ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಗೆ ರಕ್ತದಿಂದ ಬರೆದ ಮನವಿ ಸಲ್ಲಿಕೆ

Last Updated 28 ಜುಲೈ 2017, 6:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಗ್ರಾಮ ಪಂಚಾಯಿತಿ ಸದಸ್ಯ, ಕ್ಲರ್ಕ್‌ ಮತ್ತು ನೆರೆ ಮನೆಯವರು ಸೇರಿಕೊಂಡು ನಮ್ಮ ನಿವೇಶನವನ್ನು ಒತ್ತುವರಿ ಮಾಡಿಕೊಂಡು ದೌರ್ಜನ್ಯ ನಡೆಸುತ್ತಿದ್ದು, ನ್ಯಾಯ ಒದಗಿಸಿಕೊಡಬೇಕು’ ಎಂಬ ರಕ್ತದಲ್ಲಿ ಬರೆದ ಮನವಿ ಪತ್ರವನ್ನು ಗಿರಿಯಾಲ ಗ್ರಾಮದ ನಾಗಣ್ಣವರ ಕುಟುಂಬದ ಸದಸ್ಯರು ಗುರುವಾರ ಮುಖ್ಯಮಂತ್ರಿಗೆ ಸಲ್ಲಿಸಿದರು.

ಹಾವೇರಿಗೆ ತೆರಳಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಗಿರಿಯಾಲದ ಪರಶುರಾಮ ನಾಗಣ್ಣವರ, ಅವರ ಪತ್ನಿ ಉಮಾ ನಾಗಣ್ಣವರ ಮತ್ತು ತಾಯಿ ರುಕ್ಮವ್ವ ನಾಗಣ್ಣವರ ಅವರು, ತಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ಮುಖ್ಯಮಂತ್ರಿ ಬಳಿ ನಿವೇದಿಸಿಕೊಂಡರು.

‘ಗ್ರಾಮ ಪಂಚಾಯಿತಿ ಸದಸ್ಯ ಆನಂದ ಮತ್ತು ಗ್ರಾಮ ಪಂಚಾಯಿತಿ ಕ್ಲರ್ಕ್‌ ಮಂಜುನಾಥ ಮೊರೆ ಎಂಬುವವರು ಆಶ್ರಯ ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆಶ್ರಯ ಮನೆ ಕಟ್ಟುವ ಸಂಬಂಧ ನಮ್ಮ ಹಳೆಯ ಮನೆಯನ್ನು ಕೆಡವಿ, ಹೊಸ ಮನೆ ಕಟ್ಟಲು ಅಡಿಪಾಯ ಹಾಕಿದ್ದೇವೆ. ಆದರೆ, ಒಂದು ವರ್ಷವಾದರೂ ನಮಗೆ ಆಶ್ರಯ ಮನೆ ಅನುಮೋದನೆಯಾಗಿಲ್ಲ. ಇದರಿಂದ ಬೀದಿಪಾಲಾಗಿದ್ದೇವೆ ಎಂದು ಪರಶುರಾಮ ನಾಗಣ್ಣವರ ಆರೋಪಿಸಿದರು.

ನಮ್ಮ ಕುಟುಂಬಕ್ಕೆ ಸೇರಿದ್ದ 30X 40 ಅಳತೆಯ ನಿವೇಶನದಲ್ಲಿ ಅರ್ಧದಷ್ಟು ಜಾಗವನ್ನು ಕ್ಲರ್ಕ್‌ ಅವರ ಸಂಬಂಧಿಕರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ. ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ದೂರಿದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದರು.

ಗದಗ ರೈತರ ಮನವಿ: 2016ರ ಮುಂಗಾರು ಹಂಗಾಮಿನಲ್ಲಿ ಗದಗ ಜಿಲ್ಲೆಯ ಒಂದು ಲಕ್ಷ ರೈತರು ಪ್ರಧಾನಮಂತ್ರಿ ಫಸಲ್‌ ಬಿಮಾ ವಿಮಾ ಯೋಜನೆ ಮಾಡಿಸಿದ್ದು, ಅದರಲ್ಲಿ ಕೇವಲ 14 ಸಾವಿರ ರೈತರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಉಳಿದ ರೈತರಿಗೂ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದರು.

ಬೆಳೆ ವಿಮೆ ಮಾಡಿಸಿದ ರೈತರಿಗೆ ಮೋಸ ಮಾಡಿರುವ ವಿಮಾ ಕಂಪೆನಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡರಾದ ಚನ್ನವೀರ ಹುಣಸಿಕಟ್ಟಿ, ಶಿರಾಜ್‌ ಕಲೆಬಾವಿ, ಶರಣಪ್ಪಗೌಡ ಪವಾಡಗೌಡ, ಗುರುಸ್ವಾಮಿ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT