ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಜಿಲ್ಲೆಯಲ್ಲಿ ಬ್ಯಾಡ್ಮಿಂಟನ್‌ ಕಂಪು

Last Updated 30 ಜುಲೈ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಪೈಕಿ ಬಳ್ಳಾರಿ ಹಲವು ಕ್ರೀಡೆಗಳಿಗೆ ಹೆಸರುವಾಸಿ. ಇಲ್ಲಿ ಫುಟ್‌ಬಾಲ್‌, ಹಾಕಿ, ಕಬಡ್ಡಿ, ಬ್ಯಾಡ್ಮಿಂಟನ್‌, ಅಥ್ಲೆಟಿಕ್ಸ್‌ ಚಟುವಟಿಕೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲಿನ ಪ್ರತಿಭೆಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೋದ ವಾರ ಬಳ್ಳಾರಿಯಲ್ಲಿ ನಡೆದ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಇದಕ್ಕೆ ಸಾಕ್ಷಿ.

ರಾಜ್ಯ ಟೂರ್ನಿಯಲ್ಲಿ ಬೇರೆ ಬೇರೆ ಜಿಲ್ಲೆಗಳ ಸ್ಪರ್ಧಿಗಳು ಇಲ್ಲಿ ತಮ್ಮ ಪ್ರತಿಭೆ ತೋರಿಸಿದರು. ಆದರೆ ಸ್ಥಳೀಯ ಪ್ರತಿಭೆಗಳ ಆಟವನ್ನು ಕಣ್ತುಂಬಿಕೊಳ್ಳಲು ಅವಕಾಶವೇ ಲಭಿಸಲಿಲ್ಲ. ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆ ಇದೆಯಾದರೂ ಕ್ಲಬ್‌ಗಳ ಕೊರತೆಯಿದೆ. ಆದ್ದರಿಂದ ಸ್ಪರ್ಧೆಗಿಂತ ಹವ್ಯಾಸಕ್ಕಾಗಿ ಆಡುವವರ ಸಂಖ್ಯೆಯೇ ಹೆಚ್ಚಿದೆ. ರಾಜ್ಯ ಮತ್ತು ರಾಷ್ಟ್ರೀಯ ಟೂರ್ನಿಗಳಲ್ಲಿ ಅತ್ಯುತ್ತಮ ಶ್ರೇಯಾಂಕ ಹೊಂದಿದ್ದ ಆಟಗಾರರು ಇಲ್ಲಿ ಪಾಲ್ಗೊಂಡಿದ್ದರು.

ಹಿಂದಿನ ವರ್ಷವಷ್ಟೇ ಇಲ್ಲಿನ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳೂ ಸೇರಿದಂತೆ ರಾಜ್ಯದಲ್ಲಿ ಹಿಂದುಳಿದ ಹತ್ತು ಜಿಲ್ಲೆಗಳಿಗಾಗಿ ಆಹ್ವಾನಿತ ಟೂರ್ನಿ ಆಯೋಜಿಸಿತ್ತು. ಅದರೊಂದಿಗೆ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಜಿಲ್ಲಾಡಳಿತ ಕೈಜೋಡಿಸಿ ಈ ಭಾಗದಲ್ಲಿ ಬ್ಯಾಡ್ಮಿಂಟನ್‌ ಬೆಳವಣಿಗೆಗೆ ನಾಂದಿ ಹಾಡಿತ್ತು.

ಆಗ 13, 15 ಮತ್ತು 19ರ ವಯಸ್ಸಿನೊಳಗಿನ ಬಾಲಕ, ಬಾಲಕಿಯರು, 17 ವರ್ಷದ ಒಳಗಿನ ವಿಭಾಗದವರಿಗೆ ನಡೆದ ಟೂರ್ನಿಯಲ್ಲಿ 400ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಆ ನೆನಪು ಇನ್ನೂ ಹಸಿರಾಗಿರುವಾಗಲೇ ಜುಲೈ ಮೂರನೇ ವಾರ ಮೊದಲ ಬಾರಿಗೆ ರಾಜ್ಯ ಟೂರ್ನಿಗೆ ಗಣಿನಾಡು ಸಾಕ್ಷಿಯಾಯಿತು.

ಬ್ಯಾಡ್ಮಿಂಟನ್‌ ಕ್ರೀಡೆಗೆ ಉತ್ತೇಜನ ನೀಡುವ ರೀತಿಯಲ್ಲಿ ಉತ್ತಮ ಅಂಗಣಗಳು ಇಲ್ಲಿವೆ. ಪರಿಣಾಮವಾಗಿಯೇ, ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿರುವ ಬ್ಯಾಡ್ಮಿಂಟನ್‌ ಅಂಗಣ ಮತ್ತು ಪೊಲೀಸ್‌ ಜಿಮ್ಖಾನಾದಲ್ಲಿರುವ ಅಂಗಣಗಳು ರಾಜ್ಯದ ಶ್ರೇಷ್ಠ  ಕ್ರೀಡಾಪಟುಗಳ ಬಿರುಸಿನ ಪೈಪೋಟಿಗೆ ಸಾಕ್ಷಿಯಾದವು ಎಂದು ಬ್ಯಾಡ್ಮಿಂಟನ್‌ ಸಂಸ್ಥೆಯ ಕಾರ್ಯದರ್ಶಿ ರಾಧಿಕಾ ಆಚಾರ್ಯ ಹೇಳುತ್ತಾರೆ.

‘ಮಹಿಳೆ ಮತ್ತು ಪುರುಷರ ವಿಭಾಗಕ್ಕೆ ಮಾತ್ರ ಟೂರ್ನಿ ಆಯೋಜಿಸುವ ಉದ್ದೇಶ ಹೊಂದಿದ್ದೆವು. ಎಸ್ಪಿ ಆರ್‌.ಚೇತನ್‌ ಅವರು 19ರ ವಯಸ್ಸಿನೊಳಗಿನವರ ವಿಭಾಗಕ್ಕೂ ಟೂರ್ನಿ ಏರ್ಪಡಿಸಲು ಸಲಹೆ ನೀಡಿದ ಪರಿಣಾಮವಾಗಿ ಯುವಪಡೆಗೂ ಅವಕಾಶ ಲಭಿಸಿತು. ಇಲ್ಲಿನ ಜನರಿಗೂ ಬ್ಯಾಡ್ಮಿಂಟನ್ ಬಗ್ಗೆ ಹೆಚ್ಚು ಗೊತ್ತಾಯಿತು’ ಎಂದು ಅವರು ಹೇಳುತ್ತಾರೆ.

‘ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳ ಪೈಕಿ ನಮ್ಮ ಜಿಲ್ಲೆಯು ಟೂರ್ನಿಯನ್ನು ಉತ್ತಮವಾಗಿ ಸಂಘಟಿಸಿತ್ತು’ ಎಂದು ಬ್ಯಾಡ್ಮಿಂಟನ್‌ ತರಬೇತುದಾರರಾದ ಕೆ.ವೀರೇಶ ಹೇಳಿದರು.

‘ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿ ಬ್ಯಾಡ್ಮಿಂಟನ್‌ ಸಂಸ್ಥೆಯ ವತಿಯಿಂದ ತರಬೇತಿ ನೀಡಲಾಗುತ್ತಿದೆ. 6ರಿಂದ 16 ವರ್ಷದ ಒಳಗಿನ 32 ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಆದರೆ ಇದುವರೆಗೂ ಜಿಲ್ಲೆಯಿಂದ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳು ಇಲ್ಲ. ಕ್ರೀಡಾಪಟುಗಳಲ್ಲಿ ಸ್ವಯಂಸ್ಫೂರ್ತಿಯೊಂದಿಗೆ ಉತ್ತೇಜನದ ಅಗತ್ಯವಿದೆ’ ಎನ್ನುತ್ತಾರೆ ವೀರೇಶ.

ನೆನಪುಗಳ ಯಾನ: 1999ರಲ್ಲಿ ಕೃಷ್ಣದೇವರಾಯ ಬ್ಯಾಡ್ಮಿಂಟನ್‌ ಕ್ಲಬ್‌ ಅಧ್ಯಕ್ಷರಾಗಿದ್ದಾಗ ಲೆಕ್ಕ ಪರಿಶೋಧಕ ಜಯಪ್ರಕಾಶ್‌ ಗುಪ್ತಾ ತಮ್ಮ ತಾಯಿಯ ಹೆಸರಿನಲ್ಲಿ ಟೂರ್ನಿಯೊಂದನ್ನು ಆಯೋಜಿಸಿದ್ದರು. ಅದು ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಮೊದಲ ಟೂರ್ನಿ.

‘ಎರಡು ವರ್ಷದಲ್ಲಿ ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ಎರಡು ಪ್ರಮುಖ ಟೂರ್ನಿಗಳನ್ನು ಆಯೋಜಿಸಿದ್ದೆವು. ಈ ಭಾಗದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆ ಬೆಳೆಯುತ್ತದೆ. ಮಕ್ಕಳು ಆಸಕ್ತಿ ವಹಿಸಿ ಬಂದರೆ ಮುಂದೆ ಎತ್ತರದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅವಕಾಶ ಮತ್ತು ಪ್ರೋತ್ಸಾಹ ಸಿಕ್ಕರೆ ಸ್ಪರ್ಧಾತ್ಮಕ ಕಣದಲ್ಲಿ ಉತ್ತಮ ಸಾಮರ್ಥ್ಯ ತೋರಿಸಲು ಆಗುತ್ತದೆ’ ಎಂದು ಸಂಸ್ಥೆಯ ಅಧ್ಯಕ್ಷ ಜೆ.ಎಸ್‌. ಬಸವರಾಜ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT