ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಅಥ್ಲೆಟಿಕ್ಸ್‌: ಚಿನ್ನದ ಹೆಜ್ಜೆ ಗುರುತು

Last Updated 30 ಜುಲೈ 2017, 19:30 IST
ಅಕ್ಷರ ಗಾತ್ರ

ಜುಲೈ14ರಂದು ಆರಂಭಗೊಂಡ ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮೊದಲ ದಿನ ಎಲ್ಲರ ನೋಟ ಬಿದ್ದದ್ದು ಭಾರತದ ಸುಂದರ್‌ ಸಿಂಗ್ ಗುರ್ಜಾರ್ ಮೇಲೆ. ಅಂದು ನಡೆದ ಜಾವೆಲಿನ್ ಥ್ರೋದ ಒಟ್ಟು 10 ವಿಭಾಗಗಳ ಪೈಕಿ ಎಫ್‌–46 ವಿಭಾಗದಲ್ಲಿ ಚಿನ್ನ ಗೆದ್ದ ಸಿಂಗ್‌ ವಿಶ್ವ ಪ್ಯಾರಾ ಅಥ್ಲೆಟಿಕ್ ಕೂಟದಲ್ಲಿ ಭಾರತ ಮೊದಲ ಬಾರಿ ಚಿನ್ನದ ಸಾಧನೆ ಮಾಡಲು ಕಾರಣರಾಗಿದ್ದರು.

ಕಳೆದ ಬಾರಿ ರಿಯೊ ಡಿ ಜನೈರೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ತಾಂತ್ರಿಕ ಕಾರಣದಿಂದಾಗಿ ಪದಕ ವಂಚಿತರಾಗಿದ್ದ ಗುರ್ಜಾರ್‌ಗೆ ಲಂಡನ್‌ನಲ್ಲಿ ಲಭಿಸಿದ ಚಿನ್ನ ಹೊಸ ಹುರುಪು ತುಂಬಿದೆ.

ಎಂಟು ವರ್ಷಗಳಿಂದ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿರಲಿಲ್ಲ. ಈ ಬಾರಿ ಒಟ್ಟು ಐದು ಪದಕ ಗೆದ್ದು ದೇಶದ ಪ್ಯಾರಾ ಅಥ್ಲೀಟ್‌ಗಳು ಬೀಗಿದರು. ಒಂಬತ್ತನೇ ದಿನ ಟಿ–42 ವಿಭಾಗದ ಹೈಜಂಪ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳೆರಡೂ ಭಾರತದ ತೆಕ್ಕೆಗೆ ಬಿದ್ದದ್ದು ಕೂಡ ಕೂಟದ ವೈಶಿಷ್ಟ್ಯ.

ಶರದ್ ಕುಮಾರ್‌ ಮತ್ತು ವರುಣ್‌ ಸಿಂಗ್ ಭಾಟಿ ಈ ಸಾಧನೆ ಮಾಡಿ ಭಾರತದ ಪದಕ ಪಟ್ಟಿಯನ್ನು ಬೆಳಗಿದ್ದರು.1.84 ಮೀಟರ್ ಎತ್ತರ ಜಿಗಿದ ಶರದ್ ಕುಮಾರ್‌ ತಮ್ಮ ವೈಯಕ್ತಿಕ ಸಾಧನೆಯನ್ನು ಉತ್ತಮಪಡಿಸಿಕೊಳ್ಳುವುದಕ್ಕೂ ಈ ಕೂಟ ನೆರವಾಗಿತ್ತು.ಅವರು ಕೂದಲೆಳೆ ಅಂತದಲ್ಲಿ ಚಿನ್ನ ಕಳೆದುಕೊಂಡಿದ್ದರು. ಅವರನ್ನು ಹಿಂದಿಕ್ಕಿದ ಅಮೆರಿಕದ ಸ್ಯಾಮ್ ಗ್ರೀವ್‌ ಅವರು ಜಿಗಿದ ಎತ್ತರ 1.86 ಮೀಟರ್‌.

ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಭಾಟಿ ಅವರಿಗೆ ಇಂಗ್ಲೆಂಡ್‌ನಲ್ಲಿ ಗೆದ್ದ ಕಂಚಿನ ಪದಕ ಸಾಧನೆಯ ಹಾದಿಯಲ್ಲಿ ಮತ್ತಷ್ಟು ಕನಸು ಕಾಣಲು ನೆರವಾಗಲಿದೆ. ಪುರುಷರ ಕ್ಲಬ್ ಥ್ರೋದಲ್ಲಿ (ಎಫ್‌–51) ಅಮಿತ್ ಕುಮಾರ್ ಸರೋಹ ಬೆಳ್ಳಿ ಮತ್ತು ಮಹಿಳೆಯರ ಡಿಸ್ಕಸ್ ಥ್ರೋದಲ್ಲಿ (ಎಫ್‌–55) ಕರಮ್ ಜ್ಯೋತಿ ಕಂಚು ಗೆದ್ದಿದ್ದರು. ಪದಕ ಪಟ್ಟಿಯಲ್ಲಿ ಮೊದಲ ಮೂವತ್ತರ ಒಳಗೆ ಸ್ಥಾನ ಗಳಿಸಿಕೊಳ್ಳಲು ಸಾಧ್ಯವಾಗದಿದ್ದರೂ ಈ ಬಾರಿಯ ಸಾಧನೆ ಭಾರತದ ಅಂಗವಿಕಲ ಕ್ರೀಡಾಪಟುಗಳ ಮನದಂಗಳದಲ್ಲಿ ಕನಸಿನ ಬೀಜ ಬಿತ್ತಿದೆ.

ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತದ ಕೆಲ ಅಥ್ಲೀಟ್‌ಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಪುರುಷರ (ಎಫ್‌–46) ಡಿಸ್ಕಸ್ ಥ್ರೋದಲ್ಲಿ ರೋಹಿತ್ ಕುಮಾರ್‌ ಸ್ವಲ್ಪದರಲ್ಲೇ ಪದಕ ವಂಚಿತರಾಗಿದ್ದರು. 46.50 ಮೀಟರ್ಸ್ ದೂರ ಎಸೆದ ಅವರು ನಾಲ್ಕನೇಯವರಾದರು. ರಿಯೊದಲ್ಲಿ ಪದಕ ಗೆದ್ದಿದ್ದ ಮಹಿಳಾ ಶಾಟ್‌ಪಟ್‌ ಪಟು (ಎಫ್‌–53) ಲಂಡನ್‌ನಲ್ಲಿ ಆರನೇ ಸ್ಥಾನ ಗಳಿಸಿದ್ದರು. ಮಹಿಳೆಯರ ಟಿ–47 ವಿಭಾಗದ 400 ಮೀಟರ್ಸ್‌ ಓಟದಲ್ಲಿ ಜಯಂತಿ ಬೆಹೆರಾ ಕೂಡ ಆರನೇ ಸ್ಥಾನ ಗಳಿಸಿದ್ದರು.

ಭಾರತದಿಂದ 30 ಕ್ರೀಡಾಪಟುಗಳು
ಬ್ರಿಟನ್‌, ಪೋಲೆಂಡ್, ಅಮೆರಿಕ, ಜಪಾನ್‌ (ತಲಾ 50) ಮತ್ತು ಆಸ್ಟ್ರೇಲಿಯಾ (37) ಬಿಟ್ಟರೆ ಕೂಟಕ್ಕೆ ಅತಿಹೆಚ್ಚು ಕ್ರೀಡಾಪಟುಗಳನ್ನು ಕಳುಹಿಸಿದ ಕೀರ್ತಿ ಭಾರತಕ್ಕೆ ಇದೆ. ಇಲ್ಲಿಂದ 30 ಅಥ್ಲೀಟ್‌ಗಳು ತೆರಳಿದ್ದರು. ಈ ಮೂಲಕ ಪ್ಯಾರಾ ಅಥ್ಲೀಟ್‌ಗಳಿಗೂ ವಿಶ್ವದ ಅಂಗಳದಲ್ಲಿ ಮಿಂಚಲು ಅವಕಾಶ ಒದಗಿತ್ತು.

ಚೀನಾ, ಕೆನಡಾ, ಟ್ಯುನೀಷಿಯಾ, ಉಕ್ರೇನ್‌, ಅರ್ಜೆಂಟೀನಾ, ಬ್ರೆಜಿಲ್ ಮುಂತಾದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಅಂಗವಿಕಲರ ಕ್ರೀಡೆಯಲ್ಲಿ ಸವೆಸಬೇಕಾದ ಹಾದಿ ಇನ್ನೂ ಸಾಕಷ್ಟಿದೆ. ಈ ಬಾರಿಯ ಕೂಟದಲ್ಲಿ ವಿವಿಧ ದೇಶಗಳ ಮೂವರು ಕ್ರೀಡಾಪಟುಗಳು ಗರಿಷ್ಠ ಸಾಧನೆ ಮಾಡಿದ್ದಾರೆ.

ಟ್ರ್ಯಾಕ್‌ನಲ್ಲಿ ಈ ಎಲ್ಲ ಸಾಧನೆಗಳು ದಾಖಲಾಗಿವೆ. ಟ್ಯುನೀಷಿಯಾದ ವಾಲೀದ್ ಕಾಟಿಲಾ (ಟಿ–34) 100, 200, 400 ಮತ್ತು 800 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದಿದ್ದಾರೆ. ಕೆನಡಾದ ಬ್ರೆಂಟ್‌ ಲಕಟೊಸ್‌ (ಟಿ–53) 100, 200, 400 ಮತ್ತು 800 ಮೀಟರ್ಸ್ ಓಟದಲ್ಲಿ ಚಿನ್ನ ತಮ್ಮದಾಗಿಸಿಕೊಂಡಿದ್ದಾರೆ.

ಅಮೆರಿಕದ ತಾತ್ಯಾನ ಮೆಕ್‌ಫಾದೆನ್‌ ಮಹಿಳೆಯರ (ಟಿ–54) ವಿಭಾಗದ 200, 400 ಮತ್ತು 800, 1500 ಮೀಟರ್ಸ್ ಓಟದಲ್ಲಿ ಚಿನ್ನ ಕೊರಳಿಗೇರಿಸಿಕೊಂಡಿದ್ದಾರೆ. ಒಟ್ಟು 33 ವಿಭಾಗಗಳಲ್ಲಿ ವಿಶ್ವ ದಾಖಲೆಗಳು ಕೂಡ ಸೃಷ್ಟಿಯಾಗಿವೆ. 92 ರಾಷ್ಟ್ರಗಳ 1074 ಅಥ್ಲೀಟ್‌ಗಳು 213 ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು.

10 ದಿನ ಪ್ಯಾರಾ ಅಥ್ಲೀಟ್‌ಗಳ ಕಲರವಕ್ಕೆ ಸಾಕ್ಷಿಯಾಗಿದ್ದ ಒಲಿಂಪಿಕ್ ಸ್ಟೇಡಿಯಂ ಮತ್ತು ಇತರ ಕ್ರೀಡಾಂಗಣಗಳಲ್ಲಿ ಮೆರೆದ ಚೀನಾ ಐದನೇ ಬಾರಿ ಉತ್ತಮ ಸಾಧನೆ ಮಾಡಿದ ರಾಷ್ಟ್ರ ಎಂಬ ಹೆಗ್ಗಳಿಕೆಯೊಂದಿಗೆ ಮರಳಿತು. ಇವೆಲ್ಲವೂ ಕಣ್ಣಿಗೆ ರಾಚುವ ದಾಖಲೆಗಳು. ಭಾರತದ ಅಥ್ಲೀಟ್‌ಗಳು ಇನ್ನಷ್ಟು ಪರಿಶ್ರಮಪಡಲು ಇವು ದಾರಿದೀಪ ಆಗಬೇಕಿವೆ.


ಭಾರತಕ್ಕೆ ಚೊಚ್ಚಲ ಚಿನ್ನ ತಂದು ಕೊಟ್ಟ ಸುಂದರ್‌ ಸಿಂಗ್‌ ಗುರ್ಜಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT