ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಸಂವಹನೆಯ ಮೋಜು

Last Updated 30 ಜುಲೈ 2017, 19:30 IST
ಅಕ್ಷರ ಗಾತ್ರ

ಅನುಭವವು ಅರಳಿ ಅಲಂಕರಣಗೊಂಡರೆ ಕಲೆ; ಪ್ರಶ್ನಿಸಿ ಚಿಕಿತ್ಸೆಗೆ ಒಳಪಡಿಸಿದರೆ ಶಾಸ್ತ್ರ. ಅರಿಯದೆ ಸ್ಮರಣೆಯಾದರೆ ಅನಗತ್ಯ ಹೊರೆ. ಈ ಬಗ್ಗೆ ಶಿಕ್ಷಣ ಇಲಾಖೆಯನ್ನು ಎಚ್ಚರಿಸಿದವರು ದಿ. ಯಶ್‌ ಪಾಲ್. ಅವರು ಹೀಗೆ ಎಚ್ಚರಿಸಿದ ಸಂದರ್ಭವಾದರೂ ಬಂದದ್ದು ಹೇಗೆ?

‘ಮಕ್ಕಳ ಶಾಲಾಕಲಿಕೆ ಹಾಗಿರಲಿ, ಅವರು ಪ್ರತಿದಿನವೂ ಹೊರುವ ಪುಸ್ತಕದ ಚೀಲದ ಹೊರೆ ಇಳಿಸಿ’– ಎಂದು ರಾಜ್ಯಸಭೆಯಲ್ಲಿ ಆರ್. ಕೆ. ನಾರಾಯಣ್ ಅವರು ಪ್ರಶ್ನೆ ಕೇಳಿ ಎಲ್ಲರ ಗಮನವನ್ನು ಸೆಳೆದರು. ಸರ್ಕಾರವು ಈ ಕುರಿತಂತೆ ತನಿಖೆ ನಡೆಸಲು ‘ಯಶ್‌ ಪಾಲ್ ಸಮಿತಿ’ಯನ್ನು ನೇಮಿಸಿತು. ಪ್ರಶ್ನೆಯನ್ನು ಪರಿಶೀಲಿಸಿ ಪರಿಹಾರವನ್ನು ಸೂಚಿಸುವಂತೆ ಅವರನ್ನು ಕೋರಲಾಯಿತು.

ಯಶ್‌ ಪಾಲ್ ಅವರು ಅಧ್ಯಯನ ನಡೆಸಿ ತಮ್ಮ ವರದಿ ನೀಡಿದರು. ಸಾರಾಂಶ ಸಂಕ್ಷೇಪವಾಗಿ ಇದು: ಪುಸ್ತಕ ಆಧಿಕ್ಯದ ಹೊರೆ ಇರುವುದು ಖಾಸಗಿ ಶಾಲೆಗಳಲ್ಲಿ ಮಾತ್ರ. ಆದರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳೆರಡರಲ್ಲೂ ಇರುವ ಇನ್ನೊಂದು ಹೊರೆ – ಮಾನಸಿಕ ಹೊರೆ. ಅದೆಂದರೆ ಅರ್ಥವಾಗದ ವಾಕ್ಯಗಳನ್ನು ಯಾಂತ್ರಿಕವಾಗಿ, ಪರೀಕ್ಷೆಗೆ ಉಪಯುಕ್ತ ಆಗುವ ಹಾಗೆ ನೆನಪಿಟ್ಟುಕೊಳ್ಳಬೇಕಾದ ಹೊರೆ. ಅತ್ಯಂತ ಜಾಣನೆನಿಸಿಕೊಂಡ ಅಂಕಿ ಗಳಿಸಿದ ಹುಡುಗ–ಹುಡುಗಿ ಯಾರೂ ಈ ಹೊರೆಯಿಂದ ಹೊರತಾಗಿಲ್ಲ. ಕಲಿಕೆಯನ್ನೆ ಅವರು ಆನಂದಿಸುತ್ತಿಲ್ಲ.
ಇದಕ್ಕೆ ಪರಿಹಾರವೆಂದರೆ ಕಲಿಕೆಯನ್ನು ರೋಚಕ ಅನುಭವವಾಗಿಸುವುದು ಇದಕ್ಕೆ ಪ್ರೊ. ಯಶ್‌ ಪಾಲ್ ನೀಡಿದ ಘೋಷನುಡಿ. ‘ಕಲಿಕೆಯ ಆನಂದ’ (Joy of Learning).

ವಿಷಯತಜ್ಞರೂ ವಾದಪ್ರವೀಣರೂ ಆಗಿದ್ದ ಪ್ರೊ. ಯಶ್‌ ಪಾಲ್ ಅವರೊಡನೆ ಚರ್ಚೆ ಮಾಡುವ ಭಾಗ್ಯ ಪ್ರಸ್ತುತ ಲೇಖಕನಿಗೆ ದೊರಕಿತ್ತು. ಆಗ ಅವರು ತಮ್ಮ ವರದಿಯ ಬಗ್ಗೆ ಪ್ರಸ್ತಾಪಿಸಿ, ಈ ಕುರಿತು ಈಗಾಗಲೇ ಪರಿಹಾರ ಕ್ರಮಗಳನ್ನು ಆಲೋಚಿಸಿ ಜಾರಿಗೆ ತರುವ ಪ್ರಯತ್ನ ಮಾಡಿದುದಾಗಿ ಹೇಳಿದರು.

ವಿಜ್ಞಾನದ ಪರಿಕಲ್ಪನೆಗಳನ್ನು ಅನುಭವವೇದ್ಯವಾಗಿಸಿದಾಗ ಆಗುವ ರೋಚಕ ಅನುಭವವನ್ನು ಶ್ರೀಸಾಮಾನ್ಯರಿಗೂ ತಂದುಕೊಡುತ್ತಿದ್ದ ದೂರದರ್ಶನ ಕಾರ್ಯಕ್ರಮ – ‘ದಿ ಟರ್ನಿಂಗ್‌ ಪಾಯಿಂಟ್‌’. ಅದರ ವಿಶೇಷವೆಂದರೆ ವಿಜ್ಞಾನದ ಪ್ರಶ್ನೆಗಳನ್ನು ಅತ್ಯಂತ ಪರಿಚಿತ ನಿತ್ಯಾನುಭವ ಆಧರಿಸಿದ ಪ್ರಶ್ನೆಗಳನ್ನು ಕೈಗೆತ್ತಿಕೊಂಡು ಉತ್ತರವನ್ನು ಹುಡುಕುವ ಪ್ರಯತ್ನಕ್ಕೆ ತೊಡಗುತ್ತಿದ್ದುದು ಜನರ ಕೌತುಕವನ್ನು ತಣಿಸುತ್ತಿತ್ತು.

ಇದುವರೆಗೆ ಪರಿಣತರು ತಮ್ಮ ಪರಿಕಲ್ಪನೆಗೆ ಪೂರಕವಾದ ಪ್ರಶ್ನೆಗಳಿಗೆ ಉತ್ತರವನ್ನು ಹೇಳುತ್ತಿದ್ದರು. ಅದು ಜೀವನಕ್ಕೆ ಅನೇಕ ಬಾರಿ ಅಪ್ರಸ್ತುತ ಎನಿಸುತ್ತಿದ್ದುದೂ ಉಂಟು. ಆದರೆ ಈ ವಿಧಾನ ಹಾಗಲ್ಲ. ಅಜ್ಞರು ಕೇಳುವ ಪ್ರಶ್ನೆಗೆ ತಜ್ಞರು ಉತ್ತರ ಹೇಳಿ ಅಜ್ಞ–ತಜ್ಞರ ಬಾಂಧವ್ಯವನ್ನು ಬೆಸೆಯುವುದು ಹಾಗೂ ವಿಜ್ಞಾನದ ಸಾಮಾಜೀಕರಣ ಆಗುವುದು. ಇದಕ್ಕೆ ಮಾದರಿಯಾಗಿ ಉದಾಹರಿಸಬಲ್ಲ ಎರಡು ಪ್ರಶ್ನೆಗಳು.

1. ಇಸ್ತ್ರಿ ಮಾಡುವಾಗ ಇಸ್ತ್ರಿಪೆಟ್ಟಿಗೆ, ನೀರು, ಬಿಸಿ ಇವುಗಳ ಪಾತ್ರವೇನು? ಇಸ್ತ್ರಿಯ ದಕ್ಷತೆಯನ್ನು ಹೆಚ್ಚಿಸಲು ಈ ಕ್ರಮ ಹೇಗೆ ಉಪಯುಕ್ತವಾಗಿದೆ?

2) ಷೂ ಪಾಲಿಷ್ ಹಾಕುವಾಗ ಪಾಲಿಷ್‌ನಲ್ಲಿ, ಷೂನಲ್ಲಿ ಇರದ ಹೊಳಪು ಪಾಲಿಷ್ ಅನ್ನು ಷೂಗೆ ಸವರಿ ಉಜ್ಜಿದ ಮೇಲೆ ಬರುವುದಾದರೂ ಹೇಗೆ?
ಇಲ್ಲಿಯ ಘಟಕಗಳು ಕ್ರಿಯೆ ಇವುಗಳ ಮಹತ್ವ, ಬಳಕೆಯ ತತ್ತ್ವ ಯಾವುದು?
ಇಂತಹ ಪ್ರಶ್ನೆಗಳು ದೈನಂದಿನ ವಿದ್ಯಮಾನಗಳಲ್ಲಿ ಅಂತರ್ಗತವಾಗಿರುವ ವಿಜ್ಞಾನವನ್ನು ಅರಿಯಲು ಹಾಗೂ ನಿತ್ಯದ ಕೆಲಸಗಳನ್ನು ಚಿಕಿತ್ಸಾತ್ಮಕವಾಗಿ ಅರಿಯಲು ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಲು ಸಹಾಯಕ. ಸೂಕ್ಷ್ಮ ವೀಕ್ಷಣೆಯಿಂದ ಏಳುವ ಪ್ರಶ್ನೆಗಳು ಹಾಗೂ ಆ ಪ್ರಶ್ನೆಗಳಿಗೆ ಆಕರ್ಷಕವಾಗಿ, ಸಾಮಾನ್ಯಜ್ಞಾನಕ್ಕೆ ಸೋಜಿಗ ಎನಿಸಬಹುದಾದ ಅರ್ಥೈಸುವಿಕೆಗಳು ವಿಜ್ಞಾನವನ್ನು ‘ಸರ್ವಾಂತರ್ಯಾಮಿ’ ಆಗಿಸಬಲ್ಲವು. ಅಂತಹ ಅನುಭವದ ಪ್ರಶ್ನೆಗಳನ್ನು ಆಧರಿಸಿ, ‘ದಿ ಟರ್ನಿಂಗ್‌ ಪಾಯಿಂಟ್‌’ ಕಾರ್ಯಕ್ರಮದಲ್ಲಿನ ನಿರೂಪಕರ ಪೈಕಿ ಒಬ್ಬರಾದ ಪಾರ್ಥ ಘೋಷ್ ಅವರು ‘ಸ್ಟಾರ್ಮ್‌ ಓವರ್ ಎ ಟೀ ಕಫ್’ ಎಂಬ ಕೃತಿ ರಚಿಸಿದ್ದಾರೆ. ಆಸಕ್ತರು ಓದಬಹುದು.

ವಿಜ್ಞಾನದ ವಿದ್ಯಾರ್ಥಿಗಳು, ಅಧ್ಯಾಪಕರು ಸಹಭಾಗಿಯಾಗಿ ವಿಜ್ಞಾನವನ್ನು ಸವಿಯ ಬೇಕಾದರೆ, ಅದರ ಕಲಿಕೆ ಆನಂದಾನುಭವದ ಆಕರವಾಗಬೇಕಾದರೆ ಈ ಮಾದರಿಯನ್ನು ಅನುಸರಿಸಬಹುದಾದಂತಹ ಒಂದು ಉದಾಹರಣೆಯನ್ನು ಗಮನಿಸಿ: ವೇಗವಾಗಿ ಕಾರು ಚಲಿಸುವಾಗ ಮಳೆ ನಿಂತಿದ್ದರೂ ಕಾರಿನ ಗಾಜಿನ ಮೇಲೆ ನೀರಿನ ಹನಿಗಳು ರೂಪುಗೊಳ್ಳಲು ಕಾರಣವೇನೆಂದರೆ, ವಾಹನವು ಗಾಳಿಯ ಪದರವನ್ನು ಒತ್ತಿ ಗಾಳಿಯಲ್ಲಿರುವ ತೇವಾಂಶವನ್ನು ಪರ್ಯಾಪ್ತಗೊಳಿಸುವುದು.

ದ್ವಿಚಕ್ರ ವಾಹನದಲ್ಲಿ ಸಾಗುವಾಗಲೂ ‘ಮಳೆ ಇಲ್ಲದೆ’ ತೇವವಾಗುವ ಈ ವಿದ್ಯಮಾನ ಕಂಡು ಬರುತ್ತದೆ. ಮಳೆ ಬರುವಾಗ ಕೊಠಡಿಯೊಂದರ ಗಾಜಿನ ಮೇಲೆ ಮೋಡದ ರೀತಿಯ ರಚನೆಯುಂಟಾಗಿ ಗಾಜು ತನ್ನ ಪಾರದರ್ಶಕತೆಯನ್ನು ಕಳೆದುಕೊಳ್ಳುವುದು – ಈ ಮುನ್ನ ಹೇಳಿದ ಹಾಗೆ ಗಾಜಿನ ಹೊರ ಮೇಲ್ಮೈ ಮೇಲೆ ಅಲ್ಲ, ಗಾಜಿನ ಒಳ ಮೇಲ್ಮೈಯಲ್ಲಿ. ಇಲ್ಲಿ ಈ ರಚನೆ ಉಂಟಾದದ್ದು ಕೊಠಡಿಯಲ್ಲಿರುವ ಮಂದಿಯ ನಿಃಶ್ವಾಸದ ಗಾಳಿಯ ತೇವಾಂಶವು ಮುಚ್ಚಿದ ಕಿಟಕಿಯ ಗಾಜಿನವರೆಗೆ ತಲುಪಿ ತಂಪುಗೊಂಡು ಮೋಡದ ರಚನೆ ಆಗುವುದು.

ಪ್ರೊ. ಯಶ್‌ ಪಾಲ್ ಅವರು ನಮ್ಮೊಂದಿಗಿಲ್ಲ. ಆದರೆ ಅವರಿಂದ ಸ್ಫೂರ್ತಿಗೊಂಡು ಅನುಭಾವಾನ್ವೇಷಣೆಯ ಆನಂದ ಹವ್ಯಾಸ ಮಾಡಿಸಬಲ್ಲ ಅನೇಕರು ಇದ್ದಾರೆ. ಅವರಿಗೆ ನುಡಿ ನಮನ ಸಲ್ಲಿಸಿದರೆ ಸಾಲದು, ಆ ಧೋರಣೆ ವ್ಯಾಪಕವಾಗಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT