ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖವಾಡದ ಹಿಂದಿನ ‘ವಿಸ್ಮಯ’

Last Updated 28 ಜುಲೈ 2017, 12:35 IST
ಅಕ್ಷರ ಗಾತ್ರ

ಚಿತ್ರ: ವಿಸ್ಮಯ
ನಿರ್ದೇಶನ: ಅರುಣ್‌ ವೈದ್ಯನಾಥನ್‌
ನಿರ್ಮಾಪಕರು: ಉಮೇಶ್‌, ಅರುಣ್‌ ವೈದ್ಯನಾಥನ್‌, ಜಯರಾಂ
ತಾರಾಬಳಗ: ಅರ್ಜುನ್‌ ಸರ್ಜಾ, ಶ್ರುತಿ ಹರಿಹರನ್‌, ವರಲಕ್ಷ್ಮಿ, ಪ್ರಸನ್ನ, ಸುಹಾಸಿನಿ, ಸುಮನ್‌

ಮಾನವ ತನ್ನ ನಿಜರೂಪ ಮರೆಮಾಚಲು, ಮುಖಚರ್ಯೆ ಬದಲಾಯಿಸಿಕೊಳ್ಳಲು ಬಳಸುವ ಸಾಧನವೇ ‘ಮುಖವಾಡ’. ಮಾನವರ ಸಾಂಸ್ಕೃತಿಕ ಬದುಕಿನಲ್ಲಿಯೂ ಮುಖವಾಡಗಳು ಹಾಸುಹೊಕ್ಕಾಗಿವೆ. ಅತಿಮಾನುಷ ಶಕ್ತಿಗಳ ಸಂಕೇತವಾಗಿಯೂ ಇವುಗಳ ಬಳಕೆ ಇದೆ. ಮುಖವಾಡ ತೆಗೆದಾಗಲಷ್ಟೇ ನಾವು ಮನುಷ್ಯರಾಗಲು ಸಾಧ್ಯ. ಈ ಮುಖವಾಡಗಳನ್ನು ಇಟ್ಟುಕೊಂಡೇ ನಿರ್ದೇಶಕ ಅರುಣ್‌ ವೈದ್ಯನಾಥನ್‌ ‘ವಿಸ್ಮಯ’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಇದು ನಟ ಅರ್ಜುನ್‌ ಸರ್ಜಾ ಅಭಿನಯದ 150ನೇ ಸಿನಿಮಾ. ಅವರ ಆ್ಯಕ್ಷನ್‌ ಇಮೇಜ್‌ ಅನ್ನು ಚೆನ್ನಾಗಿ ಬಲ್ಲ ನಿರ್ದೇಶಕರು ಚಿತ್ರದುದ್ದಕ್ಕೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ, ಅರ್ಜುನ್‌ ಸರ್ಜಾ ಅವರ ಅಭಿನಯ ಪ್ರೇಕ್ಷಕರಿಗೆ ಮೋಡಿ ಮಾಡುತ್ತದೆ. ಈ ಚಿತ್ರಕ್ಕೆ ತಮಿಳಿನಲ್ಲಿ ‘ನಿಬುನನ್‌’ ಎಂದು ಹೆಸರಿಡಲಾಗಿದೆ.

ನಿಗೂಢ ಕೊಲೆಗಳ ರಹಸ್ಯ ಭೇದಿಸುವಲ್ಲಿ ಚಾಣಾಕ್ಷನಾದ ಪೊಲೀಸ್‌ ಅಧಿಕಾರಿಯೇ ಸೈಕೋ ಕಿಲ್ಲರ್‌ನ ಕೊನೆಯ ಬೇಟೆ. ಇದಕ್ಕಾಗಿ ಕೊಲೆಗಾರ ವಿಭಿನ್ನ ತಂತ್ರ ಹೆಣೆಯುತ್ತಾನೆ. ಅಂತಿಮಘಟ್ಟದವರೆಗೆ ಯಾವುದೇ ಸಂದರ್ಭದಲ್ಲೂ ನೋಡುಗರು ಸಿನಿಮಾದಲ್ಲಿ ಮುಳುಗಿ ಮೈಮರೆದಂತೆ ಒಂದು ಅಂತರವಿಟ್ಟುಕೊಂಡೇ ಕಥೆ ಹೊಸೆಯಲಾಗಿದೆ. ಸಿನಿಮಾದ ನಿರೂಪಣಾ ಶೈಲಿಗಾಗಿ ನಿರ್ದೇಶಕರು ಅಭಿನಂದನಾರ್ಹರು.

ಅಪರಾಧ ತನಿಖಾ ವಿಭಾಗದ ದಕ್ಷ ಪೊಲೀಸ್‌ ಅಧಿಕಾರಿ, ಅವನ ಕುಟುಂಬ, ಆತನಿಗೆ ಕಾಡುವ ಪಾರ್ಕಿನ್‌ಸನ್‌ ಕಾಯಿಲೆ, ಮತ್ತೊಂದೆಡೆ ತನ್ನ ಚಿಕ್ಕಪ್ಪನ ಕುಟುಂಬದ ದಾರುಣ ಸಾವಿನಿಂದ ವಿಚಲಿತನಾಗಿ ಸೇಡು ತೀರಿಸಿಕೊಳ್ಳಲು ಮುಂದಾಗುವ ಅಣ್ಣನ ಮಗ– ಇವುಗಳ ಸುತ್ತಲೇ ಸಿನಿಮಾ ಸುತ್ತುತ್ತದೆ. ಪೊಲೀಸ್‌ ಅಧಿಕಾರಿ ಸಂಕಷ್ಟಕ್ಕೆ ಸಿಲುಕಿದಾಗ ಆತನ ಕುಟುಂಬ ಎದುರಿಸುವ ತಳಮಳಗಳ ಆಚೆಯೂ ಹಲವು ಸಂಗತಿಗಳನ್ನು ತೋರಿಸುತ್ತದೆ.
ತಾನು ಕೈಗೆತ್ತಿಕೊಂಡ ತನಿಖೆ ಪತ್ತೆಹಚ್ಚುವಲ್ಲಿ ರಂಜಿತ್‌ ಕಾಳಿದಾಸ್‌(ಅರ್ಜುನ್ ಸರ್ಜಾ) ನಿಷ್ಣಾತ. ಆತನ ತನಿಖಾ ಪ್ರಕರಣಗಳ ಶತಕದ ಸಂಭ್ರಮಕ್ಕೆ ಒಂದು ಪ್ರಕರಣವಷ್ಟೇ ಬಾಕಿ. ಈ ನಡುವೆಯೇ ಸಮಾಜ ಸೇವಕ, ಪ್ರಸಿದ್ಧ ವೈದ್ಯೆ, ವಕೀಲರೊಬ್ಬರ ನಿಗೂಢ ಕೊಲೆಯಾಗುತ್ತದೆ. ಅಮಾನುಷವಾಗಿ ಹತ್ಯೆಗೈದ ಬಳಿಕ ಕೊಲೆಗಾರ ಅವರ ಜನ್ಮರಾಶಿಗೆ ಅನುಗುಣವಾಗಿ ಟಗರು, ಗೂಳಿ, ಸಿಂಹದ ಮುಖವಾಡ ಹಾಕುತ್ತಾನೆ.

ಕೊಲೆಗಾರನದು ಚೇಳಿನ ಮುಖವಾಡ. ಅವನಿಗೆ ಚಿಕ್ಕಪ್ಪ–ಚಿಕ್ಕಮ್ಮ ಅವರೇ ಆಸರೆ. ಆದರೆ, ತನ್ನ ಮಗಳು ಮನೆಗೆಲಸದವನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧದಿಂದ ನೊಂದ ಚಿಕ್ಕಪ್ಪ ಆತನನ್ನು ಕೊಲೆ ಮಾಡುತ್ತಾನೆ. ಇನ್ನೊಂದೆಡೆ ಪುತ್ರಿಯ ಆತ್ಮಹತ್ಯೆ. ಈ ಪ್ರಕರಣ ತನಿಖೆಯ ಹೊಣೆಯೂ ರಂಜಿತ್‌ ಹೆಗಲಿಗೇರುತ್ತದೆ. ಶ್ರೀಮಂತನಾದ ಕೊಲೆಗಾರನ ಚಿಕ್ಕಪ್ಪ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಯಶಸ್ವಿಯಾಗುತ್ತಾನೆ. ಕೊನೆಗೊಂದು ದಿನ ಆ ದಂಪತಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ತನ್ನ ಕುಟುಂಬದ ಸಾವಿನಿಂದ ನೊಂದ ಕ್ರಿಸ್ಟೋಫರ್‌(ಜೆ. ಕಾರ್ತಿಕ್‌) ಮಾನಸಿಕ ರೋಗಿಯಾಗುತ್ತಾನೆ. ಆತ ಸೇಡು ತೀರಿಸಿಕೊಳ್ಳಲು ಹೊರಟಾಗ ಸರಣಿ ಕೊಲೆ ನಡೆಯುತ್ತವೆ. ಮುಖವಾಡ ಧರಿಸುತ್ತಲೇ ಪೊಲೀಸ್‌ ಅಧಿಕಾರಿಗಳ ಬುದ್ಧಿಶಕ್ತಿಗೆ ಸವಾಲು ಎಸೆಯುತ್ತಾನೆ. ಸೈಕೋ ಕಿಲ್ಲರ್‌ ಪಾತ್ರದಲ್ಲಿ ಕಾರ್ತಿಕ್‌ ಅವರದು ಅಚ್ಚುಕಟ್ಟಾದ ಅಭಿನಯ. ಗೃಹಿಣಿಯಾಗಿ ಶ್ರುತಿ ಹರಿಹರನ್‌ ಇಷ್ಟವಾಗುತ್ತಾರೆ. ಸುಹಾಸಿನಿ, ಸುಮನ್‌, ಪ್ರಸನ್ನ, ವರಲಕ್ಷ್ಮಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅರವಿಂದ್‌ ಕೃಷ್ಣ ಅವರ ಛಾಯಾಗ್ರಹಣ ಪ್ರತಿ ಫ್ರೇಮ್‌ನಲ್ಲೂ ಎದ್ದುಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT