ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಸೂತ್ರಗಳು ಸಮಂಜಸವೇ?

Last Updated 28 ಜುಲೈ 2017, 19:30 IST
ಅಕ್ಷರ ಗಾತ್ರ

ಓಹ್! ಇವಳು ಈ ಕಾಲೇಜಾ, ಹಾಗಾದ್ರೆ ಇವಳು ತುಂಬಾ ಪಾಶ್ ಬಿಡು. ಅವಳು ಬುಲೆಟ್ ಓಡಿಸ್ತಾಳ? ಹಾಗಾದ್ರೆ ಅವಳ ಕ್ಯಾರೆಕ್ಟರ್ ನಮಗ್ಗೊತ್ತಿಲ್ವಾ? - ಹೀಗೆ ಯಾರ ಬಗ್ಗೆ ಬೇಕಾದರೂ ಕ್ಷಣಮಾತ್ರದಲ್ಲಿ ನಿರ್ಧಾರ ಕೈಗೊಳ್ಳುವವರೇ ಹೆಚ್ಚು. ಅದರಲ್ಲೂ ಹೆಣ್ಣುಮಕ್ಕಳ ಬಗ್ಗೆ ಇಂತಹ ತೀರ್ಮಾನಗಳಿಗೆ ಬರುವುದಕ್ಕೆ ಮುಂಚೆ ಸ್ವಲ್ಪ ಕೂಡ ಯೋಚಿಸುವುದೇ ಇಲ್ಲ ಬಹಳಷ್ಟು ಜನ. ಇದನ್ನೇ ಇಂಗ್ಲಿಷಿನಲ್ಲಿ 'ಜಂಪಿಂಗ್ ಟು ಕನ್‌ಕ್ಲೂಷನ್ಸ್' ಎನ್ನುವುದು. ಒಬ್ಬ ಮನುಷ್ಯನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಇಡೀ ಜೀವಮಾನವೇ ಸಾಲದು; ಇನ್ನು, ಕೆಲವೇ ಕ್ಷಣಗಳಲ್ಲಿ ‘ಇದಮಿತ್ಥಂ’ ಎಂದು ಯಾರದೋ ಬಗ್ಗೆ ವ್ಯಾಖ್ಯೆ ನೀಡುವುದು ಎಷ್ಟರ ಮಟ್ಟಿಗೆ ಸರಿ? ಇದು ಒಂದು ಬಗೆಯ ‘ಸ್ಟೀರಿಯೋಟೈಪಿಂಗ್’ ಕೂಡ ಹೌದು. ಇದೇನು? ಮ್ಯೂಸಿಕ್ ಸ್ಟೀರಿಯೋ? ಟೈಪಿಂಗ್ ಮಶೀನ್ ಅಂದಿರಾ?

ಯಾವುದನ್ನಾದರೂ, ಅಥವಾ ಯಾರನ್ನಾದರೂ ಒಂದು ಸಿದ್ಧಸೂತ್ರದ ಆಧಾರದ ಮೇಲೆ ‘ಇದು/ಇವರು ಹೀಗ್ಹೀಗೇನೇ’ ಎಂದು ನಿರ್ಧರಿಸಿಬಿಡುವುದನ್ನು ‘ಸ್ಟೀರಿಯೋಟೈಪಿಂಗ್’ ಎನ್ನಬಹುದು; ಉದಾಹರಣೆಗೆ, ಹಳೆಯ ಕಾಲದವರೆಂದರೆ ಹೊಸದಕ್ಕೆ ಒಗ್ಗಿಕೊಳ್ಳದವರು ಅಂತಲೋ, ಹೊಸ ತಲೆಮಾರಿನವರು ಸಂಸ್ಕೃತಿಗೆ ಬೆಲೆ ನೀಡದವರು ಅಂತಲೋ ನಿರ್ಧರಿಸಿಬಿಡುವುದು. ಅರೆ! ಜನರ ಬಗ್ಗೆ ಅರಿಯುವುದೆಂದರೆ ಜನರಲ್ ನಾಲೆಡ್ಜ್ ಪರೀಕ್ಷೇನೆ? ಈ ದೇಶದ ರಾಜಧಾನಿ ಈ ನಗರವೇ ಎಂದು ಉರುಹೊಡೆದು ಪುಸ್ತಕದಿಂದ ಮಸ್ತಿಷ್ಕಕ್ಕೆ ಏರಿಸಿಕೊಂಡಂತಲ್ಲ ಜನ-ಜಗತ್ತು. ಒಬ್ಬರ ಹಾಗೆ ಮತ್ತೊಬ್ಬರಿರುವುದಿಲ್ಲ. ಒಂದು ಅಗಳನ್ನು ಹಿಚುಕಿ ನೋಡಿದರೆ ಪಾತ್ರೆಯಲ್ಲಿರುವ ಒಟ್ಟು ಅನ್ನ ಬೆಂದಿದೆಯೋ ಇಲ್ಲವೋ ತಿಳಿಯಬಹುದು. ನೆರೆಮನೆಯ ಅಜ್ಜಿ ಮೂಢನಂಬಿಕೆಗಳ ದಾಸರಾಗಿದ್ದರೆ ನಮ್ಮ ಅಜ್ಜಿಯೂ ಹಾಗೆಯೇ ಇರಬೇಕೆಂದೇನೂ ಇಲ್ಲವಲ್ಲ. ಹಾಗೆಯೇ ಹೆಣ್ಣು ಸುಂದರಿಯೆನಿಸಿಕೊಳ್ಳಲು ತೆಳ್ಳಗೆ, ಬೆಳ್ಳಗೆ ಇರಬೇಕೆಂದು ಶಾಸನ ಬರೆದವರು ಯಾರು? ಅತ್ತೆ–ಸೊಸೆ ಅನ್ಯೋನ್ಯವಾಗಿದ್ದಾರೆ ಎಂದರೆ ಅದು ಜಗತ್ತಿನ ಎಂಟನೆಯ ಅದ್ಭುತ ಎಂಬಂತೆ ಉದ್ಗರಿಸುವುದು ಯಾಕೆ? ಇದನ್ನೇ ಸಿದ್ಧಸೂತ್ರದಿಂದ ಸಮಾಜದ ಉಸಿರುಗಟ್ಟಿಸುವುದು ಎನ್ನುವುದು. ಸಾಮಾನ್ಯವಾಗಿ ಎಲ್ಲರೂ ತಿಳಿದೋ ತಿಳಿಯದೆಯೋ ಈ ಪ್ರಕ್ರಿಯೆಯ, ಈ ವಿಷವರ್ತುಲದ ಒಂದು ಭಾಗವೇ ಆಗಿರುತ್ತೇವೆ. ಆದರೆ ಸ್ವಪ್ರಯತ್ನದಿಂದಷ್ಟೇ ಇದರಿಂದ ದೂರ ಉಳಿಯಬಹುದಾಗಿದೆ. ಅದು ಸಾಧ್ಯವೂ, ಸಾಧುವೂ ಹೌದು.

ಸಿದ್ಧಸೂತ್ರಗಳ ಆಧಾರದ ಮೇಲೆ ಮಾತಾಡುವ ಮನೆಯ ಹಿರಿಯರು, ತಯಾರಾಗುವ ಸಿನೆಮಾಗಳು, ಪ್ರಕಟವಾಗುವ ಕಾದಂಬರಿಗಳು ಇತ್ಯಾದಿ ಜನರ, ಅದರಲ್ಲೂ, ಹೆಣ್ಣುಮಕ್ಕಳ ದಿಕ್ಕು ತಪ್ಪಿಸುತ್ತಿವೆ ಮತ್ತು ಪೇಚಿಗೆ ಸಿಲುಕಿಸುತ್ತಿವೆ. ತಾವು ಯಾರೆಂದು ನಿಜವಾಗಿ ತಾವೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಂತೆ, ಸಮಾಜದ 'ಸಿದ್ಧಸೂತ್ರಿಗಳು' ನಕ್ಷತ್ರಿಕರಂತೆ ಹೆಣ್ಣುಮಕ್ಕಳ ಬೆನ್ನು ಬಿದ್ದಿದ್ದಾರೆ. ಹೀರೋ ಎಂದರೆ ಎಷ್ಟು ಬೇಕಾದರೂ ಖರ್ಚು ಮಾಡಬಲ್ಲ ಯುವಕ, ಮತ್ತು ಹೀರೋಯಿನ್ ಅವನ ವಾಲೆಟ್ ಖಾಲಿ ಮಾಡಿ, ಇಡೀ ಅಂಗಡಿಯನ್ನೇ ಕೊಂಡು ಬ್ಯಾಗ್ ಅವನ ಕೈಗಿರಿಸಿ ಮುನ್ನಡೆವ ಚತುರೆ ಎಂಬಂತೆ, ದಶಕಗಳಿಂದ ಬಿಂಬಿಸಲಾಗುತ್ತಿದೆ. ಹೆಣ್ಣಿನ ಆಪ್ತ ಸ್ನೇಹಿತೆ ಕನ್ನಡಿ; ಅದರ ಮುಂದೆ ಗಂಟೆಗಟ್ಟಲೆ ನಿಲ್ಲದೆ, ಮಣಭಾರದ ಮೇಕಪ್‌ನಲ್ಲಿ ಮುಳುಗದೇ ಇದ್ದರೆ ಅವಳು ಹೆಣ್ಣಲ್ಲವೇ ಅಲ್ಲ ಎಂಬಂತೆ; ಹೀಲ್ಸ್ ಹಾಕದ, ಮೂರು ಹೊತ್ತೂ ಶಾಪಿಂಗ್ ಶಾಪಿಂಗ್ ಎಂದು ಜಪಿಸದ, ನೈಲ್ ಪಾಲಿಶ್ ಲಿಪ್‌ಸ್ಟಿಕ್ ಅನ್ನೇ ಉಸಿರಾಗಿಸಿಕೊಳ್ಳದ ಹೆಣ್ಣು ಅನ್ಯಗ್ರಹದ ಜೀವಿ ಎಂಬಂತೆ – ಇಂದಿನ ಸಮಾಜ ಚಿತ್ರಿಸುತ್ತಿರುವುದು ಆತಂಕಕಾರಿ. ಏಕೆಂದರೆ ಸಾಮಾನ್ಯೀಕರಣ ಸತ್ಯಕ್ಕೆ ದೂರವಾಗಿರುವುದನ್ನು ನಾವು ಹಲವು ಬಾರಿ ಅನುಭವಿಸಿರುತ್ತೇವೆ. ಸಾಮಾನ್ಯೀಕರಣದ ಭರಾಟೆಯಲ್ಲಿ ಪ್ರಾಣ ತಿನ್ನುವ ಹೆಂಡತಿ, ಕ್ರೂರಿ ಅತ್ತೆ, ರಾಕ್ಷಸಿ ಸೊಸೆ, ದೇವತೆಯಂತಹ ತಂಗಿ, ಅಪ್ಸರೆಯಂತಹ ಪ್ರೇಯಸಿ ಎಂಬ ಚಿತ್ರಣಗಳನ್ನು ನೀಡುವ ವಾಟ್ಸ್ಯಾಪ್ ಸಂದೇಶಗಳು, ಫೇಸ್ಬುಕ್ ಪೋಸ್ಟ್‌ಗಳು ಹೆಣ್ಣುಮಕ್ಕಳನ್ನು ಕುಗ್ಗಿಸುತ್ತವೆ ಮತ್ತು ಗಂಡುಮಕ್ಕಳನ್ನು ದಾರಿತಪ್ಪಿಸುತ್ತವೆ. ಹೆಣ್ಣೆಂದರೆ ಹೀಗೆ ‘ಹೀಗೇ’ ಇರಬೇಕು ಎಂಬ ಸಿದ್ಧಸೂತ್ರಿಗಳು ಒಂದು ಬಗೆಯ ತೀವ್ರವಾದಿಗಳಾದರೆ, ಹೆಣ್ಣಿನ ಮೇಲಿನ ದೌರ್ಜನ್ಯ ಖಂಡಿಸುತ್ತೇನೆ ಎಂದು ಸುಳ್ಳು ‘ಸುಳ್ಳೇ’ ಸ್ತ್ರೀವಾದಿ ಎಂಬ ಹಣೆಪತ್ತಿಗಾಗಿ ಹೊಡೆದಾಡುವ ತೀವ್ರವಾದಿಗಳು ಇನ್ನೊಂದೆಡೆ; ಇವರ ಮಧ್ಯೆ, ನಿಜಾರ್ಥದಲ್ಲಿ ಸ್ತ್ರೀಯರನ್ನು ಮನುಷ್ಯರನ್ನಾಗಿ, ಪ್ರತಿ ಸ್ತ್ರೀಯನ್ನು ಅವಳಾಗಿ ಅವಳ ಅನನ್ಯತೆಯೊಡನೆ ನೋಡುವವರು, ಅರ್ಥೈಸಿಕೊಳ್ಳುವವರು ಕೆಲವರೇ.

ಅನಿಷ್ಟಕ್ಕೆಲ್ಲಾ ಶನೈಶ್ಚರನೇ ಕಾರಣ ಎಂಬಂತೆ ಎಲ್ಲದಕ್ಕೂ ಪುರುಷರನ್ನೇ ದೂಷಿಸುವುದೂ ಸಲ್ಲ; ಖಂಡಿತವಾಗಿಯೂ ಲಾಗಾಯ್ತಿನಿಂದ ಬಂದ ಪುರುಷಪ್ರಧಾನ ಸಮಾಜದ ಕಟ್ಟುಪಾಡುಗಳ ಫಲವಾಗಿ, ಪುರುಷರು ಹೆಣ್ಣುಮಕ್ಕಳನ್ನು ಸಿದ್ಧಸೂತ್ರಕ್ಕೆ ಒಳಪಡಿಸುವುದುಂಟು; ಅವರಷ್ಟೇ ಹೆಣ್ಣುಮಕ್ಕಳೂ ಸಹ ಇತರ ಹೆಣ್ಣುಮಕ್ಕಳ ಬಗ್ಗೆ ಇಂತಹ ಧೋರಣೆ ತಾಳುವುದೂ ಇದ್ದೇ ಇದೆ. ಇದಕ್ಕೆಲ್ಲ ಬಹಳ ಸುಲಭವಾಗಿ ಉತ್ತರ ಕಂಡುಕೊಳ್ಳಬಹುದಾಗಿದೆ. ಹೆಣ್ಣುಮಕ್ಕಳಾಗಲೀ, ಅಥವಾ ಯಾವುದೇ ವಯಸ್ಸಿನ ಯಾವುದೇ ಲಿಂಗದ ವ್ಯಕ್ತಿಯಾಗಿರಲೀ, ಅವರ ಬಗ್ಗೆ ಸರಿಯಾಗಿ ಅರಿತುಕೊಳ್ಳಲು ಪ್ರಯತ್ನಿಸೋಣವೇ ಹೊರತು ಅವರ ಒಂದು ನಡೆ-ನುಡಿ, ಹಾವ-ಭಾವ, ದಿರಿಸು, ಮಂತಾದವುಗಳ ಆಧಾರದ ಮೇಲೆ ಅವರಿಗೆ ಹಣೆಪಟ್ಟಿ ಅಂಟಿಸೋದು ಖಂಡಿತ ಅನಾವಶ್ಯಕ ಮತ್ತು ಅಪಾಯಕಾರಿ. ನಾವು ನಮ್ಮ ಅಂತರಂಗವನ್ನು ಅರಿಯುತ್ತಾ, ಜೀವನದ ಮೂಲ ಮೌಲ್ಯಗಳನ್ನೂ ಅಳವಡಿಸಿಕೊಂಡು ಮನುಷ್ಯರಾಗಿ ಬಾಳಿದರೆ ಅದಕ್ಕಿಂತಲೂ ಉಪಕಾರವನ್ನು ಈ ಸಮಾಜಕ್ಕೆ  ನಾವು ಮತ್ತೇನು ಮಾಡಬಹುದು? ಪ್ರತಿ ಜೀವಿಯೂ ಅನನ್ಯ ಎಂಬುದನ್ನು ಮನದಟ್ಟು ಮಾಡಿಕೊಂಡು, ಒಬ್ಬರನ್ನೊಬ್ಬರು ಗೌರವಿಸುವುದನ್ನು ಕಲಿತರೆ ಸ್ವಸ್ಥ ಸಮಾಜಕ್ಕೆ ಬುನಾದಿ ಹಾಕಿದಂತೆ.

**

ಅನಿಷ್ಟಕ್ಕೆಲ್ಲಾ ಶನೈಶ್ಚರನೇ ಕಾರಣ ಎಂಬಂತೆ ಎಲ್ಲದಕ್ಕೂ ಪುರುಷರನ್ನೇ ದೂಷಿಸುವುದೂ ಸಲ್ಲ; ಖಂಡಿತವಾಗಿಯೂ ಲಾಗಾಯ್ತಿನಿಂದ ಬಂದ ಪುರುಷಪ್ರಧಾನ ಸಮಾಜದ ಕಟ್ಟುಪಾಡುಗಳ ಫಲವಾಗಿ, ಪುರುಷರು ಹೆಣ್ಣುಮಕ್ಕಳನ್ನು ಸಿದ್ಧಸೂತ್ರಕ್ಕೆ ಒಳಪಡಿಸುವುದುಂಟು; ಅವರಷ್ಟೇ ಹೆಣ್ಣುಮಕ್ಕಳೂ ಸಹ ಇತರ ಹೆಣ್ಣುಮಕ್ಕಳ ಬಗ್ಗೆ ಇಂತಹ ಧೋರಣೆ ತಾಳುವುದೂ ಇದ್ದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT