ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಬೆಳೆಗೆ ತುಂತುರು ನೀರು!

Last Updated 31 ಜುಲೈ 2017, 19:30 IST
ಅಕ್ಷರ ಗಾತ್ರ

ಭತ್ತದ ಬೆಳೆಗೆ ಸ್ಪ್ರಿಂಕ್ಲರ್‌ ಮೂಲಕ ನೀರು ಹನಿಸಬಹುದೇ? ಈ ಮಾತನ್ನು ಕೇಳಿದವರು ಹುಬ್ಬೇರಿಸುವುದು ಸಹಜ. ಆದರೆ ಬಳ್ಳಾರಿಯ ರೈತರೊಬ್ಬರು ಇದನ್ನು ನಿಜವಾಗಿಸಿರುವುದೇ ವಿಶೇಷ.

ಅಪಾರ ನೀರು ಕಟ್ಟಿ ಭತ್ತ ಬೆಳೆಯುವ ಬಹುಸಂಖ್ಯಾತ ರೈತರ ನಡುವೆ ಕೇವಲ ಹದಿನಾಲ್ಕು ಸ್ಪ್ರಿಂಕ್ಲರ್‌ ಮೂಲಕ ನೀರನ್ನು ಸಿಂಪಡಿಸಿ ಆರು ಎಕರೆಯಲ್ಲಿ ಭತ್ತ ಬೆಳೆಯಲು ಹೊರಟಿರುವುದು ನಿಜಕ್ಕೂ ಸಾಹಸವೇ. ಅಂಥ ಸಾಹಸವನ್ನು ಮಾಡಲು ಹೊರಟಿದ್ದಾರೆ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಮೂಲಕ ಗಟ್ಟಿ ಕೃಷಿಕ ಎಂದೇ ಹೆಸರಾದ ಜನಾರ್ದನರೆಡ್ಡಿ.

ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದ ಈ ರೈತ ತಮ್ಮ ಜಮೀನಿನಲ್ಲಿರುವ ತೆರೆದ ಬಾವಿಯಲ್ಲಿ ಸದಾ ಕಾಲ ಇರುವ ನೀರನ್ನಷ್ಟೇ ಬಳಸಿ ಸ್ಪ್ರಿಂಕ್ಲರ್‌ ಪದ್ಧತಿ ಮೂಲಕ ಭತ್ತ ಬೆಳೆಯಲು ಮುಂದಾಗಿದ್ದಾರೆ!

ಜಿಲ್ಲೆಯಲ್ಲಿ ಭತ್ತ ಬೆಳೆಯುವ ಬಹುತೇಕ ರೈತರು ತುಂಗಭದ್ರಾ ಜಲಾಶಯದಿಂದ ಹರಿದು ಬರುವ ಕಾಲುವೆ ನೀರಿಗಾಗಿ ಕಾಯುತ್ತಾ ಕುಳಿತಿದ್ದಾರೆ. ಭತ್ತದ ಸಸಿಮಡಿಗಳು ಸಿದ್ಧಗೊಂಡರೂ ನಾಟಿ ಮಾಡಲು ಆಗಿಲ್ಲ. ಕೊಳವೆಬಾವಿ ಇರುವವರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಬಿತ್ತನೆಯನ್ನು ಆರಂಭಿಸಿದ್ದಾರೆ.

ಈಗ ಬಿದ್ದಿರುವ ಮಳೆನೀರಿನಲ್ಲಿ ದೀರ್ಘಾವಧಿ ತಳಿಯಾದ ಸೋನಾ ಮಸೂರಿ ಭತ್ತ ಬೆಳೆಯಲು ಸಾಧ್ಯವಿಲ್ಲ ಎಂಬ ಸತ್ಯ ಹೊಳೆದ ಹಲವರು ಅಲ್ಪಾವಧಿಯ ಕಾವೇರಿ ಸೋನಾ, ನೆಲ್ಲೂರು ಸೋನಾ, ಆರ್‌.ಎನ್‌.ಆರ್‌, ಗಂಗಾವತಿ ಸೋನಾ ಮತ್ತು ಜಿಎನ್‌ವಿ 10–30 ತಳಿಗಳತ್ತ ಗಮನಹರಿಸಿದ್ದಾರೆ. ಆದರೆ ರೆಡ್ಡಿ ತಮ್ಮ ಜಮೀನಿನಲ್ಲಿ ಸೋನಾ ಮಸೂರಿಯನ್ನೇ ಬಿತ್ತನೆ ಮಾಡಿದ್ದಾರೆ. ಅವರ ಧೈರ್ಯ ದೊಡ್ಡದು.

ಕೂರಿಗೆ ಬಿತ್ತನೆ: ಕೂರಿಗೆ ಬಿತ್ತನೆಯಿಂದ ಯಾವುದೇ ಬೆಳೆಗೆ ನೀರು ಕಡಿಮೆ ಬಳಸಬಹುದು, ಇಳುವರಿಯೂ ಹೆಚ್ಚು ಎಂಬ ಕೃಷಿ ಇಲಾಖೆಯ ಅಧಿಕಾರಿಗಳ ಮಾತಿಗೆ ಬಹಳಷ್ಟು ರೈತರು ಇನ್ನೂ ಕಿವಿಗೊಟ್ಟಿಲ್ಲ. ಜಮೀನಿನಲ್ಲಿ ಅತಿಯಾಗಿ ನೀರನ್ನು ನಿಲ್ಲಿಸಿ ಬೆಳೆ ತೆಗೆಯುವ ಹಳೇ ಪದ್ಧತಿಯೇ ಅವರಿಗೆ ಇಷ್ಟ. ಕಾಲದ ಅಗತ್ಯಕ್ಕೆ ತಕ್ಕಂತೆ ಮಿತ ನೀರು ಬಳಕೆಯ ಸೂತ್ರವನ್ನು ಒಪ್ಪಲೇಬೇಕಾದ ಪರಿಸ್ಥಿತಿಯಲ್ಲೂ ಈ ಪರಿಪಾಠ ಮುಂದುವರಿದ ಸಂದರ್ಭದಲ್ಲೇ ಜಿಲ್ಲೆಯಲ್ಲಿ ಅಲ್ಲೊಬ್ಬರು–ಇಲ್ಲೊಬ್ಬರು ಸದ್ದಿಲ್ಲದೆ ಹೊಸ ದಾರಿ ತುಳಿದಿದ್ದಾರೆ.

ಕೂರಿಗೆ ಬಿತ್ತನೆ ಮಾಡಿರುವ ರೆಡ್ಡಿ, ಒಟ್ಟಾರೆ ಶೇ 20ರಷ್ಟು ನೀರನ್ನು ಉಳಿಸಬಹುದು ಎಂಬ ಲೆಕ್ಕಾಚಾರದಲ್ಲಿ ಭೂಮಿಯನ್ನು ಸಮತಟ್ಟು ಮಾಡುವ ಲೇಸರ್‌ ಲೆವೆಲ್ಲರ್‌ ಅನ್ನು ಕೂಡ ಬಿತ್ತನೆಗೆ ಮುಂಚೆ ಬಳಸಿದ್ದಾರೆ, ಈಗ ಅವರ ಜಮೀನಿನಲ್ಲಿ ಭತ್ತದ ಸಸಿಗಳು ಹಸಿರಾಗಿವೆ.

ಜೂನ್‌ ತಿಂಗಳಲ್ಲಿ ಬಿತ್ತನೆ ಮಾಡಿದ ಬಳಿಕ ಮಳೆ ಅಬ್ಬರಕ್ಕೆ ಕೊಚ್ಚಿಹೋದ ಬೀಜಗಳ ಜಾಗದಲ್ಲಿ ಅವರು ಸಸಿಗಳನ್ನು ಯಂತ್ರದಲ್ಲಿ ಬಿತ್ತನೆ ಮಾಡಲು ಸಸಿ ಮಡಿಗಳನ್ನೂ ಸಿದ್ಧಪಡಿಸಿದ್ದಾರೆ. ಕಾಲುವೆ ನೀರು ಬರಬೇಕಷ್ಟೆ. ಅಲ್ಲಿವರೆಗೂ ಸ್ಪ್ರಿಂಕ್ಲರ್‌ ನೀರು ಕಾಯುತ್ತದೆ.

ಒಂದು ಅಪಾಯ ಎದುರಾದರೆ ಇನ್ನೊಂದು ಉಪಾಯ ಇರುತ್ತದೆ ಎಂಬ ಆತ್ಮವಿಶ್ವಾಸವೇ ಅವರನ್ನು ಮುಂದಕ್ಕೆ ಕರೆದೊಯ್ಯುತ್ತಿದೆ. ಕೂರಿಗೆ ಬಿತ್ತನೆ, ಯಾಂತ್ರಿಕೃತ ಭತ್ತ ನಾಟಿ, ಸ್ಪ್ರಿಂಕ್ಲರ್‌ ಬಳಕೆಗೆ ಕೃಷಿ ಇಲಾಖೆಯು ನೀಡುವ ಸಹಾಯಧನವೂ ಅವರ ಬೆನ್ನಿಗಿದೆ.

2 ಎಕರೆಯಿಂದ ಆರು ಎಕರೆಗೆ!

ಸ್ಪ್ರಿಂಕ್ಲರ್‌ ಪದ್ಧತಿ ಅಳವಡಿಸುವ ಮುನ್ನ, ತೆರೆದ ಬಾವಿಯಲ್ಲಿ ಸದಾ ಕಾಲ ಇರುವ ನೀರನ್ನು ರೆಡ್ಡಿ ಎರಡು ಎಕರೆಗಷ್ಟೇ ಬಳಸುತ್ತಿದ್ದರು. ‘ಈಗ ಅಷ್ಟೇ ನೀರು ಭರ್ತಿ ಆರು ಎಕರೆಗೂ ಸಾಕಾಗುತ್ತಿದೆ. ನನಗೆ ಇನ್ನೇನು ಬೇಕು’ ಎಂದು ಖುಷಿಪಡುತ್ತಾರೆ. ಉಳಿದ ಮೂರೂವರೆ ಎಕರೆಯಲ್ಲಿ ಬೆಳೆಯುತ್ತಿರುವ ಭತ್ತಕ್ಕೆ ಅವರು ಸಮೀಪದ ಹಳ್ಳದ ನೀರನ್ನು ಹರಿಸಿದ್ದಾರೆ. ಯಂತ್ರದ ಮೂಲಕ ನಾಟಿ ಮಾಡಲು ಸಸಿಮಡಿಗಳನ್ನೂ ಸಿದ್ಧಪಡಿಸಿದ್ದಾರೆ.

ನೀರಿನ ಮಿತ ಬಳಕೆಯ ವಿನೂತನ ಮಾದರಿ

ರೆಡ್ಡಿ ಅವರದು ನೀರಿನ ಮಿತ ಬಳಕೆಯ ವಿನೂತನ ಮಾದರಿ. ಇಂಥ ಧೈರ್ಯ ಮಾಡಿದರೆ ಮಾತ್ರ ಬರಗಲಾದ ನಡುವೆಯೂ ರೈತರು ಕೃಷಿ ಚಟುವಟಿಕೆಯನ್ನು ಧೈರ್ಯದಿಂದ ಮಾಡಬಹುದು. ಮಾತುಕತೆ ವೇಳೆ ಒಮ್ಮೆ ನೀಡಿದ್ದ ಸಲಹೆಯನ್ನೇ ರೆಡ್ಡಿ ಜಾರಿಗೆ ತಂದು ನಮ್ಮನ್ನೂ ಅಚ್ಚರಿಗೆ ತಳ್ಳಿದರು ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌. ಪರ್ಯಾಯ ಬೆಳೆಗಳು ಮತ್ತು ಬೆಳೆ ಪದ್ಧತಿಗಳಿಗಿರುವ ಬಹುಸಾಧ್ಯತೆಗಳ ಕುರಿತು ಚಿಂತಿಸಲೇಬೇಕಾದ ತುರ್ತು ಇಂದಿನದು. ಅದನ್ನು ರೈತರು ಅರಿಯಬೇಕಷ್ಟೇ ಎಂಬುದು ಅವರ ಸಲಹೆ.

ಎಚ್‌ಎಫ್‌ ತಳಿಯ ಒಂಬತ್ತು ರಾಸು, ಏಳು ಕರು, ಒಂದು ಎಮ್ಮೆ ಕರುವೂ ಅವರ ಬಳಿ ಇವೆ. ಮೇವು ಖರೀದಿ ದುಬಾರಿ ಆಗಿರುವುದರಿಂದ ಅವರು, ಜಮೀನು ಗುತ್ತಿಗೆಗೆ ಪಡೆದು ಒಂದೂವರೆ ಎಕರೆಯಲ್ಲಿ ಹಸಿಹುಲ್ಲು ಬೆಳೆದಿದ್ದರು. ಅದೂ ದುಬಾರಿ ಎನ್ನಿಸಿದ್ದರಿಂದ, ತಮ್ಮದೇ 90 ಸೆಂಟ್‌ ಜಾಗದಲ್ಲಿ ಮೊದಲ ಬಾರಿಗೆ ಹಸಿಹುಲ್ಲು ಬೆಳೆಸಿದ್ದಾರೆ. ಇರುವ ಜಾಗವನ್ನು ಬಹುಪಯೋಗಿಯಾಗಿ ಬಳಸುತ್ತಿದ್ದಾರೆ.

ಯಾರೂ ಊಹಿಸಿಕೊಳ್ಳಲೂ ಆಗದ ಸನ್ನಿವೇಶದಲ್ಲಿ ನೀವು ಸ್ಪ್ರಿಂಕ್ಲರ್‌ ಬಳಸುತ್ತಿದ್ದೀರಿ. ಬೆಳೆ ಕೈಗೆ ಸಿಗುತ್ತದೆ ಎಂಬ ವಿಶ್ವಾಸ ಇದೆಯೇ ಎಂದು ಕೇಳಿದರೆ ಅವರು ‘ನೂರಕ್ಕೆ ನೂರು’ ಎಂದು ಹೇಳುತ್ತಾ ಮುನ್ನಡೆದರು.

⇒ಚಿತ್ರಗಳು: ಟಿ.ರಾಜನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT