ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ನ ವಿಶಿಷ್ಟ ಸೌಲಭ್ಯಗಳು

Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಗೂಗಲ್‌ ಎಂದ ಕೂಡಲೇ ಜಿ–ಮೇಲ್‌, ಮ್ಯಾಪ್ಸ್‌, ಸರ್ಚ್‌ಎಂಜಿನ್‌  ನೆನಪಿಗೆ ಬರುತ್ತವೆ. ಆದರೆ ಇವಷ್ಟೇ ಅಲ್ಲದೆ ಇನ್ನೂ ಹಲವು ಸೌಲಭ್ಯಗಳು ಇಲ್ಲಿ ಲಭ್ಯ ಇವೆ. ಬ್ರೌಸರ್‌ನ ಸರ್ಚ್‌ ಬಾರ್‌ನಲ್ಲಿ google.co.in ಎಂದು ಟೈಪ್‌ ಮಾಡಿ ಡ್ಯಾಷ್‌ಬೋರ್ಡ್‌ನ ಬಲಭಾಗದಲ್ಲಿ ಕಾಣಿಸುವ 9 ಚುಕ್ಕಿಗಳ ಐಕಾನ್‌ ಅನ್ನು ಮುಟ್ಟಿದರೆ ಇವೆಲ್ಲಾ ಕಾಣಿಸುತ್ತವೆ.

ಇವುಗಳಲ್ಲಿ ಕೆಲವು ಸೌಲಭ್ಯಗಳು ಹಲವು ದಿನಗಳಿಂದ ಲಭ್ಯವಿವೆ. ಇನ್ನು ಕೆಲವನ್ನು ಈಚೆಗೆ ಸೇರಿಸಲಾಗಿದೆ. ಕೆಲವು ಪ್ಲೇ ಸ್ಟೋರ್‌ನಲ್ಲೂ ಸಿಗುತ್ತವೆ. ಗೂಗಲ್‌ನ ಈ ಸೌಲಭ್ಯಗಳ ಕುರಿತು ಇಲ್ಲಿ ಕೆಲ ಮಾಹಿತಿ ನೀಡಲಾಗಿದೆ.

ಸಂದೇಶ ಕಳುಹಿಸಲು
ಎಲ್ಲ ಮೊಬೈಲ್‌ಗಳಲ್ಲೂ ಸಂದೇಶ ಕಳುಹಿಸಲು, ಸ್ವೀಕರಿಸಲು ಕಿರು ಮೆಸೆಜಿಂಗ್‌ ತಂತ್ರಾಂಶವನ್ನು ಅಳವಡಿಸಲಾಗಿರುತ್ತದೆ. ಇದರ ಮೂಲಕ ಟೆಕ್ಸ್ಟ್‌ ಮೆಸೇಜ್‌ ಮಾತ್ರ ಕಳುಹಿಸಬಹುದು. ಇದರ ಜತೆ ಚಿತ್ರ, ಧ್ವನಿ ಮುದ್ರಿಕೆ, ಎಮೊಜಿಗಳನ್ನು ಜೋಡಿಸಿ ಕಳುಹಿಸಲು ಆಂಡ್ರಾಯ್ಡ್‌ ಮೆಸೇಜ್‌ಸ್(android messages) ತಂತ್ರಾಂಶ ನೆರವಾಗುತ್ತದೆ. ಇದು ಪ್ಲೇ ಸ್ಟೋರ್‌ನಲ್ಲಿ ಸಿಗುತ್ತದೆ. ಜತೆಗೆ ಮೆಸೇಜ್‌ ಗ್ರೂಪಿಂಗ್‌, ಬ್ಲಾಕಿಂಗ್‌ನಂತಹ ಸೌಲಭ್ಯವೂ ಇದೆ.

ನೆನಪಿಸುವ ಕ್ಯಾಲೆಂಡರ್‌
ಗೆಳತಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಬೇಕು, ಸ್ನೇಹಿತನ ಮದುವೆಯಲ್ಲಿ ಭಾಗವಹಿಸಬೇಕು ಎಂದುಕೊಳ್ಳುತ್ತೇವೆ. ಆದರೆ ಆ ದಿನ ಆ ವಿಷಯ ನೆನಪಿಗೆ ಬರುವುದಿಲ್ಲ. ವೈದ್ಯರ ಭೇಟಿಗೆ ಸಮಯ ನಿಗದಿ ಪಡಿಸಿಕೊಂಡಿದ್ದರೂ ಹೋಗಲು ಆಗುವುದಿಲ್ಲ. ಇಂತಹ ಸಮಸ್ಯೆ ಆಗಬಾರದು ಎಂದರೆ, ಪ್ರಮುಖ ವಿಷಯಗಳನ್ನೆಲ್ಲಾ ಗೂಗಲ್ ಕ್ಯಾಲೆಂಡರ್‌ನಲ್ಲಿ ಬರೆದಿಟ್ಟುಕೊಳ್ಳಬೇಕು.

ನಿಮ್ಮ ಮೊಬೈಲ್‌ನಲ್ಲಿ ದಾಖಲಿಸಿರುವ ಗೂಗಲ್‌ ಐಡಿಯನ್ನು ಈ ಕ್ಯಾಲೆಂಡರ್‌ನೊಂದಿಗೆ ಜೋಡಿಸಿದರೆ ಇಂತಹ ವಿಷಯಗಳನ್ನೆಲ್ಲಾ ಅದೇ ನೆನಪಿಸುತ್ತದೆ. ಅಲ್ಲದೆ, ಭಾಗವಹಿಸಲು ಉದ್ದೇಶಿಸಿರುವ ಪ್ರಮುಖ ಕಾರ್ಯಕ್ರಮಗಳ ವಿವರಗಳನ್ನೂ ಬರೆದಿಟ್ಟುಕೊಳ್ಳಬಹುದು. ಈ ವಿವರಗಳನ್ನು ನಿಮ್ಮ ಸಂಪರ್ಕದಲ್ಲಿರುವ ಸ್ನೇಹಿತರಿಗೆ, ಬಂಧುಗಳಿಗೆ ಆಹ್ವಾನ ಪತ್ರಿಕೆ ರೀತಿಯಲ್ಲಿ ಕಳುಹಿಸಬಹುದು.

ಕಚೇರಿ ಕೆಲಸಕ್ಕೆ ಡಾಕ್ಸ್‌, ಷೀಟ್ಸ್‌, ಸ್ಲೈಡ್ಸ್‌
ಸಮಾಚಾರ, ಸುದ್ದಿ, ವಿಷಯ ಬರೆಯಲು ಮೈಕ್ರೊಸಾಫ್ಟ್‌ ವರ್ಡ್, ಲೆಕ್ಕ ಬರೆಯಲು ಎಕ್ಸ್‌ಎಲ್‌, ಮಂಡನೆಗೆ ಪವರ್‌ಪಾಯಿಂಟ್‌ ಬಳಸುವುದು ಹಲವರಿಗೆ ಅಭ್ಯಾಸ. ಆದರೆ, ಇವು ಕಂಪ್ಯೂಟರ್‌ನಲ್ಲಿ ಮಾತ್ರ ಬಳಸಲು ಸಾಧ್ಯ. ಎಲ್ಲ ಸಂದರ್ಭಗಳಲ್ಲೂ ಉಪಯೋಗವಾಗುವುದಿಲ್ಲ. ಆದರೆ ಗೂಗಲ್‌ನ ಡಾಕ್ಸ್‌ (Docs), ಷೀಟ್ಸ್‌ (Sheets) ಮತ್ತು ಸ್ಲೈಡ್ಸ್‌(Slides) ಸೌಲಭ್ಯಗಳನ್ನು ಮೊಬೈಲ್‌ನಲ್ಲೂ ಬಳಸಬಹುದು. ಇವು ಮೈಕ್ರೊಸಾಫ್ಟ್‌ ಆಫೀಸ್‌ಗೆ ಪರ್ಯಾಯವೆಂಬಂತೆ ಕಾರ್ಯನಿರ್ವಹಿಸುತ್ತವೆ.

ಒಂದೇ ಮೇಲ್‌ ಐಡಿಯೊಂದಿಗೆ ಲಾಗಿನ್ ಆಗುವಂತಹ ಮೊಬೈಲ್‌, ಟ್ಯಾಬ್‌ಗಳಲ್ಲಿ ಇದನ್ನು ಆಕ್ಸೆಸ್‌ ಮಾಡಿಕೊಳ್ಳಬಹುದು. ವರ್ಡ್‌ಗೆ ಬದಲಾಗಿ ಡಾಕ್ಸ್‌, ಎಕ್ಸ್‌ಎಲ್‌ಗೆ ಪರ್ಯಾಯವಾಗಿ ಗೂಗಲ್‌ ಷೀಟ್ಸ್‌,  ಪವರ್‌ಪಾಯಿಂಟ್‌ ಪರ್ಯಾಯವಾಗಿ ಗೂಗಲ್ ಸ್ಲೈಡ್ಸ್‌ ಇದೆ. ಇದಕ್ಕೆ ಸಂಬಂಧಿಸಿ ಬ್ಯಾಕಪ್‌ ಆ್ಯಂಡ್‌ ಸಿಂಕ್‌ ಎಂಬ ತಂತ್ರಾಂಶವನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಿಕೊಂಡರೆ, ಪ್ರತಿಬಾರಿ ವೆಬ್‌ಸೈಟ್‌ ತೆರೆಯುವ ಅಗತ್ಯವಿಲ್ಲದೆ ಅದರಲ್ಲೇ ಇವನ್ನು ಬಳಸಿಕೊಳ್ಳಬಹುದು.

ತ್ರೀಡಿಯಲ್ಲಿ ನೋಡುತ್ತೀರಾ...?
ಗೂಗಲ್‌ ಮ್ಯಾಪ್ಸ್ ಎಲ್ಲರಿಗೂ ಗೊತ್ತು. ಯಾವುದಾದರೂ ವಿಳಾಸ ತಿಳಿಯಲು, ಟ್ರಾಫಿಕ್‌ ಸಮಸ್ಯೆ ಇರುವ ರಸ್ತೆಗಳನ್ನು ತಿಳಿದುಕೊಳ್ಳಲು ಇದು ನೆರವಾಗುತ್ತದೆ. ಈ ಮ್ಯಾಪ್‌ ತಂತ್ರಾಂಶಕ್ಕೆ ತ್ರೀಡಿ ತಂತ್ರಜ್ಞಾನ ಸ್ಪರ್ಶ ನೀಡಿ ಅರ್ಥ್‌ (Earth) ಹೆಸರಿನ ಸೌಲಭ್ಯವನ್ನ? ಗೂಗಲ್‌ ಬಳಕೆಗೆ ತಂದಿದೆ. ಇದರ ಮೂಲಕ ವಿಶ್ವವನ್ನು ತ್ರೀಡಿ ಆಯಾಮದಲ್ಲಿ ವೀಕ್ಷಿಸಬಹುದು. ಜತೆಗೆ ಮುಖ್ಯವಾದ ಪ್ರದೇಶಗಳ ಸಮಾಚಾರವನ್ನು ಸಂಕ್ಷಿಪ್ತವಾಗಿ ಪಡೆಯಬಹುದು. ಆ್ಯಪ್ ರೂಪದಲ್ಲಿ ಮೊಬೈಲ್‌ನಲ್ಲೂ ಬಳಸಬಹುದು.

ಎಲ್ಲವನ್ನೂ ಬಚ್ಚಿಡುತ್ತದೆ
ಹೊರಗೆ ಹೋದಾಗ ಮೊಬೈಲ್‌ನಲ್ಲಿ, ಮನೆಯಲ್ಲಿ ಇದ್ದಾಗ ಟ್ಯಾಬ್‌ನಲ್ಲಿ, ಕಚೇರಿಗೆ ಹೋದಾಗ ಕಂಪ್ಯೂಟರ್‌ನಲ್ಲಿ ನಿಮ್ಮ ಖಾತೆಗಳಿಗೆ ಹೊಂದಿಸಿರುವ ರಹಸ್ಯ ಪದಗಳು, ಬ್ಯಾಂಕ್‌ ಖಾತೆ ಸಂಖ್ಯೆ, ಎಟಿಎಂ ಕಾರ್ಡ್‌ ಪಿನ್‌ ಸಂಖ್ಯೆ, ವಿಳಾಸ, ಮೊಬೈಲ್‌ ಸಂಖ್ಯೆ ಇತ್ಯಾದಿ ಮುಖ್ಯ ವಿವರಗಳನ್ನು ಒಂದೇ ಕಡೆ ಬಚ್ಚಿಟ್ಟು, ಎಲ್ಲಿಗೆ ಹೋದರೂ ಸಿಗಬೇಕು ಎನ್ನುವಂತಿದ್ದರೆ, ಇವನ್ನೆಲ್ಲಾ ಗೂಗಲ್‌ ಕೀಪ್‌ನಲ್ಲಿ (Keep) ಬರೆದಿಟ್ಟುಕೊಳ್ಳಬೇಕು.

ಹಿಂದೆ ಈ ರೀತಿಯ ಮುಖ್ಯ ವಿವರಗಳನ್ನು ಒಂದು ಸಣ್ಣ ಪುಸ್ತಕದಲ್ಲಿ ಬರೆದಿಟ್ಟುಕೊಂಡು ಜತೆಗೆ ಕೊಂಡೊಯ್ಯಬೇಕಿತ್ತು. ಪುಸ್ತಕ ಕಳೆದರೆ ಅವೂ ಕಳೆದುಹೋಗುತ್ತಿದ್ದವು. ಆದರೆ ಇದರಲ್ಲಿ ಹೀಗಾಗುವುದಿಲ್ಲ. ಒಂದೇ ಮೇಲ್‌ ಐಡಿಯೊಂದಿಗೆ ಜೋಡಣೆಯಾಗಿರುವ ಮೊಬೈಲ್‌, ಟ್ಯಾಬ್‌, ಕಂಪ್ಯೂಟರ್‌ನಲ್ಲಿ ಇದನ್ನು ಬಳಸಿಕೊಳ್ಳಬಹುದು. ಇತರರೊಂದಿಗೆ ಹಂಚಿಕೊಳ್ಳಬೇಕು ಎನ್ನುವ ವಿವರಗಳನ್ನು ಇಲ್ಲಿ ಬರೆದು
ಕೊಂಡು ಇದರಲ್ಲಿರುವ ಷಾಪಿಂಗ್‌ಲಿಸ್ಟ್‌ ಸೌಲಭ್ಯದ ಮೂಲಕ ಆನ್‌ಲೈನ್‌ನಲ್ಲೇ ಷೇರ್‌ಮಾಡಿಕೊಳ್ಳಬಹುದು.

ಇಲ್ಲಿ ಹಾಕಿ... ಅಲ್ಲಿ ತೆಗೆಯಿರಿ...
ಮನೆಯಲ್ಲಿ ಬಳಸುವ ಕಂಪ್ಯೂಟರ್‌ ಡೆಸ್ಕ್‌ಟಾಪ್‌ನಲ್ಲಿ ಸೇವ್‌ ಮಾಡಿರುವ ಚಿತ್ರಗಳು, ಎಲ್ಲಿದ್ದರೂ ನಿಮ್ಮ ಮೊಬೈಲ್‌ಗೆ ಬರಬೇಕು ಎಂದರೆ ಮನೆಯಲ್ಲಿರುವವರಿಗೆ ಹೇಳಿ ಮೇಲ್‌ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ವಾಟ್ಸ್‌ಆ್ಯಪ್‌ ಮೊರೆ ಹೋಗಬೇಕು. ಇಷ್ಟೆಲ್ಲಾ ಯಾರು ಮಾಡುತ್ತಾರೆ ಎನ್ನುವವರು ಅಂತಹ ಮುಖ್ಯ ಚಿತ್ರಗಳನ್ನು ಗೂಗಲ್‌ ಡ್ರೈವ್‌ನಲ್ಲಿ (Drive) ಹಾಕಿಟ್ಟರೆ ಅದು ನಿಮ್ಮ ಮೊಬೈಲ್‌ನಲ್ಲಿ ಸಿಗುತ್ತದೆ. ಒಂದೇ ಮೇಲ್‌ ಐಡಿಯೊಂದಿಗೆ ಲಾಗಿನ್‌ ಆಗುವಂತಹ ಮೊಬೈಲ್‌, ಟ್ಯಾಬ್, ಕಂಪ್ಯೂಟರ್‌ಗಳಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಈ ತಂತ್ರಾಂಶವನ್ನು ಅಳವಡಿಸಿಕೊಂಡರೆ ಪ್ರತಿಬಾರಿ ಬ್ರೌಸರ್‌ನಲ್ಲಿ ಡ್ರೈವ್‌ ಜಾಲಾತಾಣವನ್ನು ಟೈಪ್‌ ಮಾಡಿ ತೆರೆಯುವ ಅಗತ್ಯ ಇರುವುದಿಲ್ಲ.

ಅಭಿಪ್ರಾಯ ಸಂಗ್ರಹಿಸಲು
ಕಚೇರಿಯಲ್ಲಿ ಆಗುವಂತಹ ಹೊಸ ಬದಲಾವಣೆಗಳ ಬಗ್ಗೆ ಸಹೋದ್ಯೋಗಿಗಳೊಂದಿಗೆ ಚರ್ಚಿಸುವುದಕ್ಕೆ, ಯಾವುದಾದರೂ ವಿಷಯದ ಬಗ್ಗೆ ಅಭಿಪ್ರಾಯ ಪಡೆಯುವುದಕ್ಕೆ. ಹೊಸ ವಿಷಯಗಳ ಬಗ್ಗೆ ವಿವರಿಸಿ ಅಭಿಪ್ರಾಯ ಸಂಗ್ರಹಿಸಬೇಕು ಎನ್ನುವವರಿಗೆ ಗೂಗಲ್‌ ಫಾಮ್ಸ್‌ (Forms) ತಂತ್ರಾಂಶ ಉಪಯುಕ್ತ. ಇದರಲ್ಲಿ ಅಭಿಪ್ರಾಯ ಸಂಗ್ರಹಿಸಲು ನೆರವಾಗುವಂತಹ ಟೆಂಪ್ಲೇಟ್‌ಗಳು ಇರುತ್ತವೆ. ಪ್ರಶ್ನೆ ಮತ್ತು ಅದರ ಉತ್ತರಗಳನ್ನು (ಬಹು ಆಯ್ಕೆ ರೂಪದಲ್ಲಿ) ಬರೆದು ಮೇಲ್‌ ಮಾಡಬಹುದು. ಅವರು ಆ ವಿವರಗಳನ್ನು ಚೆಕ್‌ ಬಾಕ್ಸ್‌ನಲ್ಲಿ ಟಿಕ್‌ ಮಾಡಿ ಹಿಂತಿರುಗಿಸುತ್ತಾರೆ. ಹೀಗೆ ಅಭಿಪ್ರಾಯಗಳನ್ನು ಸುಲಭವಾಗಿ ಸಂಗ್ರಹಿಸಬಹುದು.

ತಾಜಾ ಸುದ್ದಿಗಾಗಿ...
ಗೂಗಲ್‌ನಲ್ಲಿ ನ್ಯೂಸ್‌ ಎಂದು ಟೈಪ್‌ ಮಾಡಿದರೆ ನೂರಾರು ಸುದ್ದಿಗಳು ಪರದೆ ಮೇಲೆ ಮೂಡುತ್ತವೆ. ನೀವು ಕೇಳಿದಾಗ ಮಾತ್ರ ಗೂಗಲ್ ಸುದ್ದಿ ಕೊಡುತ್ತದೆ. ಆದರೆ ಒಮ್ಮೆ ನೀವು ಟೈಪ್‌ ಮಾಡಿದ ಸುದ್ದಿಯನ್ನು ನೆನಪಿನಲ್ಲಿ ಇಟ್ಟುಕೊಂಡು, ಅದಕ್ಕೆ ಸಂಬಂಧಿಸಿದಂತಹ ಸುದ್ದಿಗಳಷ್ಟೇ ಬರಬೇಕು ಎನ್ನುವವರಿಗೆ ಗೂಗಲ್ ಅಲರ್ಟ್ಸ್‌(google Alerts) ಆಯ್ಕೆ ನೆರವಾಗುತ್ತದೆ. ಇದನ್ನು ತೆರೆದು ನಿಮಗೆ ಯಾವ ರೀತಿಯ ಸುದ್ದಿಗಳು ಬೇಕು ಎಂದು ಆಯ್ಕೆ ಮಾಡಿಕೊಂಡರೆ, ಅದಕ್ಕೆ ಸಂಬಂಧಿಸಿದ ಸುದ್ದಿಗಳು ನಿಮ್ಮ ಮೇಲ್‌ಗೆ ಬರುತ್ತವೆ. ಇದಲ್ಲದೆ ವಿವಿಧ ವೆಬ್‌ಸೈಟ್‌ಗಳಲ್ಲಿರುವ ಸುದ್ದಗಳನ್ನು 'ಪ್ಲೇ ನ್ಯೂಸ್‌ ಸ್ಟ್ಯಾಂಡ್‌' (google play news stand) ಮೂಲಕ ಒಂದೇ ಕಡೆ ಪಡೆಯಬಹುದು. ಇದು ವಿಷಯ ಮತ್ತು ವೆಬ್‌ಸೈಟ್‌ ಆಧರಿಸಿ ಸುದ್ದಿಗಳನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT