ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ಪುರ, ಯಲಹಂಕ ‘ಸಾವಿನ ಹಾದಿ’

Last Updated 30 ಜುಲೈ 2017, 19:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆ.ಆರ್‌.ಪುರ ಹಾಗೂ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯ ರಸ್ತೆಗಳು  ಪಾದಚಾರಿಗಳು ಹಾಗೂ ಬೈಕ್‌ ಸವಾರರಿಗೆ ಸಾವಿನ ಹಾದಿಗಳಾಗಿ ಪರಿಣಮಿಸಿವೆ.

ಕೆ.ಆರ್‌.ಪುರ ಠಾಣೆಯ ವ್ಯಾಪ್ತಿಯಲ್ಲಿ 2017ರ ಜೂನ್‌ವರೆಗೆ 170 ಅಪಘಾತಗಳು ಸಂಭವಿಸಿದ್ದು, 28 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 20 ಪಾದಚಾರಿಗಳಾಗಿದ್ದು, ಇನ್ನುಳಿದ ಎಂಟು ಮಂದಿ ಬೈಕ್‌ ಸವಾರರು. 109 ಮಂದಿ ತೀವ್ರ ಗಾಯಗೊಂಡಿದ್ದು, 143 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಳ್ಳಾರಿ ರಸ್ತೆ ಹಾದು ಹೋಗಿರುವ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ 129 ಅಪಘಾತಗಳು ಸಂಭವಿಸಿ, 27 ಮಂದಿ ಪ್ರಾಣ ಬಿಟ್ಟಿದ್ದಾರೆ. 95 ಮಂದಿ ಗಾಯ
ಗೊಂಡಿದ್ದಾರೆ. ನಗರದ ಸಂಚಾರ ಪೊಲೀಸರು  ಸಂಗ್ರಹಿಸಿರುವ ಅಪಘಾತಗಳ ಮಾಹಿತಿಯಲ್ಲಿ ಈ ವಿಷಯ ಗೊತ್ತಾಗಿದೆ.  

‘ಕೆ.ಆರ್‌.ಪುರ ಠಾಣೆಯ ವ್ಯಾಪ್ತಿಯಲ್ಲಿ ಹಳೇ ಮದ್ರಾಸ್‌ ರಸ್ತೆ ಹಾಗೂ ಹೊರವರ್ತುಲ ರಸ್ತೆ ಹಾದು ಹೋಗಿವೆ. ಕೋಲಾರ, ತಿರುಪತಿ, ಚೆನ್ನೈ ಸೇರಿದಂತೆ ಹಲವು ನಗರಗಳಿಗೆ ಹೋಗುವವರು ಈ ರಸ್ತೆಗಳ ಮೂಲಕ  ಹೋಗುತ್ತಾರೆ. ಪ್ರತಿ ಗಂಟೆಗೆ 10 ಸಾವಿರ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿವೆ. ಜತೆಗೆ ಯಲಹಂಕದ ರಸ್ತೆಯಲ್ಲೂ ಸಾವಿರಾರು ವಾಹನಗಳ ಓಡಾಟವಿದೆ. ಅಲ್ಲೆಲ್ಲ ಪಾದಚಾರಿಗಳು ಹಾಗೂ ಸವಾರರು, ಸಂಚಾರ ನಿಯಮ ಉಲ್ಲಂಘಿ ಸುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ ತಿಳಿಸಿದರು.
ಅವೈಜ್ಞಾನಿಕ ಬಸ್‌ ನಿಲ್ದಾಣ: ‘ಅಪಘಾತಗಳು ಹೆಚ್ಚುತ್ತಿರುವುದಕ್ಕೆ ಅವೈಜ್ಞಾನಿಕ ಬಸ್‌ ನಿಲ್ದಾಣಗಳು ಕಾರಣ’ ಎಂದು ಪೊಲೀಸರು ದೂರಿದರು.
‘ಕೆ.ಆರ್‌.ಪುರ ವ್ಯಾಪ್ತಿಯ ಹಳೇ ಮದ್ರಾಸ್‌ ಹಾಗೂ ಹೊರವರ್ತುಲ ರಸ್ತೆಯ ಎಡ ಹಾಗೂ ಬಲ ಭಾಗದಲ್ಲಿ ಬಸ್‌ ನಿಲ್ದಾಣಗಳಿವೆ. ಆದರೆ, ಪ್ರಯಾಣಿಕರು ಎಡದಿಂದ ಬಲ ಭಾಗದ ನಿಲ್ದಾಣಕ್ಕೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲ’ ಎಂದು ಅವರು ಹೇಳಿದರು.

‘ರಸ್ತೆ ದಾಟುವ ವೇಳೆಯಲ್ಲಿ ವಾಹನಗಳು ಪಾದಚಾರಿಗಳಿಗೆ ಗುದ್ದುತ್ತಿವೆ.  ಅದರಿಂದಾಗಿ ಕೆಲವರು ಸ್ಥಳದಲ್ಲೇ ಮೃತಪಡುತ್ತಿದ್ದು, ಹಲವರು ಆಸ್ಪತ್ರೆಗೆ ಸೇರಿ ನರಳುತ್ತಿದ್ದಾರೆ’ ಎಂದು ತಿಳಿಸಿದರು.

ವಾಹನಗಳ ವೇಗಮಿತಿಗೆ ಕಡಿವಾಣ ಅಗತ್ಯ: ‘ಕಾರು ಹಾಗೂ ಲಘು ವಾಹನಗಳು  ಮಿತಿಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು’ ಎಂದು ಹೊರವರ್ತುಲ ರಸ್ತೆಯ ಪಕ್ಕದಲ್ಲಿ ಟೀ ಅಂಗಡಿ ಇಟ್ಟು ಕೊಂಡಿರುವ ಎನ್‌.ಎಸ್. ಶಂಕರ್‌ ಹೇಳಿದರು.
‘ಮಧ್ಯಾಹ್ನ ರಸ್ತೆಗೆ ಬರುವ ಇಂಟರ್‌ ಸೆಫ್ಟರ್‌ ವಾಹನದ ಪೊಲೀಸರು, ವಾಹನಗಳ ವೇಗಮಿತಿ ಪರೀಕ್ಷಿಸುತ್ತಾರೆ.  ನೂರಕ್ಕೂ ಹೆಚ್ಚು ವಾಹನಗಳಿಗೆ ದಂಡ ವಿಧಿಸುತ್ತಾರೆ. ಸಂಜೆ ಅವರು ಹೋದ ಬಳಿಕ ವಾಹನಗಳ ವೇಗಕ್ಕೆ ಮಿತಿ ಇರುವುದಿಲ್ಲ’ ಎಂದು ಅವರು ತಿಳಿಸಿದರು.
‘ಸಂಜೆ ಹಾಗೂ ತಡರಾತ್ರಿ ವೇಳೆಯೇ ಹೆಚ್ಚು ಅಪಘಾತಗಳು ನಡೆಯುತ್ತಿವೆ. ಹಲವು ಸವಾರರು, ಅಪಘಾತವನ್ನುಂಟು ಮಾಡಿದ ಬಳಿಕ ವಾಹನ ನಿಲ್ಲಿಸದೆ ಪರಾರಿಯಾಗುತ್ತಾರೆ. ಕೆಲವರು ಮಾತ್ರ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ’ ಎಂದರು.
ಖಾಸಗಿ ಕಂಪೆನಿಯ ಉದ್ಯೋಗಿ ರವಿಚಂದ್ರ ಮಾತನಾಡಿ, ‘ಈ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು. ಪಾದಚಾರಿಗಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಬಣ್ಣದ ಗುರುತುಗಳನ್ನು ಮಾಡಬೇಕು. ಹಂಪ್‌ ಗಳನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.
ಸ್ಕೈವಾಕ್‌ ಬಳಕೆಗೆ ಹಿಂದೇಟು: ‘ಕೆ.ಆರ್‌. ಪುರ ಹಾಗೂ ಯಲಹಂಕ ವ್ಯಾಪ್ತಿಯ ಹಲವೆಡೆ ಸ್ಕೈವಾಕ್‌ಗಳನ್ನು ನಿರ್ಮಿಸಲಾಗಿದ್ದು, ಪಾದಚಾರಿಗಳು ಅವುಗಳನ್ನು ಬಳಸುತ್ತಿಲ್ಲ’ ಎಂದು ಹಿತೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
‘ಸ್ಕೈವಾಕ್‌ಗಳನ್ನು ಬಳಸಿದರೆ, ಅಪಘಾತಗಳು ಅರ್ಧದಷ್ಟು ಕಡಿಮೆಯಾಗುತ್ತವೆ. ಅವುಗಳು ದೂರವಿದೆ ಎಂಬ ಮಾತ್ರಕ್ಕೆ ಪಾದಚಾರಿಗಳು, ರಸ್ತೆ ದಾಟಲು ಯತ್ನಿಸುವುದು ಜೀವಕ್ಕೆ ಅಪಾಯಕಾರಿ’ ಎಂದು ಹೇಳಿದರು.
ಪ್ರತ್ಯೇಕ ಬಸ್‌ ಮಾರ್ಗ: ‘ಅಪಘಾತ
ಗಳನ್ನು ಕಡಿಮೆ ಮಾಡಲು ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಪ್ರತ್ಯೇಕ ಬಸ್‌ ಮಾರ್ಗ ವ್ಯವಸ್ಥೆಯನ್ನೂ ಮಾಡಿದ್ದೇವೆ’ ಎಂದು ಹಿತೇಂದ್ರ ತಿಳಿಸಿದರು.
‘ಜನರು ರಸ್ತೆ ದಾಟದಂತೆ, ವಿಭಜಕಗಳನ್ನು ಅಳವಡಿಸಿದ್ದೇವೆ. ಪಾದಚಾರಿಗಳು ಓಡಾಡುವ ಸ್ಥಳಗಳಲ್ಲಿ ಬಣ್ಣದ ಗುರುತುಗಳನ್ನು ಹಾಕಲು ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ’ ಎಂದರು. 

ಪೀಣ್ಯ ರಸ್ತೆಯಲ್ಲೂ ಅಪಘಾತ ಹೆಚ್ಚಳ: ರಾಷ್ಟ್ರೀಯ ಹೆದ್ದಾರಿ–4 ಹಾಗೂ ನೈಸ್‌ ರಸ್ತೆ ಹಾದು ಹೋಗುವ ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ 128 ಅಪಘಾತಗಳು ಸಂಭವಿಸಿವೆ. 18 ಮಂದಿ ಮೃತಪಟ್ಟಿದ್ದು,  114 ಜನ ಗಾಯಗೊಂಡಿದ್ದಾರೆ. ಈ ಠಾಣೆಯು ಅತೀ ಹೆಚ್ಚು ಅಪಘಾತ ಸಂಭವಿಸಿದ ಠಾಣೆಗಳ ಪಟ್ಟಿಯಲ್ಲಿ  ಮೂರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT