ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿಗಳ ರಕ್ಷಣೆಗೊಂದು ‘ಗಸ್ತು ಪಡೆ’

Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಪ್ರತಿ ವರ್ಷ ಒಂದೂವರೆ ಸಾವಿರ ಬೀದಿನಾಯಿಗಳು, ಅಪಘಾತದಲ್ಲಿ ಗಾಯಗೊಳ್ಳುತ್ತಿವೆ. ಅವುಗಳ ಪೈಕಿ ಬಹುಪಾಲು ನಾಯಿಗಳು, ಸೂಕ್ತ ಚಿಕಿತ್ಸೆ ಸಿಗದೆ ಮೃತಪಡುತ್ತಿವೆ. ಕೆಲವು ನಾಯಿಗಳು, ನರಳುತ್ತಲೇ ಆಹಾರಕ್ಕಾಗಿ ರಸ್ತೆಯಲ್ಲೆಲ್ಲ ಅಲೆದಾಡುತ್ತಿವೆ.

ಇಂಥ ನಾಯಿಗಳನ್ನು ರಕ್ಷಿಸಿ, ಆರೈಕೆ ಮಾಡುವ ಉದ್ದೇಶದಿಂದ ನಗರದಲ್ಲಿ ಈಗ ‘ಬೆಂಗಳೂರು ಗಸ್ತು ಪಡೆ (ಬಿಪಿಎಸ್‌)’ ಹುಟ್ಟಿಕೊಂಡಿದೆ.

ಜುಲೈ 29 ಈ ಪಡೆಯ ಕಾರ್ಯಾಚರಣೆ ಶುರುವಾಗಿದ್ದು, ಈಗಾಗಲೇ 60 ಮಂದಿ ಈ ಪಡೆಯ ಸ್ವಯಂಸೇವಕರಾಗಿದ್ದಾರೆ.

‘ಸರ್ವೋದಯ ಸೇವಾಭಾವಿ ಸಂಸ್ಥೆ’ ಹಾಗೂ ‘ಯೂನಿಕಾರ್ನ್‌’ ಸಾಕುಪ್ರಾಣಿಗಳ ನಿರ್ವಹಣಾ ಸಂಸ್ಥೆಯ ಸಹಯೋಗದಲ್ಲಿ ‘ಬೆಂಗಳೂರು ಸಾಕುಪ್ರಾಣಿಗಳ ದತ್ತು’ ಸಂಘಟನೆಯು ಈ ಪಡೆಯನ್ನು ರಚಿಸಿದೆ.

ಅಪಘಾತಗಳಲ್ಲಿ ಗಾಯಗೊಂಡ, ಅನಾಥವಾದ ಹಾಗೂ ಸಂಕಷ್ಟಕ್ಕೆ ಸಿಲುಕಿದ ಬೀದಿ ನಾಯಿಗಳನ್ನು ರಕ್ಷಿಸಿ, ಅವುಗಳಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಈ ಪಡೆ ಮಾಡಲಿದೆ.

ಪಡೆಯ ಕಾರ್ಯವೈಖರಿ: ಮನುಷ್ಯರಂತೆ ಸಾಕುಪ್ರಾಣಿಗಳಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ.  ಆದರೆ, ಇಂದು ನಗರದಲ್ಲಿ ಸಾವಿರಾರು ಬೀದಿನಾಯಿಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಇಂಥ ನಾಯಿಗಳ ಸಂರಕ್ಷಣೆಯೇ ಈ ಪಡೆಯ ಮುಖ್ಯ ಧ್ಯೇಯ.

ಪಡೆಯ ಕಾರ್ಯವೈಖರಿ ಬಗ್ಗೆ ಮಾತನಾಡಿದ ಪಡೆಯ ರೂವಾರಿ ರಿತಿಕಾ ಗೋಯೆಲ್, ‘ನಗರದ ಎಲ್ಲ ವಾರ್ಡ್‌ಗಳಲ್ಲಿ ಈ ಪಡೆಯನ್ನು ಕಟ್ಟುತ್ತಿದ್ದೇವೆ. ಆಯಾ ವಾರ್ಡ್‌ನ ಜನರೇ ಇದರ ಸದಸ್ಯರಾಗಿರಲಿದ್ದು, ಇದರಿಂದ ಬೀದಿನಾಯಿಗಳ ರಕ್ಷಣೆ ಕೆಲಸ ನಡೆಯಲಿದೆ’ ಎನ್ನುತ್ತಾರೆ ಅವರು.

‘ನಗರದ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳಲ್ಲಿ ಮೃತಪಡುವ ಪ್ರಾಣಿಗಳ ಬಗ್ಗೆ ಇತ್ತೀಚೆಗೆ ನಗರ ಸಾರಿಗೆ ಸಚಿವಾಲಯವು ಅಧ್ಯಯನ ನಡೆಸಿತ್ತು. 2012–14ರ ಅವಧಿಯಲ್ಲಿ 7,734 ಪ್ರಾಣಿಗಳು ಮೃತಪಟ್ಟಿದ್ದು ಗೊತ್ತಾಗಿದೆ’ ಎಂದು ಅಂಕಿಅಂಶ ಮುಂದಿಡುತ್ತಾರೆ ರಿತಿಕಾ.

‘2013ರಲ್ಲೇ 3,000 ಪ್ರಾಣಿಗಳು ಸತ್ತಿವೆ. ಈ ಅಪಘಾತಗಳ ಪೈಕಿ ಶೇ 90ರಷ್ಟು ಅಪಘಾತಗಳು ರಾತ್ರಿ ಹೊತ್ತು ಸಂಭವಿಸಿವೆ. ಆಹಾರ ಹುಡುಕಲು ಹೋಗುತ್ತಿದ್ದ ವೇಳೆಯಲ್ಲೇ ಹೆಚ್ಚು ಪ್ರಾಣಿಗಳು ಮೃತಪಟ್ಟಿವೆ. ಜತೆಗೆ ಇಂಥ ಅಪಘಾತದಲ್ಲಿ ಗಾಯಗೊಂಡ ಹಲವು ಪ್ರಾಣಿಗಳು ನರಳಿನರಳಿಸತ್ತಿವೆ. ಕೆಲವು ಪ್ರಾಣಿಗಳ ಗಾಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಸತ್ತಿವೆ. ಇನ್ನು ಶೇ 20ರಷ್ಟು ಗರ್ಭ ಧರಿಸಿದ್ದ ಪ್ರಾಣಿಗಳೇ ಇಂಥ ಅಪಘಾತದಲ್ಲಿ ಬಲಿಯಾಗಿವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು. ‘ಸದ್ಯ ಬೀದಿನಾಯಿಗಳ ಚಿಕಿತ್ಸೆಗಾಗಿ ಯೂನಿಕಾರ್ನ್‌ ಸಾಕುಪ್ರಾಣಿಗಳ ನಿರ್ವಹಣಾ ಸಂಸ್ಥೆಯು ಪ್ರತಿವರ್ಷ ₹50,000 ಖರ್ಚು ಮಾಡುತ್ತಿದೆ. ಅದರಿಂದ 8,400 ನಾಯಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿದೆ. ಈ ಕೆಲಸಕ್ಕೆ ಸರ್ವೋದಯ ಸೇವಾಭಾವಿ ಸಂಸ್ಥೆಯು ಸಹಕಾರ ನೀಡುತ್ತಿದೆ. ಈಗ ಅವೆರಡರ ಜತೆ ಸೇರಿ ಈ ಪಡೆಯನ್ನು ಜಾರಿಗೆ ತಂದಿದ್ದೇವೆ’ ಎಂದು ರಿತಿಕಾ ವಿವರಿಸುತ್ತಾರೆ.

ವಾರ್ಡ್‌ವಾರು ಕಾರ್ಯಕ್ರಮ: ಪಡೆಯ ಕೆಲಸಕ್ಕೆ ಸಹಕಾರ ನೀಡುವುದಾಗಿ ಬಿಬಿಎಂಪಿ ಅಧಿಕಾರಗಳು ಸಹ ಹೇಳಿದ್ದಾರೆ. ಹೀಗಾಗಿಯೇ ನಗರದ ವಾರ್ಡ್‌ವಾರು ಈ ಪಡೆಯ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

‘ಯಾವ ವಾರ್ಡ್‌ನಲ್ಲಿ, ಯಾವಾಗ ಕಾರ್ಯಕ್ರಮ ನಡೆಯಬೇಕು ಎಂಬ ಬಗ್ಗೆ ವೇಳಾಪಟ್ಟಿ ಸಿದ್ಧಪಡಿಸಿದ್ದೇವೆ. ಅದೇ ದಿನದಂದು ಪಡೆಯ ಸದಸ್ಯರು ಕಾರ್ಯಕ್ರಮ ಕೈಗೊಳ್ಳಲಿದ್ದಾರೆ. ವಾರ್ಡ್‌ನಲ್ಲಿರುವ ಬೀದಿನಾಯಿಗಳು ಎಷ್ಟು ಎಂಬುದನ್ನು ಆರಂಭದಲ್ಲಿ ಪತ್ತೆ ಮಾಡಲಾಗುವುದು. ಬಳಿಕ ಅವುಗಳ ಆರೋಗ್ಯ ತಪಾಸಣೆ ನಡೆಸಲಾಗುವುದು. ಚಿಕಿತ್ಸೆ ಅಗತ್ಯವಿದ್ದರೆ, ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಲಾಗುವುದು’ ಎನ್ನುತ್ತಾರೆ ರಿತಿಕಾ.

‘ನಗರದ ಯಾವುದೇ ಭಾಗದಲ್ಲಿ ಅಪಘಾತ ಸಂಭವಿಸಿದರೆ ಹಾಗೂ ನಾಯಿಗಳು ಸಂಕಷ್ಟದಲ್ಲಿವೆ ಎಂಬ ಮಾಹಿತಿ ಬಂದರೆ, ಆ ಸ್ಥಳಕ್ಕೆ ಪಡೆಯ ಸದಸ್ಯರು ಹೋಗಲಿದ್ದಾರೆ. ಅಂಥ ನಾಯಿಯನ್ನು ತಂದು, ಆರೈಕೆ ಮಾಡಲಿದ್ದಾರೆ. ಜತೆಗೆ ಆ ನಾಯಿಗೆ ಪುನರ್ವಸತಿಯನ್ನೂ ಕಲ್ಪಿಸಲಿದ್ದಾರೆ’ ಎಂದು ರಿತಿಕಾ ಹೇಳಿದರು.

‘ಕಾಲ ಕಾಲಕ್ಕೆ ಅನುಗುಣವಾಗಿ ದತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಆಗ ಇಂಥ ನಾಯಿಗಳನ್ನು ಪ್ರಾಣಿಪ್ರಿಯರಿಗೆ ದತ್ತು ನೀಡುತ್ತೇವೆ. ಬಳಿಕ ಅವುಗಳ ಬೆಳವಣಿಗೆ ಬಗ್ಗೆ ಮಾಹಿತಿಯನ್ನೂ ಪಡೆಯುತ್ತಿರುತ್ತೇವೆ’ ಎಂದು ಅವರು ವಿವರಿಸುತ್ತಾರೆ.

ಬೀದಿನಾಯಿಗಳ ಸಮೀಕ್ಷೆಗೆ ಅನುಕೂಲ: ನಗರದಲ್ಲಿರುವ ಬೀದಿನಾಯಿಗಳ ಸಂಖ್ಯೆ ಬಗ್ಗೆ ಇದುವರೆಗೂ ನಿಖರ ಮಾಹಿತಿ ಇಲ್ಲ. ಈಗ ‘ಬೆಂಗಳೂರು ಗಸ್ತು ಪಡೆ’ ಮೂಲಕ ಇಂಥ ಬೀದಿನಾಯಿಗಳ ಸಮೀಕ್ಷೆ ನಡೆಯುವುದರಿಂದ ನಿಖರ ಸಂಖ್ಯೆಯೂ ತಿಳಿಯಲಿದೆ.

‘ನಾಯಿಗಳ ಸಮೀಕ್ಷೆ ನಡೆಸಲು ಬಿಬಿಎಂಪಿ ಅಧಿಕಾರಿಗಳ ಒಪ್ಪಿಗೆ ಸಹ ಪಡೆದಿದ್ದೇವೆ. ವಾರ್ಡ್‌ವಾರು ಕಾರ್ಯಕ್ರಮದ ವೇಳೆಯೇ ಬೀದಿನಾಯಿಗಳ ಸಮೀಕ್ಷೆ ಮಾಡಲಿದ್ದೇವೆ. ಆ ವರದಿಯನ್ನು ಕೆಲ ತಿಂಗಳ ಬಳಿಕ ಬಿಬಿಎಂಪಿಗೆ ಸಲ್ಲಿಸುತ್ತೇವೆ’ ಎಂದು ಪಡೆಯ ಸ್ವಯಂಸೇವಕಿ ರಿತಿಕಾ ತಿಳಿಸುತ್ತಾರೆ.

ಪಡೆಯ ಸದಸ್ಯರಾಗಲು ಅವಕಾಶ
‘ಬೆಂಗಳೂರು ಗಸ್ತು ಪಡೆ’ಯ ಸದಸ್ಯರಾಗಲು ಮುಕ್ತ ಅವಕಾಶವಿದೆ. ‘ಬೆಂಗಳೂರು ಸಾಕುಪ್ರಾಣಿಗಳ ದತ್ತು’ ಸಂಘಟನೆಯು ಆನ್‌ಲೈನ್‌ ಮೂಲಕ ಸದಸ್ಯರ ನೋಂದಣಿ ಪ್ರಕ್ರಿಯೆ ಆರಂಭಿಸಿದೆ. ಆಸಕ್ತರು, ಅರ್ಜಿ ಭರ್ತಿ ಮಾಡಿ ಸದಸ್ಯರಾಗಬಹುದು. ಬಳಿಕ ಅವರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗುತ್ತದೆ. 

ಅರ್ಜಿ ಸಲ್ಲಿಸಲು: http://bit.ly/2f476Vq

ಅಪಘಾತದಿಂದ ಪ್ರಾಣಿಗಳ ರಕ್ಷಣೆಗೆ ‘ಜೀವನ ಚಕ್ರ’
ರಾತ್ರಿ ಹೊತ್ತಿನಲ್ಲಿ ಸಂಭವಿಸುವ ಅಪಘಾತದಲ್ಲೇ ಹೆಚ್ಚು ಪ್ರಾಣಿಗಳು ಮೃತಪಡುತ್ತಿವೆ. ಅದಕ್ಕೆ ಪರಿಹಾರವಾಗಿ ‘ಜೀವನ ಚಕ್ರ (ಪ್ರತಿಫಲಿಸುವ ಬೆಲ್ಟ್‌)’ ಪರಿಚಯಿಸಲು ‘ಬೆಂಗಳೂರು ಗಸ್ತು ಪಡೆ’ ಮುಂದಾಗಿದೆ.

‘ಪ್ರತಿಫಲಿಸುವ ಬೆಲ್ಟ್‌ನ್ನು ನಾಯಿಯ ಕೊರಳಿನಲ್ಲಿ ಹಾಕಿದರೆ, ಅದು ಕತ್ತಲಿನಲ್ಲಿ ಹೊಳೆಯುತ್ತದೆ. ಆಗ, ಎದುರಿಗೆ ಬರುವ ವಾಹನಗಳ ಚಾಲಕರು ನಾಯಿಯನ್ನು ಸುಲಭವಾಗಿ ಗುರುತಿಸುತ್ತಾರೆ. ಅದರಿಂದ ಶೇ 80ರಷ್ಟು ಅಪಘಾತ ಕಡಿಮೆ ಮಾಡಬಹುದು’ ಎಂದು ರಿತಿಕಾ ಹೇಳಿದರು.

‘ಈಗಾಗಲೇ 100 ನಾಯಿಗಳಿಗೆ ಇಂಥ ಬೆಲ್ಟ್‌ ಅಳವಡಿಸಿ, ಪರೀಕ್ಷೆ ಮಾಡಿದ್ದೇವೆ. ಅದು ಯಶಸ್ವಿಯಾಗಿದ್ದು, ಈಗ ನಗರದ ಪ್ರತಿಯೊಂದು ನಾಯಿಯ ಕೊರಳಲ್ಲೂ ಇದನ್ನು ಹಾಕಲು ಕೆಲಸ ಆರಂಭಿಸಿದ್ದೇವೆ’ ಎಂದರು.

‘ಈ ಬೆಲ್ಟ್‌ ಮೂರು ತಿಂಗಳು ಕಾಲ ಬಾಳಿಕೆ ಬರುತ್ತದೆ. ಬಳಿಕ ಅದನ್ನು ತೆಗೆದು ಬೇರೆ ಬೆಲ್ಟ್‌ ಅಳವಡಿಸುತ್ತೇವೆ. ಈ ಪ್ರಕ್ರಿಯೆ ನಿರಂತರವಾಗಿರಲಿದೆ’. 

‘ಈ ಬೆಲ್ಟ್‌ನ್ನು ದಾನಿಗಳು ಖರೀದಿಸಲು ಸಹ ಅವಕಾಶವಿದೆ.  ಯೂನಿಕಾರ್ನ್‌ ವೆಬ್‌ಸೈಟ್‌ನಲ್ಲಿ ಈ ಬೆಲ್ಸ್‌ ಮಾರಾಟಕ್ಕಿದ್ದು, ಕನಿಷ್ಟ ₹35 ಬೆಲೆ ಇದೆ. ಗರಿಷ್ಟ ದರ ಅನಿಯಮಿತವಾಗಿದೆ.’

‘ದಾನಿಗಳು ಖರೀದಿಸಿ, ನಮ್ಮ ಪಡೆಗೆ ನೀಡಬೇಕು. ಬಳಿಕ ಅದನ್ನೇ ಪಡೆಯ ಸದಸ್ಯರು ನಾಯಿಗಳಿಗೆ ಹಾಕಲಿದ್ದಾರೆ.  2017ರ ಅಂತ್ಯದಲ್ಲಿ 10,000 ಬೀದಿನಾಯಿಗಳಿಗೆ ಇಂಥ ಬೆಲ್ಟ್‌ ಅಳವಡಿಸುವ ಗುರಿ ಇದೆ’ ಎಂದರು.

‘ಬೆಂಗಳೂರು ಗಸ್ತು ಪಡೆ’ ಹಾಗೂ ‘ಜೀವನ ಚಕ್ರ’ ಕಾರ್ಯಕ್ರಮವನ್ನು ಶನಿವಾರ (ಜುಲೈ 29) ವಿಶೇಷ ಆಯುಕ್ತ ಸರ್ಫರಾಜ್‌ ಖಾನ್‌ ಅವರು ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT