ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದುವೆಗೂ ನಟನೆಗೂ ಸಂಬಂಧವಿಲ್ಲ’

Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ರಾಧಿಕಾ ಪಂಡಿತ್‌ ಇನ್ನು ಮುಂದೆ ನಟಿಸುವುದಿಲ್ಲ’ ಎಂಬ ಮಾತುಗಳು ಅವರ ಮದುವೆಯ ಸಂದರ್ಭದಲ್ಲಿ ಬಲವಾಗಿಯೇ ಕೇಳಿಬಂದಿದ್ದವು. ಆದರೆ ಅದನ್ನು ನಿರಾಕರಿಸಿದ್ದ ರಾಧಿಕಾ ‘ಮದುವೆಯಾದ ಮೇಲೂ ನಟನಾವೃತ್ತಿಯಲ್ಲಿಯೇ ಮುಂದುವರಿಯುತ್ತೇನೆ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಮದುವೆ ಆಗಿ ಇಷ್ಟು ದಿನಗಳಾದರೂ ಯಾವ ಚಿತ್ರವನ್ನೂ ಒಪ್ಪಿಕೊಂಡಿರದ ಕಾರಣ ಅಭಿಮಾನಿಗಳಲ್ಲಿ  ’ರಾಧಿಕಾ ಕಳೆದು ಹೋದರೆ?’ ಎಂಬ ಅನುಮಾನ ಹುಟ್ಟಿದ್ದೂ ಸುಳ್ಳಲ್ಲ. ಆ ಎಲ್ಲ ಅನುಮಾನ, ಆತಂಕಗಳಿಗೆ ತೆರೆ ಎಳೆದಂತೆ ಅವರು, ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಜತೆ ಸಹಾಯಕಿಯಾಗಿ ಕೆಲಸ ಮಾಡಿರುವ ತಮಿಳಿನ ಪ್ರಿಯಾ ಎನ್ನುವವರು ಕನ್ನಡದಲ್ಲಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಈಗಾಗಲೇ ಹೊರಬಿದ್ದಿದೆ. ಅವರ ಜತೆ ನಿರೂಪ್‌ ಭಂಡಾರಿ ನಾಯಕನಾಗಿ ನಟಿಸುತ್ತಿರುವ ಸುದ್ದಿಯೂ ಈಗಾಗಲೇ ಜಾಹೀರುಗೊಂಡಿದೆ.

ಹಾಗಾದರೆ ರಾಧಿಕಾ, ಹೊಸ ಸಿನಿಮಾದಲ್ಲಿ ನಟಿಸಲು ಇಷ್ಟು ದಿನ ಕಾದಿದ್ದೇಕೆ?. ಇದೇ ಪ್ರಶ್ನೆಯನ್ನು ಅವರ ಮುಂದಿಟ್ಟರೆ ’ಮದುವೆಯ ನಂತರವೂ ಸಿನಿಮಾ ಮಾಡುತ್ತೇನೆ ಎಂಬ ವಿಶ್ವಾಸ ನನಗಂತೂ ಇತ್ತು. ಯಾಕೆಂದರೆ ಸಿನಿಮಾ ಮಾಡಲು ನಮ್ಮ ಕುಟುಂಬ ಮತ್ತು ಯಶ್‌ ಬೆಂಬಲ ಇದ್ದೇ ಇದೆ. ಆದರೆ ಎಲ್ಲವೂ ಕೂಡಿ ಬರಬೇಕಲ್ಲವೇ?’ ಎಂದು ಪ್ರಶ್ನೆ ಹಾಕಿ ನಸುನಗುತ್ತಾರೆ. ‘ಎಲ್ಲವೂ’ ಎಂದು ಅವರು ಉಲ್ಲೇಖಿಸಿದ್ದು ಮುಖ್ಯವಾಗಿ ಕಥೆ. ಅವರು ಇಷ್ಟು ದಿನ ಒಳ್ಳೆಯ ಮತ್ತು ತಮಗೆ ಹೊಂದುವ ಕಥೆಗಾಗಿಯೇ ಹುಡುಕಾಡುತ್ತಿದ್ದರಂತೆ.

‘ಕಳೆದು ಹೋಗುತ್ತೇನೆ ಎಂಬ ಆತಂಕ ನನಗಂತೂ ಇಲ್ಲವೇ ಇಲ್ಲ’ ಎನ್ನುವ ಅವರು ‘ನಾನು ಮೊದಲಿನಿಂದಲೂ ಮಾಡಿಕೊಂಡು ಬಂದಿರುವ ಪಾತ್ರಗಳೇ ಹಾಗಿವೆ. ಬರೀ ಗ್ಲ್ಯಾಮರ್‌ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದರೆ ಕಳೆದಹೋಗಿಬಿಡುತ್ತಿದ್ದೆನೇನೋ. ಆದರೆ ಹಾಗಾಗಿಲ್ಲ. ಆರಂಭದಿಂದಲೂ ನನ್ನ ಪ್ರತಿಭೆಯನ್ನೇ ನೆಚ್ಚಿಕೊಂಡು ಚಿತ್ರರಂಗದಲ್ಲಿ ಬೆಳೆದವಳು ನಾನು. ಆದ್ದರಿಂದ ಕಳೆದುಹೋಗುತ್ತೇನೆ ಎಂಬ ಭಯ ಇರಲೇ ಇಲ್ಲ’ ಎಂದು ತಮ್ಮ ವಿಶ್ವಾಸಕ್ಕೆ ಕಾರಣವನ್ನೂನೀಡುತ್ತಾರೆ ಅವರು.

ಈಗ ಅವರು ಒಪ್ಪಿಕೊಂಡಿರುವ ಚಿತ್ರದ ಕಥೆ ಅವರಿಗಷ್ಟೇ ಅಲ್ಲ, ಅವರ ಯಶ್‌ ಅವರಿಗೆ ಕೂಡ ತುಂಬ ಇಷ್ಟವಾಗಿದೆಯಂತೆ. ‘ಎಲ್ಲರಿಗೂ ಇಷ್ಟವಾಗಿ, ಈಗ ಈ ಸಿನಿಮಾದಿಂದಲೇ

ಮತ್ತೆ ನಟನೆ ಆರಂಭಿಸಿದರೆ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ಒಪ್ಪಿಕೊಂಡೆ’ ಎನ್ನುತ್ತಾರೆ ರಾಧಿಕಾ.

‘ಹಾಗೆಂದು ಇದೇನೂ ಮಹಿಳಾಪ್ರಧಾನ ಚಿತ್ರವಲ್ಲ’ ಎಂದೂ ಅವರು ಒತ್ತಿ ಹೇಳುತ್ತಾರೆ. ’ಸಾಮಾನ್ಯವಾಗಿ ಮದುವೆ ಆದ ಮೇಲೆ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಬಹುದು ಎಂದುಕೊಳ್ಳುತ್ತಾರೆ. ಆದರೆ ಇದು ಖಂಡಿತ ಮಹಿಳಾ ಪ್ರಧಾನ ಸಿನಿಮಾ ಅಲ್ಲ, ನಾನು ಮದುವೆಗೆ ಮೊದಲೂ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದರೆ ಒಪ್ಪಿಕೊಳ್ಳುತ್ತಿದೆ. ‘ಮದುವೆ’ ಅನ್ನುವುದು ನನ್ನ ನಟನಾ ಬದುಕಿನಲ್ಲಿ ಯಾವ ಬದಲಾವಣೆಯನ್ನೂ ತಂದಿಲ್ಲ. ಮದುವೆಗೂ ಈ ಸಿನಿಮಾಗೂ ಯಾವ ಕನೆಕ್ಷನ್‌ ಕೂಡ ಇಲ್ಲ. ಇದು ನನ್ನ ವೃತ್ತಿಬದುಕಿನ ಇನ್ನೊಂದು ಚಿತ್ರವಷ್ಟೆ. ಮೊದಲು ಹೇಗೆ ಸಿನಿಮಾವನ್ನು ಒಪ್ಪಿಕೊಳ್ಳುತ್ತಿದ್ದೆನೋ ಅದೇ ಮಾನದಂಡಗಳನ್ನು ಇಟ್ಟುಕೊಂಡು ಆಯ್ಕೆ ಮಾಡಿಕೊಂಡ ಚಿತ್ರ ಇದು’ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.

‘ಇಲ್ಲಿ ನಿರ್ದೇಶಕಿ ಪ್ರಿಯಾ ಮತ್ತು ಸಿನಿಮಾಟೊಗ್ರಫರ್‌ ಇಬ್ಬರೂ ಹೆಣ್ಣುಮಕ್ಕಳು’ ಎಂದೂ ಅವರು ಖುಷಿಯಿಂದ ಹೇಳಿಕೊಳ್ಳುತ್ತಾರೆ. ನಿರ್ಮಾಣಪೂರ್ವ ಹಂತದ ಸಿದ್ಧತೆ ನಡೆಯುತ್ತಿದ್ದು ಸೆಪ್ಟೆಂಬರ್‌ ತಿಂಗಳ ಮಧ್ಯದಲ್ಲಿ ಕೆಲಸ ಶುರುವಾಗುವ ಸಾಧ್ಯತೆಗಳಿವೆ. ರಾಕ್‌ಲೈನ್‌ ಪ್ರೊಡಕ್ಷನ್‌ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಸಿನಿಮಾದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ.

‘ಯಶ್‌ ಜತೆ ನಟಿಸುವುದು ಯಾವಾಗ?’ ಎಂಬ ಪ್ರಶ್ನೆಗೆ ಅವರು ’ಖಂಡಿತವಾಗಿಯೂ ಯಶ್‌ ಜತೆ ನಟಿಸುತ್ತೇನೆ. ಆದರೆ ಇಬ್ಬರಿಗೂ ಹೊಂದಿಕೆಯಾಗುವ ಕಥೆ ಬರಬೇಕಲ್ಲ. ಅಂಥದ್ದೊಂದು ಕಥೆಗಾಗಿ ಕಾಯುತ್ತಿದ್ದೇವೆ’ ಎಂದು ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT