ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಾಯಕ ಬಿ.ಬಿ.ಶಿವಪ್ಪ ನಿಧನ

Last Updated 31 ಜುಲೈ 2017, 19:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಬಿ.ಬಿ.ಶಿವಪ್ಪ  (88) ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಶಿವಪ್ಪ ಅವರಿಗೆ ಪತ್ನಿ ಸುಶೀಲಾ ಮತ್ತು  ಮೂವರು ಪುತ್ರರು ಇದ್ದಾರೆ. ಕೆಲವು ದಿನಗಳಿಂದ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಬಿಜೆಪಿ ರಾಜ್ಯ ಘಟಕದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಆ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಅಗ್ರ ಪಂಕ್ತಿಯ ನಾಯಕರಲ್ಲಿ ಒಬ್ಬರಾಗಿದ್ದರು.

1929ರಲ್ಲಿ ಕೊಡಗು ಜಿಲ್ಲೆ ಸೋಮವಾರಪೇಟೆ ಬೇಳೂರು ಗ್ರಾಮದಲ್ಲಿ ಜನಿಸಿದರು. ಕಾಫಿ ಬೆಳೆಗಾರ ಕುಟುಂಬದವರಾಗಿದ್ದ ಶಿವಪ್ಪ, ಹಾಸನದ ಪ್ಲಾಂಟರ್ಸ್‌ ಕಾಫಿ ಕ್ಯೂರಿಂಗ್‌ ವರ್ಕ್ಸ್ ಸಂಸ್ಥಾಪಕ ನಿರ್ದೇಶಕರೂ ಮತ್ತು ಮಲೆನಾಡು ಎಂಜಿನಿಯರಿಂಗ್‌ ಕಾಲೇಜಿನ ಸಂಸ್ಥಾಪಕ ಸದಸ್ಯರೂ ಆಗಿದ್ದರು.
1981 ರಲ್ಲಿ ಬಿಜೆಪಿ ಸೇರಿದ ಶಿವಪ್ಪ , 1983 ರಿಂದ 1988 ರವರೆಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
1983 ರಲ್ಲಿ ರಾಜ್ಯದಲ್ಲಿ ಜನತಾ ಪಕ್ಷ ನೇತೃತ್ವದ ಸರ್ಕಾರ ರಚನೆಯಲ್ಲಿ  ಮಹತ್ವದ ಪಾತ್ರವಹಿಸಿದ್ದರು.

ಎರಡು ಬಾರಿ ವಿಧಾನಸಭಾ ಸದಸ್ಯರಾಗಿ (1994 ರಿಂದ 2004) ಸಕಲೇಶಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.  1984 ರಿಂದ 1990 ಮತ್ತು 2007 ರಿಂದ 2009 ರವರೆಗೆ ವಿಧಾನಪರಿಷತ್‌ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ  ಮಧ್ಯಾಹ್ನ 2.30 ರವರೆಗೆ ಪಾರ್ಥಿವ ಶರೀರ ಇರಿಸಿ, ಬಳಿಕ ಸಕಲೇಶಪುರಕ್ಕೆ ಒಯ್ಯಲಾಯಿತು. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕುಂಬರಹಳ್ಳಿ ಎಸ್ಟೇಟ್‌ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ರೆಬಲ್‌ ಆಗಿ ಉಚ್ಚಾಟನೆಗೊಂಡ ಶಿವಪ್ಪ: 1999 ರ ವಿಧಾನಸಭೆ ಚುನಾವಣೆಯಲ್ಲಿ  ಬಿ.ಎಸ್‌.ಯಡಿಯೂರಪ್ಪ. ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಘಟಾನುಘಟಿ ನಾಯಕರು  ಸೋಲು ಅನುಭವಿಸಿದ್ದರು. 44 ಸ್ಥಾನಗಳನ್ನು ಗೆದ್ದಿದ್ದ   ಬಿಜೆಪಿ ವಿರೋಧ ಪಕ್ಷವಾಗಿ ಹೊರ ಹೊಮ್ಮಿತ್ತು. ಶಿವಪ್ಪ  ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದರು.

ಆದರೆ, ಪಕ್ಷದ ರಾಜ್ಯ ನಾಯಕರ  ಲೆಕ್ಕಾಚಾರವೇ ಬೇರೆ ಆಗಿತ್ತು.  ಶಾಸಕಾಂಗ ಪಕ್ಷದ ಸಭೆಯಲ್ಲಿ  ಜಗದೀಶ ಶೆಟ್ಟರ್‌ ಅವರನ್ನು  ಆಯ್ಕೆ ಮಾಡಲಾಯಿತು. ಇದರಿಂದ ಸಿಟ್ಟಿಗೆದ್ದ ಶಿವಪ್ಪ  ಸಭೆ ಬಹಿಷ್ಕರಿಸಿ, ಮಧ್ಯದಲ್ಲೇ ಎದ್ದು ಹೊರಬಂದಿದ್ದರು. ಹೊರಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಶಿವಪ್ಪ ಅಭಿಮಾನಿಗಳು ಪಕ್ಷದ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಘಟನೆಯ ಕಾರಣ ಶಿವಪ್ಪ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿತ್ತು.

ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಶಿವಪ್ಪ ಅವರನ್ನು ಕಾಂಗ್ರೆಸ್‌ಗೆ ಕರೆತಂದಿದ್ದರು. 2004 ರ ವಿಧಾನಸಭಾ  ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು. ಶಿವಪ್ಪ ಪುನಃ ಬಿಜೆಪಿ ಸೇರಿದರೂ ರಾಜಕೀಯವಾಗಿ ಮುಂಚೂಣಿಗೆ ಬರಲು ಸಾಧ್ಯವಾಗಲೇ ಇಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಕೇವಲ ಒಂದೂವರೆ ವರ್ಷದ ಅವಧಿಗೆ ಇವರನ್ನು ವಿಧಾನ ಪರಿಷತ್ತಿನ ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಲಾಗಿತ್ತು. 

ಯಡಿಯೂರಪ್ಪ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಶಿವಪ್ಪ  ‘ಕರ್ನಾಟಕ ಬಿಜೆಪಿ ಹಿರಿಯರ ವೇದಿಕೆ’  ಹುಟ್ಟು ಹಾಕಿ  ಹಿರಿಯ ನಾಯಕರನ್ನು ಸಂಘಟಿಸುವ ಪ್ರಯತ್ನ ಮಾಡಿದ್ದರು.
80 ರ ದಶಕದಲ್ಲಿ ದೆಹಲಿಯಿಂದ ಬಿಜೆಪಿ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿ, ಜ.ನಾ.ಕೃಷ್ಣಮೂರ್ತಿ, ಓ. ರಾಜಗೋಪಾಲ್‌, ಸುಂದರ್‌ಸಿಂಗ್‌ ಭಂಡಾರಿ  ಮುಂತಾದವರು ರಾಜ್ಯಕ್ಕೆ ಭೇಟಿ ನೀಡಿದಾಗ ಅವರನ್ನು ತಮ್ಮ ಕಾರಿನಲ್ಲಿ  ಬೇರೆ ಬೇರೆ ಊರುಗಳಿಗೆ ಪಕ್ಷದ ಸಂಘಟನಾ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT