ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳ ಹೃದಯ ಗೆದ್ದ ಖುಷಿ...

Last Updated 31 ಜುಲೈ 2017, 4:36 IST
ಅಕ್ಷರ ಗಾತ್ರ

‘ಫೈನಲ್‌ನಲ್ಲಿ ಸೋತ ಬಳಿಕ ಡ್ರೆಸ್ಸಿಂಗ್ ಕೊಠಡಿಯಲ್ಲಿ ನಾವೆಲ್ಲಾ ಚಿಕ್ಕಮಕ್ಕಳಂತೆ ಅತ್ತೆವು. ರಾತ್ರಿಯಿಡೀ ನಿದ್ದೆ ಬರಲಿಲ್ಲ. ಆ ನಿರಾಸೆ ನಮ್ಮನ್ನು ಸದಾ ಕಾಡಬಹುದು. ಆದರೆ, ಫೈನಲ್‌ ಪ್ರವೇಶಿಸಿದ ಹೆಮ್ಮೆ ಇದೆ. ಟ್ರೋಫಿ ಒಲಿಯದಿದ್ದರೂ ದೇಶದ ಅಭಿಮಾನಿಗಳ ಹೃದಯ ಗೆದ್ದ ಖುಷಿ ಇದೆ’ –ಇಂಗ್ಲೆಂಡ್‌ನಲ್ಲಿ ನಡೆದ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆದ ಭಾರತ ತಂಡದ ವೇದಾ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಹೀಗೆ.

ಚಿಕ್ಕಮಗಳೂರು ಜಿಲ್ಲೆ ಕಡೂರಿನ ವೇದಾ ಪಾಲಿಗಿದು ಚೊಚ್ಚಲ ವಿಶ್ವಕಪ್‌. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅವರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ಸಾಂದರ್ಭಿಕ ಲೆಗ್ ಸ್ಪಿನ್ನರ್ ಆಗಿರುವ ಅವರು ಅತ್ಯುತ್ತಮ ಫೀಲ್ಡರ್‌ ಕೂಡ. 2011ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ವೇದಾ ಅವರ ತಂದೆ ಎಸ್.ಜೆ.ಕೃಷ್ಣಮೂರ್ತಿ ಕಡೂರಿನಲ್ಲಿ ಕೇಬಲ್ ಆಪರೇಟರ್. ತಾಯಿ ಚೆಲುವಾಂಬಾ ಗೃಹಿಣಿ.

ಕ್ರಿಕೆಟ್‌ ಆಡಲು ಪ್ರೇರಣೆ ನೀಡಿದ ಸಂಗತಿ, ಕ್ರೀಡೆಯ ಬೆನ್ನಟ್ಟಿ ಬೆಂಗಳೂರಿಗೆ ಹೋಗಿದ್ದು, ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ವಿಶ್ವಕಪ್‌ನ ಅನುಭವಗಳನ್ನು 24 ವರ್ಷ ವಯಸ್ಸಿನ ವೇದಾ ಅವರು ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.

* ಸ್ವದೇಶಕ್ಕೆ ಬಂದಿಳಿದಾಗ ಲಭಿಸಿದ ಸ್ವಾಗತದ ಬಗ್ಗೆ ಹೇಳಿ?
ಇಷ್ಟು ದಿನಗಳ ನನ್ನ ಕ್ರಿಕೆಟ್‌ ಜೀವನದಲ್ಲಿ ಯಾವತ್ತೂ ಈ ರೀತಿಯ ಸ್ವಾಗತ ಲಭಿಸಿರಲಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೂ ಒಳ್ಳೆಯ ದಿನಗಳು ಬಂದಿವೆ. ಜನರ ದೃಷ್ಟಿಕೋನ ಬದಲಾಗುತ್ತಿದೆ. ವಿಶ್ವಕಪ್‌ ಫೈನಲ್‌ನಲ್ಲಿ ಸೋತರೂ ಈ ಬದಲಾವಣೆ ಕಂಡು ಗೆದ್ದಷ್ಟೇ ಖುಷಿಯಾಗುತ್ತಿದೆ.

* ನಿಮ್ಮ ಪಾಲಿಗಿದು ಚೊಚ್ಚಲ ವಿಶ್ವಕಪ್‌. ಹೇಗಿತ್ತು ಅನುಭವ?
ವಿಶ್ವಕಪ್‌ ಆಡಲು ಇಂಗ್ಲೆಂಡ್‌ಗೆ ತೆರಳಿದಾಗ ನಮ್ಮ ಮೇಲೆ ಯಾರೂ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ, ಫೈನಲ್‌ವರೆಗೆ ತಲುಪಿದೆವು. ಗೆಲುವಿನ ದಡದಲ್ಲಿ ಎಡವಿದ್ದು ಹೊರತುಪಡಿಸಿದರೆ ಇದೊಂದು ಸ್ಮರಣೀಯ ಟೂರ್ನಿ. ಇಡೀ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಖುಷಿ ನನಗಿದೆ. ನಾಯಕಿ ಮಿಥಾಲಿ ರಾಜ್‌, ಹರ್ಮನ್‌ಪ್ರೀತ್‌ ಕೌರ್‌ ಅವರಂಥ ಆಟಗಾರ್ತಿಯರಿಂದ ಹಲವು ವಿಚಾರ ಕಲಿತಿದ್ದೇನೆ. ಇಲ್ಲಿ ಲಭಿಸಿದ ಅನುಭವ ಮುಂದೆ ನೆರವಿಗೆ ಬರಲಿದೆ.

* ಫೈನಲ್ ಪಂದ್ಯದಲ್ಲಿ ನಿಮ್ಮ ಮೇಲೆ ಒತ್ತಡವಿತ್ತೆ?
ಯಾವುದೇ ಪಂದ್ಯದಲ್ಲಿ ಒತ್ತಡ ಸಹಜ. ನಮ್ಮ ತಂಡದಲ್ಲಿನ ಹೆಚ್ಚಿನ ಆಟಗಾರ್ತಿಯರು ಇಂಥ ಸನ್ನಿವೇಶವನ್ನು ಹಿಂದೆ ಎದುರಿಸಿರಲಿಲ್ಲ. ಏಕೆಂದರೆ ಬಹುತೇಕ ಆಟಗಾರ್ತಿಯರು ವಿಶ್ವಕಪ್‌ ಫೈನಲ್‌ನಲ್ಲಿ ಆಡಿದ್ದು ಇದೇ ಮೊದಲು. ನಾನು 35 ರನ್‌ ಗಳಿಸಿದೆ. ವಿಕೆಟ್‌ ಒಪ್ಪಿಸಿದ ರೀತಿ ನನಗೇ ಬೇಸರ ತರಿಸಿದೆ.

* ನಿಮ್ಮ ಸಾಧನೆ ಬಗ್ಗೆ ಪೋಷಕರ ಪ್ರತಿಕ್ರಿಯೆ ಹೇಗಿದೆ?
ನನ್ನ ಸಾಧನೆ ಬಗ್ಗೆ ಅವರಿಗೆ ಹೆಮ್ಮೆ ಇದೆ. ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್‌ ಆಡಲು ಬೆಂಗಳೂರಿಗೆ ಹೋಗುವುದಾಗಿ ಹೇಳಿದಾಗ ಧೈರ್ಯ ತುಂಬಿ ಕಳುಹಿಸಿದ್ದನ್ನು ನಾನು ಮರೆಯಲಾರೆ. ವಿಶ್ವಕಪ್‌ ಪಾಲ್ಗೊಂಡಿದ್ದಾಗ ಮೊಬೈಲ್‌ನಲ್ಲಿ ಅವರೊಂದಿಗೆ ಮಾತನಾಡುತ್ತಿದ್ದೆ. ಧೈರ್ಯ ತುಂಬುತ್ತಿದ್ದರು.

* ಗ್ರಾಮೀಣ ಪ್ರದೇಶದ ನಿಮಗೆ ಕ್ರಿಕೆಟ್‌ ಮೇಲೆ ಪ್ರೀತಿ ಬಂದಿದ್ದು ಹೇಗೆ?
ನನಗೆ ಇಬ್ಬರು ಅಕ್ಕಂದಿರು. ಅಣ್ಣ ಸ್ಥಳೀಯ ಟೂರ್ನಿಗಳಲ್ಲಿ ಆಡುತ್ತಿದ್ದ. ಯುವತಿಯರು ಕ್ರಿಕೆಟ್ ಆಡುವ ಛಾಯಾಚಿತ್ರವನ್ನು ಪತ್ರಿಕೆಯಲ್ಲಿ ವೀಕ್ಷಿಸಿದ ಮೇಲೆ ನನಗೂ ಆಸಕ್ತಿ ಬಂತು. ಹುಡುಗಿಯರು ಕ್ರಿಕೆಟ್ ಆಡುತ್ತಾರೆ ಎಂಬುದು ಪೋಷಕರಿಗೆ ಗೊತ್ತಿರಲಿಲ್ಲ. ಅಲ್ಲದೆ, ನಮ್ಮೂರಲ್ಲಿ ಆಗ ಹುಡುಗಿಯರು ಕ್ರಿಕೆಟ್ ಆಡುತ್ತಿರಲಿಲ್ಲ. ಹೀಗಾಗಿ, ಅಕ್ಕಪಕ್ಕದ ಮನೆಯ ಹುಡುಗರ ಜೊತೆ ಸೇರಿ ಬ್ಯಾಟಿಂಗ್‌, ಬೌಲಿಂಗ್‌ ಮಾಡುತ್ತಿದ್ದೆ.

* ನಿಮ್ಮ ಕ್ರಿಕೆಟ್‌ ಬದುಕಿಗೆ ತಿರುವು ನೀಡಿದ ಘಟನೆ?
ಬೆಂಗಳೂರಿನಲ್ಲಿ ಮಹಿಳೆಯರಿಗೆ ಕ್ರಿಕೆಟ್‌ ತರಬೇತಿ ನೀಡುತ್ತಿರುವ ಸುದ್ದಿ ಪತ್ರಿಕೆಗಳಲ್ಲಿ ಬಂದಿತ್ತು. ಅಪ್ಪನನ್ನು ಒತ್ತಾಯಿಸಿ ಬೆಂಗಳೂರಿನ ಬಸ್ಸು ಹತ್ತಿದೆ. ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ) ಅಕಾಡೆಮಿ ಸೇರಿದೆ. ಅದು ನನ್ನ ಬದುಕಿಗೆ ಲಭಿಸಿದ ಪ್ರಮುಖ ತಿರುವು.

* ಮುಂದಿನ ಗುರಿ, ಸವಾಲು?
ಮುಂದೆ ಟ್ವೆಂಟಿ–20 ವಿಶ್ವಕಪ್‌ ಇದೆ. ತಂಡದಲ್ಲಿ ಯುವ ಆಟಗಾರ್ತಿಯರು ಇರುವುದರಿಂದ ಗೆಲ್ಲುವ ಅವಕಾಶ ನಮಗಿದೆ. ಜೊತೆಗೆ ವಿಶ್ವಕಪ್‌ನಿಂದ ಲಭಿಸಿದ ಸ್ಫೂರ್ತಿ ನಮ್ಮ ಜೊತೆಗಿದೆ.

*
ನನ್ನ ಸಾಧನೆಗೆ ಮೂಲ ಕಾರಣ ಕುಟುಂಬ. ಕ್ರಿಕೆಟ್ ಆಡಬೇಕೆಂಬ ನನ್ನ ಆಸೆಗೆ ಯಾವತ್ತೂ ಅಡ್ಡಿಯಾಗಲಿಲ್ಲ. ಹುಡುಗಿ ಎಂದು ಯಾರೂ ತಾತ್ಸಾರ ಮಾಡಲಿಲ್ಲ.
-ವೇದಾ ಕೃಷ್ಣಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT