ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಕ್ಷೇತ್ರದ ಬಹುಮುಖಿ ಪ್ರತಿಭೆ

Last Updated 30 ಜುಲೈ 2017, 18:10 IST
ಅಕ್ಷರ ಗಾತ್ರ

ಹೊಳೆಯುವ ಕಂಗಳ, ತೇಜೋಮಯ ಮುಖಾರವಿಂದದ ಇಳಿಬಿಟ್ಟ ಕೂದಲ ಜುಬ್ಬಾ ಧರಿಸಿದ ವ್ಯಕ್ತಿಯೊಬ್ಬರು, 2002ನೇ ಇಸವಿಯ ಜುಲೈ ತಿಂಗಳ 18ನೇ ತಾರೀಖಿನಂದು ಬೆಂಗಳೂರಿನ ವಿಜ್ಞಾನ ವೇದಿಕೆಯಲ್ಲಿ ‘Why Scientific Tempre Regreses While Science and Technology Advances at on ever increasing pace?’ ಎಂಬ ವಿಷಯದ ಮೇಲೆ ತಮ್ಮದೇ  ಹಾಸ್ಯಭರಿತ ಶೈಲಿಯಲ್ಲಿ ಉಪನ್ಯಾಸ ನೀಡುತ್ತಿದ್ದರೆ, ಪ್ರೇಕ್ಷಕರು  ಮಂತ್ರ ಮುಗ್ಧವಾಗಿದ್ದರು. ಆ ವ್ಯಕ್ತಿಯೇ ಪ್ರೊ. ಯಶ್‌ಪಾಲ್.

ತಮ್ಮ 90ನೇ ವಯಸ್ಸಿನಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಮ್ಮನ್ನಗಲಿದ ಪ್ರೊ. ಯಶ್‌ಪಾಲ್ ಒಬ್ಬ ವೃತ್ತಿಪರ ವಿಜ್ಞಾನಿ– ವಿಜ್ಞಾನ ಸಂವಹನಕಾರ– ವಿಜ್ಞಾನ ಪರಿಚಾರಕ– ಶಿಕ್ಷಣ ತಜ್ಞರಾಗಿದ್ದರು. 

ಪ್ರಾರಂಭಿಕ ದಿನಗಳು: ಪ್ರೊ. ಯಶ್‌ಪಾಲ್ 1926 ನವೆಂಬರ್ 26ರ ರಂದು ಪಂಜಾಬ್ ಪ್ರಾಂತ್ಯದ ಝಾಂಗ್ (Jhang, ಈಗ ಪಾಕಿಸ್ತಾನದಲ್ಲಿದೆ)ನಲ್ಲಿ ಜನಿಸಿದರು. ಈಗಿನ ಬಲೂಚಿಸ್ತಾನದ ಕ್ವೆಟ್ಟಾ (Quetta) ಎಂಬಲ್ಲಿ ಬಾಲ್ಯದ ದಿನಗಳನ್ನು ಕಳೆದ ಯಶ್, ಬ್ರಿಟಿಷ್ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆ ರಾಮ್ ಪಿಯಾರೆ ಲಾಲ್‌ಗೆ (Ram Piyare Lal) ಜಬಲ್‌ಪುರಕ್ಕೆ ವರ್ಗವಾದಾಗ ಕುಟುಂಬ ಮಧ್ಯ ಭಾರತದಲ್ಲಿ ನೆಲೆ ನಿಂತಿತು. ಆಗ 9ನೇ ತರಗತಿ ಓದುತ್ತಿದ್ದ ‘ಯಶ್’ ಉರ್ದು ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ನೊಂದಾಯಿತರಾದರು.  ಬಹು ಬುದ್ಧಿವಂತ, ಸೃಜನಶೀಲ ಯಶ್ ಪ್ರಾರಂಭದ ದಿನಗಳಲ್ಲಿಯೇ ಲೇಖನಗಳನ್ನು ಬರೆಯುತ್ತಿದ್ದರು.

ಈಸ್ಟ್ ಪಂಜಾಬ್ ವಿಶ್ವವಿದ್ಯಾಲಯದ ದೆಹಲಿ ಶಾಖೆಯ ಹಾನರ್ಸ್ ವಿಭಾಗದಲ್ಲಿ ಎಂಎಸ್ಸಿ ಪದವಿಗಾಗಿ ಅಧ್ಯಯನ ಮಾಡುತ್ತಿದ್ದ ಯಶ್‌ಪಾಲ್ ಅವರಿಗೆ ಮುಂಬೈನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (TIFR) 1949ರಲ್ಲಿ ಆಹ್ವಾನ ನೀಡಿತು. ಮುಂದೆ ಸುಮಾರು ಮೂರುವರೆ ದಶಕಗಳ ಕಾಲ ‘ವೃತ್ತಿಪರ’ ವಿಜ್ಞಾನಿಯಾಗಿ ವಿಶ್ವ ಕಿರಣ (Cosmic Rays) ಗಳಿಗೆ ಸಂಬಂಧಿಸಿದ ಹಲವಾರು ಪ್ರಯೋಗಗಳನ್ನು TIFR ನಲ್ಲಿ ನಡೆಸಿದರು.

ಪೋಟೊಗ್ರಾಫಿಕ್ ಹಾಳೆಯ ಮೇಲೆ ನ್ಯೂಕ್ಲಿಯರ್ ಎಮಲ್ಷನ್ ಬಳಸಿ, ವಿಶ್ವಕಿರಣಗಳು ಈ ಹಾಳೆಯ ಮೇಲೆ ಹಾದು ಹೋದಾಗ ಅದು ಸಾಗಿದ ರೀತಿ, ನಡೆಸಿದ ಇತರೆ ಕ್ರಿಯೆಗಳು ಪತ್ತೆಯಾಗುತ್ತವೆ. ಇದರ ಅಧ್ಯಯನದಿಂದ ವಿಶ್ವಕಿರಣಗಳ ಶಕ್ತಿ, ಅದು ಉತ್ಪಾದಿಸಿದ ಇತರೆ ಕಣಗಳು ಮತ್ತಿತರ  ವಿವರಗಳು ದೊರಕುತ್ತವೆ. ಈ ವಿಧಾನದಲ್ಲಿ ವಿಶ್ವಕಿರಣಗಳ ಅಧ್ಯಯನ ಪ್ರಾರಂಭಿಸಿದ ಯಶ್‌ಪಾಲ್, ಅವರ ಸಹಪಾಠಿ ಸ್ನೇಹಿತ ದೇವೇಂದ್ರ ಲಾಲ್ ಮತ್ತು  ಬರ್ನಾಡ್ ಪೀಟರ್ಸ್ ಅವರೊಂದಿಗೆ ಅನೇಕ ಸಂಶೋಧನಾ ಪ್ರಬಂಧಗಳನ್ನು ಜಾಗತಿಕ ಮಟ್ಟದ ಭೌತ ವಿಜ್ಞಾನದ ಪತ್ರಿಕೆಗಳಲ್ಲಿ 1950–53ರ ಅವಧಿಯಲ್ಲಿ ಪ್ರಕಟಿಸಿದರು. ಈ ಸಂಶೋಧನೆಗಳು ಜಗತ್ತು ಭಾರತದತ್ತ ಕಣ್ತೆರೆದು ನೋಡುವಂತೆ ಮಾಡಿತ್ತು.

ಸಂಶೋಧನೆಯ ಜೊತೆಗೆ, ಹಲವು ವರ್ಷಗಳಿಂದ ಸ್ನೇಹಿತೆಯಾಗಿದ್ದ ನಿರ್ಮಲ್ ಅವರನ್ನು 1954ರಲ್ಲಿ ಯಶ್‌ಪಾಲ್ ವರಿಸಿದರು. ಅದೇ ವರ್ಷ ಪಿಎಚ್‌.ಡಿ ಅಧ್ಯಯನಕ್ಕಾಗಿ ಅಮೆರಿಕದ ಎಂ.ಐ.ಟಿ. ಮೆಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ತೆರಳಿದರು. ಬ್ರುನೊ ರೊಸ್ಸಿ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮುಗಿಸಿ 1958ರಲ್ಲಿ ಭಾರತಕ್ಕೆ ಬಂದರು.

TIFR ನಲ್ಲಿ ಸಂಶೋಧನೆ ಮುಂದುವರೆಸುವ ಯಶ್‌ಪಾಲ್ ಅನೇಕ ವಿದ್ಯಾರ್ಥಿಗಳಿಗೆ ಪೋಷಕ ಸ್ಥಾನದಲ್ಲಿ ನಿಂತು ಅವರಲ್ಲಿರುವ ಪ್ರತಿಭೆ ಮತ್ತು ಸೃಜನಶೀಲತೆ ಸಂಪೂರ್ಣವಾಗಿ ಅರಳುವಂತೆ ಮಾಡಿದರು.

ಮುಂದಿನ ದಿನಗಳಲ್ಲಿ  ಅವರ ಸಂಶೋಧನೆ ವಿಶ್ವಕಿರಣ ಮೂಲಭೂತ  ಕಣಗಳಷ್ಟೇ ಅಲ್ಲದೆ, ನಮ್ಮ ನಿಹಾರಿಕೆ ಆಕಾಶಗಂಗೆಯಲ್ಲಿ ವಿಶ್ವಕಿರಣಗಳು ಸಾಗಿಬರುವ ರೀತಿಯನ್ನು ಅಧ್ಯಯನ ಮಾಡುವ ಖಭೌತ ಮತ್ತು ವಿಶ್ವ ವಿಜ್ಞಾನ (Astro physics and Cosmology) ಗಳತ್ತ ಹೊರಳಿತ್ತು.

ವಿಜ್ಞಾನ ಪರಿಚಾರಕ ಮತ್ತು ಸಂವಹನಕಾರ: ಬಾಲ್ಯ ಮತ್ತು ಯೌವ್ವನದ ದಿನಗಳಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಉತ್ತರಗಳಲ್ಲಿ ಕಳೆದ ಯಶ್‌ಪಾಲ್ ದೇಶ ವಿಭಜನೆಯ ಸನ್ನಿವೇಶದಲ್ಲಿ ತಮ್ಮ ತಾಯ್ನೆಲದ ಸಂಪರ್ಕ ಕಡಿದುಕೊಳ್ಳಬೇಕಾಯಿತು. ನಿರಾಶ್ರಿತರ ತಾಣಗಳಲ್ಲಿ ಬದುಕಿನ ವಿವಿಧ ಚಿತ್ರಗಳನ್ನು ಕಂಡಿದ್ದ ಅವರೊಳಗೆ ಸಾಮಾಜಿಕ ಕಳಕಳಿ ತನಗರಿವಿಲ್ಲದಂತೆಯೇ ಬೆಳೆದಿತ್ತು. ‘ವಿಜ್ಞಾನವನ್ನು ಸಮಾಜದ ಉನ್ನತಿಗೆ ಹೇಗೆ ಬೆಸೆಯಬೇಕು ಎಂಬುದರ ಬಗ್ಗೆಯೇ ಅವರು ಸದಾ ಯೋಚಿಸುತ್ತಿದ್ದರು’ ಎಂದು ಅವರ ಆತ್ಮೀಯ ಗೆಳೆಯ ಡಾ. ಕಸ್ತೂರಿ ರಂಗನ್ ನೆನೆಯುತ್ತಾರೆ.

ಎಸ್.ಎ.ಸಿ. ನಿರ್ದೇಶಕರಾಗಿ  ಸಂಸ್ಥೆಯನ್ನು ಬಲಪಡಿಸುವುದರ ಜೊತೆಗೆ ಅವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಕಾರ್ಯಕ್ರಮ SITE- Satellite Instructional Television Experiment 1975ರಲ್ಲಿ ‘ನಾಸಾ’ ಸಂಸ್ಥೆಯ ಸಹಕಾರದೊಂದಿಗೆ ಭಾರತದ ಮೂಲೆ ಮೂಲೆಗಳಲ್ಲಿರುವ ಹಳ್ಳಿಗಳಿಗೆ ಕೃಷಿ, ಪಶುಸಂಗೋಪನೆ, ಆರೋಗ್ಯ, ಮತ್ತು ಕುಟುಂಬ ಕಲ್ಯಾಣದಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಯಿತು. ಇದು ಅತ್ಯಂತ ಯಶಸ್ವಿ ಸಮೂಹ ಸಂವಹನ ಕಾರ್ಯಕ್ರಮ ಎಂದು ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಯಿತು.

ಮುಂದೆ ಅವರು ವಿಶ್ವಸಂಸ್ಥೆಯ ಆಹ್ವಾನದ ಮೇಲೆ 1982 ರಲ್ಲಿ ‘ಬಾಹ್ಯಾಕಾಶದ ಶಾಂತಿಯುತ ಬಳಕೆಯ ಅನ್ವೇಷಣೆಗಳು’ ಎಂಬ ಸಮ್ಮೇಳನವನ್ನು ನಿರ್ವಹಿಸಲು ನ್ಯೂಯಾರ್ಕ್‌ಗೆ ತೆರಳಿದರು. ಅವರು 1983ರಲ್ಲಿ ಭಾರತದ ಯೋಜನಾ ಆಯೋಗದ ಪ್ರಮುಖ ಸಲಹೆಗಾರರಾಗಿ ಭಾರತಕ್ಕೆ ಮರಳಿದರು. ನಂತರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಕಾರ್ಯದರ್ಶಿಯಾಗಿ ನೇಮಕಗೊಂಡು ನಂತರ ಯುಜಿಸಿ ಅಧ್ಯಕ್ಷ ಸ್ಥಾನದಲ್ಲಿ ನೆಲೆನಿಂತರು.

ಯುಜಿಸಿ ಅಧ್ಯಕ್ಷರಾಗಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡ  ಅವರು ದೇಶದ ಎರಡು ಪ್ರಮುಖ ಸಂಶೋಧನಾ ಸಂಸ್ಥೆಗಳಾಗಿರುವ Inter University (Accelaration Centre (IUAC-ನವದೆಹಲಿ) ಮತ್ತು  (Inter University Centre for Astronomy and Astro Physics (IVCAA –ಪುಣೆ) ಅಸ್ತಿತ್ವಕ್ಕೆ ಬಂದು ಅಭಿವೃದ್ಧಿಯಾಗುವಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಇದರ ಜೊತೆಗೆ ದೇಶದಾದ್ಯಂತ ಇರುವ ವಿವಿಧ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳನ್ನು ಬೆಸೆಯುವ (Inflibnet-Information and Library Net work) ಮತ್ತು ಡೀಮ್ಡ್‌ ವಿ.ವಿ ಸ್ಥಾಪಿಸಿ ಸಂಶೋಧನೆಗೆ ಹೆಚ್ಚಿನ ಸ್ವಾತಂತ್ರ್ಯವನ್ನು ಒದಗಿಸಿದರು.

ಪ್ರೊ. ಯಶ್‌ಪಾಲ್‌ ನೇತೃತ್ವದ ಸಮಿತಿ 1993 ರಲ್ಲಿ ಪ್ರಾಥಮಿಕ ಶಿಕ್ಷಣದ ಬಗೆಗೆ ನೀಡಿದ ವರದಿ ಹೆಚ್ಚು ಸುದ್ದಿ ಮಾಡಿತು. ಮುಂದೆ 2009 ರಲ್ಲಿ ಉನ್ನತ ಶಿಕ್ಷಣದ ಸುಧಾರಣೆಯ ಬಗ್ಗೆ ವರದಿ ರೂಪಿಸುವ ಪ್ರೊ. ಯಶ್‌ಪಾಲ್‌,  ವಿಶ್ವವಿದ್ಯಾಲಯಗಳು ಸರ್ಕಾರದ ಪಟ್ಟಭದ್ರ ಹಿತಾಸಕ್ತಿಗಳಿಂದ ಹೊರಗಿರಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ಯಶ್‌ಪಾಲ್‌ ಅವರು ಕಾರ್ಯನಿರ್ವಸಿದ ಇನ್ನೂ ಅನೇಕಾನೇಕ ಜವಾಬ್ದಾರಿಗಳು ನಮ್ಮನ್ನು ಬೆರಗುಗೊಳಿಸುತ್ತವೆ. ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತಿನ (NCSTC) ಅಧ್ಯಕ್ಷರಾಗಿದ್ದರು.

ಇಷ್ಟೆಲ್ಲಾ ಆದಾಗ್ಯೂ ಅವರನ್ನು ಇಡೀ ಭಾರತದ ಜನಸಾಮಾನ್ಯರೊಂದಿಗೆ ಬೆಸೆದದ್ದು ‘ಟರ್ನಿಂಗ್‌ ಪಾಯಿಂಟ್‌’ ಎಂಬ ಜನಪ್ರಿಯ ವಿಜ್ಞಾನ ಧಾರಾವಾಹಿ (1992). ಮಕ್ಕಳು ಕೇಳುವ ವಿಜ್ಞಾನದ ಪ್ರಶ್ನೆಗಳಿಗೆ ಹಾಸ್ಯಮಯ ಆದರೆ ಪರಿಣಾಮಕಾರಿ ಶೈಲಿಯಲ್ಲಿ ಉತ್ತರ ಹೇಳುವ ಪ್ರೊ. ಯಶ್‌ಪಾಲ್‌ ಭಾರತದ ಮನೆಮಾತಾದರು. ಪ್ರೊ.ಯಶ್‌ಪಾಲ್‌, ಮಕ್ಕಳ ಕಾರ್ಯಾಕ್ರಮಕ್ಕೆ ಸದಾ ತನ್ನ ಸಮಯ ನೀಡುತ್ತಿದ್ದುದನ್ನು ಹಾಗೂ ಕುತೂಹಲಕಾರಿ ಮನಸು ಅವರಲ್ಲಿ ಕೆಲಸ ಮಾಡುತ್ತಿದ್ದುದ್ದನ್ನು ಅವರ ನಿಕಟವರ್ತಿ ಡಾ.ಚಂದ್ರಮೋಹನ್‌ ನೆನೆಯುವರು.

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಪೂರ್ಣ ಸೂರ್ಯಗ್ರಹಣದ ನೇರಪ್ರಸಾರ 1995 ರಲ್ಲಿ ನಡೆದಾಗ ಅದನ್ನು ಸಂಯೋಜಿಸಿದ್ದು ಪ್ರೊ. ಯಶ್‌ಪಾಲ್‌ ಎಂದು ಚಂದ್ರ ಮೋಹನ್‌ ಹೇಳಿದರು. ಒಟ್ಟಾರೆಯಾಗಿ ‘ವಿಜ್ಞಾನ ಮತ್ತು ಸಮಾಜದ ಬೆಸೆಯುವಿಕೆಯ ಬಗ್ಗೆಯೇ ಅವರು ಪ್ರಾಮಾಣಿಕವಾಗಿ ಚಿಂತಿಸುತ್ತಿದ್ದರು. ಇದು ನನಗೆ ಡಾ. ಎಚ್‌. ನರಸಿಂಹಯ್ಯನವರನ್ನು ಜ್ಞಾಪಿಸುತ್ತದೆ’ ಎಂದು ಪ್ರೊ. ಪಿ. ಬಲರಾಂ ನೆನಪಿಸಿಕೊಳ್ಳುತ್ತಾರೆ.

ವಿಜ್ಞಾನ ಕ್ಷೇತ್ರದ– ಸಾಮಾಜಿಕ ಕ್ಷೇತ್ರದ ಹಲವು ನೆಲೆಗಳಲ್ಲಿ ದುಡಿದ ಪ್ರೊ. ಯಶ್‌ಪಾಲ್ ಅವರನ್ನು ‘ಅರಸಿ’ ಬಂದ ಪ್ರಶಸ್ತಿಗಳು ಹಲವಾರು.   ‘ಪದ್ಮ ಭೂಷಣ’ (1976) ‘ಪದ್ಮ ವಿಭೂಷಣ’ (2013) ಹಾಗೂ ಮಾರ್ಕೋನಿ ಪ್ರಶಸ್ತಿ  ಪ್ರಮುಖವಾದವುಗಳು.

ನಿನ್ನೆ ಸಂಜೆ 4 ಗಂಟೆಗೆ  ಹರಿದ್ವಾರದ ಗಂಗೆಯಲ್ಲಿ (29–7–17) ತಮ್ಮ ತಂದೆಯ ಉತ್ತರ ಕ್ರಿಯೆಗಳನ್ನು ನಡೆಸಿ ಲೇಖಕಿಯೊಂದಿಗೆ  ಮಾತನಾಡಿದ ಅವರ ಹಿರಿಯ ಪುತ್ರ ಅನಿಲ್‌ಪಾಲ್, ‘ನಮ್ಮ ತಂದೆಯವರು ಮನೆಯಲ್ಲಿ ಎಲ್ಲರೊಂದಿಗೆ ಸಂತೋಷವಾಗಿ, ಸೌಹಾರ್ದಯುತವಾಗಿ, ತುಂಟತನದಿಂದ ಒಡಗೂಡಿದ ವ್ಯಕ್ತಿಯಾಗಿದ್ದರು. ಅವರು ನಮಗೆಂದೂ ನಿರ್ಬಂಧಗಳನ್ನು ವಿಧಿಸಿದವರಲ್ಲ.

ನಾವೂ ಸದಾ ಪರಿಪೂರ್ಣವಾಗಿರಬೇಕು ಎಂದು ಬಯಸಿದವರಲ್ಲ. ನಮಗೆ ಗುರಿಗಳನ್ನು ತಿಳಿಸಿ ಪ್ರೋತ್ಸಾಹಿಸುತ್ತಿದ್ದರಾದರೂ, ಎಲ್ಲೂ ಬಲವಂತವಿರಲಿಲ್ಲ. ಅವರ ಮಕ್ಕಳಾಗಿರುವುದು ನಮ್ಮ ಭಾಗ್ಯ’ ಎಂದು ನೆನೆದರು’. ಜೀವನದ ಅನೇಕ ಏಳುಬೀಳುಗಳ ನಡುವೆಯೂ ಪರಿಪೂರ್ಣತೆಯೊಂದಿಗೆ ಸಾಗಬಹುದೆಂಬುದಕ್ಕೆ ಪ್ರೊ.ಯಶ್‌ಪಾಲ್‌ ನಿದರ್ಶನವಾಗುತ್ತಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT