ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಚ್ಚಿದ ಬಾಗಿಲೊಳಗಿನ ‘ನಿರ್ವಹಣೆ’ ಅವಶ್ಯಕತೆ ಇಲ್ಲ’

ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ
Last Updated 28 ಜುಲೈ 2017, 19:30 IST
ಅಕ್ಷರ ಗಾತ್ರ

‘ಕ್ಯಾಸ್ಟಿಂಗ್‌ ಕೌಚ್‌’ ಅನ್ನೋ ವ್ಯವಸ್ಥೆ ಚಿತ್ರರಂಗದಲ್ಲಿ ಇರುವುದು ನಿಜ. ಆ ವ್ಯವಸ್ಥೆಗೆ ನಾವು ಹೆಣ್ಣುಮಕ್ಕಳು ಎಷ್ಟು ಜಾಸ್ತಿ ಬೀಳುತ್ತೇವೆಯೋ ಅಷ್ಟು ಜಾಸ್ತಿ ಅದು ಬೆಳೆಯುತ್ತ ಹೋಗುತ್ತದೆ. ಆದ್ದರಿಂದ ಈ ವ್ಯವಸ್ಥೆಗೆ ಹೆಣ್ಣುಮಕ್ಕಳಿಂದಲೇ ‘ನೋ’ ಎಂಬ ಸಂಜ್ಞೆ ಬರಬೇಕು.

‘ಕಾಸ್ಟಿಂಗ್‌ ಕೌಚ್‌’ನಿಂದ ಒಂದು ಸಲ ಅವಕಾಶ ಸಿಗಬಹುದು. ಎರಡನೇ ಸಲವೂ ಸಿಕ್ಕಿಬಿಡಬಹುದು. ಆದರೆ ನಮ್ಮ ವೃತ್ತಿಯ ದೂರಗಾಮಿ ಬೆಳವಣಿಗೆಗೆ ಇದು ಯಾವ ರೀತಿಯಲ್ಲಿಯೂ ಸಹಾಯವಾಗುವುದಿಲ್ಲ. ನಮ್ಮ ಪ್ರತಿಭೆ ಕ್ಯಾಮೆರಾ ಎದುರುಗಡೆ ಇರಬೇಕು. ಮುಚ್ಚಿದ ಬಾಗಿಲ ಒಳಗಿನ ಪರ್ಫಾಮನ್ಸ್‌ಗೆ ನಮ್ಮ ಅವಕಾಶಗಳನ್ನು ಮಾರಿಕೊಳ್ಳಬಾರದು.

ಹಾಗೆಯೇ ಈ ವ್ಯವಸ್ಥೆಯ ಬಗ್ಗೆ ಮಾತಾಡುವಾಗ ಖಂಡಿತವಾಗಿ ನಾನು ಬರೀ ಗಂಡಸರನ್ನು ದೂಷಿಸುವುದಿಲ್ಲ. ಯಾಕೆಂದರೆ ಯಾವುದಕ್ಕೇ ಆಗಲಿ ಎರಡು ಕೈ ಸೇರಿದರೇ ಚಪ್ಪಾಳೆಯಾಗುವುದು.

ಈಗ ಪರಿಸ್ಥಿತಿ ಬದಲಾಗುತ್ತಿದೆ. ಚಿತ್ರರಂಗದಲ್ಲಿ ಅದರಲ್ಲಿಯೂ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಬಗ್ಗೆ ಅಪಾರ ಗೌರವವಿರುವ ಸಾಕಷ್ಟು ಪುರುಷರು ಇದ್ದಾರೆ. ಅವರನ್ನು ನಾವು ಗೌರವದಿಂದ ಕಾಣಲೇಬೇಕು. ನಾವು ಕೆಲಸ ಮಾಡಲು ಯಾರನ್ನು ಆಯ್ದುಕೊಳ್ಳುತ್ತೇವೆ ಎನ್ನುವುದು ತುಂಬ ಮಹತ್ವದ ಸಂಗತಿ. ನಮ್ಮ ಸುತ್ತಲೂ ಒಳ್ಳೆಯ ಜನರು ಇದ್ದೇ ಇದ್ದಾರೆ. ನಾವು ಕೆಲಸ ಮಾಡಿಕೊಳ್ಳಲು ಆಯ್ದುಕೊಳ್ಳುವಾಗ ಅಂಥವರನ್ನೇ ಆಯ್ದುಕೊಳ್ಳುವುದು ತುಂಬ ಮುಖ್ಯ.

ಕ್ಯಾಸ್ಟಿಂಗ್‌ ಕೌಚ್‌ನಂಥ ವ್ಯವಸ್ಥೆಯ ಹೆದರಿಕೆ ಕಾರಣದಿಂದ ಪ್ರತಿಭಾವಂತ ಹೆಣ್ಣುಮಕ್ಕಳಿಗೆ ಚಿತ್ರರಂಗಕ್ಕೆ ಬರಲು ಯಾವಾಗಲೂ ಮನೆಯವರಿಂದ ಅಡೆತಡೆಗಳು ಇದ್ದೇ ಇರುತ್ತದೆ. ನಾನೂ ಅದನ್ನು ಎದುರಿಸಿದ್ದೇನೆ.ಆದರೆ ಚಿತ್ರರಂಗದಲ್ಲಿ ಅಸಹ್ಯ ಆಗುವಂಥದ್ದು ಅಥವಾ ಹೆದರಿಕೊಳ್ಳುವಂಥದ್ದು ಏನೂ ಇಲ್ಲ. ನಾವು ಯಾರ ಜತೆಯಲ್ಲಿ ಹೇಗಿರುತ್ತೇವೆಯೋ ಅವರು ನಮ್ಮ ಜತೆ ಹಾಗೆಯೇ ನಡೆದುಕೊಳ್ಳುತ್ತಾರೆ. ‘ಕ್ಯಾಸ್ಟಿಂಗ್‌ ಕೌಚ್‌’ ಎನ್ನುವ ವ್ಯವಸ್ಥೆ ಇರುವುದು ನಿಜ. ಆದರೆ ಅದಕ್ಕೆ ಒಳಗಾಗದೆಯೂ ಇಲ್ಲಿ ನೆಲೆಯೂರುವುದಕ್ಕೆ, ಬೆಳೆಯುವುದಕ್ಕೆ ಅವಕಾಶಗಳು ಇದ್ದೇ ಇದೆ.

ನನ್ನ ಅನುಭವದ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ವಾತಾವರಣವೇ ಇದೆ. ಇಲ್ಲಿ ‘ನನ್ನ ಅನುಭವದ ಪ್ರಕಾರ’ ಎನ್ನುವುದನ್ನು ಒತ್ತಿ ಒತ್ತಿ ಹೇಳುತ್ತಿದ್ದೇನೆ. ಯಾಕೆಂದರೆ ನನ್ನ ಸ್ನೇಹಿತೆಯರು, ಸಹನಟಿಯರ ಅನುಭವ ಬೇರೆಯದ್ದೇ ಆಗಿರುತ್ತದೆ. ಕೆಲವರಿಗೆ ಕ್ಯಾಸ್ಟಿಂಗ್‌ ಕೌಚ್‌ ಅನುಭವ ಆಗಿಯೇ ಇಲ್ಲ. ಅದು ತುಂಬ ಒಳ್ಳೆಯ ಸಂಗತಿ. ಆದರೆ ಇನ್ನು ಕೆಲವರಿಗೆ ಬರೀ ಅದೇ ಅದೇ ಅನುಭವ ಎದುರಾಗಿ ಚಿತ್ರರಂಗದ ಸಹವಾಸವೇ ಸಾಕು ಎಂದು ಹೊರಟುಹೋಗಿದ್ದಾರೆ. ಹಾಗೆಯೇ ಒಂದೆರಡು ಬಾರಿ ‘ಕ್ಯಾಸ್ಟಿಂಗ್‌ ಕೌಚ್‌’ ಮೂಲಕ ಅವಕಾಶ ಗಿಟ್ಟಿಸಿಕೊಂಡು ನಂತರ ಬೆಳೆಯಲಾಗದೆ ಹೋದವರೂ ಇದ್ದಾರೆ.

ನನ್ನ ಬಲವಾದ ನಂಬಿಕೆ ಏನೆಂದರೆ ನಾವು– ಹೆಣ್ಣುಮಕ್ಕಳಿಗೆ ‘ಕ್ಯಾಸ್ಟಿಂಗ್‌ ಕೌಚ್‌’ ಮೂಲಕ ಅವಕಾಶ ಗಿಟ್ಟಿಸಿಕೊಳ್ಳುವ ಅವಶ್ಯಕತೆ ಖಂಡಿತ ಇಲ್ಲ. ಇರಬಾರದು ಕೂಡ. ಅವರು ಇಂಥ ವ್ಯವಸ್ಥೆ ಎದುರಾದಾಗ ‘ನೋ’ ಎಂದು ಗಟ್ಟಿಯಾಗಿ ಹೇಳುವ ಛಾತಿ ಬೆಳೆಸಿಕೊಳ್ಳಬೇಕು.

ಒಬ್ಬಳು ಯಶಸ್ವಿ ನಟಿಯಾಗಲಿಕ್ಕೆ ಪ್ರತಿಭೆ, ತಾಳ್ಮೆ, ಅದೃಷ್ಟ ಇನ್ನೂ ಎಷ್ಟೆಲ್ಲ ಅಂಶಗಳು ಬೇಕಾಗುತ್ತವೆ. ಆದರೆ ಇವೆಲ್ಲವನ್ನೂ ಬಿಟ್ಟು ಕ್ಲೋಸ್ಡ್ ರೂಮಿನೊಳಗೆ ನಮ್ಮ ಪರ್ಫಾರ್ಮೆನ್ಸ್‌ ತೋರಿಸುವ ಅವಶ್ಯಕತೆ ಖಂಡಿತ ಇಲ್ಲ. ಅದನ್ನು ನಾನು ತುಂಬ ಬಲವಾಗಿ ಹೇಳಬಯಸುತ್ತೇನೆ.

ಪ್ರತಿದಿನ ಮನೆಗೆ ಹೋದಾಗ ಅಮ್ಮನ ಕಣ್ಣಲ್ಲಿ ಕಣ್ಣಿಟ್ಟು ‘ನನ್ನ ಕೆಲಸವನ್ನು ತುಂಬ ಹೆಮ್ಮೆಯಿಂದ ಮಾಡುತ್ತಿದ್ದೇನೆ’ ಎಂದು ಹೇಳುವುದು ನನ್ನ ಮಟ್ಟಿಗೆ ತುಂಬ ಮಹತ್ವದ್ದು. ಅವಳಿಗೆ ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಗೌರವ ಇರುವುದೂ ಅಷ್ಟೇ ಮುಖ್ಯ. ಅಮ್ಮನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಅಂದರೆ ನನಗೆ ನಾನೇ ಹೇಳಿಕೊಂಡಂತೆ. ಆತ್ಮಗೌರವವಿಲ್ಲದೇ ಮಾಡಿದ ಕೆಲಸ ನಮ್ಮನ್ನು ಒಂದಲ್ಲ ಒಂದು ದಿನ ನಮ್ಮನ್ನು ಕಾಡುತ್ತದೆ. ಎಲ್ಲರೂ ಹೀಗೆ ಆತ್ಮಗೌರವ ಉಳಿಸಿಕೊಳ್ಳುವುದು ‘ಕ್ಯಾಸ್ಟಿಂಗ್ ಕೌಚ್‌’ನಂಥ ಸಮಸ್ಯೆಯ ಪರಿಹಾರಕ್ಕೂ ಕಾರಣವಾಗುತ್ತದೆ ಎಂಬ ನಂಬಿಕೆಯೂ ನನಗಿದೆ.

ನಿರೂಪಣೆ: ಪದ್ಮನಾಭ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT