ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ಪತ್ರದಲ್ಲಡಗಿತ್ತು ಬದುಕಿನ ತಿರುವು!

Last Updated 29 ಜುಲೈ 2017, 19:30 IST
ಅಕ್ಷರ ಗಾತ್ರ

ಸಂದೀಪ್ ನನ್ನ ಆತ್ಮೀಯ ಸ್ನೇಹಿತನಾದದ್ದು ಅನಿರೀಕ್ಷಿತವಾಗಿ. ವಾಹನ ಓಡಿಸುವಾಗ ಅಪಘಾತ ಮಾಡಿ ವ್ಯಕ್ತಿಯೊಬ್ಬನ ಸಾವಿಗೆ ಕಾರಣನಾಗಿದ್ದ ಆರೋಪ ಹೊತ್ತಿದ್ದ ಈತ, ಹತ್ತಾರು ವರ್ಷ ಕೋರ್ಟ್‌ಗೆ ಅಲೆದಾಡಿದ ಬಳಿಕ ಕೊನೆಗೂ ಖುಲಾಸೆಗೊಂಡಿದ್ದ. ಈತನ ಕೇಸನ್ನು ನಾನೇ ನಡೆಸಿಕೊಟ್ಟಿದ್ದೆ.

ಅದಕ್ಕಾಗಿ ತುಂಬ ಕೃತಜ್ಞನಾಗಿದ್ದ. ಕೇಸು ಮುಗಿದ ಮೇಲೂ ನನ್ನೊಂದಿಗೆ ಹರಟೆ ಹೊಡೆಯಲು ಆಗೀಗ ಭೇಟಿಯಾಗುತ್ತಿದ್ದ. ನನಗೆ ಏನಾದರೂ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದ. ವಯಸ್ಸಿನಲ್ಲಿ ನನಗಿಂತ ತೀರಾ ಚಿಕ್ಕವನಾದರೂ ನಮ್ಮಿಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು.

ಸಂದೀಪ್‌ ಬಗ್ಗೆ ಹೇಳುವುದಾದರೆ, ಈತ ಹುಟ್ಟಿದ್ದು ಸಿರಿವಂತ ರಾಜಪ್ಪನವರ ಮಗನಾಗಿ. ಇವನ ಅಮ್ಮ ರತ್ನಮ್ಮ ರಾಜಪ್ಪನವರ ಎರಡನೆಯ ಹೆಂಡತಿ. ಅಪ್ಪ ಒಳ್ಳೆಯವರಾಗಿದ್ದರೂ,  ಅವರ ಮೊದಲ ಹೆಂಡತಿ ಮತ್ತು ಮಕ್ಕಳಿಂದ  ಸಂದೀಪ ಮತ್ತು ಅವನಮ್ಮ ಕಿರುಕುಳ ಅನುಭವಿಸುತ್ತಿದ್ದರು.

ಅದೊಂದು ದಿನ ಅಪ್ಪನ ಜೊತೆ ಜಗಳವಾಡಿ ಅಮ್ಮನನ್ನು ಕರೆದುಕೊಂಡು ಸಂದೀಪ ಮನೆಬಿಟ್ಟ. ಬಾಡಿಗೆ ಮನೆಯೊಂದರಲ್ಲಿ ವಾಸವಾಗತೊಡಗಿದ.  ಆ ನಂತರವೂ ರತ್ನಮ್ಮ ಅವನಿಗೆ ಅಪ್ಪನ ಬಗ್ಗೆ ಒಳ್ಳೊಳ್ಳೆ ಮಾತುಗಳನ್ನಾಡಿ ಅವರ ಮೇಲೆ ಪ್ರೀತಿ ಬೆಳೆಯುವಂತೆ ಮಾಡುತ್ತಿದ್ದರು.

ಚಿಕ್ಕದೊಂದು ಪ್ರಿಂಟಿಂಗ್‌ ಪ್ರೆಸ್‌ ಇಟ್ಟುಕೊಂಡು ಬದುಕು ಸಾಗಿಸತೊಡಗಿದ ಸಂದೀಪ. ಜೊತೆಗೆ, ಕಾರೊಂದು ಇಟ್ಟುಕೊಂಡು ಬಾಡಿಗೆಗೆ ಓಡಿಸುತ್ತಿದ್ದ. ನನಗೆ ಪರಿಚಯ ಇರುವ ಅನೇಕ ಮಂದಿಯನ್ನು ಅವನ ಪ್ರೆಸ್‌ಗೆ ಕಳುಹಿಸುತ್ತಿದ್ದೆ. ಇದರಿಂದಾಗಿ ನನ್ನಿಂದಲೂ ಅವನಿಗೆ ಸಾಕಷ್ಟು ಗಿರಾಕಿಗಳು ಸಿಗುತ್ತಿದ್ದರು. 

ಹೋದ ಕಡೆಯಲ್ಲೆಲ್ಲಾ ನನ್ನ ಬಗ್ಗೆ ಒಳ್ಳೆ ಮಾತುಗಳನ್ನು ಹೇಳುತ್ತಾ ಸಾಕಷ್ಟು ಕಕ್ಷಿದಾರರನ್ನು ನನ್ನ ಬಳಿ ಕಳಿಸುತ್ತಿದ್ದ. ಹಾಗೆಂದು ನನ್ನಿಂದ ಆತ ಏನೂ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಹೀಗೆ ನಮ್ಮಿಬ್ಬರ ನಡುವೆ ಭಾವನಾತ್ಮಕ ಸಂಬಂಧ ಬೆಳೆಯಿತು.

ಈ ಮಧ್ಯೆ, ಅವನ ತಂದೆ ತೀರಿಹೋದರು. ತಂದೆಯ ಅಂತ್ಯಸಂಸ್ಕಾರಕ್ಕೆ ಹೋದಾಗಲೂ ಮೊದಲ ಹೆಂಡತಿ ಮತ್ತು ಮಕ್ಕಳು ತಾತ್ಸಾರದಿಂದ ನೋಡಿದರು. ತಾಯಿಯನ್ನೂ ಮನೆಗೆ ಸೇರಿಸಿಕೊಳ್ಳಲಿಲ್ಲ.  ಗಂಡ ತೀರಿಹೋದ ಮೇಲೆ ರತ್ನಮ್ಮ ಆ ಮನೆಯಿಂದ ಇನ್ನಾವ ಆಸೆಯನ್ನೂ ಇಟ್ಟುಕೊಳ್ಳಲಿಲ್ಲ.

ಸಂದೀಪ ಮದುವೆಯ ವಯಸ್ಸಿಗೆ ಬರುತ್ತಿದ್ದಂತೆಯೇ ಬಡ ಕುಟುಂಬದ ಹೆಣ್ಣೊಂದನ್ನು ನೋಡಿ ಮದುವೆ ಮಾಡಿದರು. ತಂದೆ ಮನೆಯಿಂದ ಯಾರೂ ಬಂದಿರಲಿಲ್ಲ. ನಾನು ಕುಟುಂಬ ಸಮೇತನಾಗಿ ಹೋಗಿ ನವದಂಪತಿಗೆ ಹರಸಿ ಬಂದೆ.

ಸಂದೀಪನ ತಂದೆ ರಾಜಪ್ಪನವರ ಬಳಿ ಸಾಕಷ್ಟು ಆಸ್ತಿ ಇತ್ತು. ಅವರು ಮೃತರಾದ ಮೇಲೆ ಮೊದಲನೆಯ ಹೆಂಡತಿ ಮತ್ತು ಮಕ್ಕಳು ಸಂಪೂರ್ಣ ಆಸ್ತಿಯನ್ನು ಲಪಟಾಯಿಸಿದರು.

ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸುವಾಗ ಸಂದೀಪ್ ಮತ್ತು ತಾಯಿಯ ಇರುವಿಕೆಯನ್ನು ಅವರು ಸಂಬಂಧಿಸಿದ ಅಧಿಕಾರಿಗಳಿಂದ ಮುಚ್ಚಿಟ್ಟಿದ್ದರು.  ತಮಗಾದ ಅನ್ಯಾಯವನ್ನು ನೆನೆದು ರತ್ನಮ್ಮ ಮನಸ್ಸಿನಲ್ಲಿಯೇ ಕೊರಗತೊಡಗಿದರು.
***
ಅದೊಂದು ದಿನ ಎಂದಿನಂತೆ ಸಂದೀಪ ನನ್ನನ್ನು ಭೇಟಿಯಾಗಲು ಬಂದ. ನನ್ನ ಕಿರಿಯ ಸಹೊದ್ಯೋಗಿಯೊಬ್ಬ ಸಿವಿಲ್‌ ಕೋರ್ಟ್‌ಗೆ ಹೋಗಿದ್ದ. ಅವನನ್ನು ಕಾರಿನಲ್ಲಿ ಕರೆತರುವಂತೆ ಸಂದೀಪನಿಗೆ ಹೇಳಿ ಕಳುಹಿಸಿದೆ.

ಸಿವಿಲ್‌ ಕೋರ್ಟ್‌ಗೆ ಹೋದ ಸಂದೀಪ, ಕೆಲ ಗಂಟೆ ಬಳಿಕ ಏದುಸಿರು ಬಿಡುತ್ತಾ ನನ್ನ ಬಳಿ ಆತುರಾತುರವಾಗಿ ಬಂದ. ಏನಾಯಿತೆಂದು ವಿಚಾರಿಸಿದೆ. ಸಿವಿಲ್‌ ಕೋರ್ಟ್‌ನಲ್ಲಿ ತನ್ನ ತಂದೆಯ ಮೊದಲ ಹೆಂಡತಿ ಮತ್ತು ಮಕ್ಕಳು ಹಾಗೂ ಇನ್ನೂ ಕೆಲವರನ್ನು ತಾನು ನೋಡಿದುದಾಗಿ ಹೇಳಿದ. ‘ಅವರು ಯಾವುದೋ ಒಂದು ಮೊಕದ್ದಮೆ ದಾಖಲಿಸಿದಂತಿದೆ. ಅದರ ವಿಚಾರಣೆಯನ್ನು ನ್ಯಾಯಾಧೀಶರು ನಡೆಸುತ್ತಿದ್ದಾರೆ’ ಎಂದ. ಅದಕ್ಕೆ ನಾನು, ‘ಸರಿ, ಆಮೇಲೆ ಹೋಗಿ ವಿಚಾರಿಸುವೆ’ ಎಂದೆ.

ನಾನು ಹೈಕೋರ್ಟ್‌ ವಿರಾಮದ ವೇಳೆ ಅಲ್ಲಿಗೆ ಹೋಗಿ ಇದರ ಬಗ್ಗೆ ವಿಚಾರಿಸಿದೆ. ಆಗ ನನಗೆ ಗೊತ್ತಾದದ್ದು ಏನೆಂದರೆ, ಮೊದಲ ಹೆಂಡತಿ ಮತ್ತು ಮಕ್ಕಳೆಲ್ಲಾ ಸೇರಿ ಸಂದೀಪನ ಅಪ್ಪನ ಆಸ್ತಿಯನ್ನು ಸಮನಾಗಿ ಹಂಚಿಕೊಳ್ಳುವ ಸಂಬಂಧ ದಾಖಲು ಮಾಡಿದ್ದ ಅರ್ಜಿ ಇದಾಗಿತ್ತು. ಹಂಚಿಕೆಗೆ ಸಂಬಂಧ
ಪಟ್ಟಂತೆ ಅವರವರಲ್ಲಿಯೇ ಕೆಲವು ಮನಸ್ತಾಪ ಏರ್ಪಟ್ಟಿದ್ದರಿಂದ ಕೇಸು ದಾಖಲು ಮಾಡಲಾಗಿತ್ತು. ನಂತರ ಕೋರ್ಟ್‌ನಲ್ಲಿ ಎಲ್ಲರೂ ರಾಜಿ ಮಾಡಿಕೊಂಡು ಹೋದ ವಿಷಯ ತಿಳಿಯಿತು.

ಈ ವಿಷಯವನ್ನು ಸಂದೀಪ ತಾಯಿಗೆ ಹೇಳಿದ. ಆಸ್ತಿಯೆಲ್ಲವನ್ನೂ ಅವರೇ ಹಂಚಿಕೊಂಡಿರು ವುದಾಗಿ ತಿಳಿಸಿದ. ಆದರೆ ಇದರ ಬಗ್ಗೆ ರತ್ನಮ್ಮ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ‘ದೇವರು ನಮಗೆ ಹೊಟ್ಟೆ ಬಟ್ಟೆಗೆ ಕಮ್ಮಿ ಮಾಡಲಿಲ್ಲ. ನಿನ್ನಂಥ ಒಳ್ಳೆಯ ಮಗನನ್ನು ನನಗೆ ಕರುಣಿಸಿದ್ದಾನೆ.

ಇನ್ನೇನು ಬೇಕು ನನಗೆ, ಇಷ್ಟೇ ಸಾಕು, ಅವರೇ ಆಸ್ತಿಯನ್ನೆಲ್ಲಾ ಹಂಚಿಕೊಳ್ಳಲಿ ಬಿಡು. ನೀನು ತಲೆ ಕೆಡಿಸಿಕೊಳ್ಳಬೇಡ’ ಎಂದು ಮಗನಿಗೆ ಸಮಾಧಾನ ಮಾಡಿದರು. ಆದರೆ ಸಂದೀಪನಿಗೆ ಇದನ್ನು ಸಹಿಸಲು ಆಗಲಿಲ್ಲ. ಆಸ್ತಿಯೆಲ್ಲಾ ಅವರೇ ಹಂಚಿಕೊಂಡಿದ್ದರಿಂದ ಅಸಮಾಧಾನಗೊಂಡ. ಇದನ್ನು ನನ್ನ ಬಳಿ ಅವಲತ್ತುಕೊಂಡ. ತನ್ನ ಅಮ್ಮನ ಬಳಿ ಮಾತನಾಡುವಂತೆ ಹೇಳಿದ.

ಆಗ ನಾನು ರತ್ನಮ್ಮ ಅವರ ಬಳಿ, ‘ಕಾನೂನಿನ ಪ್ರಕಾರ ಹೋಗುವುದಾದರೆ ಆ ಆಸ್ತಿಯಲ್ಲಿ ನಿಮಗೂ, ಸಂದೀಪನಿಗೂ ಪಾಲು ಇದೆ, ಬೇಕಿದ್ದರೆ ನಾನೇ ಕೋರ್ಟ್‌ಗೆ ಒಂದು ಅರ್ಜಿ ಹಾಕುವೆ ’ ಎಂದೆ. ಆದರೆ ರತ್ನಮ್ಮ ನಿರ್ಲಿಪ್ತರಾಗಿದ್ದರು. ಆ ಕುಟುಂಬದ ಸಹವಾಸವೇ ಬೇಡ ಎಂದರು. ಅದಕ್ಕೆ ನಾನೂ ಸುಮ್ಮನಾದೆ. ಹೀಗೆ ವರ್ಷಗಳೇ ಉರುಳಿದವು. ರಾಜಪ್ಪನವರ ಆಸ್ತಿಯಲ್ಲಿ ಅವರೆಲ್ಲಾ ಮಜಾ ಉಡಾಯಿಸುತ್ತಿದ್ದರು.

***
ರತ್ನಮ್ಮನವರು ತಾವು ಮನೆಬಿಟ್ಟು ಬರುವಾಗ ಮದುವೆಗೂ ಮುನ್ನ ರಾಜಪ್ಪ ತಮಗೆ ಬರೆದಿದ್ದ ಪ್ರೇಮ ಪತ್ರಗಳ ಕಂತೆಯನ್ನು ತೆಗೆದುಕೊಂಡು ಬಂದಿದ್ದರು. ಈ ನಡುವೆಯೇ ಮದುವೆಯಾಗಿದ್ದರಿಂದ ಪ್ರೇಮ ಪತ್ರಗಳನ್ನೆಲ್ಲಾ ಮತ್ತೆ ಓದುವ ಗೋಜಿಗೆ ಹೋಗಿರಲಿಲ್ಲ. ಅವುಗಳನ್ನೆಲ್ಲಾ ಮೂಟೆ ಮಾಡಿ ಒಂದು ಹಳೆಯ ಪೆಟ್ಟಿಗೆಯಲ್ಲಿ ಇಟ್ಟಿದ್ದರು.

ಅದೊಂದು ದಿನ ಊಹಿಸಲಾರದ ಘಟನೆ ನಡೆಯಿತು.  ಸದಾ ಗಂಡನ ನೆನಪು ಮಾಡಿಕೊಳ್ಳುತ್ತಿದ್ದ ರತ್ನಮ್ಮ ಅವರಿಗೆ ರಾಜಪ್ಪನವರು ಬರೆದ ಪ್ರೇಮ ಪತ್ರಗಳನ್ನು ಮತ್ತೊಮ್ಮೆ ಓದುವ ಆಸೆಯಾಯಿತು. ಆದ್ದರಿಂದ ಯಾವುದೋ ಮೂಲೆಯಲ್ಲಿದ್ದ ಆ ಪೆಟ್ಟಿಗೆಯನ್ನು ತೆಗೆದು ಒಂದೊಂದೇ  ಪತ್ರ ಓದತೊಡಗಿದರು. ತಮ್ಮ ಹಿಂದಿನ ಸುಮಧುರ ಕ್ಷಣಗಳನ್ನು ಸವಿಯುತ್ತಿರುವಾಗಲೇ ಮುಚ್ಚಿದ್ದ ಲಕೋಟೆಯೊಂದು ಅವರ ಕಣ್ಣಿಗೆ ಬಿತ್ತು. ಅದರ ಮೇಲೆ ‘ಕ್ಷಮೆ ಇರಲಿ...’ ಎಂದು ಬರೆದಿತ್ತು. ಹಿಂದೆಂದೂ ಗಮನಿಸಿರದ ಈ ಹೊಸ ಲಕೋಟೆ ನೋಡಿ ರತ್ನಮ್ಮ ಅವರಿಗೆ ಅತ್ಯಾಶ್ಚರ್ಯವಾಯಿತು.

ಲಗುಬಗೆಯಿಂದ ಲಕೋಟೆ ತೆರೆದು ನೋಡಿದಾಗ ದಿಗಿಲಾಯಿತು. ಅದರಲ್ಲಿ ಉಯಿಲು ಪತ್ರವಿತ್ತು...! ಎರಡನೆಯ ಹೆಂಡತಿಯಾಗಿ ಆ ಮನೆಗೆ ಹೋದ ಮೇಲೆ ರತ್ನಮ್ಮ ಹಾಗೂ ಸಂದೀಪನನ್ನು ಮೊದಲ ಹೆಂಡತಿ ಮತ್ತು ಮಕ್ಕಳು ನಡೆಸಿಕೊಳ್ಳುತ್ತಿದ್ದ ರೀತಿಯಿಂದ ಅವರ ಭವಿಷ್ಯದ ಬಗ್ಗೆ ರಾಜಪ್ಪ ಆಗಲೇ ಯೋಚಿಸಿದ್ದರೇನೋ.

ತಾವು ಅಕಸ್ಮಾತ್‌ ಸತ್ತುಹೋದರೆ ಇವರಿಬ್ಬರನ್ನು ಅವರೆಲ್ಲಾ ಮನೆಯಿಂದ ಹೊರಗೆ ಹಾಕುವ ಮುನ್ಸೂಚನೆ ಅವರಿಗೆ ಮೊದಲೇ ಇದ್ದಂತಿತ್ತು. ಅದಕ್ಕಾಗಿ ಅವರು ಉಯಿಲು (ವಿಲ್‌) ಬರೆದಿದ್ದರು. ಆ ಉಯಿಲಿನಲ್ಲಿ  ಬೆಂಗಳೂರಿನ ಚಾಮರಾಜಪೇಟೆಯ ಮುಖ್ಯ ರಸ್ತೆಯಲ್ಲಿನ ಬೆಲೆಬಾಳುವ  ತಮ್ಮ ನಿವೇಶನ ರತ್ನಮ್ಮ ಅವರಿಗೆ ನೀಡಬೇಕು ಎಂದು ಬರೆದಿದ್ದರು.

ಅಂದಿನ ದಿನಗಳಲ್ಲಿ ಆ ಆಸ್ತಿಯ ಮೌಲ್ಯ ಸುಮಾರು 50 ಲಕ್ಷ ರೂಪಾಯಿ ಆಗಿತ್ತು. ಈ ಉಯಿಲು ಬೇರೆಯವರಿಗೆ ಕಂಡರೆ ಕಷ್ಟ ಎಂಬ ಕಾರಣಕ್ಕೆ ಪ್ರೇಮ ಪತ್ರದ ರಾಶಿಯಲ್ಲಿ ಅಡಗಿಸಿ ಇಟ್ಟಿದ್ದರು. ಅದನ್ನು ರತ್ನಮ್ಮ ಒಂದಿಲ್ಲೊಂದು ದಿನ ತೆಗೆದು ನೋಡುತ್ತಾಳೆ ಎನ್ನುವ ಭರವಸೆ ಅವರಲ್ಲಿತ್ತು!

ರತ್ನಮ್ಮ ಅವರಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ.  ಸಂದೀಪನೊಟ್ಟಿಗೆ ನನ್ನ ಬಳಿ ಬಂದು ವಿಷಯ ಹೇಳಿದರು. ‘ಇದರಲ್ಲಿ ನ್ಯಾಯವಾಗಿ ಸಂದೀಪನಿಗೆ ಸಿಗುವಂತಿದ್ದರೆ ಮಾತ್ರ ಏನಾದರೂ ಮಾಡಿ. ಇಲ್ಲದಿದ್ದರೆ ನನಗೆ ಈ ಆಸ್ತಿಯ ಉಸಾಬರಿ ಬೇಡ’ ಎಂದರು.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮೊದಲ ಹೆಂಡತಿ ಹಾಗೂ  ಮಕ್ಕಳು ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಲಗತ್ತಿಸಿದ್ದ ದಾಖಲೆಗಳನ್ನು ನಾನು ಪರಿಶೀಲಿಸಿದೆ. ಅದರಲ್ಲಿ ಈ ಆಸ್ತಿ ರತ್ನಮ್ಮ ಅವರಿಗೆ ಹೋಗಬೇಕು ಎಂದು ಬರೆದಿದ್ದು ನಿಜ ಎಂದು ತಿಳಿಯಿತು. ಆದರೆ ಅದನ್ನು ತಿದ್ದಿತೀಡಿ ಆ ಆಸ್ತಿಯನ್ನು ಮೊದಲ ಹೆಂಡತಿಗೇ ಹೋಗುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದರು.

ಅಷ್ಟರಲ್ಲಿಯೇ, ಮೊದಲ ಹೆಂಡತಿ ಕೆಲ ದಿನಗಳ ಹಿಂದೆ ತೀರಿಕೊಂಡ ಸುದ್ದಿ ಸಂದೀಪನಿಗೆ ಸಿಕ್ಕಿತು. ಅಲ್ಲದೇ, ರತ್ನಮ್ಮ ಅವರಿಗೆ ಸಿಗಬೇಕಿರುವ ನಿವೇಶನವನ್ನು ಅವರೆಲ್ಲಾ ಮಾರಾಟ ಮಾಡಲು ಹೊರಟಿದ್ದಾರೆ ಎನ್ನುವ ವಿಷಯವನ್ನೂ ಅವನು ಕಲೆ ಹಾಕಿದ. ಯಾರೋ ಒಬ್ಬರು ಈ ನಿವೇಶನ ಖರೀದಿಸಲು ಮುಂಗಡ ಹಣ ನೀಡಿದ್ದಾರೆ ಎಂದು ಹೇಳಿದ.

ಈ ಬಗ್ಗೆ ಮೊದಲ ಹೆಂಡತಿ ಮಕ್ಕಳ ಜೊತೆ ಚರ್ಚಿಸಿ ನಂತರ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಯೋಚನೆ ಮಾಡಿದೆ ನಾನು. ಆದರೆ ಇವೆಲ್ಲಾ ಪ್ರಕ್ರಿಯೆ ಸ್ವಲ್ಪ ವಿಳಂಬ ಆಗಬಹುದು ಎಂದುಕೊಂಡೆ. ಖರೀದಿದಾರರೇನಾದರೂ ನಿವೇಶನವನ್ನು ತಮ್ಮ ಹೆಸರಿಗೆ ಮಾಡಿಕೊಂಡುಬಿಟ್ಟರೆ ಆಮೇಲೆ ಕಾನೂನು ಪ್ರಕ್ರಿಯೆ ಸ್ವಲ್ಪ ಕಷ್ಟವಾಗಬಹುದು ಎಂದುಕೊಂಡು  ಕೂಡಲೇ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಒಂದು ಸಾರ್ವಜನಿಕ ನೋಟಿಸ್‌ ಪ್ರಕಟಿಸಿದೆ. ‘ಈ ಆಸ್ತಿ ನನ್ನ ಕಕ್ಷಿದಾರ
ರಾಗಿರುವ ರತ್ನಮ್ಮ ಅವರಿಗೆ ಸೇರಿದ್ದು, ಆಸ್ತಿಯನ್ನು ಯಾರೂ ಕ್ರಯ ಮಾಡಿಕೊಳ್ಳಬಾರದು’ ಎಂದು ಅದರಲ್ಲಿ ಉಲ್ಲೇಖಿಸಿದೆ.

ಮಾರನೆಯ ದಿನ ಪತ್ರಿಕೆಯಲ್ಲಿ ಪ್ರಕಟವಾದ ಈ ಪ್ರಕಟಣೆಯನ್ನು ಜಯಶಂಕರ್‌ ಎಂಬ ಉದ್ಯಮಿ ನೋಡಿದರು. ಅಪಾರ್ಟ್‌ಮೆಂಟ್ ಕಟ್ಟಲು ಈ ನಿವೇಶನವನ್ನು ಅವರು ಮುಂಗಡ ಹಣ ನೀಡಿ ಖರೀದಿಸಿದ್ದರು. ಕೆಲವೇ ದಿನಗಳಲ್ಲಿ ಅದು ಅವರ ಹೆಸರಿಗೆ ನೋಂದಣಿ ಕೂಡ ಆಗುವುದರಲ್ಲಿತ್ತು. ಕೂಡಲೇ ಅವರು ತಮ್ಮ ವಕೀಲರ ಮೂಲಕ ನನ್ನ ಕಚೇರಿಗೆ ಬಂದರು.

ವಿಷಯವನ್ನು ಕೇಳಿ ತಿಳಿದುಕೊಂಡ ಅವರು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದರು. ಇದು ರತ್ನಮ್ಮ ಅವರಿಗೆ ಸೇರಿದ ಆಸ್ತಿ ಎಂದು ಅವರಿಗೆ ಮನವರಿಕೆ ಆಯಿತು. ಆದರೆ ಅವರಿಗೆ ಆ ನಿವೇಶನ ತುಂಬಾ ಇಷ್ಟವಾಗಿಬಿಟ್ಟಿತ್ತು.  ಆದ್ದರಿಂದ ಆ ನಿವೇಶವನ್ನು ತಮಗೆ ನೀಡುವಂತೆ ಕೋರಿದರು. ಅದಕ್ಕೂ ಮುನ್ನ ನಿವೇಶನ ರತ್ನಮ್ಮ ಅವರ ಹೆಸರಿಗೆ ಆಗಬೇಕಿತ್ತಲ್ಲ...!

ಜಯಶಂಕರ್‌ ಅವರ ವಕೀಲರು ನನ್ನೊಂದಿಗೆ ಚರ್ಚಿಸಿ ರಾಜಪ್ಪನವರ ಮೊದಲ ಹೆಂಡತಿಯ ಮಕ್ಕಳಿಗೆ ಒಂದು ನೋಟಿಸ್‌ ಕಳುಹಿಸಿದರು. ಅದರಲ್ಲಿ, ಈ ಆಸ್ತಿಯ ಬಗ್ಗೆ ಉಲ್ಲೇಖಿಸಿದರು. ಮೋಸದಿಂದ ಆಸ್ತಿ ಲಪಟಾಯಿಸಿರುವುದರ ಬಗ್ಗೆ ಅದರಲ್ಲಿ ಬರೆದು, ‘ಆಸ್ತಿಯನ್ನು ರತ್ನಮ್ಮ ಅವರಿಗೆ ನೀಡದಿದ್ದಲ್ಲಿ ಉಳಿದಿರುವ ಆಸ್ತಿಯ ಪಾಲನ್ನೂ ಅವರಿಗೆ ಕೊಡುವಂತೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು. ನೋಟಿಸ್‌ ನೋಡಿ ಅವರೆಲ್ಲಾ ದಿಗ್ಭ್ರಮೆಗೊಂಡರು. ಮಾಡಿರುವ ಮೋಸ ಬೆಳಕಿಗೆ ಬಂದರೆ ತಮ್ಮ ಕಥೆ ಮುಗಿದಂತೆಯೇ ಎಂದು ತಿಳಿದ ಅವರು, ಆಸ್ತಿಯನ್ನು ರತ್ಮಮ್ಮ ಅವರಿಗೆ ಕೊಡಲು ಒಪ್ಪಿಕೊಂಡು ಸೂಕ್ತ ದಾಖಲೆ ಸಿದ್ಧಪಡಿಸಿದರು.

ಆಸ್ತಿ ರತ್ಮಮ್ಮನವರ ಹೆಸರಿಗೆ ಆಯಿತು. ಜಯಶಂಕರ್‌ ಅವರು ರತ್ನಮ್ಮ ಅವರಿಂದ ಆಸ್ತಿ ಖರೀದಿಸುವ ಸಂಬಂಧ ದಾಖಲೆಗಳನ್ನು ಸಿದ್ಧಪಡಿಸಿದರು. ₹ 50 ಲಕ್ಷ ಆಸುಪಾಸು ತಮಗೆ ಹಣ ಸಿಗಬಹುದು ಎಂದು ರತ್ನಮ್ಮ ಭಾವಿಸಿದ್ದರು. ಆದರೆ ನಿವೇಶನದ ಅಂದಿನ ಬೆಲೆ ಎರಡು ಕೋಟಿ ರೂಪಾಯಿ ಆಗಿತ್ತು. ಅಷ್ಟು ಹಣ ರತ್ಮಮ್ಮ ಅವರ ಕೈಸೇರಿತು.

ಕೋರ್ಟ್‌ಗೆ ಅಲೆದಾಟ ಮಾಡದೆಯೇ ಪತ್ರಿಕೆಯ ಪ್ರಕಟಣೆಯೊಂದರಿಂದಲೇ ರತ್ನಮ್ಮ ಹಾಗೂ ಸಂದೀಪ ಕೋಟ್ಯಧಿಪತಿಯಾದರು...! ಪ್ರೇಮ ಪತ್ರದ ಒಳಗೆ ಎಂಥ ಸೋಜಿಗ ಅಡಗಿತ್ತಲ್ಲವೇ...? ಇದನ್ನೇ ದೈವ ಲೀಲೆ ಎನ್ನುವುದೋ ಏನೊ...
ಲೇಖಕ ಹೈಕೋರ್ಟ್‌ ವಕೀಲ (ಹೆಸರುಗಳನ್ನು  ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT