ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭುತ್ವದ ಪ್ರಶ್ನಾತೀತ ಅಧಿಕಾರ ಹಂಚಬಾರದು

ಶಾಂತಿ ಮತ್ತು ಸುವ್ಯವಸ್ಥೆ ಪಾಲನೆಯ ಏಕಮಾತ್ರ ಶಕ್ತಿ ಪ್ರಭುತ್ವವೇ ಆಗಿರುತ್ತದೆ...
Last Updated 31 ಜುಲೈ 2017, 19:30 IST
ಅಕ್ಷರ ಗಾತ್ರ

ಕಲ್ಲಡ್ಕದಲ್ಲಿನ ಎರಡು ಗುಂಪುಗಳ ನಡುವಿನ ಹೊಡೆದಾಟವನ್ನು ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಸಮುದಾಯಗಳು ಪರಸ್ಪರರ ಮೇಲೆ ನಡೆಸಿದ ದಾಳಿ ಎಂಬ ಅರ್ಥ ನೀಡಿದ ಎಲ್ಲ ವ್ಯಾಖ್ಯಾನಗಳು ಮೂವರು ಮಹಾನ್ ತತ್ವಜ್ಞಾನಿಗಳನ್ನು ನೆನಪಿಸಿದವು. ಥಾಮಸ್ ಹಾಬ್ಸ್ ಅವರ ನಿಸರ್ಗ ರಾಜ್ಯದ ಕಲ್ಪನೆಯಲ್ಲಿ ಮನುಷ್ಯರು ಕೆಡುಕುಗಳಿಂದ ಮುಕ್ತಿ ಪಡೆಯಲು ಪ್ರಭುತ್ವವನ್ನು ರೂಪಿಸಿ ರಕ್ಷಣೆಯ ಎಲ್ಲ ಅಧಿಕಾರಗಳನ್ನು ಪ್ರಭುತ್ವಕ್ಕೆ ಬಿಟ್ಟುಕೊಡುತ್ತಾರೆ. ರಾಜನ ಪರವಾದ ಈ ಸಿದ್ಧಾಂತಕ್ಕೆ ವಿರುದ್ಧವಾಗಿ ಹೇಳುವ ಜಾನ್ ಲಾಕ್ ಅವರ ನಿಸರ್ಗ ರಾಜ್ಯದಲ್ಲಿ ಮೊದಲು ಎಲ್ಲವೂ ಒಳ್ಳೆಯದಿದ್ದು ನಂತರ ಕೆಡುಕುಗಳು ಬಂದಾಗ ಜನರು ರಕ್ಷಣೆಯ ಅಧಿಕಾರ
ವನ್ನು ರಾಜನಿಗೆ ಬಿಟ್ಟುಕೊಡುತ್ತಾರೆ, ರಾಜನಿಗೆ ರಕ್ಷಿಸಲು ಆಗದಿದ್ದಾಗ ತಮ್ಮ ಅಧಿಕಾರವನ್ನು ಜನ ಹಿಂದಕ್ಕೆ ಪಡೆಯಬಹುದು.

ಇದೇ ಶೈಲಿಯಲ್ಲಿ ಸಿದ್ಧಾಂತವನ್ನು ಮಂಡಿಸುವ ಜೀನ್ ಜಾಕ್ ರೂಸೊ, ತಾವು ಕೊಟ್ಟ ಅಧಿಕಾರವನ್ನು ಪ್ರಭುತ್ವದಿಂದ ಹಿಂಪಡೆಯುವ ಸಮಾಜದ ಅಧಿಕಾರದ ಮಾನದಂಡ ‘ಸಾರ್ವತ್ರಿಕ ಅಭಿಪ್ರಾಯ’ ಎಂದು ಸೂಚಿಸುತ್ತಾರೆ. ಈ ಸಾರ್ವತ್ರಿಕ ಅಭಿಪ್ರಾಯದ ಪರಿಕಲ್ಪನೆಯನ್ನು ಯಾಜ್ಞವಲ್ಕ್ಯನು ತನ್ನ ಸ್ಮೃತಿಯಲ್ಲಿ, ಭವಿಷ್ಯದ ಕಾಲಮಾನದ ಸಾರ್ವತ್ರಿಕ ಧೋರಣೆ ತನ್ನ ವಿಚಾರಕ್ಕೆ ವಿರುದ್ಧವಾಗಿದ್ದರೆ ಆಗ ಆ ಕಾಲಮಾನದ ಸಾರ್ವತ್ರಿಕ ಧೋರಣೆಗೆ ಬದ್ಧವಾಗಬೇಕು ಎನ್ನುತ್ತಾನೆ.

ಕಲ್ಲಡ್ಕ ಪ್ರಕರಣವನ್ನು ದಕ್ಷಿಣ ಕನ್ನಡದ ಜನರ ತಲೆಗೆ ಕಟ್ಟುವ ಎಲ್ಲ ವ್ಯಾಖ್ಯಾನಗಳೂ ಸಮಾಜವನ್ನು ನಿಸರ್ಗ ರಾಜ್ಯ ಅಥವಾ ಅರಣ್ಯ ಕಾನೂನಿನ ಕಡೆಗೆ ಒಯ್ಯಲು ಪ್ರೋತ್ಸಾಹಿಸುತ್ತವೆ. ಪಕ್ಷ ಯಾವುದಾದರೂ ಇರಬಹುದು. ಸರ್ಕಾರಗಳು ಪ್ರಜಾಪ್ರಭುತ್ವ, ರಾಜಪ್ರಭುತ್ವ ಅಥವಾ ಸರ್ವಾಧಿಕಾರ ವ್ಯವಸ್ಥೆಯಲ್ಲೇ ಇರಬಹುದು; ಆದರೆ ಶಾಂತಿ ಮತ್ತು ಸುವ್ಯವಸ್ಥೆ ಪಾಲನೆಯ ಏಕಮಾತ್ರ ಶಕ್ತಿ ಪ್ರಭುತ್ವವೇ ಆಗಿರುತ್ತದೆ. ಜನರು ಹಾಗೆ ಮಾಡಬೇಕಿತ್ತು, ಜನರು ಹೀಗೆ ಮಾಡಬೇಕಿತ್ತು ಎಂಬ ವ್ಯಾಖ್ಯಾನಗಳು ಯಾವಾಗ ಬರುತ್ತವೋ ಆಗ ಒಂದಷ್ಟು ಜನ ತಾವು ಏನು ಮಾಡಬೇಕಾಗಿತ್ತು ಎಂದು ಯೋಚಿಸುತ್ತಾರೆ. ಏನು ಮಾಡಬಹುದಾಗಿತ್ತು ಎಂಬುದನ್ನು ಯಾರೂ ಇದುವರೆಗೆ ಹೇಳಿಲ್ಲ. ಕೊಲೆಗಡುಕರ ಬಳಿಗೆ ಹೋಗಿ ದಕ್ಷಿಣ ಕನ್ನಡದ ಮುಸ್ಲಿಮರು ಇಸ್ಲಾಂ ಅನ್ನೂ, ಹಿಂದೂಗಳು ಉಪನಿಷತ್ತುಗಳನ್ನೂ ಬೋಧಿಸಬೇಕಾಗಿತ್ತೋ? ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದೆಂದು ಬುದ್ಧಿ ಹೇಳಬೇಕಾಗಿತ್ತೋ? ಇಷ್ಟನ್ನು ಹೇಳಿದಾಗಲೂ ಕೇಳದಿದ್ದರೆ ಜನರೇ ಕೊಲೆಗಾರರನ್ನು ಹಿಡಿದುಕೊಂಡು ಹೊಡೆಯಬೇಕಾಗಿತ್ತೋ? ಹೊಡೆಯಬೇಕಾಗಿತ್ತು ಎಂದರೆ ತಾನೇ ತಾನಾಗಿ ಪ್ರಭುತ್ವದ ಅಧಿಕಾರವನ್ನು ಜನ ಕಿತ್ತುಕೊಳ್ಳಬೇಕಿತ್ತು ಎಂದು ಪರೋಕ್ಷವಾಗಿ ಹೇಳಿದಂತೆ. ಇದೇ ಅತ್ಯಂತ ಅಪಾಯಕಾರಿ ವಾದಸರಣಿ. ಇನ್ನು, ಬುದ್ಧಿ ಹೇಳಿದರೆ ಕೇಳಲು ಕೊಲೆಗಡುಕರು ಪ್ರಾಥಮಿಕ ಶಾಲೆಯ ಮಕ್ಕಳಲ್ಲ.

ಇದೇ ವಾದ ಸರಣಿಯನ್ನು ಬೆಳೆಸುತ್ತಾ ಹೋದರೆ ಜನರು ಏನಾದರೂ ಮಾಡಬೇಕಾದರೆ ಗಲಾಟೆ ಮಾಡುವವರು ಯಾರು ಎಂದು ಅವರಿಗೆ ಗೊತ್ತಾಗಬೇಕು. ಈ ಕೆಲಸ ಮಾಡಬೇಕಾದರೆ ಜನರ ಬಳಿ ಗೂಢಚರ ವ್ಯವಸ್ಥೆ ಇರಬೇಕು. ಜನರ ಬಳಿ ಗೂಢಚರ ವ್ಯವಸ್ಥೆ ಇಲ್ಲ. ಇರಲೂಬಾರದು. ಜನರ ಕೈಗೆ ಗೂಢಚರ ವ್ಯವಸ್ಥೆಯನ್ನು ಕೊಟ್ಟರೆ ಯಾರಿಗೂ ಖಾಸಗಿ ಹಕ್ಕುಗಳು ಉಳಿಯಲಾರವು. ಇದನ್ನು ಅರ್ಥ ಮಾಡಿಕೊಳ್ಳದೆ ‘ಇದು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಅವಮಾನ’ ಎಂದು ಜನರನ್ನು ನಿಂದಿಸುತ್ತಾ ಹೋದರೆ ಯಾರೋ ಯುವಕರು ಸಿಟ್ಟಿಗೆದ್ದು ತಾವೇ ಗೂಢಚಾರಿಕೆ ಮಾಡಲು ಹೊರಟರೆ ಏನಾದೀತು! ಮತ್ತೆ, ಪ್ರಭುತ್ವದ ವ್ಯವಸ್ಥೆಯನ್ನು ಜನ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಚೋದಿಸಿದಂತಾಗುತ್ತದೆ.

ಇದರರ್ಥ ಜನರಿಗೆ ಅಧಿಕಾರ ಇಲ್ಲ ಎಂದಲ್ಲ. ತನ್ನ ಮಗ ಕೋಮುವಾದಿ ಆಗುವುದನ್ನು ತಡೆಯುವುದು ತಂದೆ-ತಾಯಿಯ ಅಧಿಕಾರವೂ ಹೌದು, ಜವಾಬ್ದಾರಿಯೂ ಹೌದು. ಆ ಕೌಟುಂಬಿಕ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದಿರುವುದನ್ನು ಇಂಥ ಪ್ರಕರಣಗಳು ಸೂಚಿಸುತ್ತವೆ. ಇನ್ನಾದರೂ ಆ ಜವಾಬ್ದಾರಿಯನ್ನು ನಿರ್ವಹಿಸಿ ಎಂದು ಹೇಳಬೇಕೇ ಹೊರತು ಈಗ ಆಗಿರುವುದಕ್ಕೆ ಜನರು ಕಾರಣರು ಎನ್ನುವುದಲ್ಲ. ಯಾವುದೋ ಕಾರಣಕ್ಕಾಗಿ ಹೊಡೆದಾಟ ನಡೆದಾಗ ಅದನ್ನು ನಿಯಂತ್ರಿಸುವ, ದಂಡಿಸುವ ಏಕಮಾತ್ರ ಅಧಿಕಾರವನ್ನು ಹೇಗೆ ಪ್ರಭುತ್ವವೇ ಹೊಂದಿರುತ್ತದೋ ಹಾಗೇ ಕೋಮುಗಲಭೆ ನಡೆದಾಗಲೂ ನಿಯಂತ್ರಿಸುವ ಏಕಮಾತ್ರ ಅಧಿಕಾರ ಪ್ರಭುತ್ವಕ್ಕೇ ಇರುತ್ತದೆ. ಇಡೀ ಜಗತ್ತಿಗೆ ಅನ್ವಯವಾಗುವ ಈ ನಿಯಮವೇ ದಕ್ಷಿಣ ಕನ್ನಡಕ್ಕೂ ಅನ್ವಯವಾಗಬೇಕೇ ಹೊರತು ದಕ್ಷಿಣ ಕನ್ನಡದ ಜನರಿಗೆ ವೈಚಾರಿಕ ರೂಪದಲ್ಲೂ ಕೂಡ ಹೆಚ್ಚು ಅಧಿಕಾರವನ್ನು ಕೊಡಲು ಹೋಗಬಾರದು.

ಇದೆಲ್ಲ ಹೇಗೆ ಆಗುತ್ತಾ ಹೋಗುತ್ತದೆಂದರೆ, ಪ್ರಾರಂಭದಲ್ಲಿ ಒಂದಷ್ಟು ಮಂದಿ ಅನ್ಯಾಯವನ್ನು ಪ್ರತಿಭಟಿಸಲು ಒಟ್ಟಾಗುತ್ತಾರೆ. ಕಾನೂನುಬಾಹಿರವಾಗಿ ದಕ್ಕಿಸಿಕೊಳ್ಳುತ್ತಾರೆ. ಆಮೇಲೆ ಅದು ಅಭ್ಯಾಸವಾಗುತ್ತದೆ. ಆ ಶಕ್ತಿಯನ್ನು ತಡೆಯಲೆಂದು ಮತ್ತೊಂದು ಶಕ್ತಿ. ಅದೂ ಹಿಂದಿನವರ ಹಾದಿಯಲ್ಲೇ ಹೋಗುತ್ತದೆ. ಅದೃಷ್ಟವಶಾತ್ ದಕ್ಷಿಣ ಕನ್ನಡದಲ್ಲಿ ಕಾನೂನಿನೊಳಗೆ ನುಸುಳಬಲ್ಲ ಶಕ್ತಿ-ಪ್ರತಿಶಕ್ತಿಗಳು ನಿರ್ಮಾಣವಾಗುವಾಗ ವಿಚಾರವಂತರು ಸಂವಿಧಾನ ಬಾಹಿರವಾದದ್ದನ್ನು ಪ್ರತಿಭಟಿಸುತ್ತಾ ಬಂದರು. ಇನ್ನೀಗ ಇವರನ್ನು ತಡೆಯಬೇಕಾದ್ದು ಜನರ ಜವಾಬ್ದಾರಿ ಎನ್ನುತ್ತಾ ಹೋದ ಹಾಗೆ ಮತ್ತೊಂದು ಪ್ರತಿಶಕ್ತಿ ತಯಾರಾಗಿ ಕಾನೂನು ಭಂಜನೆಯ ಹಾದಿಗೆ ಹೊರಳುತ್ತದೆ. ಹೀಗೆ ಪ್ರತಿಶಕ್ತಿ ಬೆಳೆಯುತ್ತಾ ಬೆಳೆಯುತ್ತಾ ಹೋದಂತೆ ಹಾಬ್ಸ್, ಜಾನ್ ಲಾಕ್, ರೂಸೊ ಹೇಳುವ ಅರಣ್ಯ ರಾಜ್ಯವೇ ನಿರ್ಮಾಣವಾಗುತ್ತದೆ. ಆದ್ದರಿಂದ ಕೋಮುವಾದಿಗಳಿಂದಾಗಿ ಒಬ್ಬ ವಿವೇಕವಂತ ದಕ್ಷಿಣ ಕನ್ನಡಿಗ ಅವಮಾನ ಅನುಭವಿಸಬೇಕಾಗಿಲ್ಲ. ತನ್ನ ಸುತ್ತ ಇಷ್ಟೆಲ್ಲ ಆಗುತ್ತಿದ್ದರೂ ತನ್ನನ್ನು ತಾನು ಸಂಯಮದಿಂದ ಇರಿಸಿಕೊಂಡು ಪ್ರಭುತ್ವದ ಅಧಿಕಾರವನ್ನು ಕಿತ್ತುಕೊಳ್ಳಲು ಹೋಗುತ್ತಿಲ್ಲವೆಂದು ಅಭಿಮಾನ ಪಡಬೇಕು.

ಆದರೆ ವಿಚಾರವಂತರು ಕೆಲವೊಮ್ಮೆ ಯೋಚಿಸದೆ ಪ್ರತಿಕ್ರಿಯಿಸಲು ಹಲವು ಕಾರಣಗಳಿರುತ್ತವೆ. ಇಂತಹ ಪ್ರಕರಣಗಳು ನಡೆದಾಗ ಸಾಮಾಜಿಕ ಕಾಳಜಿಯು ಮನುಷ್ಯನನ್ನು ಭಾವುಕಗೊಳಿಸುತ್ತದೆ. ತನಗೆ ಏನೂ ಮಾಡಲು ಆಗುವುದಿಲ್ಲವಲ್ಲ ಎಂಬ ಹತಾಶೆಯಿಂದ ಈ ರೀತಿಯ ಪ್ರತಿಕ್ರಿಯೆಗಳು ಬರುತ್ತವೆ. ವ್ಯಕ್ತಿಯಾಗಿ ತಾನು ಇನ್ನೊಬ್ಬರ ಮುಂದೆ ಘಟನೆಯ ಹಿನ್ನೆಲೆಯಲ್ಲಿ ಅವಹೇಳನಕ್ಕೆ ಗುರಿಯಾಗಬೇಕು ಎನಿಸಿದಾಗ ಸಾರ್ವತ್ರಿಕವಾಗಿ ಇಂಥ ಹೇಳಿಕೆಗಳನ್ನು ಕೊಟ್ಟು ತನ್ನನ್ನು ತಾನು ರಕ್ಷಿಸಿಕೊಳ್ಳುವ ಮಾನಸಿಕ ತಂತ್ರವೂ ಇದರಲ್ಲಿ ಕೆಲಸ ಮಾಡುತ್ತದೆ. ಆದರೆ, ವೈಚಾರಿಕತೆಯ ಹಾದಿಯಲ್ಲಿರುವವರಿಗೆ ಭಾವುಕತೆಗಿಂತ ವಾಸ್ತವದ ಅರಿವು, ತನ್ನ ವೈಯಕ್ತಿಕತೆಗಿಂತ ಸಮಾಜದ ಸ್ವಾಸ್ಥ್ಯ ಮುಖ್ಯವಾಗಿದ್ದರೆ ನಾಗರಿಕತೆ ಹುಟ್ಟಿದಂದಿನಿಂದ ಪ್ರಭುತ್ವಕ್ಕಿರುವ ಕಾನೂನು ಪಾಲನೆಯ ಅಧಿಕಾರವನ್ನು ಪರೋಕ್ಷವಾಗಿಯೂ ಜನರ ಕಡೆಗೆ ಚಲಿಸದಂತೆ ವಿವರಿಸಬೇಕಾದ ಎಚ್ಚರವೂ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT