ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಟ್ಟಿನ ರಜೆ ಬೇಕೇ? ಬೇಡವೇ?

Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಜುಲೈ ತಿಂಗಳ ಮೊದಲ ಭಾಗದಲ್ಲಿ ಮುಂಬೈನ ‘ಕಲ್ಚರ್ ಮಷೀನ್’ ಎಂಬ ಮಾಧ್ಯಮ ಸಂಸ್ಥೆ, ಅದರ ಮಹಿಳಾ ಸಿಬ್ಬಂದಿಗೆ ‘ಮುಟ್ಟಿನ ಮೊದಲ ದಿನ’ ಎಂಬ ಸಂಬಳಸಹಿತ ರಜೆಯನ್ನು ದೇಶದಲ್ಲೇ ಮೊದಲ ಬಾರಿಗೆ ಅಧಿಕೃತವಾಗಿ ಘೋಷಿಸಿತು. ಈ ಸಂಸ್ಥೆಯ ನಡೆಯಿಂದ ಪ್ರೇರಿತವಾದ ಚೆನ್ನೈನ ‘ಮ್ಯಾಗ್ಸ್ಟರ್’ ಎಂಬ ಸಣ್ಣ ಕಂಪೆನಿ ಮತ್ತು ಕೇರಳದ ‘ಮಾತೃಭೂಮಿ ಟಿವಿ ಚಾನೆಲ್’ ಕೂಡ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆಗಳನ್ನು ಪ್ರಕಟಿಸಿವೆ. ಮುಟ್ಟಿನ ಅವಧಿಯಲ್ಲಿ ಸಂಬಳಸಹಿತ ರಜೆಗಳನ್ನು ದೇಶದ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ವಿಸ್ತರಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈಗಾಗಲೇ ಆನ್‌ಲೈನ್ ಅಭಿಯಾನ ಪ್ರಾರಂಭಗೊಂಡಿದೆ.

ಮುಟ್ಟು ಅಥವಾ ಋತುಚಕ್ರ ಹೆಣ್ಣಿನ ದೇಹದ ಒಂದು ಜೈವಿಕ ಪ್ರಕ್ರಿಯೆ. ಹೆಣ್ಣು, ಮುಟ್ಟಿನ ಮೂಲಕ ಹದಿಹರೆಯಕ್ಕೆ ಕಾಲಿಡುವಾಗ ಅನುಭವಿಸುವ ದೈಹಿಕ ಬದಲಾವಣೆಗಳು ಸಹಜವಾದರೂ ಹುಡುಗನ ಹದಿಹರೆಯದ ಲಕ್ಷಣಗಳಿಗಿಂತ ಭಿನ್ನವಾದವು. ಹೆಣ್ಣುಮಕ್ಕಳಿಗೆ ರಕ್ತಸ್ರಾವವನ್ನು ನಿಭಾಯಿಸುವುದು ಒಂದು ಸವಾಲಿನ ಜವಾಬ್ದಾರಿ. ಇದನ್ನು ನಿಭಾಯಿಸಲು ಬೇಕಾದ ಮಾನಸಿಕ ಮತ್ತು ಸಾಮಾಜಿಕ ತಯಾರಿ ನಮ್ಮಲ್ಲಿ ಇಲ್ಲ. ಇದರ ಪರಿಣಾಮವಾಗಿ ಮುಟ್ಟನ್ನು ಒಂದು ರೀತಿ ಅಸಹ್ಯಕರವಾಗಿ ಸಮಾಜ ನೋಡಿದರೆ, ಹೆಣ್ಣುಮಕ್ಕಳು ಮುಟ್ಟನ್ನು ಹೊರೆ ಎಂದು ಭಾವಿಸುತ್ತಾರೆ. ಅದರಿಂದ ಕೀಳರಿಮೆ ಅನುಭವಿಸುತ್ತಾರೆ. ಇಂಥ ಹಿನ್ನೆಲೆಯಲ್ಲಿ ಮುಟ್ಟಿಗಾಗಿ ಮೀಸಲಿಡುವ ರಜೆ ಎಷ್ಟರಮಟ್ಟಿಗೆ ವೈಜ್ಞಾನಿಕ, ವೈಚಾರಿಕ ಮತ್ತು ಪ್ರಗತಿಪರ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಬೇಕಿದೆ.

ಮುಟ್ಟಾದ ದಿನಗಳಲ್ಲಿ ನಮ್ಮ ದೇಶದ ಸಂಪ್ರದಾಯದಂತೆ ಹೆಣ್ಣು ‘ಅಸ್ಪೃಶ್ಯಳು’. ಆ ಸಮಯದಲ್ಲಿ ಆಕೆ ಯಾವುದೇ ಸಾಂಪ್ರದಾಯಿಕ ವಿಧಿವಿಧಾನಗಳಲ್ಲಿ ಭಾಗವಹಿಸುವಂತಿಲ್ಲ.

ಮುಟ್ಟಿನಿಂದಾಗುವ ರಕ್ತಸ್ರಾವಕ್ಕೆ ಸಂಬಂಧಪಟ್ಟ ಎಲ್ಲಾ ಮುಜುಗರಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಆಗುವ ಗೊಂದಲಗಳು ಹೆಣ್ಣು ಮಕ್ಕಳನ್ನು ಸಾಮಾಜಿಕವಾಗಿ ಹಿಂಜರಿಯುವಂತೆ ಮಾಡುತ್ತವೆ. ರಕ್ತಸ್ರಾವದಿಂದಾಗುವ ಬಟ್ಟೆಯ ಕಲೆ; ನಿಲ್ಲಲು, ಕೂರಲು, ಆಟಗಳಲ್ಲಿ ಬಿರುಸಾಗಿ ಓಡಲು ಆಗದ ಸ್ಥಿತಿ ಹೆಣ್ಣುಮಕ್ಕಳನ್ನು ಕುಗ್ಗಿಸುತ್ತದೆ.

ಹಾಗಾದರೆ ಮುಟ್ಟಿನ ಅವಧಿಯಲ್ಲಿ ಸಿಗುವ ಸಂಬಳಸಹಿತ ರಜೆ ಈ ಮಾನಸಿಕ ಮತ್ತು ಸಾಮಾಜಿಕ ಕಳಂಕವನ್ನು ನಿವಾರಿಸಬಹುದೇ? ಮುಟ್ಟಿನ ರಜೆಯನ್ನು ಅಧಿಕೃತಗೊಳಿಸಿರುವುದರ ಹಿಂದಿನ ಉದ್ದೇಶ: ಮಹಿಳಾ ಸಿಬ್ಬಂದಿ, ಮುಟ್ಟಿಗಾಗಿ ರಜೆಯನ್ನು ಕೇಳಬೇಕಾದರೆ ಕಾರಣವನ್ನು ತಿಳಿಸಲು ಹಿಂಜರಿಯುತ್ತಾರೆ. ನೋವನ್ನು ನುಂಗಿ ಕೆಲಸ ಮಾಡುತ್ತಾರೆ. ಹಾಗಾಗಿ ಮುಟ್ಟಿಗಾಗಿಯೇ ಪ್ರತ್ಯೇಕ ರಜೆಗಳಿದ್ದರೆ ಮುಜುಗರ ಇಲ್ಲದೆ ಬಳಸಿಕೊಳ್ಳಬಹುದಾಗಿದೆ.

ಕಲ್ಚರ್ ಮಷೀನ್ ಸಂಸ್ಥೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ರಜೆಗಳನ್ನು ಈಗಿರುವ ಸಂಬಳಸಹಿತ ರಜೆಗಳ ಜೊತೆ ಕೊಟ್ಟಿದೆ. ಕೆಲವು ದೇಶಗಳಲ್ಲಿ ವರ್ಷಕ್ಕೆ 3 (ತೈವಾನ್), ಇಲ್ಲವೇ ಆ ದಿನಗಳಲ್ಲಿ ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದೆ. ಎಲ್ಲೂ ನಿಯಮಿತವಾದ ರಜೆಯ ಸ್ವರೂಪವಿಲ್ಲ. ಪ್ರತೀ ತಿಂಗಳ ಮುಟ್ಟಿನ ಆರಂಭದ ದಿನ ಅನಿರೀಕ್ಷಿತ ಎಂಬುದು ಬಹುಶಃ ಇದಕ್ಕೆ ಕಾರಣ ಆಗಿರಬಹುದು. ಪ್ರತೀ ತಿಂಗಳ ಅಂದಾಜು ದಿನಾಂಕಗಳನ್ನು ಗುರುತು ಹಾಕಬಹುದೇ ಹೊರತು ಕರಾರುವಾಕ್ಕಾಗಿ ಅದೇ ದಿನ ಪ್ರಾರಂಭವಾಗುತ್ತದೆ ಎಂದು ಮೊದಲೇ ಅಂದಾಜಿಸಲು ಸಾಧ್ಯವಾಗದು. ಇನ್ನು ಕೆಲವು ಮಹಿಳೆಯರಿಗೆ ವೈದ್ಯಕೀಯ ಕಾರಣಗಳಿಂದ ಎರಡು– ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತದೆ. ಮುಟ್ಟಾಗುವ ಎಲ್ಲಾ ಮಹಿಳೆಯರಿಗೂ ಗುರುತರ ಸಮಸ್ಯೆಗಳಿರುವುದಿಲ್ಲ. ಮುಟ್ಟಿನ ಕಾರಣದಿಂದಾಗುವ ನೋವು, ಸೊಂಟ– ಹೊಟ್ಟೆ ಸೆಳೆತ ಮತ್ತು ಬಿಗಿಯುವಿಕೆ ಹಾಗೂ ಇತರ ಲಕ್ಷಣಗಳು ಶೇಕಡ 3ರಿಂದ 15ರಷ್ಟು ಮಹಿಳೆಯರಲ್ಲಿ ಮಾತ್ರ ಕಾಣಿಸುತ್ತವೆ ಎಂದು ಅಧ್ಯಯನಗಳು ತಿಳಿಸಿವೆ.

ಮುಟ್ಟಿನ ರಜೆಯ ಸ್ವರೂಪದ ಅನಿಶ್ಚಿತತೆಯಿಂದಾಗಿ ಪ್ರತೀ ತಿಂಗಳು ನೌಕರಿಗೆ ತೊಂದರೆಯಾಗದ ಹಾಗೆ ಈ ರಜೆಯನ್ನು ನಿಭಾಯಿಸುವುದು ಹೇಗೆ? ಮುಟ್ಟಿನಿಂದ ಯಾವುದೇ ಗುರುತರ ಸಮಸ್ಯೆಗಳಿಲ್ಲದ ಮಹಿಳೆಯರು ಈ ರಜೆಗಳನ್ನು ದುರುಪಯೋಗ ಮಾಡುವುದನ್ನು ತಡೆಯಬಹುದಾದ ಷರತ್ತುಗಳೇನಿರಬೇಕಾಗುತ್ತದೆ? ಅಸಂಘಟಿತ ಮಹಿಳಾ ಕಾರ್ಮಿಕರ ಮುಟ್ಟಿನ ಸಮಸ್ಯೆಗಳಿಗೆ ಈ ರಜೆಗಳು ಅನ್ವಯಿಸುತ್ತವೆಯೇ? ವಿದ್ಯಾರ್ಥಿನಿಯರ ಮುಟ್ಟಿನ ಸಮಸ್ಯೆಗಳಿಗೆ ಮುಟ್ಟಿನ ರಜೆ ಪರಿಹಾರವೇ? ಮುಟ್ಟಿನ ರಜೆ ಅನಾರೋಗ್ಯದ ವ್ಯಾಪ್ತಿಯಲ್ಲಿ ಬರದೆ ಹೆಣ್ಣಿನ ದೇಹದ ಸಹಜ ಬದಲಾವಣೆಯಾಗಿರುವುದರಿಂದ ‘ನಮಗೆ ಸಿಗುವ ರಜೆಗಳಲ್ಲಿ ತಾರತಮ್ಯವಿದೆ’ ಎಂಬ ಕೂಗು ಪುರುಷ ಉದ್ಯೋಗಸ್ಥರಿಂದ ಕೇಳಿಬರಬಹುದು. ಹಾಗೆಯೇ ಇಂಥ ರಜೆಗಳಿಂದ ಸಂಸ್ಥೆಗೆ ನಷ್ಟವಾಗಬಹುದೆಂದು ಉದ್ಯೋಗಕ್ಕೆ ಮಹಿಳೆಯರನ್ನು ನೇಮಕ ಮಾಡುವ ಪ್ರಮಾಣ ಕಡಿಮೆ ಮಾಡಬಹುದು.

ಋತುಸ್ರಾವವೆಂಬ ಸ್ವಾಭಾವಿಕ ಜೈವಿಕ ಪ್ರಕ್ರಿಯೆಯನ್ನು ಮಹಿಳೆಯ ದೌರ್ಬಲ್ಯವೆಂದು, ಅನಿಷ್ಟವೆಂದು ಈಗಾಗಲೇ ಪುರುಷಪ್ರಧಾನ ಸಮಾಜ ಪ್ರತಿಪಾದಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮೊದಲು ಸರಿಯಾಗಬೇಕಾದದ್ದು ಮುಟ್ಟನ್ನು ಗ್ರಹಿಸುವ ನಮ್ಮ ಸಮಾಜದ ಮನಸ್ಸು. ಈ ಬದಲಾವಣೆಯನ್ನು ಮೊದಲು ಪ್ರಾರಂಭಿಸಬೇಕಾಗಿರುವುದು ಮಹಿಳೆಯರು. ತಮ್ಮ ಸಾಮರ್ಥ್ಯಕ್ಕೆ ಮುಟ್ಟು ಅಡ್ಡಿಯಾಗಬಹುದು ಎಂಬ ಯೋಚನೆಯನ್ನು ಮಹಿಳೆಯರು ಕಿತ್ತೊಗೆಯಬೇಕು. ದೇಹದ ಸಹಜ ಪ್ರಕ್ರಿಯೆಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕು. ಮುಟ್ಟನ್ನು ಮುಚ್ಚಿಡಲು ಬಯಸುವ ನಮ್ಮ ಹೆಣ್ಣುಮಕ್ಕಳ ಮನಸ್ಥಿತಿ ಮೊದಲು ಬದಲಾಗಬೇಕಾಗಿದೆ.

‘ನನಗೆ ಮುಟ್ಟಾಗಿರುವುದರಿಂದ ವಿಪರೀತ ನೋವು ಮತ್ತು ತಲೆಸುತ್ತು ಬರುತ್ತಿದೆ, ನನಗೆ ಕೆಲಸ ಮಾಡಲು ಆಗದು, ರಜೆ ಬೇಕಾಗಿದೆ’ ಎಂದು ಪುರುಷ ಮೇಲಧಿಕಾರಿಗಳಿಗೆ ಕೇಳುವ ಮುಕ್ತ ಮನಸ್ಥಿತಿ ಮಹಿಳೆಯರಲ್ಲಿ ಮೂಡಬೇಕು. ನಾವು ಮುಟ್ಟಿನ ಬಗ್ಗೆ ಮುಕ್ತವಾಗಿ ಸಂವಾದ ನಡೆಸಿದರೆ ಮಾತ್ರ ಅದಕ್ಕಂಟಿರುವ ಕಳಂಕ ನಿವಾರಣೆಯಾಗುತ್ತದೆ. ಗರ್ಭ ಧರಿಸಿದಾಗ ಮುಕ್ತವಾಗಿ ಸಂಭ್ರಮಿಸುವ ನಮಗೆ ಗರ್ಭಧಾರಣೆಗೆ ಮೂಲ ಕಾರಣವಾದ ಋತುಸ್ರಾವದ ಬಗ್ಗೆ ಮಾತನಾಡಲು ಹಿಂಜರಿಕೆಯೇಕೆ? ಶಾಲಾ ಕಾಲೇಜುಗಳಲ್ಲಿ ಋತುಚಕ್ರದ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಜೊತೆ ಗಂಡುಮಕ್ಕಳಿಗೂ ಅವಕಾಶವಿರಬೇಕು.

ಮುಟ್ಟಿಗಾಗಿ ರಜೆ ಕೊಡುವುದಕ್ಕಿಂತ ಆಕೆ ಕೆಲಸ ಮಾಡುವ ಸ್ಥಳಗಳಲ್ಲಿ ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿನಿಯರು ಹಾಜರಾಗುವ ಶಾಲಾ ಕಾಲೇಜುಗಳಲ್ಲಿ ಸ್ವಚ್ಛ ಶೌಚಾಲಯ, ಬಳಸಲು ನೀರು, ಬಳಸಿದ ಸ್ಯಾನಿಟರಿ ಪ್ಯಾಡ್‌ಗಳಿಗೆ ಕಸದ ಬುಟ್ಟಿಗಳು ಮತ್ತು ಅದರ ಪರಿಣಾಮಕಾರಿ ವಿಲೇವಾರಿಗೆ ಕಟ್ಟುನಿಟ್ಟಿನ ಕಾನೂನು ತರಬೇಕಾಗಿದೆ. ಸಾರ್ವಜನಿಕ ಶೌಚಾಲಯಗಳಲ್ಲೂ ಈ ಎಲ್ಲಾ ಅನುಕೂಲಗಳು ಮಹಿಳೆಯರಿಗೆ ಸಿಗುವಂತಾಗಬೇಕು. ಸಾರ್ವಜನಿಕ ಶೌಚಾಲಯಗಳಲ್ಲಿ ಮತ್ತು ಶಾಲಾಕಾಲೇಜುಗಳಲ್ಲಿ ಸ್ಯಾನಿಟರಿ ಪ್ಯಾಡ್ ಉಚಿತವಾಗಿ ವಿತರಣೆಯಾಗುವಂತಹ ವ್ಯವಸ್ಥೆಯನ್ನು ಸರ್ಕಾರ ಸೃಷ್ಟಿಸಬೇಕು. ಈಗ ಸ್ಯಾನಿಟರಿ ಪ್ಯಾಡ್‌ಗಳ ಮೇಲಿರುವ 12% ಜಿಎಸ್‌ಟಿಯನ್ನು ತೆಗೆದುಹಾಕಬೇಕು.

ಮುಟ್ಟಿಗೆ ನೀಡುವ ಹೆಚ್ಚುವರಿ ರಜೆಗಳನ್ನು ದೊಡ್ಡ ಸಾಧನೆಯೆಂಬಂತೆ ಸಂಭ್ರಮಿಸುವ ಅಗತ್ಯವಿಲ್ಲ. ಇದು ಮಹಿಳೆಯನ್ನು ಇನ್ನೊಂದು ರೀತಿ ಅಸ್ಪೃಶ್ಯಳನ್ನಾಗಿ ಮಾಡುವ ಮತ್ತು ದುರ್ಬಲ ಲಿಂಗವೆಂದು ಮತ್ತೆ ಕಳಂಕಿತಗೊಳಿಸುವ ಹೆಜ್ಜೆಯಾಗಿಯೇ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT