ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕೊನೆಯವರೆಗೂ ನಾನು ರಾಧಿಕಾ ಕುಮಾರಸ್ವಾಮಿಯೇ ಆಗಿರುತ್ತೇನೆ'

Last Updated 29 ಜುಲೈ 2017, 11:09 IST
ಅಕ್ಷರ ಗಾತ್ರ

‘ರಾಧಿಕಾ ಕುಮಾರಸ್ವಾಮಿ ಅವರ ಬಣ್ಣದ ಬದುಕು ಮುಗಿಯಿತು’ ಎಂದುಕೊಂಡವರೆಲ್ಲ ಅಚ್ಚರಿಪಡುವಂತೆ ಅವರು ಮತ್ತಷ್ಟು ಹುಮ್ಮಸ್ಸಿನೊಂದಿಗೆ ವಾಪಸ್ಸಾಗಿದ್ದಾರೆ. ಸದ್ಯಕ್ಕೆ ಅವರು ಸಮೀರ್‌ ನಿರ್ದೇಶನದ 'ಕಾಂಟ್ರ್ಯಾಕ್ಟ್' ಎಂಬ ತ್ರಿಭಾಷಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 'ರಾಜೇಂದ್ರ ಪೊನ್ನಪ್ಪ’ ಸಿನಿಮಾದಲ್ಲಿ ರವಿಚಂದ್ರನ್‌ ಅವರ ಜತೆ ನಟಿಸುತ್ತಿದ್ದಾರೆ. ಹಾಗೆಯೇ ಇನ್ನಷ್ಟು ಕಥೆಗಳೂ ಅವರ ಅಭಿನಯ ಬಯಸಿ ಬಂದಿವೆ. ಆದರೆ ರಾಧಿಕಾ ಈಗ ಇನ್ನಷ್ಟು ಚ್ಯೂಸಿಯಾಗಿದ್ದಾರೆ.

ಹೋಂ ಬ್ಯಾನರ್‌ನಲ್ಲಿ ವಿಭಿನ್ನ ಚಿತ್ರಗಳನ್ನು ನಿರ್ಮಾಣ ಮಾಡುವ ಕೆಲಸವನ್ನೂ ಸದ್ಯದಲ್ಲಿಯೇ ಆರಂಭಿಸಲಿದ್ದಾರೆ. ತಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಕುರಿತು ಹಬ್ಬಿಕೊಂಡ ಊಹಾಪೋಹಗಳಿಗೂ ಅವರು ನಗುತ್ತಲೇ ಉತ್ತರಿಸುತ್ತಾರೆ. 'ನಾನು ಕೊನೆಯವರೆಗೂ ರಾಧಿಕಾ ಕುಮಾರಸ್ವಾಮಿಯೇ ಆಗಿರುತ್ತೇನೆ' ಎನ್ನುವುದು ಅವರ ದೃಢವಾದ ಮಾತು. ‘ಕಾಂಟ್ರ್ಯಾಕ್ಟ್’ ಎನ್ನುವ ಸಿನಿಮಾದ ಶೂಟಿಂಗ್ ನಲ್ಲಿದ್ದ ಅವರ ಜತೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.

* ನಿಮ್ಮ ಮತ್ತು ಕುಮಾರಸ್ವಾಮಿ ಮಧ್ಯ ವೈಮನಸ್ಸು ಉಂಟಾಗಿದೆ, ನೀವು ನಿಮ್ಮ ಹೆಸರಿನ ಮುಂದೆ ‘ಕುಮಾರಸ್ವಾಮಿ’ ಎಂದು ಸೇರಿಸಿಕೊಳ್ಳುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವಲ್ಲ?

ಅದು ಶುದ್ಧ ಸುಳ್ಳು. ಅವರವರು ಅವರವರಿಗೆ ಇಷ್ಟ ಬಂದ ಹಾಗೆ ಸೃಷ್ಟಿಸಿಕೊಂಡಿದ್ದಾರೆ ಅಷ್ಟೆ. ನಾನು ಅವರು ಈಗಲೂ ಇದ್ದೇವೆ. ನಮ್ಮಿಬ್ಬರ ಮಧ್ಯ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಈಗಲೂ ನನ್ನ ಹೆಸರು ರಾಧಿಕಾ ಕುಮಾರಸ್ವಾಮಿ ಎಂದೇ. ಬದುಕು ಬದಲಾಗಿದೆ. ಆದರೆ ಹೆಸರು ಮತ್ತು ವ್ಯಕ್ತಿತ್ವ ಅದೇ ಇದೆ. ಕೊನೆಯವರೆಗೂ ಹಾಗೆಯೇ ಇರುತ್ತದೆ.

ನಮ್ಮ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹಬ್ಬುತ್ತಿರುತ್ತವೆ. ನಾನು ಲಂಡನ್‌ನಲ್ಲಿದ್ದೇನೆ, ನನಗೆ ಮೂವರು ಮಕ್ಕಳು, ಒಂದು ಮಗುವನ್ನು ಲಂಡನ್‌ನಲ್ಲಿ ಇಟ್ಟಿದ್ದೇನೆ. ಇನ್ನೊಂದನ್ನು ಪತ್ರಕರ್ತರೊಬ್ಬರಿಗೆ ಕೊಟ್ಟಿದ್ದೇನೆ ಅಂತೆಲ್ಲ ಸುದ್ದಿ ಹಬ್ಬಿಸಿದರು. ಆದರೆ ಅದು ಪೂರ್ತಿ ಸುಳ್ಳು ಸುದ್ದಿ. ಸುಳ್ಳಾ ನಿಜವಾ ಎಂದು ಯಾರೂ ನನ್ನನ್ನು ಕೇಳಲಿಲ್ಲ. ನಾನು ಅಂಥ ಸುದ್ದಿಗೆಲ್ಲ ಕೇರ್ ಮಾಡುವುದೂ ಇಲ್ಲ. ನನಗಿರುವುದು ಒಂದೇ ಮಗು. ಏಳು ವರ್ಷದ್ದು. ನಾನು ನನ್ನ ಕುಟುಂಬದೊಟ್ಟಿಗೆ ಮೊದಲಿನಂತೆಯೇ ಇದ್ದೇನೆ. ಹಾಗೆಯೇ ಇರುತ್ತೇನೆ.

14ನೇ ವರ್ಷಕ್ಕೆ ಚಿತ್ರರಂಗಕ್ಕೆ ಬಂದಿದ್ದು. ಇಂದಿನವರೆಗೂ ನಾನು ಸುಮ್ಮ ಸುಮ್ಮನೇ ಯಾರ ವಿಷಯಕ್ಕೂ ಹೋಗುವಳಲ್ಲ. ವಿವಾದ ಮಾಡಿಕೊಳ್ಳುವುದಿಲ್ಲ. ನಾನಾಯ್ತು, ನನ್ನ ಕೆಲಸ ಆಯ್ತು ಎಂದು ಇರುವವಳು. ನನಗೆ ಬಂದ ಕೆಲಸವನ್ನು ಇಷ್ಟಪಟ್ಟು ಮಾಡುವವಳು. ಈ ಸ್ವಭಾವದ ಕಾರಣದಿಂದಲೇ ನನ್ನ ಕುರಿತಾಗಿ ಹಬ್ಬಿದ ಗಾಸಿಪ್‌ಗಳಿಗೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ.

* ಇಷ್ಟು ದಿನ ಯಾಕೆ ಚಿತ್ರರಂಗದಿಂದ ದೂರವಿದ್ದೀರಿ?

ನಾನೇನೂ ದೂರವಿರಲಿಲ್ಲ. ಚಿತ್ರರಂಗವೇ ನನ್ನನ್ನು ದೂರವಿಟ್ಟಿತ್ತು. ನಾನು ಲಂಡನ್‌ನಲ್ಲಿದ್ದೇನೆ, ಮಂಗಳೂರಿನಲ್ಲಿದ್ದೇನೆ, ಸಿನಿಮಾ ಮಾಡುವುದಿಲ್ಲ ಅಂತೆಲ್ಲ ಅವರಷ್ಟಕ್ಕೆ ಅವರೇ ಅಂದುಕೊಂಡುಬಿಟ್ಟಿದ್ದರು. ಆದರೆ ನಾನು ಎಲ್ಲಿಗೂ ಹೋಗಿಲ್ಲ, ಬೆಂಗಳೂರಿನ ಡಾಲರ್ಸ್ ಕಾಲೋನಿಯ ನನ್ನ ಮನೆಯಲ್ಲಿಯೇ ಇದ್ದೇನೆ.

ಆಗ ಖಾಲಿಯಿದ್ದಾಗ ಯಾರೂ ಸಿನಿಮಾ ಮಾಡ್ತೀರಾ ಅಂತ ಕೇಳಲಿಲ್ಲ. ಎಲ್ಲರೂ ಒಮ್ಮಿಂದೊಮ್ಮೆಲೇ ದೂರವಾಗಿಬಿಟ್ಟರು. ಈಗ ಒಂದರ ಹಿಂದೆ ಒಂದು ಅವಕಾಶಗಳು ಬರ್ತಿವೆ. ಆದರೆ ಈಗ ನಾನು ಬದಲಾಗಿದ್ದೇನೆ. ನನ್ನ ಬದುಕು ಬದಲಾಗಿದೆ. ಮೊದಲಿನ ಹಾಗೆ ಎಲ್ಲ ಸಿನಿಮಾ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ನನ್ನ ಕುಟುಂಬ, ಮಗುವಿನ ಜವಾಬ್ದಾರಿ ನನ್ನ ಮೇಲಿದೆ. ಆ ಜವಾಬ್ದಾರಿಗಳನ್ನು ಮುಗಿಸಿ ಉಳಿದ ಸಮಯದಲ್ಲಿ ಮಾತ್ರ ಸಿನಿಮಾ ಮಾಡಲು ಸಾಧ್ಯ.

ಈಗ ನನ್ನ ಮುಂದೆ ಆರು ಕಥೆಗಳಿವೆ. ಅವುಗಳನ್ನೆಲ್ಲ ಒಪ್ಪಿಕೊಳ್ಳಬೇಕು ಅಂತ ಆಸೆ ನನಗಿದೆ. ಆದರೆ ಸಮಯವಿಲ್ಲ. ಆದ್ದರಿಂದ ಅವುಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಒಪ್ಪಿಕೊಳ್ಳಬಹುದಷ್ಟೆ.

* ಹೋಂ ಬ್ಯಾನರ್ ನಲ್ಲಿ ಸಿನಿಮಾ ಮಾಡುವ ಆಲೋಚನೆ ಇಲ್ಲವೆ?

ಖಂಡಿತ ಇದೆ. ನನ್ನ ಅಣ್ಣ ಯಾವಾಗಲೂ ಈ ಕುರಿತು ಹೇಳುತ್ತಿರುತ್ತಾನೆ. ನಮ್ಮದೇ ಬ್ಯಾನರ್‌ನಲ್ಲಿ ಸದ್ಯದಲ್ಲಿಯೇ ಒಂದು ಸಿನಿಮಾ ಮಾಡಲಿದ್ದೇನೆ. ಎರಡು ಕಥೆಗಳು ಸಿದ್ಧ ಇವೆ. ಒಂದು ಪ್ರೇಮಕಥೆ, ಇನ್ನೊಂದು ತೆಲುಗಿನ ‘ಅರುಂಧತಿ’ ಮಾದರಿಯ ಸಿನಿಮಾ. ನಮ್ಮ ತಂಡದ ಜತೆ ಚರ್ಚಿಸಿ, ಯಾವುದು ನನಗೆ ಚೆನ್ನಾಗಿ ಹೊಂದಿಕೆ ಆಗುತ್ತದೆಯೋ ಅದನ್ನು ಮಾಡುತ್ತೇನೆ.

* ಹೋಂ ಬ್ಯಾನರ್ಚನಲ್ಲಿ ಹೊಸಬರಿಗೆ ಅವಕಾಶ ಕೊಡುವ ಆಲೋಚನೆ ಇದೆಯೇ?
ಹೊಸಬರಿಗೇ ಕೊಡಬೇಕು ಎಂದು ನಿರ್ಧಾರವನ್ನೇನೂ ಮಾಡಿಕೊಂಡಿಲ್ಲ. ಪಾತ್ರಕ್ಕೆ ಸೂಕ್ತ ಅನಿಸಿದರೆ ಹೊಸಬರಾದರೂ ಅವಕಾಶ ಕೊಡುತ್ತೇವೆ.

* ನಿರ್ದೇಶನಕ್ಕೆ ಇಳಿಯುವ ಆಲೋಚನೆ ಇದೆಯೇ?
ಇಲ್ಲಪ್ಪಾ, ಅಷ್ಟು ಕಷ್ಟ ತೆಗೆದುಕೊಳ್ಳಲು ನಾನು ಸಿದ್ಧಳಿಲ್ಲ. ಅಲ್ಲದೇ ನನಗೆ ಅಷ್ಟೊಂದು ಸಮಯವೂ ಇರುವುದಿಲ್ಲ.

* ತುಂಬಾ ಗ್ಯಾಪ್ ನ ನಂತರ ಸಿನಿಮಾ ಮಾಡುತ್ತಿದ್ದೀರಾ ಹೇಗನಿಸುತ್ತಿದೆ?

ನನಗೆ ಚಿತ್ರರಂಗದಲ್ಲಿ, ನಟನೆಯಲ್ಲಿ ಯಾವ ಬದಲಾವಣೆಯೂ ಕಾಣುತ್ತಿಲ್ಲ. ನಾನು ಹದಿನಾಲ್ಕು ವರ್ಷಗಳ ಹಿಂದೆ ಹೇಗಿದೆಯೋ ಎಲ್ಲವೂ ಈಗಲೂ ಹಾಗೆಯೇ ಇದೆ.

* ಇನ್ನು ಮುಂದೆ ರಾಧಿಕಾ ಅವರನ್ನು ಅಭಿಮಾನಿಗಳು ಯಾವ ರೀತಿಯ ಪಾತ್ರಗಳಲ್ಲಿ ನೋಡಬಹುದು?

ಇಂಥದ್ದೇ ಪಾತ್ರ ಅಂತಿಲ್ಲ. ನನ್ನದೊಂದು ತಂಡವಿದೆ. ಮೊದಲು ಅವರು ಕಥೆ ಕೇಳುತ್ತಾರೆ. ಅವರಿಗೆ ಇಷ್ಟವಾದರೆ ನಾನು ಕೇಳ್ತೀನಿ. ನಾವೆಲ್ಲ ಅದರ ಬಗ್ಗೆ ಚರ್ಚಿಸುತ್ತೇವೆ. ಕಥೆ ಇಷ್ಟವಾದರೆ ಒಪ್ಪಿಕೊಳ್ಳುತ್ತೇನೆ. ನಿರ್ಮಾಪಕರು ಗಟ್ಟಿ ಇರುವುದೂ ಮುಖ್ಯ.

ಹಾಗಂತ ನಾನು ತುಂಬಾ ಹಣ ಕೇಳುತ್ತೇನೆ ಅಂತಲ್ಲ, ಇಂದು ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ನಟಿಯರಷ್ಟೇ ಹಣ ತೆಗೆದುಕೊಳ್ಳುತ್ತೇನೆ. ಕೆಲವೊಮ್ಮೆ ಕಥೆ ಇಷ್ಟವಾದರೆ, ಪಾತ್ರವನ್ನು ಕೇಳಿಕೊಂಡು ಬಂದವರು ಆಪ್ತರಾದರೆ ಹಣದ ವಿಷಯದಲ್ಲಿ ರಾಜಿಯಾಗಬಹುದು. ನಾನೇನೂ ಹಣಕ್ಕಾಗಿಯೇ ಸಿನಿಮಾ ಮಾಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT