ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಸಾರಕ್ಕೆ ಔಷಧಿಯೇ ಬೇಕಿಲ್ಲ!

Last Updated 28 ಜುಲೈ 2017, 19:30 IST
ಅಕ್ಷರ ಗಾತ್ರ

ಮಕ್ಕಳನ್ನು ಕಾಡುವ ಸಾಮಾನ್ಯ ಕಾಯಿಲೆ ಅತಿಸಾರ. ಒಂದು ಅಂದಾಜಿನ ಪ್ರಕಾರ ಅತಿಸಾರದಿಂದ ಸುಮಾರು 40 ಲಕ್ಷ ಮಕ್ಕಳು ಜಗತ್ತಿನಾದ್ಯಂತ ಸಾವನ್ನಪ್ಪುತ್ತಾರೆ. ಭಾರತದಲ್ಲೇ ಸುಮಾರು  10–15 ಲಕ್ಷ ಮಕ್ಕಳು ಅತಿಸಾರಕ್ಕೆ ಬಲಿಯಾಗುತ್ತಿದ್ದಾರೆ. ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ಸಮಸ್ಯೆ ಹೆಚ್ಚು. ನಮ್ಮ ದೇಶದಲ್ಲಿ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ ಶೇ.14ರಷ್ಟು. ಮಕ್ಕಳ ಸಾವಿಗೆ ಪ್ರಬಲ ಹಾಗೂ ಪ್ರಥಮ ಸ್ಥಾನದಲ್ಲಿರುವ ಕಾಯಿಲೆ ಅತಿಸಾರ. ಮಕ್ಕಳು ಅತಿಸಾರ-ಅಪೌಷ್ಟಿಕತೆ-ಅತಿಸಾರಗಳ ವೃತ್ತದಲ್ಲಿ ಸುತ್ತಿ ಸುತ್ತಿ ತತ್ತರಿಸಿ ತಣ್ಣಗಾಗುತ್ತವೆ. ಮಕ್ಕಳಲ್ಲಿಯ ಅತಿಸಾರಕ್ಕೂ ಅಪೌಷ್ಟಿಕತೆಗೂ ಪರಸ್ಪರ ಸಂಬಂಧವಿದೆ.

ಮಕ್ಕಳಲ್ಲಿ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿ ಕಡಿಮೆ ಇರುತ್ತದೆ.  ದೇಹದಿಂದ ನೀರು, ಲವ ಣಾಂಶಗಳು ವಿಸರ್ಜಿತಗೊಳ್ಳುವುದರಿಂದ ಉಂಟಾಗುವ ನಿರ್ಜಲೀಕರಣದ ದುಷ್ಪರಿಣಾಮಗಳು ಈ ವಯಸ್ಸಿನಲ್ಲಿ ಹೆಚ್ಚು. ಮಕ್ಕಳ ಪೋಷಣೆಯಲ್ಲಿ ಕೊರತೆಗಳು ಅಧಿಕ. ಹೀಗಾಗಿ ಅತಿಸಾರ ‘ಮಕ್ಕಳ ಸಾವಿನ ಸರದಾರ’ ಎಂಬ ಬಿರುದಿಗೆ ಪಾತ್ರವಾಗಿದೆ.

ಮಳೆಗಾಲದಲ್ಲಿ ಅತಿಸಾರದ ಹಾವಳಿ ಹಾಹಾಕಾರ ಹೆಚ್ಚು. ಕುಡಿಯುವ ನೀರು ಕಲುಷಿತಗೊಳ್ಳುವುದು ಇದಕ್ಕೆ ಕಾರಣ. ರೋಗಪ್ರಸಾರದಲ್ಲಿ ವಾಹಕಗಳಂತೆ ವರ್ತಿಸುವ ನೊಣಗಳ ಹಾವಳಿ ಮಳೆಯಿಂದಾಗುವ ಹಸಿ ಮತ್ತು ಕುದಿಗಳಿಂದ ಹೆಚ್ಚಾಗುವುದು ಇದಕ್ಕೆ ಇನ್ನೊಂದು ಮುಖ್ಯ ಕಾರಣ. ಬಾಟಲಿಹಾಲು ಕುಡಿಯುವ ಮಕ್ಕಳ ಜೊತೆಗೆ ಇದರ ನಂಟು ಜಾಸ್ತಿ. ಅತಿಸಾರಕ್ಕೆ ಅನೇಕ ಬಗೆಯ ರೋಗಾಣುಗಳು ಕಾರಣವಾಗುತ್ತವೆ. ‘ಶಿಗೆಲ್ಲಾ’, ‘ಸಾಲ್ಮೊನೆಲ್ಲ’, ’ಇ ಕೊಲೈ’ ಮುಂತಾದ ಬ್ಯಾಕ್ಟೀರಿಯಾಗಳಲ್ಲದೆ, ‘ಪಾರ್ವೋ’ ಮತ್ತು ‘ರೋಟೋ’ ವೈರಸುಗಳು ಅತಿಸಾರಕ್ಕೆ ಕಾರಣವಾಗಿವೆ. ಮಲಿನ ವಾತಾವರಣ, ಕಲುಷಿತ ಕುಡಿಯುವ ನೀರು, ಆಹಾರದಲ್ಲಿ ಸೊಂಕು ಸೇರಿಕೆ, ಎಲ್ಲೆಂದರಲ್ಲಿ ಮಲವಿಸರ್ಜನೆ, ತೆರೆದಿಟ್ಟ ಮಾರುವ ಹೆಚ್ಚಿದ ಹಣ್ಣು–ಹಂಪಲು, ನೊಣಗಳ ಹಿಂಡು – ಇಂಥವು ಈ ರೋಗದ ಹರಡುವಿಕೆಗೆ ಸಹಾಯ ನೀಡುತ್ತವೆ.

ಅತಿಸಾರಕ್ಕೆ ತುತ್ತಾದ ಮಕ್ಕಳು ದೇಹದಿಂದ ನೀರು ಮತ್ತು ಲವಣಾಂಶಗಳನ್ನು ಕಳೆದುಕೊಳ್ಳುತ್ತವೆ. ಅದರ ಪರಿಣಾಮವಾಗಿ ತೀವ್ರ ಬಾಯಾರಿಕೆ, ಚಡಪಡಿಕೆ, ಕಿರಿಕಿರಿ, ತಂಪಾದ ಕೈಕಾಲುಗಳು, ಅಧಮನಾಡಿ ಸ್ಥಿತಿ ಸ್ಥಾಪಕಶಕ್ತಿಯನ್ನು ಕಳೆದುಕೊಂಡ ಚರ್ಮವು ತಗ್ಗು ಬಿದ್ದ ಅಳ್ನೆತ್ತಿ, ಒಳಸೇರಿದ ಕಣ್ಣುಗುಡ್ಡೆಗಳು, ಕಾಂತಿಹೀನ ಕಣ್ಣುಗಳು, ಒಣಗಿದ ತುಟಿ ಮತ್ತು ನಾಲಿಗೆ, ಮೂತ್ರದ ಇಳಿಕೆ ಅಥವಾ ಮೂತ್ರದ ನಿಲುಗಡೆ – ಇಂಥ ಲಕ್ಷಣಗಳು ಗೋಚರಿಸಬಹುದು. ಇವು ನಿರ್ಜಲೀಕರಣದ ಚಿಹ್ನೆಗಳು. ಈ ಸ್ಥಿತಿಯಲ್ಲಿ ಮಗು ಚಿಕಿತ್ಸೆಯಿಂದ ವಂಚಿತವಾದಲ್ಲಿ ಸಾವಿಗೂ ತುತ್ತಾಗಬಹುದು. ಈ ಲಕ್ಷಣಗಳು ಕಂಡ ಕೂಡಲೇ ಸಜಲೀಕರಣದ ಚಿಕಿತ್ಸೆಯನ್ನು ಪ್ರಾರಂಭಿಸಬೇಕು. ಹೀಗೆ ಮಾಡುವುದರಿಂದ ಪ್ರಾಣಾಪಾಯವನ್ನು ತಪ್ಪಿಸಬಹುದು. ಔಷಧದ ಚಿಕಿತ್ಸೆಗಿಂತಲೂ ಸಜಲೀಕರಣ ಚಿಕಿತ್ಸೆ ಅತ್ಯಂತ ಪ್ರಮುಖವಾದದ್ದು ಎಂಬುದನ್ನು ಪಾಲಕರು ನೆನಪಿಡಬೇಕು.

ಏನು ಮಾಡಬೇಕು?: ಅತಿಸಾರ ಆರಂಭವಾದ ಕೂಡಲೇ ಮನೆಯಲ್ಲಿಯೇ ಇರುವಂಥ ವಿವಿಧ ಬಗೆಯ ದ್ರವಗಳನ್ನುಸಾಧ್ಯವಾದಷ್ಟೂ ಬಾಯಿಯ ಮೂಲಕ ಮಕ್ಕಳಿಗೆ ಆಗಾಗ ಕೊಡುತ್ತಿರಬೇಕು. ಉದಾಹರಣೆಗೆ ಹೇಳುವುದಾದರೆ, ಎಳೆನೀರು, ಮಜ್ಜಿಗೆ, ಪಾನಕಗಳಂಥವನ್ನು ಕೊಡಬೇಕು. ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಸಿಗುವ ಸಾಮಗ್ರಿಗಳನ್ನೇ ಬಳಸಿಕೊಂಡು ಜೀವಜಲವನ್ನು ತಯಾರಿಸಬಹುದು. ಒಂದು ಲೀಟರ್‌ ಕುದಿಸಿ, ಆರಿಸಿ, ಸೋಸಿದ ನೀರಿಗೆ ಹಿಡಿ ಸಕ್ಕರೆ ಸೇರಿಸಿ, ಒಂದು ಚಿಟಿಗೆ ಉಪ್ಪು ಬೆರೆಸಿ ಕರಗಿಸಬೇಕು. ಇದ್ದರೆ ಅರ್ಧ ನಿಂಬೆಹಣ್ಣಿನ ರಸವನ್ನು ಅದಕ್ಕೆ ಹಿಂಡಬೇಕು. ಇದನ್ನು ಅತಿಸಾರಕ್ಕೆ ಒಳಗಾಗಿರುವ ಮಗುವಿಗೆ ಅಥವಾ ವಯಸ್ಕರಿಗೆ ಮೇಲಿಂದ ಮೇಲೆ ಕೊಡುತ್ತಹೋಗಬೇಕು.

ಜಾಗತಿಕ ಆರೋಗ್ಯ ಸಂಸ್ಥೆಯು ಸಾರ್ವತ್ರಿಕವಾಗಿ ಉಪಯೋಗವಾಗುವ ಸಕ್ಕರೆ–ಲವಣಗಳ ಮಿಶ್ರಣದ ಒಂದು ಸೂತ್ರವನ್ನು ರೂಪಿಸಿದ್ದು ಅದನ್ನು ಎಲ್ಲೆಡೇ ಯಾವುದೇ ವಯೋಧರ್ಮದವರಿಗೂ ಸುಲಭವಾಗಿ ಕೊಡಬಹುದಾಗಿದೆ. ಇಂತಹ ಮಿಶ್ರಣದಲ್ಲಿ ಸೋಡಿಯಂ ಕ್ಲೋರೈಡ್ (ತಿನ್ನುವ ಉಪ್ಪು) 3.5 ಗ್ರಾಂ, ಸೋಡಿಯಂ ಬೈ ಕಾರ್ಬೋನೇಟ್ (ಅಡುಗೆಸೋಡಾ) 2.5 ಗ್ರಾಂ, ಪೊಟ್ಯಾಸಿಯಂ ಕ್ಲೋರೈಡ್ 1.5 ಗ್ರಾಂ ಮತ್ತು ಗ್ಲುಕೋಜ್  20 ಗ್ರಾಂ ಇರುವ ಮಿಶ್ರಣವನ್ನು ಹವೆಯಲ್ಲಿಯ ತೇವಾಂಶ ತಾಕದಂತೆ ಅಲ್ಯುಮಿನಿಯಂ ಅಥವಾ ಪ್ಲಾಸ್ಟಿಕೆ ಪಾಕೀಟಗಳಲ್ಲಿ ಇರಿಸಿ ವಿತರಣೆ ಮಾಡಲಾಗುವುದು. ಇದನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಮನೆಗೂ ಮುಟ್ಟಿಸುವರು. ಈ ಮಿಶ್ರಣವನ್ನು ಒಂದು ಲೀಟರ್ ಕುದಿಸಿ, ಆರಿಸಿ ಸೋಸಿದ ನೀರಿನಲ್ಲಿ ಕರಗಿಸಿ ರೋಗಿಗಳಿಗೆ ಧಾರಾಳವಾಗಿ ಕೊಡಬೇಕು. ಜೀವಜಲ ತಯಾರಿಸುವಾಗ ಶುಚಿತ್ವದ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು. ಒಮ್ಮೆ ತಯಾರಿಸಿದ ದ್ರಾವಣವನ್ನು ಮತ್ತೆ ಕಾಯಿಸಬಾರದು; ಮತ್ತು ಅದನ್ನು 24 ಗಂಟೆಗಳೊಳಗೆ ಉಪಯೋಗಿಸಬೇಕು.

ಈ ಜೀವಜಲವನ್ನು ಎಲ್ಲ ತೆರನಾದ ಅತಿಸಾರದಲ್ಲಿಯೂ ಕೊಡಬಹುದು. ಎಳೆಯ ಮಕ್ಕಳಿಗೆ ಐದು ನಿಮಿಷಗಳಿಗೊಮ್ಮೆ ಒಂದೊಂದು ಚಮಚ ಕೊಡಬೇಕು. ಒಮ್ಮೆಲೇ ಜಾಸ್ತಿ ಕೊಡುವುದರಿಂದ ವಾಂತಿಯಾಗಬಹುದು. ಆದುದರಿಂದ ನಿಯಮಿತವಾಗಿ ಸ್ವಲ್ಪ ಸ್ವಲ್ಪವಾಗಿ ಕಡಿಮೆ ಪ್ರಮಾಣದಲ್ಲಿ ಕೊಡಲು ಮರೆಯಬಾರದು. ದೊಡ್ಡವರಿಗೆ ಒಂದೊಂದು ಗ್ಲಾಸಿನಷ್ಟು ಕೊಡಬಹುದು. ಒಟ್ಟಿನಲ್ಲಿ ರೋಗಿಗಳು ಬಯಸಿದಷ್ಟು ಕುಡಿಯಲು ಕೊಡಬೇಕು. ಬಾಯಿಯಿಂದ ಸಜಲೀಕರಣ ಮುಂದುವರೆಸಿದಾಗಲು ರೋಗಿಯ ಸ್ಥಿತಿ ಸುಧಾರಿಸದಿದ್ದಲ್ಲಿ, ಇಲ್ಲವೇ ವಾಂತಿ ಮುಂದುವರೆದಲ್ಲಿ, ಕೂಡಲೇ ವೈದ್ಯರ ಸಲಹೆಯನ್ನು ಪಡೆಯಬೇಕು.

**

ಅತಿಸಾರ ಆರಂಭವಾದ ಕೂಡಲೇ ಮನೆಯಲ್ಲಿಯೇ ಇರುವಂಥ ವಿವಿಧ ಬಗೆಯ ದ್ರವಗಳನ್ನುಸಾಧ್ಯವಾದಷ್ಟೂ ಬಾಯಿಯ ಮೂಲಕ ಮಕ್ಕಳಿಗೆ ಆಗಾಗ ಕೊಡುತ್ತಿರಬೇಕು. ಉದಾಹರಣೆಗೆ ಹೇಳುವುದಾದರೆ, ಎಳೆನೀರು, ಮಜ್ಜಿಗೆ, ಪಾನಕಗಳಂಥವನ್ನು ಕೊಡಬೇಕು. ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಸಿಗುವ ಸಾಮಗ್ರಿಗಳನ್ನೇ ಬಳಸಿಕೊಂಡು ಜೀವಜಲವನ್ನು ತಯಾರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT