ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ನ ನವ ಚೇತನ

Last Updated 31 ಜುಲೈ 2017, 4:32 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟು ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌.

ಕ್ರಿಕೆಟ್‌ ಲೋಕದ ದೈತ್ಯರೆಂದೆ ಬಿಂಬಿತವಾಗಿರುವ ಕಾಂಗರೂಗಳ ನಾಡಿನ ಬೌಲರ್‌ಗಳನ್ನು ನಿರ್ಭೀತಿಯಿಂದ ಎದುರಿಸಿ ಇಂಗ್ಲೆಂಡ್‌ನ ಕೌಂಟಿ ಅಂಗಳದಲ್ಲಿ ರನ್‌ ಹೊಳೆ ಹರಿಸಿದ್ದ ಹರ್ಮನ್‌ಪ್ರೀತ್‌, ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಹುಟ್ಟುಹಾಕಿದ್ದಾರೆ.

ವೀರೇಂದ್ರ ಸೆಹ್ವಾಗ್‌ ಅವರನ್ನು ಆದರ್ಶ ವಾಗಿಟ್ಟುಕೊಂಡು ಕ್ರಿಕೆಟ್‌ ಆಟಲು ಶುರುಮಾಡಿದ್ದ ಬಲಗೈ ಆಟಗಾರ್ತಿ ಹರ್ಮನ್‌ಪ್ರೀತ್‌, ಸೆಹ್ವಾಗ್‌ ಅವರಂತೆಯೇ ಸಿಡಿಲಬ್ಬರದ ಆಟ ಆಡಿ ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಆಪ್ತ ವಲಯದಲ್ಲಿ ‘ಲೇಡಿ ವಿರಾಟ್‌ ಕೊಹ್ಲಿ’ ಎಂದೇ ಗುರುತಿಸಿಕೊಂಡಿರುವ 28 ವರ್ಷದ ಹರ್ಮನ್‌ಪ್ರೀತ್‌, ಎಳವೆಯಲ್ಲೆ ಆಕ್ರಮಣಕಾರಿ ಗುಣವನ್ನು ಮೈಗೂಡಿಸಿಕೊಂಡವರು. ಎದುರಾಳಿ ಬೌಲರ್‌ ಎಷ್ಟೇ ವೇಗವಾಗಿ ಚೆಂಡು ಎಸೆದರೂ ಅದನ್ನು ಲೀಲಾಜಾಲವಾಗಿ ಸಿಕ್ಸರ್‌ಗೆ ಅಟ್ಟುವ ಕಲೆ ಹರ್ಮನ್‌ಪ್ರೀತ್‌ಗೆ  ಸಿದ್ಧಿಸಿದೆ. ಬಾಲ್ಯದಿಂದಲೂ ಹುಡುಗರ ಜೊತೆ ಕ್ರಿಕೆಟ್‌ ಆಡುತ್ತಾ ಬೆಳೆದ ಅವರಿಗೆ ಹುಡುಗರ ಆಟವೇ ಪ್ರೇರಣೆಯಂತೆ.

ತಂದೆಯೆ ಮೊದಲ ಗುರು:  ವಾಲಿಬಾಲ್‌ ಮತ್ತು ಬ್ಯಾಸ್ಕೆಟ್‌ಬಾಲ್‌ ಆಟಗಾರರಾಗಿದ್ದ ಹರ್ಮನ್‌ ಅವರ ತಂದೆ ಹರ್ಮಂದರ್‌ ಅವರು ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಕನಸು ಹೊತ್ತಿದ್ದರು. ತಮ್ಮ ಬಯಕೆ ಈಡೇರದಿದ್ದಾಗ, ಮಗಳನ್ನು ದೊಡ್ಡ ಕ್ರೀಡಾಪಟುವನ್ನಾಗಿ ರೂಪಿಸುವ ಪಣತೊಟ್ಟರು. ಶುರುವಿನಲ್ಲಿ ಅಪ್ಪನ ಗರಡಿಯಲ್ಲಿ ಪಳಗಿದ ಹರ್ಮನ್‌ಪ್ರೀತ್‌, ನಂತರ ಜ್ಞಾನಜ್ಯೋತಿ ಸ್ಕೂಲ್‌ ಅಕಾಡೆಮಿಗೆ ಸೇರಿದರು. ಅಲ್ಲಿ ಕಮಲ್‌ದೀಶ್‌ ಸಿಂಗ್‌ ಸೋಧಿ ಅವರ ಮಾರ್ಗದರ್ಶನದಲ್ಲಿ  ಆಟದ ಪಾಠಗಳನ್ನು ಕಲಿತು ನೈಪುಣ್ಯ ಸಾಧಿಸಿದ ಅವರು ದೇಶಿ ಟೂರ್ನಿಗಳಲ್ಲಿ ಅಪೂರ್ವ ಸಾಮರ್ಥ್ಯ ತೋರಿ ಸೈ ಎನಿಸಿಕೊಂಡಿದ್ದರು.

20ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಡಿ ಇಟ್ಟ ಹರ್ಮನ್‌ಪ್ರೀತ್‌ ಅವರು ಪಾಕಿಸ್ತಾನದ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಗಮನಾರ್ಹ ಸಾಮರ್ಥ್ಯ ತೋರಿದ್ದರು. ವೃತ್ತಿ ಬದುಕಿನ 31ನೇ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಹರ್ಮನ್‌ಪ್ರೀತ್‌ ಅವರಿಗೆ 2012ರ ಟಿ–20 ಏಷ್ಯಾಕಪ್‌ ಫೈನಲ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಅನಿರೀಕ್ಷಿತ ಅವಕಾಶ ಸಿಕ್ಕಿತ್ತು. ಅವರ ಸಾರಥ್ಯದಲ್ಲಿ ತಂಡ ಫೈನಲ್‌ನಲ್ಲಿ ಪಾಕಿಸ್ತಾನವನ್ನು 81ರನ್‌ಗಳಿಂದ ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದು ಇತಿಹಾಸ.

2013ರ ಮಾರ್ಚ್‌ನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲೂ ತಂಡವನ್ನು ಮುನ್ನಡೆಸಿದ್ದ ಹರ್ಮನ್‌ಪ್ರೀತ್‌ ಅವರು ಎರಡನೇ ಏಕದಿನ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದ್ದರು.

2016ರ ಜನವರಿಯಲ್ಲಿ ಜರುಗಿದ್ದ ಆಸ್ಟ್ರೇಲಿಯಾ ಎದುರಿನ ಟಿ–20 ಸರಣಿಯಲ್ಲಿ ಭಾರತ ಟ್ರೋಫಿ ಎತ್ತಿಹಿಡಿಯುವಲ್ಲಿ ಹರ್ಮನ್‌ಪ್ರೀತ್‌ ಅವರ ಪಾತ್ರ ಮಹತ್ವದ್ದಾಗಿತ್ತು. ಅದೇ ವರ್ಷ ನಡೆದಿದ್ದ ಐಸಿಸಿ ಮಹಿಳಾ ವಿಶ್ವ ಟಿ–20ಯಲ್ಲೂ ಮೋಡಿ ಮಾಡಿದ್ದ ಪಂಜಾಬ್‌ನ ಆಟಗಾರ್ತಿ, ನಾಲ್ಕು ಪಂದ್ಯಗಳಿಂದ 89ರನ್‌ ಕಲೆಹಾಕಿದ್ದರಲ್ಲದೆ, 7 ವಿಕೆಟ್‌ ಉರುಳಿಸಿದ್ದರು.

ಹೊಸ ಮೈಲುಗಲ್ಲು: ಯಶಸ್ಸಿನ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಿರುವ ಹರ್ಮನ್‌ಪ್ರೀತ್‌ ಅವರು ಸಾಗಿದ ಹಾದಿಯಲ್ಲಿ ಸಾಧನೆಯ ಮೈಲುಗಲ್ಲುಗಳನ್ನು ನೆಡುತ್ತಿದ್ದಾರೆ.

2016ರಲ್ಲಿ ಆಸ್ಟ್ರೇಲಿಯಾದ ಪ್ರತಿಷ್ಠಿತ ಮಹಿಳಾ ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಸಿಡ್ನಿ ಥಂಡರ್ಸ್‌ ತಂಡದ ಪರ ಆಡುವ ಮೂಲಕ ಹರ್ಮನ್‌ಪ್ರೀತ್‌ ಹೊಸ ಅಧ್ಯಾಯ ಬರೆದಿದ್ದರು. ಅವರು ಈ ಲೀಗ್‌ನಲ್ಲಿ ಆಡಿದ ಭಾರತದ ಮೊದಲ ಆಟಗಾರ್ತಿ ಎಂಬ ಶ್ರೇಯ ತಮ್ಮದಾಗಿಸಿಕೊಂಡಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಕೌರ್‌  171ರನ್‌ ಸಿಡಿಸುವ ಮೂಲಕ ವಿಶ್ವಕಪ್‌ನ ನಾಕೌಟ್‌ ಪಂದ್ಯದಲ್ಲಿ ಗರಿಷ್ಠ ರನ್‌ ಗಳಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಅವರು ಕರೆನ್‌ ರಾಲ್ಟನ್‌ (107*) ಅವರ ದಾಖಲೆಯನ್ನು ಮೀರಿ ನಿಂತು ಕ್ರಿಕೆಟ್‌ ಪಂಡಿತರ ಹುಬ್ಬೇರುವಂತೆ ಮಾಡಿದ್ದಾರೆ.

ಏಕದಿನ ಮಾದರಿಯಲ್ಲಿ ಭಾರತದ ಮಟ್ಟಿಗೆ ಇದು ಎರಡನೇ ವೈಯಕ್ತಿಕ ಶ್ರೇಷ್ಠ ಮೊತ್ತ ಎನಿಸಿದೆ.  ದೀಪ್ತಿ ಶರ್ಮಾ (188ರನ್‌) ಮೊದಲು ಈ ಸಾಧನೆ ಮಾಡಿದ್ದರು. ಹರ್ಮನ್‌ಪ್ರೀತ್‌ ಅವರು ಇತ್ತೀಚೆಗೆ ಬಿಡುಗಡೆಯಾಗಿರುವ ಐಸಿಸಿ ವಿಶ್ವ ಕ್ರಮಾಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಶ್ರೇಯಕ್ಕೂ ಭಾಜನರಾಗಿದ್ದಾರೆ. ಅವರು ಐಸಿಸಿ ಕ್ರಮಾಂಕ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಗಳಿಸಿದ ಭಾರತದ ಎರಡನೇ ಆಟಗಾರ್ತಿಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT