ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಾಜ್ ಷರೀಫ್ ಪದಚ್ಯುತಿ ಹೆಚ್ಚಿದ ರಾಜಕೀಯ ತಳಮಳ

Last Updated 30 ಜುಲೈ 2017, 19:30 IST
ಅಕ್ಷರ ಗಾತ್ರ

ವಿದೇಶಗಳಲ್ಲಿ ಅಕ್ರಮ ಆಸ್ತಿ ಗಳಿಕೆ ಕುರಿತಂತೆ ಪನಾಮಾ ಪೇಪರ್ಸ್ ಬಯಲು ಮಾಡಿದ್ದ ಹಗರಣದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರು ದೋಷಿ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಷರೀಫ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಇಂತಹ ಬೆಳವಣಿಗೆ ಅನಿರೀಕ್ಷಿತವಾದುದೇನೂ ಅಲ್ಲ.

ಪಾಕಿಸ್ತಾನ ರಚನೆಯಾದ ಈ 70 ವರ್ಷಗಳ ಇತಿಹಾಸದಲ್ಲಿ ಒಬ್ಬ ಪ್ರಧಾನಿಯೂ ಅಧಿಕಾರ ಅವಧಿಯ ಐದು ವರ್ಷಗಳನ್ನು ಪೂರೈಸಿಲ್ಲ ಎಂಬುದು ವಿಷಾದದ ಸಂಗತಿ. ಈವರೆಗೆ ಪಾಕಿಸ್ತಾನ 18 ಪ್ರಧಾನಿಗಳನ್ನು ಕಂಡಿದೆ. ಈ ಎಲ್ಲರೂ ಹುದ್ದೆಯಲ್ಲಿರುವಾಗಲೇ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸ್ವತಃ ನವಾಜ್ ಷರೀಫ್ ಅವರು ಪ್ರಧಾನಿ ಹುದ್ದೆಯಲ್ಲಿರುವಾಗಲೇ ಅಧಿಕಾರ ಕಳೆದುಕೊಳ್ಳುತ್ತಿರುವುದು ಇದು ಮೂರನೇ ಬಾರಿ.

1993ರಲ್ಲಿ ಸೇನೆಯ ಒತ್ತಡಕ್ಕೆ ಸಿಲುಕಿ ರಾಜೀನಾಮೆ ನೀಡಬೇಕಾಯಿತು. 1999ರಲ್ಲಿ ಕಾರ್ಗಿಲ್ ಯುದ್ಧದ ನಂತರ ಪೂರ್ಣ ಪ್ರಮಾಣದ ಸೇನಾ ಕ್ಷಿಪ್ರಕ್ರಾಂತಿಯಿಂದಾಗಿ ಸ್ವಲ್ಪ ಕಾಲ ಸೆರೆವಾಸದಲ್ಲಿದ್ದು ನಂತರ ಗಡಿಪಾರಾಗಿ ಸೌದಿ ಅರೇಬಿಯಾಗೆ ತೆರಳಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು. ಸುಪ್ರೀಂ ಕೋರ್ಟ್‌ನ ಈಗಿನ ತೀರ್ಪು, ಪಾಕಿಸ್ತಾನ ತೆಹ್ರೀಕ್ – ಎ– ಇನ್ಸಾಫ್‌ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್‌ ಹೋರಾಟಕ್ಕೆ ಸಂದ ಜಯ ಎಂದೂ ಹೇಳಬಹುದು. ಏಕೆಂದರೆ ಪನಾಮಾ ಪೇಪರ್ಸ್ ಹಗರಣ ಬಹಿರಂಗವಾದ ನಂತರ, ಷರೀಫ್ ರಾಜೀನಾಮೆಗಾಗಿ ಆಗ್ರಹಿಸುತ್ತಲೇ  ಬಂದಿದ್ದರು ಅವರು. ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಷರೀಫ್ ಅವರ ಪಿಎಂಎಲ್– ಎನ್ ಪಕ್ಷ ಸ್ಪಷ್ಟ ಬಹುಮತ ಹೊಂದಿದೆ. ಹೀಗಾಗಿ ಪಾಕಿಸ್ತಾನ ಸರ್ಕಾರ ಯಾವುದೇ ಅಸ್ತಿತ್ವದ ಸಮಸ್ಯೆಯನ್ನು ತಕ್ಷಣಕ್ಕೆ ಎದುರಿಸುವುದಿಲ್ಲ. ಆದರೆ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲು ಇನ್ನೊಂದೇ ವರ್ಷ ಬಾಕಿ ಇರುವಾಗ, ಷರೀಫ್ ಅವರ ನಿರ್ಗಮನ ರಾಜಕೀಯ ತಳಮಳ ಸೃಷ್ಟಿಸಲಿದೆ. ಹೀಗಿದ್ದೂ ಮುಂದಿನ ವರ್ಷದ ಚುನಾವಣೆಯಲ್ಲಿ ಇದರ ಲಾಭವನ್ನು ಇಮ್ರಾನ್ ಖಾನ್ ಪಡೆಯಬಹುದಾದ ಸಾಧ್ಯತೆ ಕಡಿಮೆ.

ಈ ವಿದ್ಯಮಾನದಲ್ಲಿ ಸೇನೆ ಮೌನವಾಗಿದೆ ಎಂಬುದು ಮುಖ್ಯ. ಪ್ರಧಾನಿಗೆ ಅಧಿಕಾರದಿಂದ ಕೆಳಗಿಳಿಯಲು ಹೇಳಿರುವುದು ಸುಪ್ರೀಂ ಕೋರ್ಟ್, ಸೇನೆಯಲ್ಲ ಎಂಬುದನ್ನೂ ಗಮನಿಸಬೇಕು. ಅಕ್ರಮ ಸಂಪಾದನೆ ಹಾಗೂ ತೆರಿಗೆ ವಂಚನೆಯಿಂದ ಗಳಿಸಿದ ಕಾಳಧನವನ್ನು ಅಂತರರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಇರಿಸಿರುವವರ ಪಟ್ಟಿಯು ಪನಾಮಾ ಪೇಪರ್ಸ್ ಸೋರಿಕೆಯಿಂದ ಬಹಿರಂಗಗೊಂಡಿತ್ತು. ಇದರಿಂದಾಗಿ ಕಳೆದ ವರ್ಷ ಐಸ್‌ಲ್ಯಾಂಡ್ ಪ್ರಧಾನಿ ರಾಜೀನಾಮೆ ನೀಡಿದ್ದರು. ಈಗ ಪಾಕಿಸ್ತಾನದಲ್ಲೂ ಪ್ರಧಾನಿ ಅನರ್ಹಗೊಂಡಿದ್ದಾರೆ.

ಒಂದೆಡೆ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಈ ತೀರ್ಪು, ರಾಜಕಾರಣಿಗಳಲ್ಲಿ ಉತ್ತರದಾಯಿತ್ವ ಸಂಸ್ಕೃತಿಗೆ ಎಚ್ಚರಿಕೆ ನೀಡುತ್ತದೆ ಎಂದು ಹೇಳಬಹುದು. ಷರೀಫ್ ಕುಟುಂಬದ ವಂಶಾಡಳಿತ ರಾಜಕಾರಣಕ್ಕೂ ಇದು ಪೆಟ್ಟು ನೀಡುವಂತಹದ್ದು. ಆದರೆ ಮಿಲಿಟರಿ ಸರ್ವಾಧಿಕಾರವನ್ನು ಇದು ಇನ್ನಷ್ಟು ಬಲಗೊಳಿಸಬಹುದು ಎಂಬ ಆತಂಕವನ್ನೂ ತಳ್ಳಿಹಾಕಲಾಗದು. ಏಕೆಂದರೆ, ಪಾಕಿಸ್ತಾನದ ಇತಿಹಾಸವನ್ನು ಗಮನಿಸಿದರೆ ನಾಗರಿಕ ಆಡಳಿತಗಾರರನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಂವಿಧಾನಿಕ ಲೆಕ್ಕಾಚಾರಗಳು ಹಾಗೂ ನೇರವಾಗಿ ಮಿಲಿಟರಿ ಆಡಳಿತ ಹೇರಿಕೆಗಳ ಕ್ರಮವನ್ನು ಈವರೆಗೆ ಪಾಕಿಸ್ತಾನದ ಮಿಲಿಟರಿ ಅನುಸರಿಸಿಕೊಂಡೇ ಬಂದಿದೆ. ಈ ಪ್ರಕ್ರಿಯೆಯಲ್ಲಿ ಉನ್ನತ ನ್ಯಾಯಾಂಗದ ಬೆಂಬಲವನ್ನೂ ಅದು ಪಡೆದುಕೊಂಡಿದೆ.

2012ರಲ್ಲಿ ಪಾಕಿಸ್ತಾನದ ಆಗಿನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ವರಮಾನ ಮೂಲಗಳ ತನಿಖೆ ನಡೆಸಬೇಕು ಎಂಬಂತಹ ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸದ ಯೂಸಫ್ ರಾಜಾ ಗಿಲಾನಿ ಅವರನ್ನು ಪ್ರಧಾನಿ ಹುದ್ದೆಯಿಂದ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿತ್ತು. ಆಗ ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಬಗ್ಗೆ ‘ನ್ಯಾಯಾಂಗದ ಸರ್ವಾಧಿಕಾರ’ ಎಂಬಂತಹ ಟೀಕೆಗಳನ್ನು ಮಾಡಲಾಗಿತ್ತು. ಪಾಕಿಸ್ತಾನದಂತಹ ನಾಜೂಕಿನ ಪ್ರಜಾಪ್ರಭುತ್ವದಲ್ಲಿ ಭ್ರಷ್ಟಾಚಾರದ ಆರೋಪಗಳಿಗೆ ನವಾಜ್ ಷರೀಫ್ ಒಳಗಾಗಬಾರದಿತ್ತು. ಲಭ್ಯ ಸಾಕ್ಷ್ಯಗಳು ಷರೀಫ್ ಅವರ ಮಕ್ಕಳು ಎಸಗಿದ ಅಕ್ರಮಗಳ ಕಡೆ ಬೊಟ್ಟು ಮಾಡಿವೆ. ರಾಜಕೀಯ ಭ್ರಷ್ಟಾಚಾರ ಮಟ್ಟ ಹಾಕುವಲ್ಲಿ ಕೋರ್ಟ್‌ನ ಈ ತೀರ್ಪು ಮಹತ್ವದ ನಡೆ ಎಂದೂ ವ್ಯಾಖ್ಯಾನಿಸಬಹುದು.

ಆದರೆ ಭಯೋತ್ಪಾದಕರ ಶಿಕ್ಷೆಗೆ ಸಂಬಂಧಿಸಿದಂತೆ ಇಂತಹದೇ ಕಠಿಣ ನಿಲುವುಗಳನ್ನು ಕೋರ್ಟ್ ತಾಳಿಲ್ಲ. ಒಟ್ಟಾರೆಯಾಗಿ ಇಂತಹ ಬೆಳವಣಿಗೆ ನಾಗರಿಕ ಸರ್ಕಾರದ ಮೇಲೆ ಮಿಲಿಟರಿ ಹಿಡಿತವನ್ನು ಬಿಗಿ ಮಾಡುವಂತಹದ್ದು. ಪಾಕಿಸ್ತಾನದಲ್ಲಿ ಈಗಾಗಲೇ ನಾಜೂಕು ಸ್ಥಿತಿಯಲ್ಲಿರುವ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT