 IST
ಅಕ್ಷರ ಗಾತ್ರ

ಚಿತ್ತಾಪುರ: ಸ್ಥಳೀಯ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ಪರಿಗಣಿಸಿ ಚಿತ್ತಾಪುರಕ್ಕೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಒದಗಿಸಬೇಕು. ಘೋಷಣೆಯಾದ ಶಹಾಬಾದ ಮತ್ತು ಕಾಳಗಿ ತಾಲ್ಲೂಕುಗಳನ್ನು ಸೇರಿಸಿ ಚಿತ್ತಾಪುರವನ್ನು ಕಂದಾಯ ಉಪ ವಿಭಾಗವಾಗಿ ಮಾಡಬೇಕು ಎಂದು ಒತ್ತಾಯಿಸಿ ವಕೀಲರು ಗುರುವಾರ ಕೋರ್ಟ್‌ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು.

ಕೋರ್ಟ್‌ ಕಟ್ಟಡ ಉದ್ಘಾಟನೆ ಸಮಯದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಉಪಸ್ಥಿತಿಯಲ್ಲಿ ಕಾನೂನು ಸಚಿವ ಜಯಚಂದ್ರ ಅವರು ಜಿಲ್ಲಾ ನ್ಯಾಯಾಲಯದ ಸೌಲಭ್ಯ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದರು. ಪ್ರಸ್ತುತ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಬೇಕಾದ ಅಗತ್ಯ ಪ್ರಕರಣಗಳು ಕೋರ್ಟಿನಲ್ಲಿವೆ. ಸರ್ಕಾರ ಇದನ್ನು ಪರಿಗಣಿಸಿ ನ್ಯಾಯಾಲಯ ಸ್ಥಾಪನೆಗೆ ಮುಂದಾಗಬೇಕು ಎಂದು ವಕೀಲರು ಆಗ್ರಹಿಸಿದರು.

ರಾಜ್ಯದಲ್ಲಿ ಚಿತ್ತಾಪುರ ಎರಡನೇ ಅತೀ ದೊಡ್ಡ ತಾಲ್ಲೂಕು ಎಂಬ ಹೆಗ್ಗಳಿಕೆ ಇತ್ತು. ತಾಲ್ಲೂಕಿನ ಶಹಾಬಾದ ಮತ್ತು ಕಾಳಗಿಯನ್ನು ಸರ್ಕಾರ ಘೋಷಣೆ ಮಾಡಿದ ಪ್ರಕಾರ ಎರಡು ಹೊಸ ತಾಲ್ಲೂಕು ರಚನೆ ಮಾಡಲಾಗುತ್ತಿದೆ. ಹೊಸ ತಾಲ್ಲೂಕು ಸೇರಿಸಿ ಚಿತ್ತಾಪುರವನ್ನು ಕಂದಾಯ ಉಪ ವಿಭಾಗ ಮಾಡಬೇಕೆಂದು ಒತ್ತಾಯಿಸಿದರು.

ಚಿತ್ತಾಪುರಕ್ಕೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಒದಗಿಸಬೇಕು ಮತ್ತು ಕಂದಾಯ ಉಪ ವಿಭಾಗ ರಚನೆ ಮಾಡಬೇಕು ಎಂದು ಒತ್ತಾಯಿಸಿ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಮಲ್ಲೇಶಾ ತಂಗಾ ಅವರಿಗೆ ಸಲ್ಲಿಸಿದರು.

ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಅವಂಟಿ, ಮಾಜಿ ಅಧ್ಯಕ್ಷ ಎಸ್.ಎನ್‌.ಪಾಟೀಲ್‌, ವಕೀಲರಾದ ಬಿ.ಬಿ.ದೊಡ್ಡಮನಿ, ಎಂ.ಟಿ.ಅರುಣಕರ್‌, ಎಲ್‌.ಎ.ಪಾಟೀಲ್‌ ರಾಮತೀರ್ಥ, ನಾಗರಾಜ ಕಡಬೂರ, ಎಸ್‌.ಟಿ.ಪಾಟೀಲ್‌, ಅಯ್ಯಣ್ಣ ಅವಂಟಿ, ಮಲ್ಲಿಕಾರ್ಜುನ ಹೊನಗುಂಟಾ, ಈಶ್ವರ ಅಳ್ಳೊಳ್ಳಿ, ಬಸವರಾಜ ಸಿಂಪಿ, ಬಸವರಾಜ ಬೆಣ್ಣೂರ, ಸೋಮಶೇಖರ ಕರದಳ್ಳಿ, ಪರಶುರಾಮ, ಸುಜಾತಾ ಇದ್ದರು.

ಸಚಿವರಿಗೆ ಮನವಿ: ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮತ್ತು ಕಂದಾಯ ಉಪ ವಿಭಾಗ ರಚನೆಗೆ ವಕೀಲರು ಚಂದ್ರಶೇಖರ ಅವಂಟಿ ನೇತೃತ್ವದಲ್ಲಿ ಗುರುವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಪ್ರವಾಸೋದ್ಯಮ ಹಾಗೂ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT