ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅನನ್ಯ ಆಟಗಾರ್ತಿ

ಬ್ಯಾಸ್ಕೆಟ್‌ಬಾಲ್‌
Last Updated 30 ಜುಲೈ 2017, 19:30 IST
ಅಕ್ಷರ ಗಾತ್ರ

ಭಾರತದ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಆಟಗಾರ್ತಿ ತಮಿಳುನಾಡಿನ ಅನಿತಾ ಪಾಲ್‌ ದೊರೈ.

ಎಳವೆಯಲ್ಲಿಯೇ ಬ್ಯಾಸ್ಕೆಟ್‌ಬಾಲ್‌ನಲ್ಲಿ ಎತ್ತರದ ಸಾಧನೆ ಮಾಡುವ ಕನಸು ಹೊತ್ತಿದ್ದ ಅನಿತಾ, ಮಿಂಚಿ ಮರೆಯಾಗುವ ನಕ್ಷತ್ರವಾಗಲಿಲ್ಲ. ಅರ್ಪಣಾ ಭಾವದಿಂದ ಈ ಕ್ರೀಡೆಯಲ್ಲಿ ಪ್ರಾವೀಣ್ಯ ಪಡೆದ ಅವರು ಸಬ್‌ ಜೂನಿಯರ್‌, ಜೂನಿಯರ್‌ ಮತ್ತು ಯೂತ್‌ ಚಾಂಪಿಯನ್‌ಷಿಪ್‌ಗಳಲ್ಲಿ ಅಪೂರ್ವ ಆಟ ಆಡಿ ಸೈ ಎನಿಸಿಕೊಂಡಿದ್ದರು.

2000ದಲ್ಲಿ ಮೊದಲ ಬಾರಿಗೆ ಸೀನಿಯರ್‌ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಚೆನ್ನೈನ ಪ್ರತಿಭೆ ಅನಿತಾ, ಹಲವು ಅಂತರರಾಷ್ಟ್ರೀಯ ಚಾಂಪಿಯನ್‌ಷಿಷ್‌ಗಳಲ್ಲಿ ಭಾರತ ತಂಡವನ್ನು ಚಿನ್ನದ ಪದಕದೆಡೆಗೆ ಮುನ್ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ.

32ರ ಹರೆಯದಲ್ಲೂ ಸ್ಫೂರ್ತಿಯ ಚಿಲುಮೆಯಂತಿರುವ ಅವರು ಸತತ ಎಂಟು ಬಾರಿ ಏಷ್ಯನ್‌ ಬ್ಯಾಸ್ಕೆಟ್‌ಬಾಲ್‌ ಕಾನ್ಫೆಡರೇಷನ್‌ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದಾರೆ. ಈ ಸಾಧನೆ ಮಾಡಿರುವ ಭಾರತದ ಮೊದಲ ಆಟಗಾರ್ತಿ ಎಂಬ ಹೆಚ್ಚುಗಾರಿಕೆ ಅವರದ್ದು. ಹೋದ ವಾರ ಬೆಂಗಳೂರಿನಲ್ಲಿ ನಡೆದಿದ್ದ ಫಿಬಾ ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅನಿತಾ ಅವರು ‘ಪ್ರಜಾವಾಣಿ’ ಜೊತೆ ಮನದಾಳವನ್ನು ಹಂಚಿಕೊಂಡಿದ್ದಾರೆ.

*ಏಷ್ಯನ್‌ ಬ್ಯಾಸ್ಕೆಟ್‌ಬಾಲ್‌ ಕಾನ್ಫೆಡರೇಷನ್‌ ಚಾಂಪಿಯನ್‌ಷಿಪ್‌ನಲ್ಲಿ ಎಂಟು ಬಾರಿ ಆಡಿರುವ ಭಾರತದ ಮೊದಲ ಆಟಗಾರ್ತಿ ನೀವು. ಈ ಸಾಧನೆಯ ಬಗ್ಗೆ ಏನಂತೀರಾ?
ಇದು ನಿಜಕ್ಕೂ ಖುಷಿಯ ವಿಚಾರ. ಇಷ್ಟು ಚಾಂಪಿಯನ್‌ಷಿಪ್‌ಗಳಲ್ಲಿ ಆಡುತ್ತೇನೆ ಎಂದು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ. ಸತತ 16 ವರ್ಷಗಳಿಂದ ದೇಶಕ್ಕಾಗಿ ಆಡುತ್ತಿರುವುದು ಹೆಮ್ಮೆಯ ಸಂಗತಿ. 2015ರಲ್ಲಿ  ವೃತ್ತಿಬದುಕಿಗೆ ವಿದಾಯ ಹೇಳಬೇಕೆಂದು ನಿರ್ಧರಿಸಿದ್ದೆ. ಅದೇ ವರ್ಷ ಭಾರತ ತಂಡ ‘ಎ’ ಡಿವಿಷನ್‌ನಿಂದ ‘ಬಿ’ ಡಿವಿಷನ್‌ಗೆ ಹಿಂಬಡ್ತಿ ಹೊಂದಿತ್ತು. ಹೀಗಾಗಿ ನಿವೃತ್ತಿಯ ಆಲೋಚನೆ ಕೈಬಿಟ್ಟೆ.  

*ಚೊಚ್ಚಲ ಮಗುವಿಗೆ ಜನ್ಮ ನೀಡಿದ ಒಂದೇ ತಿಂಗಳಿನಲ್ಲೇ ನೀವು ಅಭ್ಯಾಸ ಶುರುಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಿರಿ. ನಿಮ್ಮ ನಿರ್ಧಾರ ತುಂಬಾ ಕಠಿಣವಾದುದು ಅಂತ ಅನಿಸಲಿಲ್ಲವೇ?
ನಾನು ತೆಗೆದುಕೊಂಡ ನಿರ್ಧಾರ ಕಷ್ಟ ಅಥವಾ ತಪ್ಪು ಎಂದು ಯಾವತ್ತೂ ಅನಿಸಲೇ ಇಲ್ಲ.ಮನಸ್ಸೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ತತ್ವವನ್ನು ನಂಬಿರುವವಳು ನಾನು. ಹೆರಿಗೆಯಾದ ಒಂದು ತಿಂಗಳ ನಂತರ ವೈದ್ಯರನ್ನು ಭೇಟಿ ಮಾಡಿದೆ.  ಅಭ್ಯಾಸ ಮಾಡುವುದರಿಂದ ಏನೂ ತೊಂದರೆಯಾಗುವುದಿಲ್ಲ ಎಂದು ಅವರು ಧೈರ್ಯ ತುಂಬಿದರು. ಅಪ್ಪ, ಅಮ್ಮ ಮತ್ತು ಪತಿ ಕೂಡ ಬೆಂಬಲವಾಗಿ ನಿಂತರು. ಅಭ್ಯಾಸಕ್ಕೆ ಹೋದಾಗಲೆಲ್ಲಾ ಮನೆಯವರು ಮಗುವನ್ನು ನೋಡಿಕೊಳ್ಳುತ್ತಿದ್ದರು. ಅವರ ಪ್ರೋತ್ಸಾಹದಿಂದಾಗಿಯೇ ಆರು ತಿಂಗಳ ಬಾಣಂತಿಯಾಗಿದ್ದಾಗಲೇ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಡುವಂತಾಯಿತು.

*2012ರ ಏಷ್ಯನ್‌ ಬೀಚ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಸಾಧನೆ ಬಗ್ಗೆ ಹೇಳಿ?
ಏಷ್ಯನ್‌ ಬೀಚ್‌ ಬ್ಯಾಸ್ಕೆಟ್‌ಬಾಲ್‌ನಲ್ಲಿ ನಾವು ಗೆದ್ದ ಮೊದಲ ಚಿನ್ನ ಅದಾಗಿತ್ತು.ಭಾರತದ ಮಹಿಳಾ ಬ್ಯಾಸ್ಕೆಟ್‌ಬಾಲ್‌ನ ಮಟ್ಟಿಗೆ ಅದೊಂದು ಚರಿತ್ರಾರ್ಹ ಸಾಧನೆ. ಆ ಕ್ಷಣ ನನ್ನ ಪಾಲಿಗೆ ಅವಿಸ್ಮರಣೀಯವಾದುದು. ಗೀತು, ಶಿರೀನ್‌ ಅವರೂ ಆಗ ತಂಡದ ಭಾಗವಾಗಿದ್ದರು. ಚೀನಾದಲ್ಲಿ  ಚಾಂಪಿಯನ್‌ಷಿಪ್‌ ನಡೆದಿತ್ತು.

* ಥಾಯ್ಲೆಂಡ್‌ ವೃತ್ತಿಪರ ಲೀಗ್‌ನಲ್ಲಿ ಆಡಿದ ಅನುಭವದ ಬಗ್ಗೆ ಹೇಳಿ?
ಗೀತು ಅವರು ಆಸ್ಟ್ರೇಲಿಯಾ ಲೀಗ್‌ನಲ್ಲಿ ಭಾಗವಹಿಸಿದ್ದರು. ಆ ಲೀಗ್‌ನಲ್ಲಿ ಆಡಲು ನನಗೂ ಆಹ್ವಾನ ಬಂದಿತ್ತು. ಕೆಲ ಅನಿವಾರ್ಯ ಕಾರಣಗಳಿಂದಾಗಿ ಆ ಲೀಗ್‌ನಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಜೀವನದಲ್ಲಿ ಒಮ್ಮೆಯಾದರೂ ವೃತ್ತಿಪರ ಲೀಗ್‌ನಲ್ಲಿ ಆಡಬೇಕೆಂಬುದು ಜೀವನದ ಬಹುದೊಡ್ಡ ಕನಸಾಗಿತ್ತು. ಹೀಗಾಗಿ 2012ರಲ್ಲಿಥಾಯ್ಲೆಂಡ್‌ ಲೀಗ್‌ನಲ್ಲಿ ಆಡಲು ಅವಕಾಶ ಸಿಕ್ಕಾಗ ಒಪ್ಪಿಕೊಂಡೆ. ಒಂದು ತಿಂಗಳ ಒಪ್ಪಂದ ಅದಾಗಿತ್ತು. ಲೀಗ್‌ನಲ್ಲಿ ಆಡಿದ್ದು ವಿಶಿಷ್ಠ ಅನುಭವ ನೀಡಿತು.

* ನಿಮಗೆ ಇದುವರೆಗೂ ಅರ್ಜುನ ಗೌರವ ಸಿಕ್ಕಿಲ್ಲವಲ್ಲ?
ಅರ್ಜುನ ಗೌರವ ಗಳಿಸುವುದು  ಜೀವನದ ಮುಖ್ಯ ಗುರಿ. ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಿದ್ದೇನೆ. ಗುರಿ ಮುಟ್ಟುವವರೆಗೂ ವಿರಮಿಸುವುದಿಲ್ಲ.

* ನೀವು ಆಡಲು ಆರಂಭಿಸಿದ ದಿನಗಳಿಗೆ ಹೋಲಿಸಿದರೆ ಈಗ ಮಹಿಳಾ ಬ್ಯಾಸ್ಕೆಟ್‌ಬಾಲ್‌ನಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ?
ಆರಂಭದ ದಿನಗಳಲ್ಲಿ ಊಟ, ವಸತಿ, ಪ್ರಯಾಣ ಹೀಗೆ ಸಾಕಷ್ಟು ಸಮಸ್ಯೆಗಳು ಇದ್ದವು.ಬೇಸಿಗೆ ಶಿಬಿರಗಳಲ್ಲಿ ಹವಾ ನಿಯಂತ್ರಿತ (ಎ.ಸಿ) ವ್ಯವಸ್ಥೆ ಇರುತ್ತಿರಲಿಲ್ಲ. ಆಗ ನಾವು ಪಟ್ಟ ಪಡಿಪಾಟಲುಗಳು ಅಷ್ಟಿಷ್ಟಲ್ಲ. ಈಗ ಪರಿಸ್ಥಿತಿ ಬದಲಾಗಿದೆ.   ಟೂರ್ನಿಗಳಲ್ಲಿ ಭಾಗವಹಿಸಲು ಹೋದಾಗ ತಂಗಲು ಉತ್ತಮ ಹೋಟೆಲ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಪೌಷ್ಠಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆ. ಪರಿಣತ ಫಿಸಿಯೊಗಳಿದ್ದಾರೆ. ಮುಂದಿನ ಎರಡು ಇಲ್ಲವೇ ಮೂರು ವರ್ಷಗಳಲ್ಲಿ ಎಲ್ಲವೂ ಸರಿಯಾಗುತ್ತದೆ ಎಂಬ ನಂಬಿಕೆ ಇದೆ.

*ವಿದೇಶಿ ಲೀಗ್‌ಗಳಲ್ಲಿ ಆಡುವುದರಿಂದ ಏನು ಲಾಭ?
ತುಂಬಾ ಅನುಕೂಲಗಳಿವೆ. ವಿದೇಶಿ ನೆಲಗಳಲ್ಲಿ ಆಡುವುದರಿಂದ ಅಲ್ಲಿನ ವಾತಾವರಣ, ಆಯಾ ರಾಷ್ಟ್ರಗಳ ಆಟಗಾರ್ತಿಯರ ಕೌಶಲಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಪಂದ್ಯಕ್ಕೂ ಮುನ್ನ ಅವರು ಹೆಣೆಯುವ ಯೋಜನೆಗಳನ್ನು ಅರಿಯಲು ವಿದೇಶಿ ಲೀಗ್‌ಗಳು ವೇದಿಕೆಯಾಗಿವೆ.

*ಭಾರತದಲ್ಲಿ ವೃತ್ತಿಪರ ಲೀಗ್‌ನ ಅಗತ್ಯತೆ ಬಗ್ಗೆ ಹೇಳಿ?
ಖಂಡಿತವಾಗಿಯೂ ಭಾರತದಲ್ಲಿ ವೃತ್ತಪರ ಲೀಗ್‌ ನಡೆಯಬೇಕು.ಇದರಿಂದ ಪ್ರತಿಭೆಗಳನ್ನು ಹೆಕ್ಕಲು ಅನುವಾಗುತ್ತದೆ. ಜೊತೆಗೆ ನಮ್ಮ ಆಟದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಈಗ ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಲೀಗ್‌ಗಳು ನಡೆಯುತ್ತಿವೆ. ಈ ಬಾರಿ ಪುರುಷರಿಗಾಗಿ ಯುಬಿಎ ಲೀಗ್‌ ನಡೆದು ಯಶಸ್ವಿಯಾಗಿದೆ. ಮುಂದಿನ ವರ್ಷ ಮಹಿಳಾ ಲೀಗ್‌  ಶುರುವಾಗುವ ಸಾಧ್ಯತೆ ಇದೆ.

*ಬ್ಯಾಸ್ಕೆಟ್‌ಬಾಲ್‌ನಲ್ಲಿ ಪುರುಷರಷ್ಟೇ ಪ್ರಾಧಾನ್ಯತೆ ಮಹಿಳೆಯರಿಗೂ ಸಿಗುತ್ತಿದೆಯೇ?
ಖಂಡಿತವಾಗಿಯೂ ಇಲ್ಲ. ಪುರುಷರಿಗೆ ಅವಕಾಶಗಳು ಹೆಚ್ಚಿವೆ. ಅವರಿಗಾಗಿ ಸಾಕಷ್ಟು ಅಂತರರಾಷ್ಟ್ರೀಯ ಆಹ್ವಾನಿತ ಟೂರ್ನಿಗಳು ನಡೆಸಲಾಗುತ್ತದೆ. ಜೊತೆಗೆ ಬೇರೆ ಬೇರೆ ಇಲಾಖೆಗಳಲ್ಲಿ ಉದ್ಯೋಗವೂ ಸಿಗುತ್ತಿದೆ. ಕೆಲಸದ ವಿಚಾರದಲ್ಲಿ ನಮಗೆ ತುಂಬಾ ಅನ್ಯಾಯವಾಗುತ್ತಿದೆ. ಮಹಿಳೆಯರಿಗೆ ರೈಲ್ವೆ ಬಿಟ್ಟು ಬೇರೆಲ್ಲೂ ಕೆಲಸ ಸಿಗುತ್ತಿಲ್ಲ. ಈ ಪರಿಸ್ಥಿತಿ ಸುಧಾರಿಸಬೇಕು. ಬ್ಯಾಂಕ್‌ ಸೇರಿದಂತೆ ಇನ್ನಿತರ ವಲಯಗಳಲ್ಲೂ ಕೆಲಸ ಸಿಗುವಂತಾಗಬೇಕು.

*ವಿದೇಶಗಳಿಗೆ ಹೋಲಿಸಿದರೆ ಬ್ಯಾಸ್ಕೆಟ್‌ಬಾಲ್‌ ಬೆಳವಣಿಗೆಗೆ ಪೂರಕವಾದಂತಹ ಸೌಲಭ್ಯಗಳು ನಮ್ಮಲ್ಲಿದೆಯೇ?
ಮೊದಲು ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ವಿದೇಶಿ ಕೋಚ್‌ಗಳು, ಪರಿಣತ ಫಿಸಿಯೊಗಳು ಇದ್ದಾರೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.

*ಈಗಿನ ತಂಡದ ಬಗ್ಗೆ ಹೇಳಿ?
ನಮ್ಮ ತಂಡ ಬಲಿಷ್ಠವಾಗಿದೆ. ಅನುಭವಿಗಳು ಮತ್ತು ಯುವ ಆಟಗಾರ್ತಿಯರು ತಂಡದಲ್ಲಿದ್ದಾರೆ. ಈ ಬಾರಿಯ ಲೀಗ್‌ನಲ್ಲಿ ತುಂಬಾ ಚೆನ್ನಾಗಿ ಆಡುತ್ತಿದ್ದೇವೆ. ಮುಂದೆಯೂ ಶ್ರೇಷ್ಠ ಆಟ ಆಡುವುದು ನಮ್ಮ ಗುರಿ.

*ಭಾರತ ತಂಡ ಫಿಬಾ ಏಷ್ಯಾಕಪ್‌ನಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲವಲ್ಲ? ಈ ಕನಸು ಕೈಗೂಡುವುದು ಯಾವಾಗ?
ಫಿಬಾ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ಅಷ್ಟು ಸುಲಭವಲ್ಲ. ಚೀನಾ, ಜಪಾನ್‌, ಕೊರಿಯಾ, ಆಸ್ಟ್ರೇಲಿಯಾದಂತಹ ತಂಡಗಳನ್ನು ಮಣಿಸುವುದು ತುಂಬಾ ಕಷ್ಟ. ಅವರ ಜೊತೆ ಪೈಪೋಟಿ ನಡೆಸಬೇಕಾದರೆ ನಮ್ಮಲ್ಲೂ ಸಾಕಷ್ಟು ವೃತ್ತಿಪರ ಲೀಗ್‌ಗಳು ನಡೆಯಬೇಕು. ಬೇರು ಮಟ್ಟದಿಂದಲೇ ಕ್ರೀಡೆ ಗಟ್ಟಿಯಾಗಬೇಕು. ವರ್ಷದಲ್ಲಿ ಒಮ್ಮೆಯಾದರೂ ವಿದೇಶಿ ಪ್ರವಾಸ ಕೈಗೊಳ್ಳಬೇಕು. 2013ರಲ್ಲಿ ನಾವು ಐದನೇ ಸ್ಥಾನ ಗಳಿಸಿದ್ದೇವೆ. ಈಗ ನಾವು ನಾಲ್ಕನೇ ಸ್ಥಾನ ಗಳಿಸುವ ಗುರಿ ಇಟ್ಟುಕೊಳ್ಳಬೇಕು. ಚಿನ್ನ ಗೆಲ್ಲಬೇಕಾದರೆ ಇನ್ನು ಐದು ವರ್ಷಗಳಾದರೂ ಕಾಯಬೇಕು.

*ಬ್ಯಾಸ್ಕೆಟ್‌ಬಾಲ್‌ ರಂಗಕ್ಕೆ ಅಡಿ ಇಟ್ಟಿದ್ದು ಯಾವಾಗ?
ಏಳನೇ ತರಗತಿಯಲ್ಲಿ ಇದ್ದಾಗ ಬ್ಯಾಸ್ಕೆಟ್‌ಬಾಲ್‌ ಆಟದಲ್ಲಿ ಆಸಕ್ತಿ ಮೂಡಿತು. ಇದರಲ್ಲೇ ಎತ್ತರದ ಸಾಧನೆ ಮಾಡುವ ಮಹಾದಾಸೆ ಹೊತ್ತು, ನೈಪುಣ್ಯ ಸಾಧಿಸಿದೆ. ಬಳಿಕ ತಮಿಳುನಾಡು ಪರ ಹಲವು ಟೂರ್ನಿಗಳಲ್ಲಿ ಆಡಿದೆ. 2000ದಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು.

*ಸತತ 16 ವರ್ಷಗಳಿಂದ  ದೇಶಕ್ಕಾಗಿ ಆಡುತ್ತಿದ್ದೀರಿ. ಈಗ ನಿಮಗೆ 32 ವರ್ಷ. ನಿವೃತ್ತಿಗೆ ಇದು ಸೂಕ್ತ ಸಮಯ ಅಂತಾ ಭಾವಿಸಿದ್ದೀರಾ?
ಅರ್ಜುನ ಪ್ರಶಸ್ತಿ ಪಡೆಯುವುದು ಮತ್ತು ಏಷ್ಯಾಕಪ್‌ನಲ್ಲಿ ಭಾರತಕ್ಕೆ ‘ಎ’ ಡಿವಿಷನ್‌ಗೆ ಬಡ್ತಿ ತಂದುಕೊಡುವುದು ನನ್ನ ಮುಖ್ಯ ಧ್ಯೇಯ. ಇವೆರಡೂ ಈಡೇರುವವರೆಗೂ ವಿರಮಿಸುವುದಿಲ್ಲ. ಇದಕ್ಕಾಗಿ ಫಿಟ್ನೆಸ್‌ ಮುಖ್ಯ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಹೆಚ್ಚು ಒತ್ತು ನೀಡುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT