ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ವಸ್ತುವಿನ ಸಾಧಾರಣ ಪ್ರಸ್ತುತಿ

Last Updated 28 ಜುಲೈ 2017, 12:39 IST
ಅಕ್ಷರ ಗಾತ್ರ

ಚಿತ್ರ: ಆ ಎರಡು ವರ್ಷಗಳು

ನಿರ್ಮಾಪಕ: ರಿಷಿಕಾ ಮಧುಸೂದನ್
ನಿರ್ದೇಶಕ: ಮಧುಸೂದನ್
ತಾರಾಗಣ: ರೇಣುಕ್‌ ಮಠದ, ಅಮಿತಾ ಕುಲಾಳ್‌, ನೀರ್ನಳ್ಳಿ ರಾಮಕೃಷ್ಣ, ತ್ರಿವೇಣಿ

ಜುಳು ಜುಳು ಹರಿಯುವ ಪ್ರೇಮವೆಂಬ ನದಿ ಮತ್ತು ದಡದಲ್ಲಿ ಬಿಸಿಲಿಗೆ ಕುದ್ದು ಸುಡುವ ಬದುಕೆಂಬ ಮರಳಿನ ದಡ ಎರಡನ್ನೂ ಸೇರಿಸಿ ‘ಎರಡು ವರ್ಷ’ಗಳ ಕಾಲದ ಬೊಗಸೆಯಲ್ಲಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮಧುಸೂದನ್‌. ಆದರೆ ಅದನ್ನು ಹಾಗೆಯೇ ಪ್ರೇಕ್ಷಕನ ಹಸ್ತಕ್ಕೆ ದಾಟಿಸುವಷ್ಟರಲ್ಲಿ ತಂಪು ನೀರೆಲ್ಲವೂ ಸೋರಿ ಹೋಗಿ ಸುಡುಸುಡು ಮರಳಷ್ಟೇ ಉಳಿದಿದೆ.

ಹರೆಯದ ಬಿಸಿರಕ್ತದ ಪ್ರೇಮ ವಾಸ್ತವದ ಬಿಸಿಲಿಗೆ ಬಿಸುಪು ಕಳೆದುಕೊಂಡು ಸೊರಗುವ ಹಳೇ ಕಥಾ ಸೂತ್ರವನ್ನೇ ಹೊಸ ರೀತಿಯಲ್ಲಿ ಹೇಳುವ ಅವರ ಪ್ರಯತ್ನವನ್ನು ಮೆಚ್ಚಿಕೊಳ್ಳಬೇಕು. ಸಂಬಂಧಗಳ ಸಂಘರ್ಷಕ್ಕೆ ‘ಜರ್ನಿ’ಯ ಸೂತ್ರವನ್ನೂ ಜೋಡಿಸಿದ್ದಾರೆ. ಆದರೆ ತೆರೆಯ ಮೇಲಿನ ಭೌತಿಕ ಚಲನಶೀಲತೆ ಕಥೆಯಲ್ಲಿ ಕಾಣುವುದಿಲ್ಲ. ವಸ್ತುವಿನ ಆಯ್ಕೆಯಲ್ಲಿ ತೋರಿದ ಸೂಕ್ಷ್ಮತೆ ತೆರೆಯ ಮೇಲಿನ ಪ್ರಸ್ತುತಿಯಲ್ಲಿ ಕಾಣುವುದಿಲ್ಲ. ಸಡಿಲವಾದ ಚಿತ್ರಕಥೆ, ದುರ್ಬಲ ಪಾತ್ರಪೋಷಣೆಯಿಂದ ವಸ್ತುವಿನಲ್ಲಿನ ತಾಜಾತನವೂ ಹಳಸಿದೆ. ಸಂಭಾಷಣೆಯಲ್ಲಿನ ಕೃತಕತೆಯೂ ಚಿತ್ರದ ನಕಾರಾತ್ಮಕ ಅಂಶಗಳಲ್ಲೊಂದು.
ಕೊನೆಯ ಬಾರಿ ಭೇಟಿಯಾಗಲು ಬಂದ ತನ್ನ ಪ್ರೇಯಸಿಗೆ ಹುಡುಗ, ತಾವು ಪ್ರೇಮಿಗಳಾಗಿದ್ದ ಕಳೆದ ಎರಡು ವರ್ಷಗಳ ನೆನಪುಗಳನ್ನು ನಿರೂಪಿಸುತ್ತಾ ಹೋಗುತ್ತಾನೆ.

ವರ್ಷಾ ಮತ್ತು ವರುಣ್‌ ಅಕ್ಕ ಪಕ್ಕದ ಮನೆಯವರು. ಮೊದಲ ನೋಟಕ್ಕೆ ಅವರ ಮಧ್ಯೆ ಪ್ರೀತಿ ಅಂಕುರಿಸುತ್ತದೆ. ಅದು ಯಾವುದೇ ಎಗ್ಗಿಲ್ಲದೇ ಮುಂದುವರಿದು ದೇಹಸಂಪರ್ಕಕ್ಕೂ ನೆಪವಾಗುತ್ತದೆ.
ವರ್ಷಾ ಸ್ವಾತಂತ್ರ್ಯವನ್ನು ಬಯಸುವ ಹುಡುಗಿ, ವರುಣ್‌ ಜವಾಬ್ದಾರಿಗಳ ಸಂಕೋಲೆಗಳಲ್ಲಿ ಬಂಧಿತ ಹುಡುಗ. ಅವಳಿಗೆ ರೆಕ್ಕೆ ಬಿಚ್ಚಿ ಹಾರುವ ಬಯಕೆ. ಇವನಿಗೆ ಗೂಡು ಕಟ್ಟುವ ಆಲೋಚನೆ. ಅವಳು ಈ ಕ್ಷಣದಲ್ಲಿ ಬದುಕುವವಳು. ಅವನು ನಾಳೆಗಳನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಚಿಂತಿಸುವವನು. ಬಿಸಿರಕ್ತದ ಹುಮ್ಮಸ್ಸಿನಲ್ಲಿ ಹಸಿಬಿಸಿ ಪ್ರಣಯದ ಪ್ರೇಮವೇ ಮುಖ್ಯವಾಗಿ ಉಳಿದೆಲ್ಲವೂ ಮರೆಯಾಗುತ್ತದೆ. ಅಮಲಿನಲ್ಲಿ ಮನೆಯವರ ವಿರೋಧ ಕಟ್ಟಿಕೊಂಡು ಓಡಿಹೋಗುತ್ತಾರೆ.
ದಾರಿಯಲ್ಲಿ ರಾಮು – ಪಾರು (ನೀರ್ನಳ್ಳಿ ರಾಮಕೃಷ್ಣ ಮತ್ತು ತ್ರಿವೇಣಿ) ಇಳಿವಯಸ್ಸಿನ ಜೋಡಿಯೂ ಅವರ ಜತೆಯಾಗುತ್ತಾರೆ. ಈ ಪಯಣದಲ್ಲಿ ವರ್ಷಾ ಮತ್ತು ವರುಣ್‌ ತಮ್ಮ ನಡುವಿನ ವೈರುದ್ಧ್ಯಗಳನ್ನು ಕಂಡುಕೊಳ್ಳುತ್ತಾರೆ.

ದ್ವಿತೀಯಾರ್ಧದಲ್ಲಿ ಬರುವ ರಾಮಕೃಷ್ಣ ಮತ್ತು ತ್ರಿವೇಣಿ ಜೋಡಿಯೇ ಹೆಚ್ಚು ಇಷ್ಟವಾಗುತ್ತಾರೆ. ಅವರ ಪಾತ್ರಪೋಷಣೆ ಇನ್ನಷ್ಟು ಗಟ್ಟಿಗೊಳಿಸಿ, ‘ಜರ್ನಿ’ಯನ್ನು ಒಂದು ರೂಪಕವನ್ನಾಗಿಸಲು ಸಾಧ್ಯವಾಗಿದ್ದರೆ ಇಡೀ ಸಿನಿಮಾ ಮತ್ತೊಂದು ಮಜಲಿಗೆ ಏರಲು ಸಾಧ್ಯವಿತ್ತು. ಆದರೆ ಆ ಸಾಧ್ಯತೆಯನ್ನು ನಿರ್ದೇಶಕರು ಕೈಚೆಲ್ಲಿದ್ದಾರೆ.

ರೇಣುಕ್‌ ಮತ್ತು ಅಮಿತಾ ಇಬ್ಬರೂ ಅಭಿನಯದಲ್ಲಿ ಇನ್ನೂ ಎಳಸು. ಆದರೆ ಅಮಿತಾ ಅವರ ಎಳಸುತನವೇ ಅವರ ಪಾತ್ರವನ್ನು ಹೆಚ್ಚು ಸಹನೀಯಗೊಳಿಸಿದೆ. ಆದರೆ ಅವರ ಶರೀರ ಭಾಷೆಗೂ ಶಾರೀರಕ್ಕೂ ತಾಳಮೇಳವಿಲ್ಲದಿರುವುದು ಹಲವು ಕಡೆಗಳಲ್ಲಿ ತಮಾಷೆಗೆ ಕಾರಣವಾಗುತ್ತದೆ. ಕೆಲವು ದೃಶ್ಯಗಳಲ್ಲಿ ಅವರ ಮಾತು ರಾಹುಲ್ ದ್ರಾವಿಡ್‌ ಅವರ ಧೂಮಪಾನ ವಿರುದ್ಧ ಜಾಗೃತಿಯ ಜಾಹೀರಾತನ್ನು ನೆನಪಿಸುತ್ತದೆ.
ರವಿಕಿಶೋರ್‌ ಕ್ಯಾಮೆರಾದಲ್ಲಿ ವಿಶೇಷ ಕೈಚಳಕವೇನೂ ಇಲ್ಲ. ಅನೂಪ್‌ ಸೀಳಿನ್‌ ಸಂಯೋಜನೆಯ ಒಂದು ಹಾಡು ಗುನುಗಿಕೊಳ್ಳುವಂತಿದೆ. ಆದರೆ ಹಿನ್ನೆಲೆ ಸಂಗೀತದಲ್ಲಿ ಮಾತ್ರ ನಿರಾಸೆ ಹುಟ್ಟಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT