ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲ್ಲಿದ ಬೀಜ ಹೂವಾಯ್ತು...

Last Updated 31 ಜುಲೈ 2017, 19:30 IST
ಅಕ್ಷರ ಗಾತ್ರ

ಒಂದೆಡೆ ಮಳೆ ಕೊರತೆ, ಇನ್ನೊಂದೆಡೆ ಬೆಲೆಯ ಏರಿಳಿತ. ಕೃಷಿಗೆ ಬೇಕಾಗುವಷ್ಟು ನೀರಿಲ್ಲ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕಿಲ್ಲ... ಹೀಗೆ ಹಲವಾರು ಸಮಸ್ಯೆಗಳ ಸುಳಿಗೆ ಸಿಕ್ಕಿ ಕೃಷಿಯೇ ಬೇಡ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು ಈ ರೈತ. ಆದರೆ, ಸಂಬಂಧಿಯೊಬ್ಬರ ಒತ್ತಡಕ್ಕೆ ಮಣಿದು ಹೊಲ ದಲ್ಲಿ ನಿರ್ಲಕ್ಷ್ಯದಿಂದ ಚೆಲ್ಲಿದ್ದ ಹೂವಿನ ಬೀಜ ಈಗ ಅವರ ಕೈಹಿಡಿದ ಕಥೆಯಿದು.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಕಾಟ್ಲರಹಟ್ಟಿಯ ಪಾಲಯ್ಯ ಅವರೇ ಈ ರೀತಿ ಹೂವಿನ ಬೆಳೆಯಿಂದ ಹೊಸ ಬದುಕು ಕಟ್ಟಿಕೊಂಡ ರೈತ. ಅವರ ಹೊಲದಲ್ಲಿ ಈಗ ಕೆಂಪು ಬಣ್ಣ ಹೊದ್ದ ವೆಲ್ವೆಟ್‌ ಹೂವು ಕಂಗೊಳಿಸುತ್ತಿದೆ. ಅವರ ನಾಲ್ಕು ಎಕರೆ ಜಮೀನಿನಲ್ಲಿ ಇರುವ ಒಂದು ಕೊಳವೆ ಬಾವಿಯಲ್ಲಿ ಕೇವಲ ಅರ್ಧ ಇಂಚು ನೀರು ಬರುತ್ತಿದೆ. ಅದರಿಂದ ಕೃಷಿ ಚಟುವಟಿಕೆ ನಡೆಸಲು ಹೋಗಿ, ಮೊದಮೊದಲು ಕೈಸುಟ್ಟು ಕೊಂಡವರು ಅವರು.

ಪಾಲಯ್ಯ ಈಗ ಒಂದು ಸಣ್ಣ ಉಪಾಯ ಮಾಡಿದ್ದಾರೆ. ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಅವರೀಗ ಒಂದಲ್ಲ ಒಂದು ಬೆಳೆಯಲ್ಲಿ ಕಾಸು ಕಾಣುತ್ತಿದ್ದಾರೆ. ಹತ್ತು ವರ್ಷಗಳಿಂದ ಮಳೆಯ ಕೊರತೆಯನ್ನು ಕಂಡ ಪಾಲಯ್ಯ ವೆಲ್ವೆಟ್‌ ಹೂ, ಬಿಳಿ ಸೇವಂತಿ, ಮೆಣಸಿನಕಾಯಿ, ಹೀರೆ, ಬದನೆ, ಸೋರೆ, ಹಾಗಲ ಹೀಗೆ ಥರಾವರಿ ಬೆಳೆಗಳನ್ನು ಬೆಳೆದು ತಮ್ಮ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಂಡಿದ್ದಾರೆ. ಮನೆ ಮಂದಿಯೇ ಈ ತೋಟದ ಕೂಲಿಕಾರ್ಮಿಕರು. ನಾವೇ ಈ ಎಲ್ಲಾ ಕೃಷಿ ಕಾರ್ಯಗಳನ್ನು ನೋಡಿಕೊಳ್ಳುವ ಕಾರಣ ಅನಗತ್ಯ ವೆಚ್ಚಕ್ಕೆ ಕಡಿವಾಣ ಬಿದ್ದಿದೆ ಎಂದು ಅವರು ಹೇಳುತ್ತಾರೆ.

ಮಳೆಯ ಕೊರತೆಯಿಂದ ಕೃಷಿಯನ್ನೇ ಕೈಬಿಟ್ಟು ಕುಳಿತಿದ್ದ ಅವರಿಗೆ ಸಂಬಂಧಿಯೊಬ್ಬರು ವೆಲ್ವೆಟ್‌ ಹೂವಿನ ಬೀಜವನ್ನು ತಂದುಕೊಟ್ಟರು. ಉತ್ಸಾಹವಿಲ್ಲದೆ ಆ ಬೀಜವನ್ನು ಹೊಲದಲ್ಲಿ ಹಾಗೇ ಚೆಲ್ಲಿ ಬಂದಿದ್ದರು. ಹೊಲದಲ್ಲಿದ್ದ ಅಲ್ಪಸ್ವಲ್ಪ ತರಕಾರಿಗೆ ನೀರು ಹಾಯಿಸುವಾಗ ಅ ಗಿಡಗಳಿಗೂ ನೀರು ಹೋಗಿ ಐದು ದಿನಗಳಲ್ಲಿ ಮೊಳಕೆ ಬಿಡಲು ಆರಂಭಿಸಿತು. ತರಕಾರಿಗೆ ಎಂದಿನಂತೆ ಔಷಧಿ, ಗೊಬ್ಬರ ನೀಡುವಾಗ ಅವುಗಳಿಗೂ ಹಾಕಲಾಗುತ್ತಿತ್ತು. ಒಂದು ತಿಂಗಳು ಕಳೆಯುವಷ್ಟರಲ್ಲಿ ಗಿಡದೊಳಗೆ ಕೆಂಪನೆಯ ಹೂವಿನ ಮೊಗ್ಗುಗಳು ಕಾಣಿಸಿಕೊಂಡವು. ಮೊದಲ ಬಾರಿಗೆ ಹೆಚ್ಚಿನ ಬೆಲೆ ಸಿಕ್ಕಿರಲಿಲ್ಲ. ಆದರೆ, ಈಗ ಅದಕ್ಕೆ ಬೇಡಿಕೆ ಹೆಚ್ಚಿದ್ದು, ಕೈತುಂಬಾ ಕಾಸು ತರುತ್ತಿದೆ.

ವಾರಕ್ಕೆ ಸುಮಾರು 30 ಮಾರುಗಳಷ್ಟು ಹೂವನ್ನು ಚಿತ್ರದುರ್ಗ, ಚಳ್ಳಕೆರೆ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಪ್ರತಿ ಮಾರಿಗೆ 70 ರೂಪಾಯಿಯಷ್ಟು ಬೆಲೆಯಿದೆ. ವಾರಕ್ಕೆ ₹2000ದಷ್ಟು ಆದಾಯವನ್ನು ಈ ಹೂವು ತಂದುಕೊಡುತ್ತಿದೆ. ಹಬ್ಬ ಹರಿದಿನಗಳಲ್ಲಿ ಇನ್ನೂ ಹೆಚ್ಚಿನ ವರಮಾನವಿದೆ ಎನ್ನುತ್ತಾರೆ ಪಾಲಯ್ಯ ಅವರ ಮಗಳು ಪಾಲಮ್ಮ. ಕುಟುಂಬದ ನಿರ್ವಹಣೆಗೆ ಈ ಹೂವೇ ಆಧಾರವಾಗಿದೆ ಎಂದು ಅವರು ಖುಷಿಯಿಂದ ಹೇಳುತ್ತಾರೆ.
ಸಂಪರ್ಕಕ್ಕೆ: 8861285619. ⇒

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT